ಮನಸ್ಸಿನಾಳದ ವ್ಯಕ್ತಿಗತ ದೌರ್ಬಲ್ಯಗಳಿಗೆ ನಾನು ಸಾಕ್ಷಿಯಾದರೂ, ಆ ವ್ಯಕ್ತಿಯಲ್ಲಿನ ಸೌಶೀಲ್ಯವನ್ನು ಎತ್ತಿ ಹಿಡಿಯುವ ಸಂಯಮವೇ ಚಿಕಿತ್ಸಾ ಮನೋವಿಜ್ಞಾನ. ಈ ವೃತ್ತಿಯಲ್ಲಿ ನಾನು ಕೇಳುವ ನಿಜ ಜೀವನದ ಘಟನೆಗಳು ಕಥೆಗಿಂತಲೂ ಕಾಲ್ಪನಿಕವಾಗಿರುತ್ತವೆ. ಅದಕ್ಕೊಂದು ಉದಾಹರಣೆ ಇಲ್ಲಿದೆ- ವಿಚ್ಛೇದನ ಕೋರಿ ದಂಪತಿ ನನ್ನ ಬಳಿಗೆ ಬಂದಿದ್ದರು. ಪತ್ನಿಗೆ ವಿಚ್ಛೇದನ ಬೇಡ. ಪತಿಗೆ ಬೇಕು. ಇಬ್ಬರೂ ನನ್ನ ಬಳಿ ಬಂದಿದ್ದರು.
ಮನಃಸ್ತಾಪಕ್ಕೆ ಕಾರಣವನ್ನು ಹಂಚಿಕೊಳ್ಳುತ್ತಾ ಆಕೆ ಶೋಕಸಾಗರವಾದಳು. ಪತಿ ಕೂಡ ಅತ್ತುಬಿಟ್ಟರು. ಹದಿನೇಳು ವರ್ಷಗಳ ಹಿಂದೆ ನಡೆದಿದ್ದು. ಆರು ದಿನದ ಹಸುಳೆಯನ್ನು ಹೆತ್ತ ಬಾಣಂತಿ, ಏನು ಮಾಡುತ್ತಿದ್ದೇನೆ ಎಂಬ ಅರಿವಿಲ್ಲದೆ ಕೈಯಾರೆ ಹಿಚುಕಿ ಸಾಯಿಸಿದ್ದಳಂತೆ. ಈ ವಿವರ ಕೇಳಿದಾಗ ನನಗೂ ಕರುಳು ಚುರ್ ಎನಿಸಿತು. ತಾಯಿಯ ಆ ಕ್ಷಣದ ಮನೋದೌರ್ಬಲ್ಯಕ್ಕೆ ಈಗ ಕುಟುಂಬವೇ ತತ್ತರಿಸುತ್ತಿದೆ. ಪತಿಗೆ ಮಗುವನ್ನು ಮಣ್ಣು ಮಾಡಿದ್ದ ನೋವು ಮತ್ತೆ ಮತ್ತೆ ಕಾಡುತ್ತಿದೆ.
ಮಗುವಿನ ಎಳೇ ಮುಖ ಬಾಧಿಸುತ್ತಿದೆ. ಭಾವನಾತ್ಮಕ ಒತ್ತಡ ಬಹಳ ಕಷ್ಟದ್ದು. ಈ ನಡುವೆ, ಪತ್ನಿಯ ಜೊತೆ ಸಹಬಾಳ್ವೆ ಕಷ್ಟ ಎನಿಸುತ್ತಿದೆ. ನಂತರ ಹುಟ್ಟಿದ ಇಬ್ಬರು ಮಕ್ಕಳಿ¨ªಾರೆ. “ಮಕ್ಕಳು ಇರಲಿ- ಪತ್ನಿ ಬೇಡ’ ಎಂದು ಹಟ ಹಿಡಿದಿದ್ದರು ಪತಿರಾಯ. ತೀವ್ರವಾದ ಆಘಾತಕಾರಿ ಘಟನೆ, ಒತ್ತಡ ಮತ್ತು ಮನೋವಿಕಾರವನ್ನು ಉಂಟು ಮಾಡುತ್ತದೆ (ಕಖಖಈ). ಪತ್ನಿಗೂ ಹುದುಗಲಾರದ ದುಃಖ ಮತ್ತು ಅಪರಾಧಿ ಮನೋಭಾವ.
ಇಬ್ಬರಿಗೂ ವೈಯಕ್ತಿಕ ಹಾಗೂ ಫ್ಯಾಮಿಲಿ ಥೆರಪಿ ನೀಡಿದೆ. ಭಾವನೆ- ಆಲೋಚನೆ- ವರ್ತನೆಯಲ್ಲಿ ಮಾರ್ಪಾಡು ಮಾಡಿಕೊಳ್ಳಲು ಸಹಾಯ ಮಾಡಿದೆ. ವಿಚ್ಛೇದನದ ಮಾತಿಲ್ಲ. ಪತ್ನಿಯ ಮೇಲೆ ಸಿಟ್ಟು ಕಡಿಮೆಯಾಗಿದೆ. ಈ ಘಟನೆ ನಡೆಯಲು, ಮನೋವಿಕೃತಿ/ ವ್ಯಕ್ತಿತ್ವದಲ್ಲಿನ ನ್ಯೂನತೆ/ ಖನ್ನತೆ/ ಉದ್ವಿಗ್ನತೆ ಕಾರಣವಾಗಿರಬಹುದು. ಕಿವಿಮಾತು: ಬಸಿರು- ಬಾಣಂತನ ಕಾಯಿಲೆಯಲ್ಲ. ಆದರೂ, ಆ ಸಮಯದಲ್ಲಿ “emotional health’ ಮುಖ್ಯವಾಗುತ್ತದೆ.
28 ವಾರಗಳು ತುಂಬಿದ ಬಸಿರಿನಿಂದ ಮಗುವಿಗೆ ನಾಲ್ಕು ವಾರ ತುಂಬುವವರೆಗೆ ಸೊಸೆಯನ್ನು ಸೂಕ್ಷ್ಮವಾಗಿ ಗಮನಿಸಿಕೊಳ್ಳಬೇಕು. ತಾಯಿ- ಮಗಳೇ ಹೊಂದಿಕೊಳ್ಳದೆ ಜಗಳವಾಗಿ ಬಾಣಂತಿಗೆ ರಿಲ್ಯಾಕ್ಸ್ ಆಗುವುದಿಲ್ಲ. ಗಂಡಾದರೆ ಚೆನ್ನ ಎಂಬ ಒತ್ತಡ ಬೇಡವೇ ಬೇಡ. ಹೆಣ್ಣು ಮಗುವಾದರೆ ನಿಮ್ಮ ಸೊಸೆ ಕಾರಣಳಲ್ಲ. ಆಸ್ಪತ್ರೆಯಲ್ಲಿ ಹೆತ್ತ ಸೊಸೆಯ ತಲೆ ನೇವರಿಸಿ, ಮಾತನಾಡಿ.
ನಂತರ ಮಗುವಿನ ಖುಷಿಯನ್ನು ಮೊದಲು ಆಕೆಯೊಂದಿಗೇ ಹಂಚಿಕೊಳ್ಳಿ. ಸೊಸೆಯ ತಾಯಿಯನ್ನು ಗೌರವದಿಂದ ಮಾತನಾಡಿಸಿ. ಅವಳ ಕೆಲಸದಲ್ಲಿ ಕೈ ಜೋಡಿಸಿ. ನೆಂಟರು ಕೊಡುವ ಸಲಹೆಗೆ ಮಹತ್ವ ಬೇಡ. ಬಾಣಂತಿಯ ಗಮನ ಹಾಲೂಡಿಸುವುದರ ಮೇಲಿರಲಿ. ಹಾಲಿರದಿದ್ದರೆ ಮಕ್ಕಳ ತಜ್ಞರ ಸಲಹೆ ಪಡೆಯಿರಿ. ಹಡೆದಾಗ, ಪತಿ ಜೊತೆಗಿದ್ದು ಪತ್ನಿಗೆ ನೈತಿಕ ಧೈರ್ಯ ಕೊಡಲಿ. ಅವಳ ಆಫೀಸಿನ ಕೆಲಸದ ಬಗ್ಗೆಯ ಗಾಬರಿಗೆ ಅವರು ಸಮಾಧಾನ ಹೇಳಲಿ. ಯಾವ ಚಿಂತೆಯೂ ಇಲ್ಲದೆ ನಿಮ್ಮದೇ ಸೃಷ್ಟಿಯಾದ ಶಿಶು ಎಂಬ ಚಮತ್ಕಾರದ ಸವಿಯನ್ನು ಅನುಭವಿಸಿರಿ.
* ಡಾ. ಶುಭಾ ಮಧುಸೂದನ್, ಚಿಕಿತ್ಸಾ ಮನೋವಿಜ್ಞಾನಿ