Advertisement

ಮೊದಲು ಸ್ಥಳೀಯ ಸಮಸ್ಯೆ ಪರಿಹರಿಸೋಣ

09:49 PM Dec 27, 2019 | Lakshmi GovindaRaj |

ಹುಣಸೂರು: ಸ್ಥಗಿತಗೊಂಡಿರುವ ಬಸ್‌ ರೂಟ್‌ಗಳು ಪುನ ಆರಂಭಿಸಿ, ಗಿರಿಜನರಿಗೆ ವಿದ್ಯುತ್‌ ಸ್ಥಗಿತಗೊಳಿಸಬೇಡಿ, ಸರಕಾರದ ಯೋಜನೆಗಳನ್ನು ಪಡೆಯಲು ಬರುವ ಜನರೊಂದಿಗೆ ಸೌಜನ್ಯವಾಗಿ ವರ್ತಿಸಿ, ಶೀಘ್ರವೇ ಗ್ರಾಪಂ ವ್ಯಾಪ್ತಿಯಲ್ಲಿ ಸಭೆ ನಡೆಸಿ ಸ್ಥಳೀಯ ಸಮಸ್ಯೆಗಳನ್ನು ಎಲ್ಲರೂ ಸೇರಿ ಪರಿಹರಿಸೋಣ ಎಂದು ಶಾಸಕ ಎಚ್‌.ಪಿ.ಮಂಜುನಾಥ್‌ ಹೇಳಿದರು.

Advertisement

ಶುಕ್ರವಾರ ನಗರದ ನಗರಸಭಾ ಸಭಾಂಗಣದಲ್ಲಿ ನಡೆದ ಪ್ರಥಮ ತ್ತೈಮಾಸಿಕ ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ತಾಲೂಕಿನಲ್ಲಿ ಯಾರೂ ಸಹ ಸರಕಾರಿ ಸೌಲಭ್ಯ ವಂಚಿತವಾಗಬಾರದು, ಕಚೇರಿಗಳಿಗೆ ಬರುವ ಬಡವರು, ವೃದ್ಧರನ್ನು ಗದರುವುದು ನಿಲ್ಲಿಸಬೇಕು. ತಾವು ಹೋದೆಡೆ ಎಲ್ಲಾ ವಿದ್ಯುತ್‌, ಬಸ್‌ ಹಾಗೂ ಮನೆ ನಿರ್ಮಾಣದ ಬಿಲ್‌ ಬಾಕಿ ಸಮಸ್ಯೆ ಹೆಚ್ಚಿದೆ, ಇದನ್ನು ಪರಿಹರಿಸುವಲ್ಲಿ ಅಧಿಕಾರಿಗಳು ಬದ್ಧತೆಯಿಂದ ಕೆಲಸ ಮಾಡಬೇಕು, ಸಭೆಗೆ ಹಾಜರಾಗದ ಅಧಿಕಾರಿಗಳಿಗೆ ನೋಟಿಸ್‌ ನೀಡುವಂತೆ ಇಒಗೆ ಸೂಚಿಸಿದರು.

ವರ್ಷದಿಂದ ನಡೆಯದ ರಕ್ಷಾ ಸಭೆ: ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಕಳೆದ ಒಂದೂವರೆ ವರ್ಷದಿಂದ ರಕ್ಷಾ ಸಮಿತಿ ಸಭೆ ನಡೆದಿಲ್ಲ. ಆಸ್ಪತ್ರೆಯಲ್ಲಿ ಶೌಚಗೃಹಗಳ ಪೈಪ್‌ಗ್ಳು ಒಡೆದಿವೆ, ಶುಚಿತ್ವ ಕಾಣುತ್ತಿಲ್ಲ. ಎರಡು ದಿನಗಳ ಹಿಂದೆ ಆಸ್ಪತೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿ 12 ಲಕ್ಷ ರೂ.ಗಳ ವೆಚ್ಚದಲ್ಲಿ ತುರ್ತು ಕಾಮಗಾರಿ ನಡೆಸಲು ಜಿಲ್ಲಾಧಿಕಾರಿಗಳ ಅನುಮೋದನಗೆ ಕಳುಹಿಸಲಾಗಿದೆ. ರಕ್ಷಾ ಸಮಿತಿಯನ್ನು ಶೀಘ್ರ ಪುನರ್‌ರಚಿಸಲಾಗುವುದು ಎಂದು ತಿಳಿಸಿದರು.

ಡಿಪೋ ಮ್ಯಾನೇಜರ್‌ಗೆ ತರಾಟೆ: ಕಳೆದ ಒಂದೂವರೆ ವರ್ಷಗಳ ಹಿಂದೆ ತಾಲೂಕಿನಲ್ಲಿ ಸೇವೆಯಲ್ಲಿದ್ದ ಒಟ್ಟು 19 ರೂಟ್‌ ಬಸ್‌ಗಳನ್ನು ರದ್ದುಪಡಿಸಿದ್ದೀರಿ. ಮುದ್ದೇಬಿಹಾಳ, ಧರ್ಮಸ್ಥಳ, ತಿರುಪತಿ, ತಾಲೂಕು ವ್ಯಾಪ್ತಿಯಲ್ಲಿ ಚಿಕ್ಕಪಡುವಕೋಟೆ, ಸಿದ್ದಲಿಂಗಪುರ, ಬಿಳಿಕೆರೆ-ಧರ್ಮಾಪುರ, ಹನಗೋಡು-ಬೆಂಗಳೂರು, ದೊಡ್ಡೆಕೊಪ್ಪಲು ಮುಂತಾದ ರೂಟ್‌ಬಸ್‌ಗಳನ್ನು ರದ್ದುಪಡಿಸಿದ್ದರಿಂದ ಶಾಲಾ ಮಕ್ಕಳು- ಗ್ರಾಮೀಣ ಜನರಿಗೆ ತೊಂದರೆಯಾಗುತ್ತಿದೆ,

ಯಾಕ್ರಿ ಹೀಗೆ ಮಾಡಿದ್ದೀರಾ, ಇದಕ್ಕೂ ಮನವಿ ಪತ್ರ ಕೇಳುತ್ತೀರಾ, ಇನ್ನು ನಗರದ ಬಸ್‌ ನಿಲ್ದಾಣದಲ್ಲಿ ಕರೆಂಟ್‌ ಇಲ್ಲದೆ ಪ್ರಯಾಣಿಕರು ತೊಂದರೆ ಪಡುತ್ತಿದ್ದಾರೆ, ಬೆಳಗಿನ ವೇಳೆ ಮೈಸೂರು ಕಡೆಗೆ ಹೆಚ್ಚಿನ ಬಸ್‌ ಇಲ್ಲದೆ ಜನರು ತೊಂದರೆಗೊಳಗಾಗುತ್ತಿದ್ದು, ತಾವೇ ಬಂದು ಪರಿಶೀಲಿಸುತ್ತೇನೆ, ಎಲ್ಲವನ್ನೂ ಸರಿಪಡಿಸಿ, ಇದೇ ಅಂತಿಮ ಎಂದು ಭಾವಿಸಿ ಎಂದು ಡಿಪೋ ಮ್ಯಾನೇಜರ್‌ ವಿಪಿನ್‌ ಕೃಷ್ಣರಿಗೆ ತಾಕೀತು ಮಾಡಿ ಶೀಘ್ರದಲ್ಲೇ ಸಾರಿಗೆ ಡೀಸಿ ಅವರ ನೇತೃತ್ವದಲ್ಲಿ ಸಾರಿಗೆ ಅದಾಲತ್‌ ನಡೆಸುವುದಾಗಿ ತಿಳಿಸಿದರು.

Advertisement

ಹೊಸ ಬಾರ್‌ಗೆ ಅನುಮತಿ ಬೇಡ: ತಾಲೂಕಿನಲ್ಲಿ ಇನ್ನು ಮುಂದೆ ಹೊಸ ಮದ್ಯದಂಗಡಿ ತೆರೆಯಲು ಹಾಗೂ ವರ್ಗಾವಣೆಗೊಳಿಸಲು ಅನುಮತಿ ನೀಡಬೇಡಿ, ಹೊಸದಾಗಿ ತೆರೆಯಲು ಅನುಮತಿ ನೀಡಬೇಡಿ, ಈ ಬಗ್ಗೆ ಹಿರಿಯ ಅಧಿಕಾರಿಗಳಿಗೂ ಪತ್ರಬರೆಯುವಂತೆ ಅಬಕಾರಿ ನಿರೀಕ್ಷಕ ಧರ್ಮರಾಜ್‌ರಿಗೆ ಶಾಸಕರು ಸೂಚಿಸಿದರು.

ಬೇಡಿಕೆಗೆ ಅನುಗುಣವಾಗಿ ವಿದ್ಯುತ್‌ ನೀಡಿ: ಬೇಸಿಗೆ ಆರಂಭಗೊಂಡಿದ್ದು, ತಾಲೂಕಿನಲ್ಲಿ ಪ್ರತಿದಿನ 70-80 ಟೀಸಿಗಳ ಅವಶ್ಯಕತೆ ಇದೆ. ರೈತರಿಗೆ ಆದಷ್ಟು ಸೋಲಾರ್‌ ಪಂಪ್‌ ಸೆಟ್‌ಗಳನ್ನು ಅಳವಡಿಸಿಕೊಳ್ಳಲು ಸೂಚಿಸಲಾಗುತ್ತದೆ. ಮೈಸೂರು ಜಿಲ್ಲೆಯಲ್ಲಿ ಪಂಪ್‌ಸೆಟ್‌ಗಳಿಗೆ ಸತತವಾಗಿ 7 ಗಂಟೆಗಳ ವಿದ್ಯುತ್‌ ಪೂರೈಕೆಯನ್ನು ಪ್ರಾಯೋಗಿಕವಾಗಿ ಆರಂಭಿಸಲಾಗಿದ್ದು, ಕೆಲ ತಾಂತ್ರಿಕ ತೊಂದರೆಗಳಿಂದಾಗಿ ಹಗಲಿನಲ್ಲಿ 4 ಗಂಟೆ ಮತ್ತು ರಾತ್ರಿ ವೇಳೆ 3ಗಂಟೆಗಳ ಕಾಲ ವಿದ್ಯುತ್‌ ಪೂರೈಸಲಾಗುತ್ತಿದೆ, ಬೇಡಿಕೆಗನುಗುಣವಾಗಿ ಕೇಂದ್ರಗಳನ್ನು ತೆರೆಯಬೇಕಿದೆ ಎಂದು ಸೆಸ್ಕ್ ಇಇ ಸುನಿಲ್‌ ತಿಳಿಸಿದರು.

ವಿದ್ಯುತ್‌ ಕಟ್‌ ಸಲ್ಲದು: ಗಿರಿಜನ ಅಭಿವೃದ್ಧಿ ಅಧಿಕಾರಿ ಚಂದ್ರಶೇಖರ್‌ ಮಾತನಾಡಿ, ಜಿಲ್ಲೆಯ 4264 ಗಿರಿಜನ ಕುಟುಂಬಗಳ ಮನೆಗೆ ವಿವಿಧ ಯೋಜನೆಯಡಿ ಪೂರೈಸುತ್ತಿದ್ದ ವಿದ್ಯುತ್‌ ಸಂಪರ್ಕವನ್ನು ಕಡಿತಗೊಳಿಸಲಾಗಿದೆ. ಈ ಕುಟುಂಬಗಳು ಸೆಸ್ಕ್ಗೆ ನೀಡಬೇಕಿದ್ದ ಒಟ್ಟು 80 ಲಕ್ಷ ರೂ.ಗಳ ಬಾಕಿಯ ಕುರಿತು ಸರಕಾರಕ್ಕೆ ಪತ್ರಬರೆಯಲಾಗಿತ್ತು, ಇದೀಗ ಮತ್ತೆ ಸಂಪರ್ಕ ನೀಡಲು ಜಿಲ್ಲಾಧಿಕಾರಿಗಳು ಸೂಚಿಸಿದ್ದು, ಸಂಪರ್ಕಕಲ್ಪಿಸಲಾಗುತ್ತಿದೆ. ಫಲಾನುಭವಿಗಳು ಬಾಕಿ ಹೊರತಾಗಿ ಹೊಸ ಬಿಲ್‌ ಪಾವತಿಸಬೇಕಿದೆ ಎಂದು ಮಾಹಿತಿಗೆ ಯಾವುದೇ ಕಾರಣಕ್ಕೂ ಸಂಪರ್ಕ ಕಡಿತಗೊಳಿಸದಂತೆ ಸೂಚಿಸಿದರು.

ಮನೆ ಬಾಗಿಲಿಗೆ ತಾಲೂಕು ಆಡಳಿತ: ಕಳೆದ ಒಂದೂವರೆ ವರ್ಷಗಳಿಂದ ಆಡಳಿತ ಜಡ್ಡು ಗಟ್ಟಿದ್ದು, ಮೂಲಭೂತ ಸಮಸ್ಯೆ ಹಾಗೂ ಜನರ ಸಮಸ್ಯೆಯನ್ನು ಪರಿ ಹರಿಸುವ ನಿಟ್ಟಿನಲ್ಲಿ ಮನೆ ಬಾಗಿಲಿಗೆ ತಾಲೂಕು ಆಡಳಿತ ಎಂಬ ವಿಶಿಷ್ಟ ಕಾರ್ಯಕ್ರಮದ ಮೂಲಕ ಪ್ರತಿ ಗ್ರಾಪಂ ಕೇಂದ್ರಗಳಲ್ಲಿ ಒಂದು ದಿನದ ಅದಾಲತ್‌ ನಡೆಸಿ, ಸರಕಾರ ಬಡವರಿಗಾಗಿ ರೂಪಿಸಿರುವ ಸಾಮಾಜಿಕ ಭದ್ರತಾ ಯೋಜನೆಗಳು, ಆಯುಷ್ಮಾನ್‌ ಕಾರ್ಡ್‌, ಪಡಿತರ ಚೀಟಿ, ಕಂದಾಯ ಇಲಾಖೆಗೆ ಸಂಬಂಧಿಸಿದ ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ ನೀಡಲಾಗುವುದು,

ಪ್ರತಿ 6 ತಿಂಗಳಿಗೊಮ್ಮೆ ಕಾರ್ಯಕ್ರಮ ರೂಪಿಸುವುದಾಗಿ ಶಾಸಕರು ತಿಳಿಸಿದರು. ತಾಪಂ ಅಧ್ಯಕ್ಷೆ ಪದ್ಮಮ್ಮ, ಉಪಾಧ್ಯಕ್ಷ ಪ್ರೇಮೇಗೌಡ, ಜಿಪಂ ಸದಸ್ಯರಾದ ಎಂ.ಬಿ.ಸುರೇಂದ್ರ, ಕಟ್ಟನಾಯ್ಕ, ಸಾವಿತ್ರಮ್ಮ, ತಹಸೀಲ್ದಾರ್‌ ಐ.ಇ.ಬಸವರಾಜು, ಇಒ ಗಿರೀಶ್‌, ವಿವಿಧ ಇಲಾಖೆ ಅಧಿಕಾರಿಗಳು, ತಾಪಂ ಸದಸ್ಯರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next