Advertisement

ಸಮಸ್ಯೆಯನ್ನು ನಿರ್ಲಕ್ಷಿಸದೆ ಜಾಗರೂಕರಾಗಿರೋಣ

12:45 AM Mar 28, 2022 | Team Udayavani |

ಮನುಷ್ಯನು ಜೀವನದಲ್ಲಿ ಸದಾ ಖುಷಿಯಾಗಿರುವುದನ್ನೇ ಇಷ್ಟಪಡುತ್ತಾನೆ. ಅಚಾನಕ್ಕಾಗಿ ಏನಾದರೂ ಸಹಿಸಲು ಸಾಧ್ಯವಾಗದಂತಹ ತೊಂದರೆ ಯಾ ಸಮಸ್ಯೆ ಎದುರಾದಲ್ಲಿ ತತ್‌ಕ್ಷಣ ಅದರಿಂದ ವಿಚಲಿತನಾಗುತ್ತಾನೆ ಮತ್ತು ಅದರಿಂದ ಹೊರಬರಲು ಪ್ರಯತ್ನಿಸುತ್ತಾನೆ. ಆದರೆ ಅದೇ ಸಮಸ್ಯೆಯು ತೀರಾ ನಿಧಾನಗತಿಯಲ್ಲಿ ಆವರಿಸಿಕೊಂಡಲ್ಲಿ ಮನುಷ್ಯನು ಆ ಸಮಸ್ಯೆಯಿಂದ ಹೊರಬರಲು ಪ್ರಯತ್ನಿಸದೇ ಆ ಸಮಸ್ಯೆಗೆ ನಿಧಾನವಾಗಿ ಹೊಂದಿಕೊಂಡು ಹೋಗಿ ಕೊನೆಗೊಂದು ದಿನ ಆ ಸಮಸ್ಯೆಯ ಸುಳಿಯಲ್ಲಿ ಸಿಲುಕಿಕೊಂಡು ಅದರಲ್ಲೇ ತನ್ನ ಪ್ರಾಣವನ್ನು ಬಿಡುತ್ತಾನೆ.

Advertisement

ಒಂದು ಜೀವಂತವಾಗಿರುವ ಕಪ್ಪೆಯನ್ನು ಇದ್ದಕ್ಕಿದ್ದಂತೆ ಪಾತ್ರದಲ್ಲಿ ಕುದಿಯುತ್ತಿರುವ ನೀರಿನಲ್ಲಿ ಹಾಕಿದರೆ ಅದು ತತ್‌ಕ್ಷಣ ಆ ಪಾತ್ರದಿಂದ ಹಾರಿ ತನ್ನ ಪ್ರಾಣ ಉಳಿಸಿಕೊಳ್ಳುತ್ತದೆ. ಆದರೆ ಅದೇ ಕಪ್ಪೆಯನ್ನು ಪಾತ್ರೆಯಲ್ಲಿರುವ ಶುದ್ಧವಾದ ಮತ್ತು ತಣ್ಣನೆಯ ನೀರಿನಲ್ಲಿ ಹಾಕಿದರೆ ಅದು ಅದರೊಳಗಡೆಯೇ ಹಾಯಾಗಿರುತ್ತದೆ, ಅದು ಸಹಜವೂ ಹೌದು. ಈಗ ಅದೇ ಪಾತ್ರೆಯನ್ನು ಬೆಂಕಿ ಉರಿಯುತ್ತಿರುವ ಒಲೆಯ ಮೇಲಿಟ್ಟು ನೀರನ್ನು ನಿಧಾನವಾಗಿ ಕುದಿಸಿದರೆ ಅದು ತತ್‌ಕ್ಷಣಕ್ಕೆ ಹಾರಿ ಹೋಗುವುದಿಲ್ಲ. ಅಂದರೆ ಅದು ತನಗೆ ಬಂದೊದಗಿರುವ ಅಪಾಯವನ್ನು ತತ್‌ಕ್ಷಣಕ್ಕೆ ಗ್ರಹಿಸುವುದಿಲ್ಲ ಮತ್ತು ನೀರಿನ ಬಿಸಿಗೆ ಹೊಂದಿಕೊಳ್ಳುತ್ತಾ ಹೋಗುತ್ತದೆ. ಅದೇ ನೀರು ಇನ್ನಷ್ಟು ಬಿಸಿಯಾಗುತ್ತಾ ಹೋಗಿ ಕುದಿಯುವ ಬಿಂದುವನ್ನು ತಲುಪಿದಾಗಲೂ ಕಪ್ಪೆಯ ಹೊಂದಿಕೊಂಡು ಹೋಗುವ ಮನಃಸ್ಥಿತಿಯಿಂದಾಗಿ ಕೊನೆಯ ಕ್ಷಣದಲ್ಲಿ ಪಾತ್ರೆಯಿಂದ ಹೊರಬರಲಾರದೇ ಅಲ್ಲೇ ಸಾಯುತ್ತದೆ.

ಮನುಷ್ಯನೂ ಸದಾ ಕಪ್ಪೆಯ ಮನಃಸ್ಥಿತಿಯ ರೀತಿಯಲ್ಲೇ ಇರುತ್ತಾನೆ. ಮನುಷ್ಯ ನಿಧಾನವಾಗಿ ಬರುತ್ತಿರುವ ಬಹು ದೊಡ್ಡ ಗಂಡಾಂತರಗಳನ್ನು ಗುರುತಿಸುವಲ್ಲಿ ವಿಫ‌ಲನಾಗಿ ಆ ಸಮಸ್ಯೆಯು ಬೃಹದಾಕಾರಕ್ಕೆ ಬೆಳೆದ ಬಳಿಕಷ್ಟೇ ಎಚ್ಚರಗೊಳ್ಳುತ್ತಾನೆ. ಇದರಿಂದಾಗಿ ಅದು ಆತನ ಜೀವಕ್ಕೇ ಕುತ್ತು ತರುತ್ತದೆ. ಆದರೆ ಅದೇ ಸಮಸ್ಯೆಯನ್ನು ಪ್ರಾರಂಭದ ಹಂತದಲ್ಲೇ ಗುರುತಿಸಿ ಅದರಿಂದ ಹೊರಬಂದಾತ ಅಥವಾ ಪರಿಹರಿಸಿಕೊಂಡಾತ ಸಮಸ್ಯೆಯ ಸುಳಿಯಲ್ಲಿ ಸಿಲುಕಿಕೊಂಡು ಸಾಯಲಾರ. ಕಪ್ಪೆಯಂತೆ ಸಮಸ್ಯೆಯು ಬಂದಿದೆ, ಆದರೆ ಅದು ಅಷ್ಟೊಂದು ಗಂಭೀರವಲ್ಲ ಎನ್ನುವ ಮನಃಸ್ಥಿತಿಗೆ ಯಾವಾಗ ನಾವು ಬರುತ್ತೇವೋ ಆವಾಗ ಅಪಾಯ ಶತಃಸಿದ್ಧ. ಸಾಮಾನ್ಯವಾಗಿ ಮನುಷ್ಯನ ಜೀವನದಲ್ಲಿ ಬಂದೊದಗುವ ವಿವಿಧ ಸನ್ನಿವೇಶಗಳು ಮತ್ತು ಅವುಗಳನ್ನು ಎದುರಿಸುವ ಗುಣಕ್ಕೆ ಕಪ್ಪೆಯ ಈ ಕತೆ ಉದಾಹರಣೆಯಾಗಿದೆ.

ಜೀವನದಲ್ಲಿ ಸಮಸ್ಯೆಗಳು ಎದುರಾಗುವುದು ಸಹಜ. ಪ್ರತಿಯೊಂದು ಸಮಸ್ಯೆ ಬಂದಾಗಲೂ ಅದನ್ನು ಎದುರಿಸಿ ಮುನ್ನಡೆಯುವುದು ಅಷ್ಟೊಂದು ಸುಲಭದ ಕಾರ್ಯವಲ್ಲ. ಒಮ್ಮೊಮ್ಮೆ ಸಮಸ್ಯೆ ದಿಢೀರನೆ ಕಾಣಿಸಿಕೊಂಡು ನಮ್ಮನ್ನು ಇಕ್ಕಟ್ಟಿಗೆ ಸಿಲುಕಿಸಬಹುದು. ಇಂಥ ಸಂದರ್ಭದಲ್ಲಿ ಸಮಸ್ಯೆಯ ವಿರುದ್ಧ ಸೆಣಸಾಡಲೇ ಬೇಕಾಗುತ್ತದೆ. ಈ ಪ್ರಯತ್ನದಲ್ಲಿ ಸೋಲು-ಗೆಲುವಿನ ಬಗೆಗೆ ಆ ಕ್ಷಣದಲ್ಲಿ ಯೋಚಿಸದೇ ಸಮಸ್ಯೆಯ ಸುಳಿಯಿಂದ ಪಾರಾಗುವುದಷ್ಟೇ ನಮ್ಮ ಆದ್ಯತೆಯಾಗಿರುತ್ತದೆ. ಆದರೆ ಎಲ್ಲ ಸಮಸ್ಯೆಗಳೂ ಇದೇ ತೆರನಾಗಿ ಧುತ್ತನೆ ಎದುರಾಗದು. ಕೆಲವೊಂದು ಸಮಸ್ಯೆಗಳ ಸುಳಿವನ್ನು ನಾವು ಮೊದಲೇ ಗ್ರಹಿಸಲು ಅವಕಾಶವಿದೆ. ಇಂಥ ಸಂದರ್ಭದಲ್ಲಿ ನಾವು ಮೊದಲೇ ಎಚ್ಚೆತ್ತುಕೊಂಡು ಕಾರ್ಯೋನ್ಮುಖರಾದರೆ ಆ ಸಮಸ್ಯೆಯನ್ನು ಸಮರ್ಥವಾಗಿ ನಿಭಾಯಿಸಬಹುದು. ನಿರ್ಲಕ್ಷಿಸಿದಲ್ಲಿ ಆ ಸಮಸ್ಯೆ ಭವಿಷ್ಯದಲ್ಲಿ ಬಲುದೊಡ್ಡ ತಲೆನೋವಾಗಿ ನಮ್ಮ ಜೀವನವನ್ನೇ ಸಂಕಷ್ಟಕ್ಕೀಡು ಮಾಡುವ ಸಾಧ್ಯತೆ ಇರುತ್ತದೆ. ಹಾಗಾಗಿ ಯಾವುದೇ ಸಮಸ್ಯೆಯನ್ನು ನಿರ್ಲಕ್ಷಿಸದೆ ಸದಾ ಜಾಗರೂಕರಾಗಿದ್ದರೆ ನಮಗೇ ಒಳಿತು.

ಸಮಸ್ಯೆಗಳಿಗೆ ಹೊಂದಿಕೊಂಡು ಸಾಗುವುದು ಅಭಿವೃದ್ಧಿಯ ಪಥದೆಡೆಗೆ ಸಾಗುವ ಮನೋಭಾವವಿರುವ ವ್ಯಕ್ತಿಯ ದೃಷ್ಟಿಯಿಂದ ಒಳ್ಳೆಯದಲ್ಲ. ಸಮಸ್ಯೆ ಬರಬಹುದೆಂಬ ಸುಳಿವು ದೊರೆತಾಕ್ಷಣ ಅದನ್ನು ಗುರುತಿಸಿ ಪರಿಹರಿಸಿಕೊಂಡರೆ ಬಾಳು ಬಂಗಾರವಾಗುತ್ತದೆ. ನಿಧಾನವಾಗಿ ಬರುವ ಅಪಾಯಗಳಿಗೆ ಹೊಂದಿಕೊಂಡು ಹೋಗುವ ಗುಣವು ನಮ್ಮಲ್ಲೂ ಇದ್ದು, ನಿಧಾನವಾಗಿ ನಮ್ಮ ಅರಿವಿಗೇ ಬಾರದಂತೆ ಆಗುವ ವಿವಿಧ ಬದಲಾವಣೆಗಳಿಂದ ಕೊನೆಗೆ ಅನಪೇಕ್ಷಿತವಾದ ಪರಿಣಾಮಗಳು ಆಗದಂತೆ ಎಚ್ಚರದಿಂದ ಇರಬೇಕು.

Advertisement
Advertisement

Udayavani is now on Telegram. Click here to join our channel and stay updated with the latest news.

Next