Advertisement

Shirva: ಉದ್ಯೋಗ ಖಾತರಿ ಯೋಜನೆಯ ವಿಶೇಷ ಗ್ರಾಮ ಸಭೆ

05:55 PM Nov 11, 2024 | Team Udayavani |

ಶಿರ್ವ: ಗ್ರಾ.ಪಂ. ಆಡಳಿತ ತನ್ನ ಬದ್ಧತೆ ತೋರಿಸಿ, ಗ್ರಾ.ಪಂ. ಸದಸ್ಯರು ಆಯಾ ಭಾಗದ ಗ್ರಾಮಸ್ಥರಿಗೆ ನರೇಗಾ ಯೋಜನೆಯ ತಿಳುವಳಿಕೆ ನೀಡಿ ಜಾಬ್‌ ಕಾರ್ಡ್‌ ಮಾಡಿಸಿ ಸಮುದಾಯ ಕಾಮಗಾರಿ ನಡೆಸಿದಲ್ಲಿ ಗ್ರಾಮದ ಅಭಿವೃದ್ಧಿಯಾಗುತ್ತದೆ ಎಂದು ಮಹಾತ್ಮಾ ಗಾಂಧಿ ನರೇಗಾ ಯೋಜನೆಯ ಉಡುಪಿ ಜಿಲ್ಲಾ ಒಂಬುಡ್ಸ್‌ ಪರ್ಸನ್‌ ಎಂ.ವಿ.ನಾಯಕ ಹೇಳಿದರು.

Advertisement

ಅವರು ನ. 11 ರಂದು ಶಿರ್ವ ಮಹಿಳಾ ಸೌಧದಲ್ಲಿ ನಡೆದ ಶಿರ್ವ ಗ್ರಾ.ಪಂ.ನ 2024-25ನೇ ಸಾಲಿನ ಪ್ರಥಮ ಹಂತದ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಹಾಗೂ 15ನೇ ಹಣಕಾಸು ಆಯೋಗದ ಅನುದಾನದ ಬಳಕೆಯ ಸಾಮಾಜಿಕ ಪರಿಶೋಧನೆಯ ವಿಶೇಷ ಗ್ರಾಮ ಸಭೆಯಲ್ಲಿ ಭಾಗವಹಿಸಿ ನರೇಗಾ ಕೂಲಿಕಾರರ/ ಫಲಾನುಭವಿಗಳ ಹಕ್ಕುಗಳ ಉಲ್ಲಂಘನೆ ಹಾಗೂ ಮಾರ್ಗಸೂಚಿ ನಿಯಮಗಳ ಉಲ್ಲಂಘನೆ ಪ್ರಕರಣಗಳ ಪರಿಶೀಲನೆ ನಡೆಸಿ ಗ್ರಾಮಸ್ಥರೊಂದಿಗೆ ಸಂವಾದ ನಡೆಸಿದರು.

ಉದ್ಯೋಗ ಖಾತರಿ ಯೋಜನೆ

ಸಾಮಾಜಿಕ ಪರಿಶೋಧನೆಯ ತಾಲೂಕು ವ್ಯವಸ್ಥಾಪಕ ರೋಹಿತ್‌ ಪ್ರಸ್ತಾವನೆಯೊಂದಿಗೆ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಒಂದು ವರ್ಷದ ಅವಧಿಯಲ್ಲಿ ನಡೆದ ಕಾಮಗಾರಿಗಳ ಮಾಹಿತಿ ನೀಡಿ ಗ್ರಾಮ ಪಂಚಾಯತ್‌ ನ 81, ತೋಟಗಾರಿಕೆ ಇಲಾಖೆಯ 7, ಸಾಮಾಜಿಕ ಅರಣ್ಯ 41 ಹಾಗೂ ಕೃಷಿ ಇಲಾಖೆಯ 1 ಕಾಮಗಾರಿ ಒಟ್ಟು 93 ಕಾಮಗಾರಿಗಳ 3,325 ಮಾನವ ದಿನಗಳಿಗೆ ರೂ.10,50,826 ಅಕುಶಲ ಕೂಲಿ ಮತ್ತು ಸಾಮಾಗ್ರಿಗಳಿಗಾಗಿ ರೂ.8,17,060 ಒಟ್ಟು 19,43,617 ರೂ. ಪಾವತಿಯಾಗಿ ಕಾಮಗಾರಿ ಸೃಜನೆಯಾಗಿದೆ ಎಂದರು. 15ನೇ ಹಣಕಾಸು ಯೋಜನೆಯಲ್ಲಿ 2023-24ನೇ ಸಾಲಿನಲ್ಲಿ ಗ್ರಾ.ಪಂ.ನ 33 ಕಾಮಗಾರಿಗೆ 84,35,446 ರೂ. ಹಾಗೂ ತಾ.ಪಂ. ನ 5 ಕಾಮಗಾರಿಗಳಿಗೆ ರೂ. 9,95,704 ಪಾವತಿಯಾಗಿದೆ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಉಡುಪಿ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯ ದೈಹಿಕ ಪರಿವೀಕ್ಷಣಾಧಿಕಾರಿ ರವೀಂದ ಎಂ. ನಾಯಕ್‌ ಮತ್ತು ಶಿರ್ವ ಗ್ರಾ.ಪಂ. ಅಧ್ಯಕ್ಷೆ ಸವಿತಾ ರಾಜೇಶ್‌ ಮಾತನಾಡಿದರು. ಗ್ರಾ.ಪಂ.ಉಪಾಧ್ಯಕ್ಷ ವಿಲ್ಸನ್‌ ರೊಡ್ರಿಗಸ್‌, ಉಡುಪಿ ಉಪ ವಲಯ ಅರಣ್ಯಾಧಿಕಾರಿ ಕೃಷ್ಣಪ್ಪ, ತಾ.ಪಂ. ಸಹಾಯಕ ಎಂಜಿನಿಯರ್‌ಗಳಾದ ಶಂಕರ ಕುಲಾಲ್‌ ಮತ್ತು ಯಂಕಪ್ಪ ವೇದಿಕೆಯಲ್ಲಿದ್ದರು.

Advertisement

ಕೃಷಿಕರಿಗೆ ಅನುಕೂಲವಾಗುವಂತೆ ಕರಾವಳಿಯ ಭತ್ತದ ಕೃಷಿ ಕಾಮಗಾರಿಯನ್ನು ನರೇಗಾ ಯೋಜನೆಯಡಿ ಅಳವಡಿಸಿಕೊಳ್ಳಲು ಶಿಫಾರಸು ಮಾಡುವಂತೆ ಮಾಜಿ ಗ್ರಾ.ಪಂ. ಅಧ್ಯಕ್ಷ ಕೆ.ಆರ್. ಪಾಟ್ಕರ್‌ ಹಾಗೂ ನರೇಗಾ ಯೋಜನೆ ಶೇ. 100 ಅನುಷ್ಠಾನಗೊಳಿಸುವಲ್ಲಿ ಗಾ.ಪಂ. ಸದಸ್ಯರು ಇಚ್ಛಾಶಕ್ತಿ ತೋರಿಸಿ ಜನರಿಗೆ ಯೋಜನೆಯ ಬಗ್ಗೆ ತಿಳುವಳಿಕೆ ನೀಡಬೇಕಾಗಿದೆ ಎಂದು ಮಾಜಿ ತಾ.ಪಂ. ಸದಸ್ಯ ದಿನೇಶ್‌ ಸುವರ್ಣ ಮತ್ತಿತರರು ತಮ್ಮ ಅಹವಾಲು ಮಂಡಿಸಿ ಸಲಹೆ ಸೂಚನೆಗಳನ್ನು ನೀಡಿದರು.

ಗ್ರಾ.ಪಂ. ಸದಸ್ಯರು,ಗ್ರಾಮ ಸಂಪನ್ಮೂಲ ವ್ಯಕ್ತಿಗಳು, ಸಂಜೀವಿನಿ ಒಕ್ಕೂಟದ ಸದಸ್ಯರು,ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು, ಫಲಾನುಭವಿಗಳು,ಕೂಲಿ ಕಾರ್ಮಿಕರು, ಸ್ತ್ರೀ ಶಕ್ತಿ ಗುಂಪುಗಳ ಸದಸ್ಯರು, ಪಂಚಾಯತ್‌ ಸಿಬಂದಿ ಭಾಗವಹಿಸಿದ್ದರು.

ಪಂಚಾಯತ್‌ ಅಭಿವೃದ್ಧಿ ಅಧಿಕಾರಿ ಅನಂತಪದ್ಮನಾಭ ನಾಯಕ್‌ ಸ್ವಾಗತಿಸಿ, ನಿರೂಪಿಸಿದರು. ಗ್ರಾ.ಪಂಚಾಯತ್ ಕಾರ್ಯದರ್ಶಿ ಚಂದ್ರಮಣಿ ಉದ್ಯೋಗ ಚೀಟಿ ಯೋಜನೆಯ ಅನುಪಾಲನಾ ವರದಿ ಮಂಡಿಸಿದರು. ಗ್ರಾ.ಪಂ. ಸದಸ್ಯ ಕೆ.ಆರ್‌.ಪಾಟ್ಕರ್‌ ವಂದಿಸಿದರು.

ನ್ಯಾಯ ನೀಡುವ ಕೆಲಸ

ಗ್ರಾಮ ಸಭಾ ನಡಾವಳಿಯಲ್ಲಿ ಸದಸ್ಯರು ಫಲಾನುಭವಿಗಳನ್ನು ಆಯ್ಕೆಮಾಡಿ ಶಿಫಾರಸು ಮಾಡಿ ಗ್ರಾ.ಪಂ. ಅನುಷ್ಠಾನಗೊಳಿಸಿದ ಕಾಮಗಾರಿಗಳನ್ನು ಸಾಮಾಜಿಕ ಪರಿಶೋಧನೆ ನಡೆಸಲಾಗುತ್ತದೆ. ಸಾಮಾಜಿಕ ಪರಿಶೋಧನೆ ಸ್ವತಂತ್ರ ಸಂಸ್ಥೆಯಾಗಿದ್ದು, ನರೇಗಾ ಯೋಜನೆಯ ಗ್ರಾಮ ಸಭೆಯಲ್ಲಿ ಜನರು, ಜನಪ್ರತಿನಿಧಿಗಳು ಮುಕ್ತವಾಗಿ ಚರ್ಚೆ ನ‌ಡೆಸುವ ಅವಕಾಶವಿದ್ದು, ಪಾರದರ್ಶಕವಾಗಿ ಉತ್ತರದಾಯಿತ್ವ ಕೊಡುವ ಹೊಣೆಗಾರಿಕೆ ಇರುತ್ತದೆ. ಸಾಮಾಜಿಕ ಪರಿಶೋಧನೆ ಘಟಕದಿಂದ ಕೂಲಿಕಾರರ ಹಕ್ಕುಗಳ ಉಲ್ಲಂಘನೆ, ಅವಕಾಶ ವಂಚನೆ, ದೂರುಗಳು ಹಾಗೂ ಯೋಜನೆಯ ಅನುಷ್ಠಾನದಲ್ಲಿ ಮಾರ್ಗಸೂಚಿ ನಿಯಮಗಳ ಉಲ್ಲಂಘನೆಯಾದಲ್ಲಿ ನೇರವಾಗಿ ಒಂಬುಡ್ಸ್‌ಮನ್‌ಗೆ ಶಿಫಾರಸು ಮಾಡಲಾಗುತ್ತದೆ. ಒಂಬುಡ್ಸ್‌ಮನ್‌ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡು ವಿಚಾರಣೆ ನಡೆಸಿ ತಪ್ಪಿತಸ್ಥರಿಗೆ ನೋಟೀಸು ನೀಡಿ,ಕೂಲಿಕಾರರಿಗೆ/ಫಲಾನುಭವಿಗಳಿಗೆ ನ್ಯಾಯ ನೀಡುವ ಕೆಲಸ ಮಾಡುತ್ತದೆ -ಎಂ. ವಿ. ನಾಯಕ, ನರೇಗಾ ಒಂಬುಡ್ಸ್‌ ಪರ್ಸನ್‌, ಉಡುಪಿ. ಜಿ.ಪಂ.

Advertisement

Udayavani is now on Telegram. Click here to join our channel and stay updated with the latest news.

Next