Advertisement

ಕಂಕಣ ಕೂಡಿ ಬಂದಾಗ ಮದುವೆ ಆಗಲೇಬೇಕು…

12:18 PM May 13, 2020 | mahesh |

ವಸಂತ ಕಾಲ ಬಂದಾಗ ಮಾವು ಚಿಗುರಲೇಬೇಕು, ಕೋಗಿಲೆ ಹಾಡಲೇಬೇಕು, ಕಂಕಣ ಕೂಡಿ ಬಂದಾಗ ಮದುವೆಯಾಗಲೇ ಬೇಕು… ಅಂತ ಹಾಡು ಕೇಳಿದ್ದೀರಲ್ಲ? ಅದೇ ಮಾತನ್ನು
ನಮ್ಮಮ್ಮನೂ ಹೇಳುತ್ತಿದ್ದಳು- ಕಾಲ ಕೂಡಿ ಬಂದಾಗ, ಬೇಡ ಬೇಡ ಎಂದರೂ, ಕೆಲಸ ತನ್ನಿಂತಾನೇ ನಡೆಯುತ್ತದೆ ಅಂತ. ಈ ಮಾತು, ನನ್ನ ಮದುವೆ ವಿಷಯದಲ್ಲಿ ನಿಜವಾಗಿದೆ!

Advertisement

ಅಜ್ಜಿಯ ಊರಿನಲ್ಲಿ ಜಾತ್ರೆ ಇದೆ ಅಂತ, ನಮ್ಮ ಮನೆಯವರೆಲ್ಲ ಊರಿಗೆ ಹೋಗಿದ್ದೆವು. ಪೂಜೆ ಮುಗಿದು ಎರಡು ದಿನಗಳಲ್ಲಿ ವಾಪಸ್‌ ಹೊರಡಬೇಕು ಅನ್ನುವಷ್ಟರಲ್ಲಿ, ಲಾಕ್‌ಡೌನ್‌ ಘೋಷಣೆಯಾಗಿಬಿಟ್ಟಿತು. ಹಾಗಾಗಿ, ನಾವು ಅಜ್ಜಿ ಮನೆಯಲ್ಲಿಯೇ ಉಳಿದುಕೊಂಡೆವು. ಊರ ಜಾತ್ರೆಯಾದ್ದರಿಂದ, ಬೇರೆಬೇರೆ ಊರಿನಲ್ಲಿ ನೆಲೆಸಿದ್ದ ಹಳ್ಳಿಯವರೆಲ್ಲ ಹುಟ್ಟೂರಿಗೆ ಬಂದು “ಲಾಕ್‌’ ಆಗಿಬಿಟ್ಟಿದ್ದರು.

ಹಳ್ಳಿಗಳಲ್ಲಿ ಲಾಕ್‌ಡೌನ್‌ ಅಂದರೂ, ಅಕ್ಕಪಕ್ಕದ ಮನೆಗೆ ಹೋಗಿ ಬರುವುದೆಲ್ಲಾ ನಡೆಯುತ್ತಿರುತ್ತದೆ. ಹಾಗೆ ಅಜ್ಜಿಯ ಮನೆಗೆ ಬಂದವರೆಲ್ಲ, ನನ್ನನ್ನು ನೋಡಿ ಮಾತನಾಡಿಸುತ್ತಿದ್ದರು. ಒಂದಿಬ್ಬರು ನನ್ನ ಬಗ್ಗೆ ಅಜ್ಜಿಯ ಬಳಿ ಏನೋ ಗುಸುಗುಸು ವಿಚಾರಿಸಿದ್ದನ್ನೂ ಕೇಳಿಸಿಕೊಂಡಿದ್ದೆ. ಆದರೆ, ವಿಷಯ ನನ್ನ ಮದುವೆಯದ್ದು ಅಂತ ಅಂದಾಜಿರಲಿಲ್ಲ ನನಗೆ. ಒಂದು ವಾರದ ಬಳಿಕ, ಅದೇ ಊರಿನಲ್ಲಿರುವ, ಅಜ್ಜಿಯ ದೂರದ ಸಂಬಂಧಿಕರೊಬ್ಬರು ಮನೆಗೆ ಬಂದರು. ಅಜ್ಜಿಯ ಬಳಿ ಉಭಯ ಕುಶಲೋಪರಿ ಮಾತನಾಡಿ, ನಂತರ ನನ್ನನ್ನು ಕರೆದು- “ನೋಡಮ್ಮಾ, ನನ್ನ  ಮೊಮ್ಮಗ ಬೆಂಗಳೂರಿನಲ್ಲಿ ಎಂಜಿನಿಯರ್‌. ಈಗ ಲಾಕ್‌ಡೌನ್‌ ಅಂತ ಮನೆಗೆ ಬಂದಿದ್ದಾನೆ. ನಿಮ್ಮಜ್ಜಿಯ ಕಣ್ಮುಂದೆ ಬೆಳೆದ ಹುಡುಗ. ನೀನು ಹೂಂ ಅಂದರೆ, ಮನೆಗೆ ಬಂದು ಹೋಗಲು ಹೇಳುತ್ತೇನೆ’ ಅಂತ ನಯವಾಗಿ ಹೇಳಿದರು. ಅವರು ಹೊರಟ ಮೇಲೆ, ಅಮ್ಮನ ಬಳಿ ಮಾತನಾಡಿದ ಅಜ್ಜಿ, ನನ್ನ ವಧುಪರೀಕ್ಷೆಗೆ ದಿನ ಗೊತ್ತು ಮಾಡಿದರು. ಹೇಗೂ ಲಾಕ್‌ಡೌನ್‌ ಇದೆ.
ಈಗಂತೂ ಮದುವೆ ಮಾಡೋಕೆ ಸಾಧ್ಯ ಇಲ್ಲ ಅನ್ನೋ ಧೈರ್ಯದಲ್ಲಿ, ನಾನೂ ಒಪ್ಪಿಕೊಂಡೆ.

ಕೆಲ ದಿನಗಳ ಬಳಿಕ ಹುಡುಗ, ತನ್ನ ಅಪ್ಪ, ಅಮ್ಮ, ಅಜ್ಜನ ಜೊತೆ ಬಂದ. ನಾನು ಸಿಂಪಲ್‌ ಆಗಿ ರೆಡಿ ಆಗಿ, ಬಂದವರಿಗೆ ಟೀ-ಚೌ ಚೌ ಬಾತ್‌ ಕೊಟ್ಟು ಒಳಗೆ ಬಂದೆ. ಸ್ವಲ್ಪ ಹೊತ್ತಿನ ನಂತರ, ಹುಡುಗನ ಅಮ್ಮ ಒಳಗೆ ಬಂದು, “ನೀವಿಬ್ಬರೂ ಮಾತಾಡಿಕೊಳ್ಳಿ. ನಿಮಗೆ ಒಪ್ಪಿಗೆಯಾದರೆ, ನಮಗೂ ಈ ಸಂಬಂಧ ಓಕೆ’ ಅಂದರು. ನಮಗೋ, ಏನು ಮಾತನಾಡ ಬೇಕೆಂದು ತಿಳಿಯಲಿಲ್ಲ. ಆಮೇಲೆ ಅವರು- “ನಿಮ್ಮ ನಂಬರ್‌ ಕೊಡಿ. ನಾನು ಸಂಜೆ ಕಾಲ್‌ ಮಾಡ್ತೀನಿ’ ಅಂತ ನಂಬರ್‌ ತಗೊಂಡು ಹೋದರು. ಪ್ರತಿ ಬಾರಿ ನನ್ನ ಮೊಬೈಲ್‌ ರಿಂಗ್‌ ಆದಾಗಲೂ “ಯಾರ
ಫೋನು?’ ಅಂತ ವಿಚಾರಿಸುತ್ತಿದ್ದ ಅಮ್ಮ, ಅವತ್ತು ಸಂಜೆ ನಾನು ಮೊಬೈಲ್‌ ತಗೊಂಡು ಟೆರೇಸ್ ಮೇಲೆ ಹೋದಾಗ ಏನೂ ಕೇಳದ್ದನ್ನು ನೋಡಿಯೇ, ಅಮ್ಮನಿಗೆ ಹುಡುಗ
ಒಪ್ಪಿಗೆಯಾಗಿದ್ದಾನೆ, ಅಂತ ಅರ್ಥವಾಯ್ತು.

ಹುಡುಗನನ್ನು ನಿರಾಕರಿಸಲು ಯಾವ ಕಾರಣವೂ ಇಲ್ಲದಿದ್ದರಿಂದ, ನಾನೂ ಒಪ್ಪಿಕೊಂಡೆ. ಕಳೆದ ವಾರ ಲಾಕ್‌ಡೌನ್‌ ಸಡಿಲಗೊಂಡಾಗ, ಮನೆಯಲ್ಲಿಯೇ ಹನ್ನೆರಡು ಜನರ ಸಮ್ಮುಖದಲ್ಲಿ ನಮ್ಮ ನಿಶ್ಚಿತಾರ್ಥ ಆಗೇಬಿಟ್ಟಿತು. ತಿಂಗಳ ಕೊನೆಯಲ್ಲಿ ಎರಡು ಒಳ್ಳೆಯ ಮುಹೂರ್ತ ಇದೆ. ತುಂಬಾ ಸರಳವಾಗಿ ಆದರೂ ಸರಿ, ಮದುವೆ ಮುಗಿಸಿ  ಬಿಡೋಣ ಅಂತ ಹುಡುಗನ ಅಪ್ಪ ಹೇಳಿದ್ದಾರೆ. ಲಾಕ್‌ಡೌನ್‌ನಿಂದ ಹಲವರ ಮದುವೆ ಮುಂದಕ್ಕೆ ಹೋದರೆ, ಲಾಕ್‌ಡೌನ್‌ನಿಂದಲೇ ಮದುವೆ ಫಿಕ್ಸ್ ಆಗುವಂತಾಗಿದ್ದು ಅಪರೂಪ ಇರಬೇಕು ಅಲ್ವಾ?

Advertisement

ರಾಜಲಕ್ಷ್ಮಿ

Advertisement

Udayavani is now on Telegram. Click here to join our channel and stay updated with the latest news.

Next