Advertisement

KCCI ಮಂಗಳೂರಿನಲ್ಲಿ ನಮ್ಮದೇ ಉದ್ಯಮ ಬೆಳೆಸೋಣ: ಸಂಸದ ಕ್ಯಾ|ಬ್ರಿಜೇಶ್‌ ಚೌಟ

11:50 PM Aug 23, 2024 | Team Udayavani |

ಮಂಗಳೂರು: ಬೇರೆ ಉದ್ಯಮಗಳನ್ನು ಮಂಗಳೂರಿಗೆ ಆಕರ್ಷಿಸುವುದಕ್ಕೆ ಹಾಕುವ ಶ್ರಮಕ್ಕಿಂತಲೂ ನಮ್ಮದೇ ಇಲ್ಲಿನ ಉದ್ಯಮಿಗಳನ್ನು ಪ್ರೋತ್ಸಾಹಿಸುವ ಮೂಲಕ ಈ ಭಾಗದ ಅಭಿವೃದ್ಧಿಗೆ ಮುಂದಾಗೋಣ. ಅದಕ್ಕೆ ಮಂಗಳೂರನ್ನು ಋಣಾತ್ಮಕವಾಗಿ ಬಿಂಬಿಸುವ ಬದಲು ಧನಾತ್ಮಕವಾಗಿ ತೋರಿಸುವುದು ಮುಖ್ಯ ಎಂದು ಸಂಸದ ಕ್ಯಾ| ಬ್ರಿಜೇಶ್‌ ಚೌಟ ಹೇಳಿದ್ದಾರೆ.

Advertisement

ನಗರದಲ್ಲಿ ಕೆನರಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯವರು ಹಮ್ಮಿಕೊಂಡಿದ್ದ “ಸಂಸದರೊಂದಿಗೆ ಸಂವಾದ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಅನೇಕ ವರ್ಷಗಳಿಂದ ದೊಡ್ಡದೊಡ್ಡ ಉದ್ಯಮಗಳನ್ನು ಇಲ್ಲಿಗೆ ತರಲು ಬಹಳ ಪ್ರಯತ್ನಗಳು ನಡೆಯುತ್ತಿದ್ದರೂ ಅದರಲ್ಲಿ ಹೆಚ್ಚಿನ ಸಫ‌ಲತೆ ಸಿಕ್ಕಿಲ್ಲ. ಆ ಪ್ರಯತ್ನಗಳ ಜತೆಯಲ್ಲಿ ನಮ್ಮದೇ ಆದ “ಮಂಗಳೂರು ಆಧರಿತ ಉದ್ದಿಮೆ’ಗಳನ್ನೇ ಬೆಳೆಸುವ ಮೂಲಕ ಮೆಟ್ರೋ ನಗರಗಳಿಗೆ ನಾವು ಸರಿಸಾಟಿಯಾಗಿ ಬೆಳೆಯಬಹುದು ಎಂದರು.

ಮಂಗಳೂರಿನಲ್ಲಿ “ನೈಟ್‌ಲೈಫ್ ‘ ಎನ್ನುವುದೊಂದೇ ಕಾರಣಕ್ಕೆ ಇಲ್ಲಿಗೆ ಉದ್ಯಮಗಳು ಬರದಿರುವುದಲ್ಲ. ಎಷ್ಟೋ ಇತರ ನಗರಗಳು ಮಂಗಳೂರಿಗಿಂತ ಕೆಟ್ಟದ್ದಾಗಿವೆ. ಆದರೆ ಅಲ್ಲಿ ಐಟಿ ಸಹಿತ ಉದ್ದಿಮೆಗಳು ಬೆಳೆದಿವೆ. ಹಾಗಾಗಿ ಮಂಗಳೂರನ್ನು ಋಣಾತ್ಮಕವಾಗಿ ನೋಡುವುದು ಸಲ್ಲದು ಎಂದರು.

ಬೆಂಗಳೂರು-ಮಂಗಳೂರು ಸಂಪರ್ಕ ಮುಖ್ಯಮಂಗಳೂರು ಹಾಗೂ ಬೆಂಗಳೂರಿನ ಸಂಪರ್ಕ ತ್ವರಿತಗೊಳಿಸುವುದು ಹಿಂದಿನಿಂದಲೂ ಇರುವ ನನ್ನ ಗುರಿ, ನನ್ನ ನವಯುಗ ನವಪಥ ಪರಿಕಲ್ಪನೆಯಲ್ಲೂ ಅದನ್ನೇ ಹೇಳಿದ್ದೇನೆ, ಮಂಗಳೂರು-ಬೆಂಗಳೂರು ಸಂಪರ್ಕ ವೇಗವಾದರೆ ಬಹುತೇಕ ಅಭಿವೃದ್ಧಿ ವಿಚಾರಗಳು ಗುರಿಮುಟ್ಟಲಿವೆ, ಅದಕ್ಕಾಗಿ ಹಲವು ಅಂಶದ ಕೆಲಸಗಳನ್ನು ಮಾಡಲಾಗುತ್ತಿದೆ ಎಂದರು.

Advertisement

ಈಗಾಗಲೇ ಕೇಂದ್ರದ ಸಚಿವರನ್ನು ಭೇಟಿಯಾಗಿ ಮನದಟ್ಟು ಮಾಡಿದ್ದೇನೆ, ಮಂಗಳೂರು-ಬೆಂಗಳೂರು ರೈಲಿನ ವೇಗವರ್ಧನೆಗೂ ಅಧ್ಯಯನ ನಡೆಸಲಾಗುತ್ತಿದೆ, ಈ ಭಾಗದ ರೈಲಿನ ಸಮಸ್ಯೆ ಇತ್ಯರ್ಥಕ್ಕೆ ಮೂರೂ ಡಿಆರ್‌ಎಂಗಳ ಮಟ್ಟದ ಸಭೆ ಪ್ರತಿ ಮೂರು ತಿಂಗಳಿಗೊಮ್ಮೆ ಯೋಜಿಸಲಾಗಿದೆ ಎಂದರು.

ಮಂಗಳೂರಿನ ಪ್ರವಾಸೋದ್ಯಮ ಅಭಿವೃದ್ಧಿ ದೃಷ್ಟಿಯಲ್ಲಿದೆ. ಸಸಿಹಿತ್ಲಿನಲ್ಲಿ ಅಡ್ವೆಂಚರ್‌ ಟೂರಿಸಂ ಸಾಧ್ಯತೆಗಳನ್ನು ಪರಿಶೀಲಿಸಲಾಗುತ್ತಿದೆ. ಇಲ್ಲೊಂದು ಫಿಲ್ಮ್ ಸಿಟಿ ನಿರ್ಮಾಣ, ಆಹಾರ ಸಂಸ್ಕರಣ, ಸಾಗರೋತ್ಪನ್ನ ಸಂಸ್ಕರಣ ಘಟಕಗಳಿಗೆ ಉತ್ತೇಜನ ನೀಡುವುದೂ ಆದ್ಯತೆಯಾಗಿದೆ ಎಂದರು.

ಕೆನರಾ ಚೇಂಬರ್ಸ್‌ನ ಗಣ್ಯರೊಂದಿಗೆ ಸಂವಾದ ನಡೆಯಿತು. ಕೆಸಿಸಿಐ ಅಧ್ಯಕ್ಷ ಅನಂತೇಶ್‌ ವಿ.ಪ್ರಭು ಅವರು ಕರಾವಳಿ ಕುರಿತ ಬೇಡಿಕೆಗಳನ್ನೊಳಗೊಂಡ ಮನವಿ ಸಲ್ಲಿಸಿದರು.ಉಪಾಧ್ಯಕ್ಷ ಆನಂದ್‌ ಜಿ.ಪೈ, ಕಾರ್ಯದರ್ಶಿಗಳಾದ ಪಿ.ಬಿ.ಅಹಮದ್‌ ಮುದಾಸರ್‌, ಅಶ್ವಿ‌ನ್‌ ಪೈ ಮಾರೂರು, ಖಜಾಂಚಿ ಅಬ್ದುರ್‌ ರಹ್ಮಾನ್‌ ಮುಸ್ಬಾ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next