Advertisement

ಬಂಡವಾಳ ಕ್ರೋಡೀಕರಣಕ್ಕೆ ದಿಟ್ಟ ಹೆಜ್ಜೆ

12:01 AM Feb 15, 2022 | Team Udayavani |

ದೇಶದ ಬಹುದೊಡ್ಡ ಸರಕಾರಿ ವಿಮಾ ಸಂಸ್ಥೆ ಭಾರತೀಯ ಜೀವ ವಿಮಾ ನಿಗಮ (ಎಲ್‌ಐಸಿ)ದ ಆರಂಭಿಕ ಷೇರು ಮಾರಾಟ(ಐಪಿಒ)ಕ್ಕೆ ದಿನಗಣನೆ ಆರಂಭವಾಗಿದೆ. ಈಗಾಗಲೇ ಮಾರುಕಟ್ಟೆ ನಿಯಂತ್ರಕ ಸೆಕ್ಯೂರಿಟೀಸ್‌ ಆ್ಯಂಡ್‌ ಎಕ್ಸ್‌ಚೇಂಜ್‌ ಬೋರ್ಡ್‌ ಆಫ್‌ ಇಂಡಿಯಾ(ಸೆಬಿ)ಗೆ ಐಪಿಒದ ಕರಡು ಪ್ರತಿಗಳನ್ನು ಸಲ್ಲಿಸಲಾಗಿದೆ. ಇನ್ನು ಕೆಲವೇ ದಿನಗಳಲ್ಲಿ ಸಾರ್ವಜನಿಕರಿಗೆ ಎಲ್‌ಐಸಿ ಷೇರುಗಳು ಲಭ್ಯವಾಗಲಿವೆ. ಹಾಗಾದರೆ ಎಲ್‌ಐಸಿ ಐಪಿಒ ಎಂದರೇನು? ಇದರಿಂದ ಜನರಿಗೆ ಮತ್ತು ಸರಕಾರಕ್ಕೆ ಆಗುವ ಲಾಭವೇನು ಎಂಬ ಕುರಿತ ಒಂದು ಸಮಗ್ರ ನೋಟ ಇಲ್ಲಿದೆ…

Advertisement

ಏನಿದು ಐಪಿಒ?
ಯಾವುದೇ ಒಂದು ಕಂಪೆನಿ, ಷೇರು ಮಾರುಕಟ್ಟೆಯಲ್ಲಿ ಇದುವರೆಗೆ ನೋಂದಣಿ ಮಾಡಿಸದೇ ಹೊಸದಾಗಿ ನೋಂದಣಿ ಮಾಡಿಸಿ, ಸಾರ್ವಜನಿಕರಿಗೆ ಆರಂಭಿಕವಾಗಿ ಷೇರು ಮಾರಾಟ ಮಾಡುವುದಕ್ಕೆ ಆರಂಭಿಕ ಷೇರು ಮಾರಾಟ (ಐಪಿಒ) ಎಂದು ಹೇಳಲಾಗುತ್ತದೆ. ಒಮ್ಮೆ ಷೇರುಪೇಟೆಯಲ್ಲಿ ಕಂಪೆನಿ ತನ್ನ ಹೆಸರು ನೋಂದಾಯಿಸಿದ ತತ್‌ಕ್ಷಣ, ಈ ಕಂಪೆನಿ ಸಾರ್ವಜನಿಕವಾಗಿ ವಹಿವಾಟು ಮಾಡುವ ಕಂಪೆನಿಯಾಗಿ ಬದಲಾಗುತ್ತದೆ.

ಐಪಿಒದಿಂದ ಸರಕಾರಕ್ಕೆ ಆಗುವ ಲಾಭವೇನು?
2021-22ರ ಬಜೆಟ್‌ನಲ್ಲಿ ಕೇಂದ್ರ ಸರಕಾರ, ಸಾರ್ವಜನಿಕ ವಲಯದ ಕಂಪೆನಿಗಳಿಂದ ಬಂಡವಾಳ ಹಿಂದೆೆಗೆತ ಮಾಡಿಕೊಂಡು 1.75 ಲಕ್ಷ ಕೋಟಿ ರೂ. ಗಳಿಕೆ ಮಾಡಲು ಮುಂದಾಗಿತ್ತು. ಎಲ್‌ಐಸಿವೊಂದರಲ್ಲಿಯೇ ಸುಮಾರು 1 ಲಕ್ಷ ಕೋಟಿ ರೂ. ಬಂಡವಾಳ ಸಂಗ್ರಹದ ಗುರಿ ಕೇಂದ್ರ ಸರಕಾರದಲ್ಲಿದೆ. ಸದ್ಯ ಶೇ.5ರಷ್ಟು ಷೇರುಗಳನ್ನು ಮಾತ್ರ ಮಾರಾಟ ಮಾಡಲು ಮುಂದಾಗಿದ್ದು, ಇದರಿಂದ ಸುಮಾರು 70 ಸಾವಿರ ಕೋಟಿ ರೂ. ಬರಬಹುದು ಎಂದು ನಿರೀಕ್ಷಿಸಲಾಗಿದೆ. ಆದರೂ ಮಾಜಿ ಮುಖ್ಯ ಹಣಕಾಸು ಸಲಹೆಗಾರ ಕೃಷ್ಣಮೂರ್ತಿ ಸುಬ್ರಹ್ಮಣಿ ಅವರು ಹೇಳುವ ಪ್ರಕಾರ, ಶೇ.6ರಿಂದ ಶೇ.7ರಷ್ಟು ಷೇರು ಮಾರಾಟ ಮಾಡಿದರೂ 1 ಲಕ್ಷ ಕೋಟಿ ರೂ.ಗಿಂತ ಹಣ ಕ್ರೊಡೀಕರಿಸಬಹುದು.

ಐಪಿಒದಿಂದ ಲಾಭವೇನು?
ಈಗಾಗಲೇ ಷೇರು ಮಾರುಕಟ್ಟೆಯಲ್ಲಿ ನೋಂದಣಿಯಾಗಿರುವ ಕಂಪೆನಿಗಳ ಷೇರು ಖರೀದಿ ಕಷ್ಟ. ಇವುಗಳ ದರವೂ ಹೆಚ್ಚಳವಾಗಿರುತ್ತದೆ. ಆದರೆ ಆರಂಭಿಕವಾಗಿ ಷೇರು ಮಾರಾಟ ಮಾಡುವಾಗ, ಇದರ ಮೂಲಬೆಲೆಯಲ್ಲೇ ಷೇರು ಸಿಗುತ್ತದೆ. ಅಂದರೆ ಐಪಿಒ ವೇಳೆ ಪ್ರತಿಯೊಂದು ಷೇರಿಗೂ ಇಂತಿಷ್ಟು ಮೌಲ್ಯ ಎಂದು ಕಟ್ಟಲಾಗಿರುತ್ತದೆ. ಉದಾಹರಣೆಗೆ ಈಗ ಎಲ್‌ಐಸಿಯ ಷೇರನ್ನು 10 ರೂ.ಗಳ ಮುಖಬೆಲೆಗೆ ಮಾರಾಟ ಮಾಡಲಾಗುತ್ತದೆ. ಇಂಥ ಸಂದರ್ಭದಲ್ಲಿ ಆಸಕ್ತ ಗ್ರಾಹಕರು, ಕಡಿಮೆ ದರಕ್ಕೆ ಷೇರು ಖರೀದಿಸಬಹುದು. ಅಲ್ಲದೆ ಎಲ್‌ಐಸಿಯಂಥ ಕಂಪೆನಿಯ ಷೇರು ಖರೀದಿ ಮಾಡಿದರೆ ಮುಂದಿನ ದಿನಗಳಲ್ಲಿ ಹೆಚ್ಚಿನ ಹಣ ಬರುವ ಭರವಸೆಯೂ ಸಿಗುತ್ತದೆ.

ಕರಡು ಪ್ರತಿಯಲ್ಲಿ ಏನಿದೆ?
ಎಲ್‌ಐಸಿ ಕಂಪೆನಿಯು ಸೆಬಿಗೆ ಸಲ್ಲಿಸಿರುವ ಕರಡು ಪ್ರತಿಗಳ ಪ್ರಕಾರ, ಕಂಪೆನಿಯ ಶೇ.5ರಷ್ಟು ಷೇರುಗಳನ್ನು ಮಾತ್ರ ಐಪಿಒಗೆ ಇಡಲಾಗುತ್ತದೆ. ಅಂದರೆ 31.6 ಕೋಟಿ ಷೇರುಗಳು ಮಾರಾಟಕ್ಕೆ ಲಭ್ಯವಾಗಲಿವೆ. ಪ್ರತಿಯೊಂದು ಈಕ್ವಿಟಿ ಷೇರಿನ ಮುಖ ಬೆಲೆ 10 ರೂ.ಗಳಾಗಿರುತ್ತದೆ. ಇದರಲ್ಲಿ ಉದ್ಯೋಗಿಗಳಿಗಾಗಿ ಗರಿಷ್ಠ ಶೇ.5, ಪಾಲಿಸಿದಾರರಿಗಾಗಿ ಗರಿಷ್ಠ ಶೇ.10ರಷ್ಟು ಷೇರುಗಳನ್ನು ಇಡಲಾಗುತ್ತದೆ.

Advertisement

31 ಲಕ್ಷ ಕೋಟಿ ರೂ. ಆಸ್ತಿ
2020ರ ಮಾರ್ಚ್‌ನಂತೆ ಎಲ್‌ಐಸಿ 31 ಲಕ್ಷ ಕೋಟಿ ರೂ. ಮೌಲ್ಯದ ಆಸ್ತಿ ಹೊಂದಿದೆ. ಹಾಗೆಯೇ ಜನರ ಕಲ್ಯಾಣಕ್ಕಾಗಿ 2,82,000 ಕೋಟಿ ರೂ.ಗಳನ್ನು ಹೂಡಿಕೆ ಮಾಡಿದೆ.

ಪಾಲಿಸಿ ಲ್ಯಾಪ್ಸ್‌ ಆದವರಿಗೆ ಷೇರು ಸಿಗಲಿದೆಯೇ?
ಕೇಂದ್ರ ಸರಕಾರ ಸೆಬಿಗೆ ಸಲ್ಲಿಸಿರುವ ಕರಡಿನ ಪ್ರಕಾರ, ಪಾಲಿಸಿ ಲ್ಯಾಪ್ಸ್‌ ಆದವರೂ ಐಪಿಒದಲ್ಲಿ ಭಾಗೀಯಾಗಲು ಅರ್ಹರು. ಅಷ್ಟೇ ಅಲ್ಲ, ಮೆಚ್ಯುರಿಟಿ ಹೊಂದಿದ ಪಾಲಿಸಿ ಇರಿಸಿಕೊಂಡವರು, ಪಾಲಿಸಿ ಸರೆಂಡರ್‌ ಮಾಡಿದವರು, ಪಾಲಿಸಿದಾರರು ಮೃತರಾಗಿದ್ದರೂ, ಇವರ ಹೆಸರಿನಲ್ಲಿ ಷೇರು ಖರೀದಿಸಬಹುದು. ಇವರೆಲ್ಲರೂ ಪಾಲಿಸಿದಾರರಿಗೆ ನೀಡಲಾಗಿರುವ ಶೇ.10ರ ಮೀಸಲಿನಲ್ಲೇ ಷೇರು ಖರೀದಿಸಹುದು. ಜತೆಗೆ ಪಾಲಿಸಿ ಖರೀದಿಗಾಗಿ ಹಣ ಪಾವತಿಸಿ, ಇನ್ನೂ ಪಾಲಿಸಿ ದಾಖಲೆಗಳು ಬಂದಿಲ್ಲದಿರುವಂಥವರೂ ಮೀಸಲಿನಡಿ ಷೇರು ಖರೀದಿ ಮಾಡಬಹುದು.  ಇನ್ನು ಜಂಟಿಯಾಗಿ ಪಾಲಿಸಿ ಮಾಡಿಸಿಕೊಂಡಿದ್ದರೆ, ಒಬ್ಬರಿಗೆ ಮಾತ್ರ ಮೀಸಲಿನಡಿ ಷೇರು ಖರೀದಿಸಲು ಅವಕಾಶ ಸಿಗುತ್ತದೆ. ಅಲ್ಲದೆ ಒಬ್ಬರು ಒಂದಕ್ಕಿಂತ ಹೆಚ್ಚು ಪಾಲಿಸಿ ಹೊಂದಿದ್ದು, ಹೆಚ್ಚಾಗಿ ಷೇರು ಖರೀದಿ ಮಾಡಬಹುದು. ಆದರೆ ಇವರಿಗೆ ಗರಿಷ್ಠ 2 ಲಕ್ಷ ರೂ.ಮೌಲ್ಯದ ಷೇರು ಖರೀದಿಸಲು ಅವಕಾಶ ನೀಡಲಾಗಿದೆ.

ಎಲ್‌ಐಸಿಯಲ್ಲಿ ಬದಲಾವಣೆ ಆಗಲಿದೆಯೇ?
ಷೇರುಪೇಟೆಯಲ್ಲಿ ಕಂಪೆನಿಯನ್ನು ಲಿಸ್ಟ್‌ ಮಾಡಿದ ಮೇಲೆ ಹೆಚ್ಚಿನ ಪಾರದರ್ಶಕತೆ ಇರಬೇಕಾಗುತ್ತದೆ. ಹೂಡಿಕೆದಾರರು ಸಕ್ರಿಯವಾಗಿ ಷೇರು ಖರೀದಿ ಮತ್ತು ಮಾರಾಟದಲ್ಲಿ ತೊಡಗಿರುವುದರಿಂದ ಜನರಿಗೂ ಉತ್ತರದಾಯಿ ಆಗಿರಬೇಕಾಗುತ್ತದೆ. ಏಕೆಂದರೆ ಸದ್ಯ ಎಲ್‌ಐಸಿ ಕೇವಲ ಸರಕಾರಕ್ಕೆ ಮಾತ್ರ ಉತ್ತರದಾಯಿಯಾಗಿದೆ. ಜತೆಗೆ ಲಿಸ್ಟ್‌ ಮಾಡುವ ಮುನ್ನವೇ ಷೇರುಗಳ ದರವೂ ಸೇರಿದಂತೆ ಪ್ರಮುಖ ವಿಚಾರಗಳ ಬಗ್ಗೆ ಹೂಡಿಕೆದಾರರಿಗೆ ಮಾಹಿತಿ ನೀಡಬೇಕು. ಕಾರ್ಪೋರೆಟ್‌ ರಚನೆಯನ್ನೂ ಉತ್ತಮ ಮಾಡಿಕೊಳ್ಳಬೇಕು.

ಪಾಲಿಸಿದಾರರ ಹೂಡಿಕೆ
ಪ್ರಸಕ್ತ ಹಣಕಾಸು ವರ್ಷದ ಮೊದಲಾರ್ಧದ ವೇಳೆಗೆ ಎಲ್‌ಐಸಿಯಲ್ಲಿ ಪಾಲಿಸಿದಾರರು ವಿವಿಧ ವಿಮೆಗಳಲ್ಲಿ ಹೂಡಿಕೆ ಮಾಡಿರುವ ಮೊತ್ತ 37.72 ಲಕ್ಷ ಕೋಟಿ ರೂ. ಈ ಮೂಲಕ ಜಗತ್ತಿನಲ್ಲೇ ಅತ್ಯಂತ ಹೆಚ್ಚು ಆಸ್ತಿ ಹೊಂದಿರುವ ವಿಮಾ ಕಂಪೆನಿಗಳಲ್ಲಿ ಎಲ್‌ಐಸಿ ಕೂಡ ಒಂದಾಗಿದೆ. ಸದ್ಯ ಜಗತ್ತಿನಲ್ಲಿ ಚೀನದ ಪಿಂಗ್‌ ಅನ್‌ ಇನ್ಶೂರೆನ್ಸ್ ಕಂಪೆನಿ 1.3 ಟ್ರಿಲಿಯನ್‌ ಡಾಲರ್‌ ಸಂಪತ್ತು ಹೊಂದಿದ್ದು ಇದೇ ಅತ್ಯಂದ ದೊಡ್ಡ ಕಂಪೆನಿಯಾಗಿದೆ.  2021ರ ಸೆಪ್ಟಂಬರ್‌ 30ರ ವೇಳೆಗೆ ಎಲ್‌ಐಸಿ ಕಂಪೆನಿಯಲ್ಲಿ 25 ಕೋಟಿ ಪಾಲಿಸಿದಾರರು ಇದ್ದು, ಇದರಿಂದ 1,437 ಕೋಟಿ ರೂ. ನಿವ್ವಳ ಲಾಭ ಬಂದಿದೆ. ಕಂಪೆನಿಗೆ ವಿವಿಧ ಹೂಡಿಕೆಗಳಿಂದ ಭಾರೀ ಲಾಭ ಬರುತ್ತಿದೆ. 2021-22ರ ಎಪ್ರಿಲ್‌- ಸೆಪ್ಟೆಂಬರ್ ಅವಧಿಯಲ್ಲಿ ಹೂಡಿಕೆಯಿಂದ ಬಂದ ಆದಾಯ 15,726 ಕೋಟಿ ರೂ.ಗಳಿಂದ 1.49 ಲಕ್ಷ ಕೋಟಿ ರೂ.ಗೆ ಏರಿಕೆಯಾಗಿದೆ.

ಎಲ್ಲರೂ ಷೇರು ಖರೀದಿ ಮಾಡಬಹುದೇ?
ಎಲ್ಲರೂ ಷೇರು ಮಾರುಕಟ್ಟೆಯಲ್ಲಿ ಷೇರುಗಳನ್ನು ಖರೀದಿ ಮಾಡಬಹುದು. ಆದರೆ ಡಿಮ್ಯಾಟ್‌ ಅಕೌಂಟ್‌ ಮಾಡಿಸಿರಬೇಕು. ಇದಕ್ಕೆ ಪ್ಯಾನ್‌ ನಂಬರ್‌ ಅನ್ನು ಜೋಡಿಸಬೇಕು. ಅಲ್ಲದೆ ಪಾಲಿಸಿದಾರರು ಷೇರು ಖರೀದಿಸಲು ಬಯಸಿದರೆ ಅವರ ಪಾಲಿಸಿ ಸಂಖ್ಯೆಯನ್ನು ಡಿಮ್ಯಾಟ್‌ ಅಕೌಂಟ್‌ ಜತೆ ಜೋಡಿಸಬೇಕು. ಆಗ ಡಿಸ್ಕೌಂಟ್‌ ಕೂಡ ಸಿಗುತ್ತದೆ.

ಎಲ್‌ಐಸಿ ಸಂಸ್ಥೆ ಒಂದು ಶ್ರೀಮಂತ ಇತಿಹಾಸ
ಜೀವ ವಿಮೆ ಎಂಬುದು ಇಂಗ್ಲೆಂಡಿನಿಂದ ಭಾರತಕ್ಕೆ ಕಾಲಿಟ್ಟಿದ್ದು 1818ರಲ್ಲಿ. ಕಲ್ಕತ್ತಾದಲ್ಲಿ ಒರಿಯಂಟಲ್‌ ಲೈಫ್‌ ಇನ್ಶೂರೆನ್ಸ್ ಕಂಪೆನಿಯನ್ನು ಯುರೋಪಿಯನ್‌ ಸಮುದಾಯ ಆರಂಭಿಸಿತು. ಭಾರತದ ನೆಲದಲ್ಲಿ ಹುಟ್ಟಿದ ಮೊದಲ ವಿಮಾ ಸಂಸ್ಥೆ ಇದೇ. 1956ರ ಜೂನ್‌ 19 ಮತ್ತು ಸೆ.1ರಂದು ಸಂಸತ್‌ ಜೀವ ವಿಮಾ ನಿಗಮದ ಕಾಯ್ದೆಗೆ ಅನುಮೋದನೆ ನೀಡಿತು. ಇದಕ್ಕೆ ಮೂಲಧನವಾಗಿ ಭಾರತ ಸರಕಾರ 5 ಕೋಟಿ ರೂ.ಗಳನ್ನು ನೀಡಿತ್ತು. ಆಗ 245 ವಿಮಾ ಕಂಪೆನಿಗಳನ್ನು ವಿಲೀನ ಮಾಡಿ ಒಂದು ಭಾರತೀಯ ಜೀವ ವಿಮಾ ನಿಗಮವನ್ನು ಆರಂಭಿಸಲಾಯಿತು.

ಭಾರತೀಯ ಜೀವ ವಿಮಾ ನಿಗಮದ ವಿಸ್ತಾರ
ಎಲ್‌ಐಸಿ ಕಂಪೆನಿಯ ಮುಖ್ಯ ಕಚೇರಿ ಮುಂಬಯಿಯಲ್ಲಿದೆ. ಸದ್ಯ 113 ವಿಭಾಗೀಯ ಕಚೇರಿಗಳು, 8 ವಲಯ ಕಚೇರಿ ಗಳು, 2,048 ಬ್ರಾಂಚ್‌ಗಳು, 1,546 ಸ್ಯಾಟಲೈಟ್‌ ಕಚೇರಿಗಳು, 1,173 ಮಿನಿ ಕಚೇರಿಗಳು ಮತ್ತು 1.20 ದಶಲಕ್ಷ ಏಜೆಂಟರನ್ನು ಈ ಕಂಪೆನಿ ಒಳಗೊಂಡಿದೆ.

Advertisement

Udayavani is now on Telegram. Click here to join our channel and stay updated with the latest news.

Next