Advertisement

ಲಿಂಗಾಯತ ಧರ್ಮ ಎನ್ನುವುದೇ ಸೂಕ್ತ: ಸಿದ್ದು

11:53 AM Jul 21, 2017 | Team Udayavani |

ಧಾರವಾಡ: ರಾಜ್ಯದಲ್ಲಿ ವೀರಶೈವ ಮತ್ತು ಲಿಂಗಾಯತ ಸ್ವತಂತ್ರ ಧರ್ಮದ ಚರ್ಚೆ ನಡೆಯುತ್ತಿದ್ದು, ಈ ಪೈಕಿ ಲಿಂಗಾಯತ ಧರ್ಮ ಎನ್ನುವುದೇ ಸೂಕ್ತವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. 

Advertisement

ಸರ್ಕಾರಿ ಕಚೇರಿಗಳಲ್ಲಿ ಬಸವಣ್ಣನವರ ಭಾವಚಿತ್ರ ಕಡ್ಡಾಯಗೊಳಿಸಿದ್ದಕ್ಕೆ ಮತ್ತು ವಿಜಯಪುರ ಮಹಿಳಾ ವಿಶ್ವವಿದ್ಯಾಲಯಕ್ಕೆ ಅಕ್ಕಮಹಾದೇವಿ ಹೆಸರು ನಾಮಕರಣ ಮಾಡಿದ್ದಕ್ಕೆ ಇಲ್ಲಿನ ಮುರುಘಾಮಠದಲ್ಲಿ ಶ್ರೀಮಠದಿಂದ ಗುರುವಾರ ಹಮ್ಮಿಕೊಂಡಿದ್ದ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

ಬಸವಣ್ಣ 12ನೇ ಶತಮಾನದಲ್ಲಿಯೇ ಶ್ರೇಣಿಕೃತ ಜಾತಿ ವ್ಯವಸ್ಥೆಯನ್ನು ದಿಕ್ಕರಿಸಿಕೊಂಡು ಹೊರ ಬಂದು ಸಮಾನತೆ ಸಮಾಜ ಕಟ್ಟಲು ಲಿಂಗಾಯತ ಧರ್ಮ ಸ್ಥಾಪಿಸಿದರು. ಈ ಹಿಂದೆ ಬೆಂಗಳೂರಿನಲ್ಲಿ ವೀರಶೈವ ಮಹಾಸಭಾದಿಂದ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಕೆಲವರು ವೀರಶೈವ ಲಿಂಗಾಯತ ಧರ್ಮ ಎಂದು ಶಿಫಾರಸು ಮಾಡುವಂತೆ ಸಲಹೆ ನೀಡಿದ್ದರು.

ಆದರೆ ನನ್ನ ದೃಷ್ಟಿಯಲ್ಲಿ ಹೇಳುವುದಾದರೆ ಲಿಂಗಾಯತ ಧರ್ಮ ಎನ್ನುವುದೇ ಸೂಕ್ತ ಎಂದರು. ಶೀಘ್ರವೇ ಈ ಕುರಿತು ಮಹತ್ವದ ಸಭೆ ಕರೆದು ತಜ್ಞರು, ವಿದ್ವಾಂಸರು ಮತ್ತು ಸಮಾಜದ ಮುಖಂಡರೊಂದಿಗೆ ಚರ್ಚಿಸುತ್ತೇನೆ. ಅಂತಿಮವಾಗಿ ಎಲ್ಲರೂ ಯಾವ ನಿರ್ಣಯ ತೆಗೆದುಕೊಳ್ಳುತ್ತಾರೋ, ಅದನ್ನು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಲು ನಾನು ಸಿದ್ಧನಿದ್ದೇನೆ ಎಂದರು.

ಹಿಂದೂ ಧರ್ಮವೇ ಇಲ್ಲ: ಮುಂಡರಗಿ ತೋಂಟದಾರ್ಯ ಮಠದ ಶ್ರೀ ನಿಜಗುಣಾನಂದ ಸ್ವಾಮೀಜಿ ಮಾತನಾಡಿ, ದೇಶದಲ್ಲಿ ಹಿಂದೂ ಧರ್ಮವೇ ಇಲ್ಲ. ಶ್ರೇಣಿಕೃತ ಸಮಾಜದಲ್ಲಿದ್ದ ಶೋಷಣೆ ವಿರುದ್ಧ ಬಸವಣ್ಣ ಹೋರಾಟ ನಡೆಸಿ ಲಿಂಗಾಯತ ಧರ್ಮ ಸ್ಥಾಪಿಸಿದ್ದಾನೆ.

Advertisement

ಲಿಂಗಾಯತ ಧರ್ಮ ಸ್ವತಂತ್ರವಾದದ್ದು ಎಂಬುದಕ್ಕೆ ಅಗತ್ಯವಾದ ಎಲ್ಲಾ ದಾಖಲೆಗಳು ಮತ್ತು ಮಾಹಿತಿಯನ್ನು ಮುಖ್ಯಮಂತ್ರಿಗಳಿಗೆ ನಾವು ಒದಗಿಸುತ್ತೇವೆ. ಅವರು ಲಿಂಗಾಯತ ಧರ್ಮದ ಹೆಸರನ್ನೇ ಕೇಂದ್ರಕ್ಕೆ ಶಿಫಾರಸು ಮಾಡುವಂತೆ ಮನವಿ ಮಾಡಿದರು. 

ಕೂಡಲಸಂಗಮದ ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿ, ಜಿಲ್ಲಾ ಉಸ್ತುವಾರಿ ಸಚಿವ ವಿನಯ್‌ ಕುಲಕರ್ಣಿ, ಮಾಜಿ ಸಭಾಪತಿ ವೀರಣ್ಣ ಮತ್ತಿಕಟ್ಟಿ, ಶಾಸಕ ಪ್ರಸಾದ್‌ ಅಬ್ಬಯ್ಯ ಸೇರಿದಂತೆ ಮುರುಘಾಮಠದ ಆಡಳಿತ ವರ್ಗ ಮತ್ತು ಭಕ್ತರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.  

Advertisement

Udayavani is now on Telegram. Click here to join our channel and stay updated with the latest news.

Next