ಬೆಂಗಳೂರು: ವಿದ್ಯುತ್ ಸ್ಪರ್ಶಿಸಿ ಬೆಸ್ಕಾಂ ಲೈನ್‌ಮನ್ ಮೃತಪಟ್ಟಿರುವ ಘಟನೆ ಮಲ್ಲೇಶ್ವರದ ಸಂಪಿಗೆ ರಸ್ತೆಯಲ್ಲಿ ಮಂಗಳವಾರ ನಡೆದಿದೆ. ಸೂಕ್ತ ಪರಿಹಾರಕ್ಕಾಗಿ ಸಂಬಂಧಿಕರು ಪ್ರತಿಭಟನೆ ನಡೆಸಿದ್ದಾರೆ. ತುಮಕೂರು ಜಿಲ್ಲೆ ಕುಣಿಗಲ್ ತಾಲೂಕಿನ ದೊಡ್ಡಕಲ್ಲಳ್ಳಿ ಗ್ರಾಮದ ಪ್ರದೀಪ್(25) ಮೃತ ಸಿಬ್ಬಂದಿ. ಬೆಸ್ಕಾಂನಲ್ಲಿ ಎರಡು ವರ್ಷಗಳಿಂದ ಕಿರಿಯ ಪವರ್ ಮನ್(ಲೈನ್‌ಮನ್) ಆಗಿ ಕರ್ತವ್ಯ ನಿರ್ವಹಿಸುತ್ತಿದ್ದು, ರಾಜಾಜಿನಗರದ ಕೆಇಬಿ ವಸತಿ ಗೃಹದಲ್ಲಿ ವಾಸವಾಗಿದ್ದರು.
ಮಂಗಳವಾರ ಮಧ್ಯಾಹ್ನ 1 ಗಂಟೆ ಸುಮಾರಿಗೆ ಸಂಪಿಗೆ ರಸ್ತೆಯಲ್ಲಿ ಲಕ್ಷಿ ಗೋಲ್ಡ್ ಹಿಂಭಾಗದಲ್ಲಿ ವಿದ್ಯುತ್ ಕಂಬ ಹತ್ತಿ ದುರಸ್ತಿ ಕಾರ್ಯ ಮಾಡುತ್ತಿದ್ದರು. ಈ ವೇಳೆ ವಿದ್ಯುತ್ ತಂತಿ ಸ್ಪರ್ಶಿಸಿ ಕೆಳಗೆ ಬಿದ್ದಿದ್ದಾರೆ. ಕೂಡಲೇ ಸ್ಥಳದಲ್ಲಿದ್ದ ಸಹೋದ್ಯೋಗಿಗಳು ಹತ್ತಿರದ ಅಪೋಲೋ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಲೈನ್‌ಮನ್ ವಿದ್ಯುತ್ ಕಂಬ ಹತ್ತುವಾಗ ಸುರಕ್ಷತಾ ಕ್ರಮಕೈಗೊಳ್ಳದ ಹಿನ್ನೆಲೆಯಲ್ಲಿ ದುರಂತ ಸಂಭವಿಸಿದೆ. ಈ ಹಿನ್ನೆಲೆಯಲ್ಲಿ ಹಿರಿಯ ಲೈನ್‌ಮನ್ ಹಾಗೂ ಎಇಇ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ಹೇಳಿದರು.
ಅಪೋಲೋ ಆಸ್ಪತ್ರೆ ಬಳಿ ಪ್ರತಿಭಟನೆ: ಚಿಕಿತ್ಸೆ ಫಲಿಸದೆ ಮೃತಪಟ್ಟ ಪ್ರದೀಪ್ ಪೋಷಕರು, ಸಂಬಂಧಿಕರು ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಬರಬೇಕು. ಸೂಕ್ತ ಪರಿಹಾರ ನೀಡಬೇಕು ಎಂದು ಒತ್ತಾಯಿಸಿ ಆಸ್ಪತ್ರೆ ಎದುರು ಪ್ರತಿಭಟನೆ ನಡೆಸಿದರು. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು ಬಂದೋಬಸ್ತ್ ಕೈಗೊಂಡಿದ್ದರು.
ದೂರಿನ ಹಿನ್ನೆಲೆಯಲ್ಲಿ ದುರಸ್ತಿ ಕಾರ್ಯನಿರತ ವೇಳೆ ಅವಘಡ ಸಂಭವಿಸಿದೆ. ಮರಣೋತ್ತರ ಪರೀಕ್ಷೆ ವರದಿ ಬಳಿಕ ಮುಂದಿನ ಕ್ರಮಕೈಗೊಳ್ಳಲಾಗುವುದು. ಪ್ರದೀಪ್ ಎರಡು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದು, ಇನ್ನು ಪ್ರೋಬೆಷನರಿ ಹಂತ ತಲುಪಿರಲಿಲ್ಲ. ಹೀಗಾಗಿ ನಿಯಮಾನುಸಾರ ಪರಿಹಾರ ಸಿಗಲಿದೆ.
-ಶೀಲಾ, ಬೆಸ್ಕಾಂ ಪ್ರಧಾನ ವ್ಯವಸ್ಥಾಪಕಿ