Advertisement

ಹೊಸ ಬಸ್‌ನಿಲ್ದಾಣದಲ್ಲಿ ಗ್ರಂಥಾಲಯ ಶಕೆ

07:03 PM Nov 03, 2021 | Team Udayavani |

ಹುಬ್ಬಳ್ಳಿ: ಪ್ರಯಾಣಿಕರಿಗೆ ಕನ್ನಡ ಸಾಹಿತ್ಯದ ಅಭಿರುಚಿ, ಕನ್ನಡ ಪುಸ್ತಕದ ಗೀಳು ಹಚ್ಚುವ ಕಾರ್ಯಕ್ಕೆ ಹುಬ್ಬಳ್ಳಿ ಗ್ರಾಮಾಂತರ ವಿಭಾಗ ಗ್ರಂಥಾಲಯಕ್ಕೆ ಮುನ್ನುಡಿ ಬರೆದಿದೆ. ವಾಯವ್ಯ ಸಾರಿಗೆ ವ್ಯಾಪ್ತಿಯಲ್ಲಿ ಇದೊಂದು ಹೊಸ ಹಾಗೂ ವಿನೂತನ ಕಾರ್ಯವಾಗಿದೆ.

Advertisement

ಕರುನಾಡಿನ ಹಬ್ಬದ ನೈಜತೆ, ಶಾಶ್ವತವಾಗಿ ಈ ಕಾರ್ಯ ಉಳಿಯಬೇಕು. ಕನ್ನಡ ಸಾಹಿತ್ಯ ಪ್ರೇಮಿಗಳು ನಿಲ್ದಾಣಕ್ಕೆ ಬಂದಾಗ ಒಂದಿಷ್ಟು ಸಮಯ ಪುಸ್ತಕದೊಂದಿಗೆ ಕಳೆಯಬೇಕು ಎನ್ನುವ ಕಾರಣಕ್ಕೆ ಇಲ್ಲಿನ ಗೋಕುಲ ರಸ್ತೆಯ ಹೊಸ ಬಸ್‌ ನಿಲ್ದಾಣದಲ್ಲಿ ಗ್ರಂಥಾಲಯ ಆರಂಭಿಸಲಾಗಿದೆ. ಮುಂಗಡ ಟಿಕೆಟ್‌ ಕಾಯ್ದಿರಿಸುವ ಸ್ಥಳದಲ್ಲಿ ಖಾಲಿಯಿದ್ದ ಜಾಗವನ್ನು ಕನ್ನಡ ಸಾಹಿತ್ಯ ಕಾರ್ಯಕ್ಕೆ ಮೀಸಲಿಡಲಾಗಿದೆ.

3000 ಪುಸ್ತಕದ ಗುರಿ: ಈ ಗ್ರಂಥಾಲಯ 3000ಕ್ಕೂ ಹೆಚ್ಚು ಪುಸ್ತಕಗಳ ಆಸ್ತಿ ಹೊಂದಬೇಕೆನ್ನುವ ಗುರಿಯಿದೆ. ರಾಜ್ಯೋತ್ಸವ ಇದಕ್ಕೆ ಸಕಾಲ ಎನ್ನುವ ಕಾರಣಕ್ಕೆ ಸುಮಾರು 100 ಪುಸ್ತಕಗಳ ಮೂಲಕ ಇದಕ್ಕೆ ಚಾಲನೆ ನೀಡಲಾಗಿದೆ. ಕಾದಂಬರಿ, ಕವನ ಸಂಕಲನ, ಕಥೆ, ವಿದ್ಯಾರ್ಥಿಗಳನ್ನು ಗಮನದಲ್ಲಿಟ್ಟುಕೊಂಡು ಸ್ಪರ್ಧಾತ್ಮಕ ಪುಸ್ತಕ ಸೇರಿದಂತೆ ಒಟ್ಟು ಕನ್ನಡದ ಪುಸ್ತಕಗಳ ಇಡಲು ಯೋಜನೆ ರೂಪಿಸಲಾಗಿದೆ. ಪ್ರಯಾಣಿಕರ ಅಭಿರುಚಿಗೆ ಪೂರಕವಾಗಿ ಪುಸ್ತಕಗಳು ಜತೆಗೆ ದಿನಪತ್ರಿಕೆಗಳ ವ್ಯವಸ್ಥೆ ಮಾಡಲು ನಿರ್ಧರಿಸಲಾಗಿದೆ. ಇದಕ್ಕೆ ಪೂರಕವಾಗಿ ಒಂದಿಷ್ಟು ವ್ಯವಸ್ಥೆ ಮಾಡಿಕೊಳ್ಳಲಾಗಿದೆ.

ಶ್ಲಾಘನೀಯ ಕಾರ್ಯ: ವಿನೂತನ ಕಾರ್ಯಕ್ಕೆ ಸಂಸ್ಥೆಯ ಅಧ್ಯಕ್ಷ, ಉಪಾಧ್ಯಕ್ಷರು, ವ್ಯವಸ್ಥಾಪಕ ನಿರ್ದೇಶಕ, ಮಂಡಳಿ ನಿರ್ದೇಶಕರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಅವರಿಗೆ ಕಾಣಿಕೆ ರೂಪದಲ್ಲಿ ಬಂದ ಪುಸ್ತಕಗಳು, ಇದರೊಂದಿಗೆ ಒಳ್ಳೆಯ ಪುಸ್ತಕಗಳನ್ನು ಗ್ರಂಥಾಲಯಕ್ಕೆ ಕೊಡಿಸುವ ಭರವಸೆ ನೀಡಿದ್ದಾರೆ. ಇನ್ನು ಆರಂಭದ ಪ್ರಯತ್ನವಾಗಿ ಗ್ರಂಥಾಲಯಕ್ಕೆ ಬೇಕಾದ ಪುಸ್ತಕಗಳನ್ನು ವಿಭಾಗದ ಅಧಿಕಾರಿಗಳು ಖರೀದಿಸಿದ್ದಾರೆ.

ಇನ್ನು ಗ್ರಂಥಾಲಯ ಇಲಾಖೆ ಮೂಲಕ ಒಂದಿಷ್ಟು ಪುಸ್ತಕಗಳನ್ನು ಪಡೆಯುವ ಯೋಚನೆಯಿದೆ. ಈ ಕಾರ್ಯಕ್ಕೆ ಇನ್ನರ್‌ ವೀಲ್‌ ಕ್ಲಬ್‌ ಸದಸ್ಯರು ಮೆಚ್ಚುಗೆ ವ್ಯಕ್ತಪಡಿಸಿ ಅಗತ್ಯ ಸೌಲಭ್ಯ ಕಲ್ಪಿಸಿಕೊಡಲು ಮುಂದೆ ಬಂದಿದ್ದಾರೆ. ಇದೊಂದು ಮಾದರಿ ಕಾರ್ಯವಾಗಿರುವ ಹಿನ್ನೆಲೆಯಲ್ಲಿ ಸಂಸ್ಥೆಯ ವ್ಯಾಪ್ತಿಯ ಇತರೆ ಬಸ್‌ನಿಲ್ದಾಣಗಳಲ್ಲಿ ಗ್ರಂಥಾಲಯ ಆರಂಭಿಸುವ ಚಿಂತನೆ ಮೂಡಿದೆ. ಇದನ್ನು ಪ್ರಯೋಗಾರ್ಥವಾಗಿ ಪರಿಗಣಿಸಿ ವಿಸ್ತರಿಸುವ ಗುರಿ ಉದ್ದೇಶ ಹೊಂದಲಾಗಿದೆ.

Advertisement

ಗುರುತಿನ ಚೀಟಿ ನೀಡಿ ಪುಸ್ತಕ ಪಡೆಯಬಹುದು: ಬಸ್‌ ಬರುವುದು ಇನ್ನೊಂದಿಷ್ಟು ಸಮಯವಿದೆ ಎಂದಾದರೆ ಗ್ರಂಥಾಲಯಕ್ಕೆ ಬರುವ ಪ್ರಯಾಣಿಕರು ತಮ್ಮ ಮೂಲ ಗುರುತಿನ ಚೀಟಿಯನ್ನು ಅಲ್ಲಿನ ಸಿಬ್ಬಂದಿಗೆ ನೀಡಿ ಪುಸ್ತಕ ಪಡೆದು ಓದಬಹುದು. ಹೋಗುವಾಗ ತೆಗೆದುಕೊಂಡು ಪುಸ್ತಕ ಮರಳಿಸಿ ತಮ್ಮ ಗುರುತಿನ ಚೀಟಿ ಪಡೆಯಬಹುದಾಗಿದೆ. ಪುಸ್ತಕಗಳ ಕಳ್ಳತನಕ್ಕೆ ಒಂದಿಷ್ಟು ಕಡಿವಾಣ ಹಾಕುವ ಕಾರಣಕ್ಕೆ ಈ ನಿಯಮ ಪಾಲನೆ ಬರಲಿದೆ.

ದಾನ ರೂಪದಲ್ಲಿ ಸಂಗ್ರಹ
ಸರಕಾರ ಇತ್ತೀಚೆಗೆ ಹೂ, ಶಾಲು ಬದಲಾಗಿ ಕನ್ನಡ ಪುಸ್ತಕ ನೀಡಲು ಆದೇಶಿಸಿದೆ. ಹೀಗಾಗಿ ಸಂಸ್ಥೆ ಅಧಿಕಾರಿಗಳು, ಸಿಬ್ಬಂದಿ ತಮ್ಮ ಹಾಗೂ ತಮ್ಮ ಮಕ್ಕಳ ಶುಭ ದಿನದ ಪ್ರಯುಕ್ತ ಒಂದಿಷ್ಟು ಪುಸ್ತಕಗಳನ್ನು ಕೊಡಬಹುದು. ಇನ್ನು ಸೇವಾ ನಿವೃತ್ತಿ ಹೊಂದಿದವರು ಸಂಸ್ಥೆಯ ಮೇಲಿನ ಅಭಿಮಾನ ಪ್ರೀತಿಯಿಂದ ಯಾವುದೋ ವಸ್ತುಗಳನ್ನುಕೊಡಿಸುವ ಬದಲು ಪುಸ್ತಕಗಳನ್ನು ದೇಣಿಗೆ ನೀಡಬಹುದಾಗಿದೆ. ಹೀಗೆ ನೀಡುವ ಪುಸ್ತಕದ ಮೇಲೆ ಅವರ ಹೆಸರು ಇರಲಿದೆ. ಗ್ರಂಥಾಲಯಕ್ಕೆ ಸ್ಪಷ್ಟ ರೂಪ ನೀಡುವ ನಿಟ್ಟಿನಲ್ಲಿ ಕಾರ್ಯ ನಡೆಯುತ್ತಿದೆ.

ಬಸ್‌ನಿಲ್ದಾಣದಲ್ಲಿ ಗ್ರಂಥಾಲಯ ಆರಂಭಿಸಿರುವುದು ಒಳ್ಳೆಯ ವಿಚಾರವಾಗಿದೆ. ಇದೊಂದು ಶ್ಲಾಘನೀಯ ಕೆಲಸ. ಈ ಗ್ರಂಥಾಲಯಕ್ಕೆ ಸರಕಾರ ಅಥವಾ ಸಂಬಂಧಿಸಿದ ಇಲಾಖೆಗಳಿಂದ ಯಾವ ಸೌಲಭ್ಯ ಬೇಕು ಅದನ್ನು ಕಲ್ಪಿಸಲಾಗುವುದು.
ಶಂಕರ ಪಾಟೀಲ ಮುನೇನಕೊಪ್ಪ,
ಸಕ್ಕರೆ ಮತ್ತು ಜವಳಿ ಖಾತೆ ಸಚಿವ

ನಮ್ಮ ಸಾರಿಗೆ ಸಂಸ್ಥೆಯಲ್ಲಿ ವ್ಯಾಪ್ತಿಯ ನಿಲ್ದಾಣಗಳಲ್ಲಿ ಪ್ರಯಾಣಿಕರಿಗಾಗಿ ಗ್ರಂಥಾಲಯ ಆರಂಭಿಸಿರುವುದು ಮೊದಲ ಪ್ರಯತ್ನ. ಕನ್ನಡ ಸಾಹಿತ್ಯ ಪಸರಿಸುವ ಕೆಲಸ ನಿರಂತರವಾಗಬೇಕು. ಇದನ್ನು ಪ್ರಾಯೋಗಿಕ ಎಂದು ಪರಿಗಣಿಸಿ ಸಾಧಕ-ಬಾಧಕ ನೋಡಿಕೊಂಡು ನಗರ ಪ್ರದೇಶದ
ಬಸ್‌ ನಿಲ್ದಾಣಗಳಲ್ಲಿ ಆರಂಭಿಸಲಾಗುವುದು.
ವಿ.ಎಸ್‌.ಪಾಟೀಲ, ಅಧ್ಯಕ್ಷ, ವಾಕರಸಾ ಸಂಸ್ಥೆ

ಹೇಮರೆಡ್ಡಿ ಸೈದಾಪುರ

Advertisement

Udayavani is now on Telegram. Click here to join our channel and stay updated with the latest news.

Next