ಬೆಲ್ಲ ಅಂದರೆ ಯಾರಿಗೆ ಇಷ್ಟ ಇಲ್ಲ ಹೇಳಿ. ಸದಾ ಸಿಹಿ. ಹೆಚ್ಚಿನ ಖಾದ್ಯಗಳಿಗೆ ಬಳಕೆಯಾಗುವಂತದ್ದು. ತನ್ನ ಆಕಾರಗಳಿಂದಲೇ ಎಲ್ಲರ ಗಮನ ಸೆಳೆಯುವಂತದ್ದು.
ಎದುರಿನಿಂದ ಬಿಟ್ಟು ಬೇರೆ ಎಲ್ಲ ಕಡೆಯಿಂದ ಒಂದೇ ರೀತಿಯಾಗಿ ಕಾಣುವ “ಅಚ್ಚುಬೆಲ್ಲ’ವಾಗಿ, ತಾಯಿಯ ಗರ್ಭದ ಒಳಗೆ ಅವಿತ ಮರಿಯಂತೆ ಓಲೆಯ ಒಳಗಡೆ ಇರುವ ದುಂಡಗಿನ “ವಾಲೆಬೆಲ್ಲ’ವಾಗಿ, ಯಾವ ಆಕೃತಿಯ ಪಾತ್ರೆಗೂ ಹೊಂದಿಕೊಳ್ಳುವಂತ ದ್ರವ ರೂಪದ “ನೀರುಬೆಲ್ಲ’ವಾಗಿ, ಪಾಕತಜ್ಞರಿಗೆ ಪ್ರಿಯವಾದ “ಪುಡಿಬೆಲ್ಲ’ವಾಗಿ, ಹೆಚ್ಚು ಸಿಹಿಯನ್ನು ಹೊಂದಿದ “ಕಪ್ಪು ಬೆಲ್ಲ’ವಾಗಿ ಮಕ್ಕಳಿಂದ ಮುದುಕರವರೆಗೆ ಎಲ್ಲರಿಗೂ ಇಷ್ಟವಾಗಿ ಎಲ್ಲರಿಂದಲೂ ಹೊಗಳಿಸಿಕೊಳ್ಳುತ್ತ ಆಹಾ ಏನು ಚೆಂದ ಏನು ಸುಲಭ ಬೆಲ್ಲದ ಬದುಕು ಅಂತ ನೀವು ಅಂದುಕೊಂಡಿರಬಹುದು.
ನಿಮ್ಮ ತಿಳುವಳಿಕೆ ಮೇಲ್ನೋಟಕ್ಕೆ ಸರಿ ಎನಿಸಿದರೂ ಸೂಕ್ಷ್ಮವಾಗಿ ಗಮನಿಸಿದರೆ ಅದು ಹಾಗಿಲ್ಲ. ಬೆಲ್ಲ, ಬೆಲ್ಲ ಎನಿಸಿಕೊಳ್ಳುವುದಕ್ಕೆ ಮೂಲರೂಪವಾದ ಕಬ್ಬಿನ ರಸದಿಂದ ಬೆಲ್ಲವಾಗಿ ಮಾರ್ಪಾಡು ಹೊಂದುವುದಕ್ಕೆ ತಾನು ಪಟ್ಟ ಕಷ್ಟ ಎಷ್ಟು ಎಂದು ಎಲ್ಲಿಯೂ ಹೇಳುವುದಿಲ್ಲ.
ಕೊಪ್ಪರಿಗೆಯಲ್ಲಿ ಬಿಸಿ ಸಹಿಸಿ ಕೊಂಡು ಕುದಿದು ಕುದಿದು ತನ್ನನ್ನು ಸಿಹಿಗೊಳಿಸಿಕೊಳ್ಳುತ್ತದೆ. ಆ ಪ್ರಕ್ರಿಯೆ ಅಷ್ಟು ಸುಲಭವಲ್ಲ. ಹೇಳ್ಳೋಕೆ ಹೊರಟಿದ್ದು ಎರಡು ವಿಷಯ, ಒಂದು ಈಗ ಯಾರನ್ನಾದರೂ ನೋಡಿ ಅವರ ಜೀವನವೇ ಚಂದ, ಸುಲಭ ಅಂತ ನಾವು ಸುಲಭವಾಗಿ ಅಂದು ಬಿಡುತ್ತೇವೆ ಅದರ ಹಿಂದಿನ ಕಷ್ಟಗಳನ್ನು ಗಮನಿಸಿರುವುದಿಲ್ಲ. ಇನ್ನೊಂದು ನೀವೀಗ ಕಷ್ಟಗಳ ಕೊಪ್ಪರಿಗೆಯಲ್ಲಿ ಬೇಯುತ್ತಿದ್ದೇವೆ ಎಂದರೆ ಮುಂದೊಂದು ದಿನ ಒಳ್ಳೆಯ ಸುಖಮಯ ಸುಲಭದ ಜೀವನವನ್ನು ಹೊಂದುವ ಬೆಲ್ಲವಾಗುವುದಕ್ಕೆ. ಹಾಗಾಗಿ ಕುದಿದು ಬೆಲ್ಲವಾಗೋಣ. ಕೊಪ್ಪರಿಗೆಯ ಬೆಂಕಿಯ ಹುಡುಕಾಟ ಬೇಡ. ಜೀವನವೇ ಅದನ್ನು ಒದಗಿಸುತ್ತದೆ. ಹಾಗಂತ ಬೆಲ್ಲವಾಗುವ ಪ್ರಕ್ರಿಯೆ ಬೇಗ ಬೇಗ ಆಗುವುದಲ್ಲ. ನಮ್ಮ ಸಮಯ, ನಿರೀಕ್ಷೆ, ನಮ್ಮದೆಲ್ಲವನ್ನು ಕೇಳಿ ಬಿಡುತ್ತವೆ. ಛಲ, ತಾಳ್ಮೆಯ ಪರೀಕ್ಷೆ ಮಾಡಿ ಬಿಡುತ್ತದೆ.
ಒಬ್ಬ ಅದ್ಭುತ ಹಾಡುಗಾರನೋ, ಆಟಗಾರನೋ ಇದ್ದರೆ ಆತನ ಯಶಸ್ಸಿನ ಹಿಂದೆ ಯಾರಿಗೂ ತಿಳಿಯದ ಪ್ರಯತ್ನ ಇರುತ್ತದೆ. ಅದಕ್ಕೆ ಬಹಳ ಸಮಯವೂ ತಗಲಿರುತ್ತದೆ. ಒಬ್ಬ ನೆಲಗಡಲೆ ಗಿಡ ನೆಟ್ಟು ದಿನವೂ ಅದನ್ನು ಕಿತ್ತು ಕಿತ್ತು ನೋಡುತ್ತಿದ್ದನಂತೆ ಫಲ ಬಂದಿದೆಯಾ ಎಂದು. ಹಾಗಾಗಬಾರದಲ್ಲ ನಮ್ಮ ಕಥೆ. ನೆಲಗಡಲೆ ಬೆಳೆಯಲು ಸಮಯ ಬೇಕು. ಪ್ರಯತ್ನವೆಂಬ ಗೊಬ್ಬರ, ಶ್ರಮ ಎಂಬ ಆರೈಕೆಯೂ ಬೇಕು. ಕಬ್ಬಿನ ರಸದಿಂದ ಬೆಲ್ಲವಾಗುವುದಕ್ಕೆ ಕೊಪ್ಪರಿಗೆಯಲ್ಲಿ ಕುದಿಯುವ ಕಷ್ಟವೂ ಬೇಕು, ಮಾರ್ಪಾಡಾಗುವ ತಾಳ್ಮೆ, ಸಹಿಸಿಕೊಳ್ಳುವ ಶಕ್ತಿ ನಮ್ಮಲಿರಬೇಕು. ಹಾಗಾಗಿ ಕುದಿಯುತ್ತಿದ್ದೇವೆ ಎನ್ನುವ ಬೇಸರ ಬೇಡ. ಇನ್ನೂ ಮುಖ್ಯವಾಗಿ ಕುದಿದು ಬೆಲ್ಲವಾದ ಮೇಲೆ ನಾನೇ ಹೆಚ್ಚು ಸಿಹಿ ಎನ್ನುವ ಅಹಂಕಾರವೂ ಬೇಡ.
-ಶಶಿಕಿರಣ್ ಆಚಾರ್ಯ
ವಂಡ್ಸೆ