Advertisement
ಬರದಿಂದ ಕಂಗೆಟ್ಟಿದ್ದ ರೈತ ಕುಟುಂಬವೊಂದಕ್ಕೆ ಖಾತ್ರಿ ಯೋಜನೆಯಡಿ 1.5 ಲಕ್ಷ ರೂ. ಸೌಲಭ್ಯ ಒದಗಿಸಿಕೊಡುವುದು ಯೋಜನೆಯ ಮುಖ್ಯ ಉದ್ದೇಶವಾಗಿದ್ದು, ಡಿ.20ರಿಂದ ಈ ಯೋಜನೆಗೆ ಕಾರ್ಯಾದೇಶವಾಗಲಿದೆ.
ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಈ ಅಭಿಯಾನವನ್ನು ಆರಂಭಿಸಲಾಗಿದೆ. ಈಗಾಗಲೇ ಜಿಲ್ಲೆಯ 22 ಗ್ರಾಮ ಪಂಚಾಯತ್ ಹಾಗೂ 22 ಹೋಬಳಿ ಕೇಂದ್ರಗಳಲ್ಲಿ ಈಗಾಗಲೇ ಗ್ರಾಮಸಭೆ ನಡೆಸಲಾಗಿದೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಬಿಪಿಎಲ್ ಕಾರ್ಡ್ ಹೊಂದಿರುವ ಅರ್ಹ ಫಲಾನುಭವಿಗಳನ್ನು
ಗುರುತಿಸುವ ಕಾರ್ಯ ನಡೆದಿದ್ದು, ಬದುಕು ಖಾತ್ರಿ ಅಭಿಯಾನದಡಿ ವೈಯಕ್ತಿಕ ಆಸ್ತಿ ಸೃಜನೆಗಾಗಿ ಅಂದಾಜು 1.50 ಲಕ್ಷ ರೂ.ವರೆಗೆ ಸೌಲಭ್ಯ ಕಲ್ಪಿಸಲು ಅವಕಾಶವಿದೆ. ಹಾಗಾಗಿ ಈ ಅಭಿಯಾನದಲ್ಲಿ ಖಾತ್ರಿ ಯೋಜನೆಯನ್ನು ಸಮರ್ಪಕವಾಗಿ ಬಳಸಿಕೊಂಡು ಫಲಾನುಭವಿಗಳಿಗೆ ಸೌಲಭ್ಯ ಒದಗಿಸಿದರೆ ಉದ್ಯೋಗ ಹರಸಿ ಗುಳೆ ಹೋಗುವುದನ್ನು ತಪ್ಪಿಸುವ ಜತೆಗೆ
ತಮ್ಮ ಹೊಲಗಳಲ್ಲೇ ಕೆಲಸ ಮಾಡಿಕೊಂಡು ಸ್ಥಿರಾಸ್ತಿ ಸೃಜಿಸಿಕೊಳ್ಳಲು ಅವಕಾಶ ಕಲ್ಪಿಸಿದಂತಾಗಲಿದೆ ಎಂಬುದು ಜಿಪಂ ಅಧಿಕಾರಿಗಳ ಮುಖ್ಯ ಉದ್ದೇಶವಾಗಿದೆ. ಬದುಕು ಖಾತ್ರಿಯಲ್ಲಿ ಯಾವ್ಯಾವ ಆಸ್ತಿ ಸೃಜನೆ: ಮನರೇಗಾ ಯೋಜನೆಯಡಿ ತೋಟಗಾರಿಕೆ ಬೆಳೆಗಳಾದ ತೆಂಗು, ಮಾವು, ಸಪೋಟ, ದಾಳಿಂಬೆ, ಸೀಬೆ, ನೇರಳೆ, ನುಗ್ಗೆ, ಅಂಜೂರ, ಪಪ್ಪಾಯಿ, ಕರಿಬೇವು, ನಿಂಬೆಹಣ್ಣು ಹಾಗೂ ಕೃಷಿ ಹೊಂಡ, ಜಮೀನಿನಲ್ಲಿ ಕಂದಕ ನಿರ್ಮಾಣ, ಎರೆಹುಳು ತೊಟ್ಟಿ ನಿರ್ಮಾಣ ಸೇರಿದಂತೆ ಇತರೆ ಕಾರ್ಯಗಳನ್ನು
ಕೈಗೆತ್ತಿಕೊಳ್ಳಬಹುದಾಗಿದೆ. ಅಲ್ಲದೇ, ಇವುಗಳ ಜತೆಗೆ ದನದ ಕೊಟ್ಟಿಗೆ ನಿರ್ಮಾಣ, ಕುರಿ ಹಾಗೂ ಮೇಕೆ ಸಾಕಾಣಿಕೆ ಶೆಡ್ ನಿರ್ಮಾಣ, ಕೋಳಿ, ಹಂದಿ, ಮೀನು ಸಾಕಾಣಿಕೆ ಶೆಡ್ ನಿರ್ಮಾಣ, ವೈಯಕ್ತಿಕ ಕೊಳವೆಬಾವಿ ಮರುಪೂರಣ ಘಟಕ, ವೈಯಕ್ತಿಕ ಮನೆಯನ್ನೂ ನಿರ್ಮಿಸಿಕೊಳ್ಳಬಹುದಾಗಿದ್ದು, ಅದಕ್ಕೆ ತಕ್ಕ ಅಗತ್ಯ ಅನುದಾನ ನೀಡಲಾಗುತ್ತದೆ.
Related Articles
ಆತ್ಮವಿಶ್ವಾಸ ಮೂಡಿಸುವ, ಗುಳೆ ಹೋಗುವುದನ್ನು ತಪ್ಪಿಸುವ ಸಲುವಾಗಿ ಬದುಕು ಖಾತ್ರಿ ಅಭಿಯಾನದಲ್ಲಿ
ವೈಯಕ್ತಿಕ ಆಸ್ತಿ ಸೃಜನೆಗೆ ಅವಕಾಶ ಕಲ್ಪಿಸಲಾಗುತ್ತಿದೆ. ಹಾಗಾಗಿ ಜಿಲ್ಲೆಯ 7 ತಾಲೂಕುಗಳ ಪೈಕಿ ಸುಮಾರು
10 ಸಾವಿರ ರೈತರಿಗೆ ವೈಯಕ್ತಿಕ ಆಸ್ತಿ ಸೃಜಿಸಿಕೊಳ್ಳಲು ಕಾರ್ಯಾದೇಶ ಪತ್ರವನ್ನು ವಿತರಿಸುವ ಗುರಿ ಹೊಂದಲಾಗಿದೆ. ಆರಂಭಿಕವಾಗಿ ಅಂದಾಜು ನೂರಾರು ಅರ್ಹ ಫಲಾನುಭವಿಗಳಿಗೆ ಕಾರ್ಯಾದೇಶ ಪ್ರಮಾಣ ಪತ್ರ ನೀಡುವ ಕಾರ್ಯಕ್ಕೆ ಡಿ.20ರಂದು ಚಾಲನೆ ದೊರೆಯಲಿದೆ. ಬೆಳೆ ಹಾನಿಗೊಳಗಾದ ಹಾಗೂ ಆರ್ಥಿಕ ಸಂಕಷ್ಟದಲ್ಲಿರುವ ರೈತರಿಗೆ ಬದುಕು ಖಾತ್ರಿ ಅಭಿಯಾನ ಅತ್ಯಂತ ಉಪಯುಕ್ತವಾಗಲಿದೆ. ಜಿಲ್ಲೆಯ ರೈತರು ಅದನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಸಿಇಒ ಡಾ| ಕೆ.ವಿ.ರಾಜೇಂದ್ರ ಕೋರಿದ್ದಾರೆ. ಕ್ರಿಯಾ ಯೋಜನೆ ಸಿದ್ಧ: ಜಿಲ್ಲೆಯ 27 ಹೋಬಳಿಗಳಲ್ಲಿ ಗ್ರಾಮಸಭೆ ನಡೆಸಿ, ಶೇ.100 ರಷ್ಟು ಪರಿಹಾರ ನೀಡಲು ಕ್ರಿಯಾ ಯೋಜನೆ ಸಿದ್ಧಪಡಿಸಲಾಗಿದೆ.
Advertisement
ಎಸ್‌ಸಿ-ಎಸ್‌ಟಿ, ಬಿಪಿಎಲ್ ಸೇರಿದರೆ ಶೇ.90 ರಷ್ಟು ರೈತರಿಗೆ ಪರಿಹಾರ ವಿಧಿಸಿದಂತಾಗಲಿದೆ. ಬರದಿಂದ ಕಂಗೆಟ್ಟಿದ್ದ ರೈತರಿಗೆ ವೈಯಕ್ತಿಕ ಭೂ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಬಹುದು. ಕೃಷಿ, ಕಂದಾಯ, ಪಶುಸಂಗೋಪನಾ ಇಲಾಖೆ ಸೇರಿ ಎಲ್ಲ ಇಲಾಖೆಗಳು ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡುವಲ್ಲಿ ನಿರತವಾಗಿವೆ. ಇನ್ನು ಜಿಲ್ಲೆಯಲ್ಲಿ 10 ಮೇವು ಬ್ಯಾಂಕ್, 5 ಗೋಶಾಲೆ ತೆರೆಯಲಾಗಿದೆ.
ಮೇವು ಹೊರ ರಾಜ್ಯಕ್ಕೆ ಹೋಗದಂತೆ ಚೆಕ್‌ಪೋಸ್ಟ್ ಸ್ಥಾಪಿಸಿದ್ದು, ಜಿಲ್ಲಾಧಿಕಾರಿಗಳು ಸಹ 144 ಸೆಕ್ಷನ್ ಜಾರಿಗೊಳಿಸಿದ್ದಾರೆ. ಕುಡಿವ ನೀರಿಗೆ ಸಂಬಂಧಿಸಿದಂತೆ ಪ್ರತಿ ಶನಿವಾರ ಇಒ, ತಹಶೀಲ್ದಾರ್, ಎಇಇಗಳುವಿಎ, ಪಿಡಿಒಗಳೊಂದಿಗೆ ಸಭೆ ನಡೆಸಲಿದ್ದಾರೆ. ಜತೆಗೆ ಜಿಪಂ ವತಿಯಿಂದ ಪ್ರತಿ ಶನಿವಾರ ಫೋನ್‌ಇನ್ ಕಾರ್ಯಕ್ರಮ ನಡೆಸಲಾಗುತ್ತಿದೆ. ಸಹಾಯವಾಣಿಯನ್ನು ಆರಂಭಿಸಲಾಗಿದೆ. ವೆಂಕೋಬಿ ಸಂಗನಕಲ್ಲು