ಮಹಾನಗರ: ನಗರದ ವಿಶೇಷ ಆರ್ಥಿಕ ವಲಯದಲ್ಲಿ ಜೆಬಿಎಫ್ ಕಂಪೆನಿ ಸ್ಥಾಪನೆಗೆ ಜಮೀನು ಬಿಟ್ಟುಕೊಟ್ಟ ನಿರ್ವಸಿತರಿಗೆ ಉದ್ಯೋಗ ದೊರಕುವ ಕಠಿನ ಸಮಸ್ಯೆಯು ಇತ್ಯರ್ಥವಾಗಿದೆ ಎಂದು ಸಂಸದ ಕ್ಯಾ| ಬ್ರಿಜೇಶ್ ಚೌಟ ಹೇಳಿದರು.
ಜಮೀನು ಬಿಟ್ಟುಕೊಟ್ಟಿದ್ದವರ ಪೈಕಿ 69 ಮಂದಿಗೆ ಜಿಎಂಪಿಎಲ್ (ಗೈಲ್ ಇಂಡಿಯಾ) ಕಂಪೆನಿಯಲ್ಲಿ ಉದ್ಯೋಗ ಕಲ್ಪಿಸುವ ನೇಮಕಾತಿ ಪತ್ರಗಳನ್ನು ಬಜಪೆಯ ಎಂಎಸ್‌ಇಝೆಡ್‌ನ ಜಿಎಂಪಿಎಲ್ ಕಂಪೆನಿಯಲ್ಲಿ ನಡೆದ ಸಮಾರಂಭದಲ್ಲಿ ವಿತರಿಸಿ ಅವರು ಮಾತನಾಡಿದರು.
ಜೆಬಿಎಫ್ ಉದ್ಯೋಗಸ್ಥರ ಈ ಗಂಭೀರ ಸಮಸ್ಯೆ ಬಗೆಹರಿಸುವುದಕ್ಕೆ ತುರ್ತಾಗಿ ಸ್ಪಂದಿಸಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರಕ್ಕೆ ಅವರು ಕೃತಜ್ಞತೆ ತಿಳಿಸಿದರು.
ಗೈಲ್ ಇಂಡಿಯಾವು ಜೆಬಿಎಫ್ ಪೆಟ್ರೋಕೆಮಿಕಲ್ಸ್‌ನ ಪಿಟಿಎ ಸ್ಥಾವರವನ್ನು ಸ್ವಾಧೀನಪಡಿಸಿಕೊಂಡು, ಗೈಲ್ ಮಂಗಳೂರು ಪೆಟ್ರೋಕೆಮಿಕಲ್ಸ್ ಸ್ಥಾಪಿಸಿತ್ತು. ಆಗ ಜಿಎಂಪಿಎಲ್ ಕಂಪೆನಿಯು ಜೆಬಿಎಫ್‌ನ ಯೋಜನಾ ಸಂತ್ರಸ್ತ ಕುಟುಂಬದವರಿಗೆ ಗುತ್ತಿಗೆ ಆಧಾರಿತ ಉದ್ಯೋಗ ಮಾತ್ರ ನೀಡಲು ಪರಿಗಣಿಸಿತ್ತು. ಇದರಿಂದ ಜೆಬಿಎಫ್‌ನ ಉದ್ಯೋಗಸ್ಥರು ಅತಂತ್ರ ಸ್ಥಿತಿಯಲ್ಲಿದ್ದರು. ಹೀಗಿರುವಾಗ, ಕ್ಯಾ| ಚೌಟ ಅವರು ದಕ್ಷಿಣ ಕನ್ನಡದ ಪಿಡಿಎಫ್ ಕುಟುಂಬಸ್ಥರ ಬಹುದಿನಗಳಿಂದ ಈಡೇರದೆ ಬಾಕಿಯಾಗಿದ್ದ ಈ ಪ್ರಮುಖ ಸಮಸ್ಯೆಯನ್ನು ಕೇಂದ್ರ ಸರಕಾರದ ಗಮನಕ್ಕೆ ತಂದಿದ್ದರು. ಪೆಟ್ರೋಲಿಯಂ ಸಚಿವ ಹರ್‌ದೀಪ್ ಸಿಂಗ್ ಪುರಿ ಅವರನ್ನು ಭೇಟಿಯಾಗಿ ಈ ಗಂಭೀರ ಸಮಸ್ಯೆಯನ್ನು ಬಗೆಹರಿಸುವಂತೆ ಮನವಿ ಮಾಡಿದ್ದರು. ಸಚಿವ ಪುರಿ ಅವರು, ಪೆಟ್ರೋಲಿಯಂ ಸಚಿವಾಲಯ ಹಾಗೂ ಜಿಎಂಪಿಎಲ್ ಕಂಪೆನಿ ಅಧಿಕಾರಿಗಳ ಸಭೆ ನಡೆಸುವುದಕ್ಕೆ ಸೂಚಿಸುವ ಮೂಲಕ ಈ ಗಂಭೀರ ಸಮಸ್ಯೆ ಬಗೆಹರಿಸುವುದಕ್ಕೆ ಸೂಕ್ತ ನಿರ್ದೇಶನಗಳನ್ನು ನೀಡಿದ್ದರು.