Advertisement

ಶಾಲಾ ಶಿಕ್ಷಣದೊಂದಿಗೆ ಬದುಕಿನ ಶಿಕ್ಷಣ ಅಗತ್ಯ; ಸಿ.ಎಸ್‌. ಕರಿಗೌಡ

05:57 PM Sep 27, 2022 | Team Udayavani |

ದೊಡ್ಡಬಳ್ಳಾಪುರ: ಶಾಲಾ ಶಿಕ್ಷಣದೊಂದಿಗೆ ಬದುಕಿನ ಹಾಗೂ ಪ್ರಾಯೋಗಿಕ ಶಿಕ್ಷಣ ಅಗತ್ಯವಿದೆ. ಈ ದಿಸೆಯಲ್ಲಿ ಶಿಕ್ಷಕರು ವಿದ್ಯಾರ್ಥಿಗಳನ್ನು ಸಜ್ಜುಗೊಳಿಸಬೇಕಿದೆ ಎಂದು ಚುನಾವಣಾ ಆಯೋಗದ ಹೆಚ್ಚುವರಿ ಆಯುಕ್ತ ಸಿ.ಎಸ್‌. ಕರಿಗೌಡ ತಿಳಿಸಿದರು.

Advertisement

ಇಲ್ಲಿನ ಬಸವ ಭವನದಲ್ಲಿ ಚಿರಋಣಿ ಕನ್ನಡಾಂಬೆ ಹೋರಾಟ ಸಮಿತಿ ವತಿಯಿಂದ ನಡೆದ ಗುರುವಂದನಾ ಕಾರ್ಯಕ್ರಮದಲ್ಲಿ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಮಹತ್ವದ ಕನಸುಗಳನ್ನು ಬಿತ್ತುವ ಕೆಲಸ ಶಿಕ್ಷಕರಿಂದ ಆಗಬೇಕು. ದೇಶ, ಭಾಷೆ, ಸಂಸ್ಕೃತಿ, ನೈತಿಕ ಮೌಲ್ಯಗಳು ಮತ್ತು ಆದರ್ಶಗಳ ನೆಲೆಗಟ್ಟಿನಲ್ಲಿ ಉನ್ನತವಾದುದನ್ನು ಪ್ರಚೋದಿಸುವವನೇ ನಿಜವಾದ ಶಿಕ್ಷಕ. ಬದುಕಿನ ಪಾಠ ಇಂದಿನ ಅನಿವಾರ್ಯವಿದೆ ಎಂದರು.

ಗುರುವಿನ ಮಾರ್ಗದರ್ಶನದಿಂದ ಸಾಧನೆ: ಶಾಸಕ ಟಿ.ವೆಂಕಟರಮಣಯ್ಯ ಮಾತನಾಡಿ, ಮಕ್ಕಳಲ್ಲಿ ಸಮಕಾಲೀನ ಜಗತ್ತಿನ ಅರಿವನ್ನು ಬಿತ್ತುವ ಮೂಲಕ ಹೊಣೆಯಾಧಾರಿತ ಪ್ರಜೆಯಾಗಿ ರೂಪಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಬೇಕು. ಸಮಾಜವನ್ನು ಸರಿದಾರಿಯಲ್ಲಿ ಮುನ್ನಡೆಸುವ ಕಾರ್ಯದಲ್ಲಿ ಶಿಕ್ಷಕರ ಪಾತ್ರ ಅಪಾರವಿದೆ. ದೇಶದ ಭವಿಷ್ಯವನ್ನು ನಿರ್ಧರಿಸುವ ಶಿಕ್ಷಕ ಎಲ್ಲ ಹಂತಗಳಲ್ಲೂ ಪ್ರಮುಖ ಪಾತ್ರವನ್ನು ನಿರ್ವಹಿಸುತ್ತಾನೆ. ಎಲ್ಲ ಹಂತಗಳಲ್ಲಿ ಗುರುವಿನ ಮಾರ್ಗದರ್ಶನ ದೊರೆತಾಗ ಮಾತ್ರ ಸಾಧನೆ ಸಾಧ್ಯವಾಗುತ್ತದೆ ಎಂದರು.

ಅಭಿನಂದನೆ ನಮ್ಮ ಕರ್ತವ್ಯ: ಚಿರಋಣಿ ಕನ್ನಡಾಂಬೆ ಹೋರಾಟ ಸಮಿತಿ ಸಂಸ್ಥಾಪಕ ರವಿ ಮಾವಿನಕುಂಟೆ ಮಾತನಾಡಿ, ಇಂದಿನ ತಾಂತ್ರಿಕ ಯುಗದಲ್ಲಿ ನಮ್ಮ ಸಂಸ್ಕೃತಿ, ಪರಂಪರೆಯ ಮೌಲ್ಯಗಳು ಹಾಗೂ ನಾಡು ನುಡಿ ಬಗ್ಗೆ ಅಭಿಮಾನ ಮೂಡಿಸಬೇಕಾದ ಅಗತ್ಯವಿದೆ. ವೃತ್ತಿ ಬದುಕಿನಲ್ಲಿ ಗುರುಹಿರಿಯರ ಮಾರ್ಗದರ್ಶನ ಎಲ್ಲರಿಗೂ ಅಗತ್ಯವಾಗಿದೆ. ಇಂತಹ ಗುರುಪರಂಪರೆಯನ್ನು ಅಭಿನಂದಿಸುವುದು ನಮ್ಮ ಕರ್ತವ್ಯವಾಗಿದೆ ಎಂದರು.

ಪಠ್ಯ ಪುಸ್ತಕಕ್ಕೆ ಸೀಮಿತಬೇಡ: ದೇವರಾಜ ಅರಸ್‌ ಶಿಕ್ಷಣ ಸಂಸ್ಥೆ ಉಪಾಧ್ಯಕ್ಷ ಜೆ.ರಾಜೇಂದ್ರ ಮಾತನಾಡಿ, ಶಿಕ್ಷಕರು ಕೇವಲ ಪಠ್ಯ ಪುಸ್ತಕಕ್ಕೆ ಸೀಮಿತವಾಗಬಾರದು. ಉತ್ತಮ ಸಮಾಜ ನಿರ್ಮಾಣ ಮಾಡುವಲ್ಲಿ ಶಿಕ್ಷಕರ ಪಾತ್ರ ಮುಖ್ಯವಾಗಿದೆ ಎಂದರು.

Advertisement

ತಾಲೂಕಿನ ವಿವಿಧ ಪ್ರಾಥಮಿಕ, ಮಾಧ್ಯಮಿಕ, ಪ್ರೌಢ ಶಾಲೆ, ಪದವಿ ಪೂರ್ವ ಕಾಲೇಜು, ಪದವಿ ಕಾಲೇಜು ಹಾಗೂ ವೃತ್ತಪರ ಶಿಕ್ಷಣ ಸಂಸ್ಥೆಗಳ 38 ಬೋಧಕರಿಗೆ ಗುರುವಂದನಾ ಕಾರ್ಯಕ್ರಮದಲ್ಲಿ ಸನ್ಮಾನಿಸಿ ಅಭಿನಂದಿಸಲಾಯಿತು.

ಕೇಂದ್ರ ರೇಷ್ಮೆ ಮಂಡಲಿ ಮಾಜಿ ಅಧ್ಯಕ್ಷ ಕೆ.ಎಂ. ಹನುಮಂತರಾಯಪ್ಪ, ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಕೇಂದ್ರದ ಅಧ್ಯಕ್ಷ ಡಾ.ಹುಲಿಕಲ್‌ ನಟರಾಜ್ , ಹೈಕೋರ್ಟ್‌ ವಕೀಲ ರವಿಚಂದ್ರ ಎಸ್‌ .ನೆರಬೆಂಚಿ, ಜಿಲ್ಲಾ ಕಸಾಪ ಅಧ್ಯಕ್ಷ ಬಿ.ಎನ್‌.ಕೃಷ್ಣಪ್ಪ, ಮುಖಂಡರಾದ ಪಿ.ನಾಗರಾಜು, ಸುರೇಶ್‌ ಬಾಬು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next