ಗುಂಡ್ಲುಪೇಟೆ(ಚಾಮರಾಜನಗರ): ಜಮೀನಿಗೆ ಅಕ್ರಮವಾಗಿ ಅಳವಡಿಕೆ ಮಾಡಿದ್ದ ವಿದ್ಯುತ್ ತಂತಿಗೆ ಸಿಲುಕಿ ಮರಿಯಾನೆಯೊಂದು ಮೃತಪಟ್ಟಿರುವ ಘಟನೆ ತಾಲೂಕಿನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಕುಂದುಕೆರೆ ವಲಯ ವ್ಯಾಪ್ತಿಯ ಮಂಗಲ ಗ್ರಾಮದ ಕಾಡಂಚಿನ ಆನಂಜಿಹುಂಡಿ ಸಮೀಪ ನ.25ರ ಸೋಮವಾರ ನಡೆದಿದೆ.
ಬಂಡೀಪುರ ಅಭಯಾರಣ್ಯದ ಹುಲಿಯಮ್ಮನ ಗುಡಿ ದಾರಿಯಲ್ಲಿ ಬೆಂಗಳೂರು ಮೂಲದ ವ್ಯಕ್ತಿಯೊಬ್ಬರಿಗೆ ಸೇರಿದ ಜಮೀನಿನಲ್ಲಿ ಬೆಳೆ ರಕ್ಷಣೆಗೆ ಅಳವಡಿಸಿದ್ದ ವಿದ್ಯುತ್ ತಂತಿಗೆ ಸುಮಾರು 3 ವರ್ಷದ ಗಂಡು ಮರಿಯಾನೆಯೊಂದು ಸಿಲುಕಿ ಸ್ಥಳದಲ್ಲೇ ಮೃತಪಟ್ಟಿದೆ.
ಬೆಂಗಳೂರು ಮೂಲದ ಮಾಲೀಕ ಜಮೀನನ್ನು ಮತ್ತೋರ್ವನಿಗೆ ಗುತ್ತಿಗೆಗೆ ನೀಡಿದ್ದರು ಎನ್ನಲಾಗುತ್ತಿದ್ದು, ಆತ ಜಮೀನಿನಲ್ಲಿ ರಾಗಿ ಬೆಳೆದಿದ್ದು ಫಸಲು ರಕ್ಷಣೆಗೆ ಸುತ್ತಲು ಅಕ್ರಮವಾಗಿ ತಂತಿ ಬೇಲಿ ಅಳವಡಿಸಿದ್ದ ಎಂದು ತಿಳಿದು ಬಂದಿದೆ.
ನ.25ರ ಸೋಮವಾರ ತಡರಾತ್ರಿ ಆಹಾರ ಅರಸಿ ಬಂದ ಆನೆ ವಿದ್ಯುತ್ ಸಂಪರ್ಕಕ್ಕೆ ಸಿಲುಕಿ ಸಾವನ್ನಪ್ಪಿದೆ ಎಂದು ಅರಣ್ಯಾಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಮಾಹಿತಿ ಅರಿತ ಎಸಿಎಫ್ ಸುರೇಶ್, ಕುಂದುಕೆರೆ ವಲಯ ಅರಣ್ಯಾಧಿಕಾರಿ ಮಲ್ಲೇಶ್ ಸೇರಿದಂತೆ ಅರಣ್ಯ ಇಲಾಖೆ ಸಿಬ್ಬಂದಿ ಮಂಗಳವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಸಂಬಂಧಪಟ್ಟವರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.