Advertisement

ಸಾಂಕ್ರಾಮಿಕ ರೋಗ ತಡೆಗೆ ಸಮನ್ವಯತೆ ಇರಲಿ

09:09 PM Jul 15, 2019 | Lakshmi GovindaRaj |

ಚಿಕ್ಕಬಳ್ಳಾಪುರ: ಮಳೆಗಾಲ ಶುರುವಾಗಿರುವುದರಿಂದ ಜಿಲ್ಲೆಯಲ್ಲಿ ಡೆಂಘೀ, ಚಿಕೂನ್‌ಗುನ್ಯಾ ಮತ್ತಿತರ ಸಾಂಕ್ರಾಮಿಕ ರೋಗಗಳನ್ನು ಪರಿಣಾಮಕಾರಿಯಾಗಿ ತಡೆಯಲು ಎಲ್ಲಾ ಇಲಾಖೆಗಳ ಅಧಿಕಾರಿಗಳು ಸಮನ್ವಯತೆಯಿಂದ ಕಾರ್ಯನಿರ್ವಹಿಸಬೇಕೆಂದು ಜಿಪಂ ಸಿಇಒ ಗುರುದತ್‌ ಹೆಗಡೆ ಸೂಚಿಸಿದರು.

Advertisement

ನಗರದ ಜಿಪಂ ಮಿನಿ ಸಭಾಂಗಣದಲ್ಲಿ ಸೋಮವಾರ ಡೆಂಘೀ, ಚಿಕೂನ್‌ಗುನ್ಯಾ ಮತ್ತಿತರ ಸಾಂಕ್ರಾಮಿಕ ರೋಗಗಳ ನಿಯಂತ್ರಣ ಕುರಿತು ಅಭಿವೃದ್ಧಿ ಇಲಾಖೆ ಹಿರಿಯ ಅಧಿಕಾರಿಗಳೊಂದಿಗೆ ಹಮ್ಮಿಕೊಂಡಿದ್ದ ಸಭೆ ಉದ್ದೇಶಿಸಿ ಮಾತನಾಡಿದ ಅವರು, ಸಾಂಕ್ರಾಮಿಕ ರೋಗಗಳ ತಡೆಯುವ ನಿಟ್ಟಿನಲ್ಲಿ ಅಧಿಕಾರಿಗಳು ಕಟ್ಟೆಚ್ಚರ ವಹಿಸಿ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಿದರು.

ಸಮನ್ವಯತೆ ಅತ್ಯಗತ್ಯ: ಜಿಲ್ಲಾದ್ಯಂತ ತಿಂಗಳ ಪೂರ್ತಿ ಹಮ್ಮಿಕೊಂಡಿರುವ ಡೆಂಘೀ ವಿರೋಧಿ ಮಾಸಾಚರಣೆ ಕಾರ್ಯಕ್ರಮವನ್ನು ಕಾಟಾಚಾರಕ್ಕೆ ಮಾಡದೇ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಬೇಕಿದೆ. ಡೆಂಘೀ, ಚಿಕೂನ್‌ಗುನ್ಯಾ ಪ್ರಕರಣಗಳನ್ನು ಗಣನೀಯವಾಗಿ ನಿಯಂತ್ರಿಸಲು ವಿವಿಧ ಇಲಾಖೆಗಳ ಸಹಕಾರ ಮತ್ತು ಸಮನ್ವಯತೆ ಅತ್ಯಗತ್ಯವಾಗಿರುತ್ತದೆ. ಆರೋಗ್ಯ ಇಲಾಖೆಯಿಂದ ಮಾತ್ರ ಈ ರೋಗಗಳನ್ನು ತಡೆಗಟ್ಟಲು ಸಾಧ್ಯವಾಗುವುದಿಲ್ಲ. ಇದಕ್ಕೆ ಎಲ್ಲಾ ಇಲಾಖೆಗಳ ಹಾಗೂ ಸಾರ್ವಜನಿಕರ ಸಹಕಾರ ಅವಶ್ಯವಾಗಿ ಬೇಕಿದೆ ಎಂದರು.

ಜಿಲ್ಲೆಯಲ್ಲಿ ಚಾಲನೆಯಲ್ಲಿರುವ ಗಣಿಗಾರಿಕೆ ಪ್ರದೇಶಗಳಲ್ಲಿ ಸೊಳ್ಳೆ ನಿಯಂತ್ರಣಕ್ಕೆ ಗಣಿ ಉದ್ಯಮಿಗಳು, ಗುತ್ತಿಗೆದಾರರು ಕೈಗೊಂಡಿರುವ ಕ್ರಮಗಳನ್ನು ಆರೋಗ್ಯ ಅಧಿಕಾರಿಗಳು ಹಾಗೂ ಗಣಿ ಇಲಾಖೆಗಳ ಅಧಿಕಾರಿಗಳು ಪರಿಶೀಲಿಸಬೇಕು. ಅಂಗನವಾಡಿಗಳಲ್ಲಿ, ವಸತಿ ನಿಲಯಗಳಲ್ಲಿ ಮಕ್ಕಳಿಗೆ ಸೊಳ್ಳೆಗಳಿಂದ ರಕ್ಷಣೆ ಪಡೆಯಲು ಸೊಳ್ಳೆ ಪರದೆ ಹಾಗೂ ಸೊಳ್ಳೆ ನಿರೋಧಕಗಳನ್ನು ಬಳಸಲು ಕ್ರಮ ವಹಿಸಬೇಕೆಂದರು.

ಒಣ ದಿನ ಆಚರಣೆಗೆ ಮನವಿ: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಯಲ್ಲಾ ರಮೇಶ್‌ ಬಾಬು ಮಾತನಾಡಿ, ಇತೀಚಿನ ದಿನಗಳಲ್ಲಿ ಡೆಂಘೀ ಜ್ವರ ಪ್ರಕರಣಗಳು ಹೆಚ್ಚಾಗಿ ವರದಿಯಾಗುತ್ತಿದೆ. ಈಡೀಸ್‌ ಸೊಳ್ಳೆ ಕಚ್ಚುವುದರಿಂದ ಈ ರೋಗ ಹರಡುತ್ತದೆ. ಈ ಸೊಳ್ಳೆಯು ಹೆಚ್ಚಾಗಿ ಮನೆಯಲ್ಲಿ ನೀರು ಶೇಖರಣೆ ಮಾಡಲು ಉಪಯೋಗಿಸುವ ಸಿಮೆಂಟ್‌ ತೊಟ್ಟಿ,

Advertisement

ಬ್ಯಾರಲ್‌, ಡ್ರಂ, ಮಡಿಕೆ ಮತ್ತು ಅನುಪಯುಕ್ತ ಟೈರ್‌ಗಳಲ್ಲಿ ಶೇಖರಣೆಯಾಗುವ ಶುದ್ಧ ನೀರಲ್ಲಿ ಮೊಟ್ಟೆ ಇಟ್ಟು ಸಂತಾನಾಭಿವೃದ್ಧಿಯಾಗುತ್ತದೆ. ಜನರ ಮೂಲಭೂತ ಸೌಕರ್ಯ ಪೂರೈಸಲು ಹಾಗೂ ಸಾಮಾಜಿಕ ಮತ್ತು ಆರ್ಥಿಕ ಬೆಳವಣಿಗೆ ಸ್ವತ್ಛತೆ ಬಹಳ ಅವಶ್ಯಕವಾಗಿದ್ದು, ಸ್ವತ್ಛತೆ ಕಾಪಾಡುವ ಮೂಲಕ ಅನೇಕ ಮೂಲಗಳಿಂದ ಬರುವ ಕಾಯಿಲೆಗಳನ್ನು ತಡೆಗಟ್ಟಬಹುದಾಗಿದೆ.

ಸಭೆಯಲ್ಲಿ ಆರೋಗ್ಯ ಇಲಾಖೆ ಆರ್‌ಎಂಒ ರಮೇಶ್‌, ಜಿಲ್ಲಾ ಸರ್ವೆಕ್ಷಾಣಾಧಿಕಾರಿ ಡಾ.ಬಾಬುರೆಡ್ಡಿ, ಜಿಲ್ಲಾ ಕುಷ್ಠರೋಗ ನಿರ್ಮೂಲನಾಧಿಕಾರಿ ಚಂದ್ರಮೋಹನ್‌, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪ ನಿರ್ದೇಶಕಿ ಲಕ್ಷ್ಮೀದೇವಮ್ಮ ಸೇರಿದಂತೆ ಜಿಲ್ಲೆಯ ಎಲ್ಲಾ ತಾಲೂಕು ವೈದ್ಯಾಧಿಕಾರಿಗಳು, ಇಲಾಖೆ ಮೇಲ್ವಿಚಾರಕರು ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

ಈ ವರ್ಷ 22 ಡೆಂಘೀ ಪ್ರಕರಣ ಪತ್ತೆ: ಜಿಲ್ಲಾ ಮಟ್ಟದ ವಿವಿಧ ಇಲಾಖೆಗಳ ಪೂರ್ವಭಾವಿ ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಯಲ್ಲಾ ರಮೇಶ್‌ ಬಾಬು ಮಾತನಾಡಿ, ಜನವರಿಯಿಂದ ಜುಲೈ ಅಂತ್ಯಕ್ಕೆ ಜಿಲ್ಲೆಯಲ್ಲಿ ಒಟ್ಟು 22 ಡೆಂಘೀ ಪ್ರಕರಣಗಳು ವರದಿಯಾಗಿದ್ದು, 8 ಮಲೇರಿಯಾ ಪ್ರಕರಣಗಳು ಹಾಗೂ 12 ಚಿಕೂನ್‌ಗುನ್ಯಾ ಪ್ರಕರಣಗಳು ವರದಿಯಾಗಿದೆ. 2018 ನೇ ಸಾಲಿನಲ್ಲಿ 18 ಮಲೇರಿಯಾ, 7 ಡೆಂಘೀ ಹಾಗೂ 27 ಚಿಕೂನ್‌ಗುನ್ಯಾ ಪ್ರಕರಣಗಳು ವರದಿಯಾಗಿತ್ತು ಎಂದು ಸಭೆಗೆ ಮಾಹಿತಿ ನೀಡಿದರು.

ಪ್ರತಿ ಗ್ರಾಪಂ ಹಾಗೂ ನಗರ ವ್ಯಾಪ್ತಿಯಲ್ಲಿ ತ್ಯಾಜ್ಯವನ್ನು ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡುವ ಮೂಲಕ ಗ್ರಾಮದಲ್ಲಿ ಸ್ವತ್ಛತೆ ಕಾಪಾಡಲು ಸ್ಥಳೀಯ ಸಂಸ್ಥೆಗಳು ರೋಗಗಳ ನಿಯಂತ್ರಣಕ್ಕೆ ಅಗತ್ಯ ಸಹಕಾರ ನೀಡಬೇಕು. ಶಾಲಾ ಆವರಣಗಳಲ್ಲಿ ಸೊಳ್ಳೆಗಳು ಉತ್ಪತ್ತಿ ಆಗದಂತೆ ಸ್ವತ್ಛತೆ ಕಾಪಾಡಲು ಕ್ರಮ ಕೈಗೊಳ್ಳಬೇಕು. ಮಲೇರಿಯಾ, ಡೆಂಘೀ, ಚಿಕೂನ್‌ಗುನ್ಯಾ ಜ್ವರಗಳ ನಿಯಂತ್ರಣದ ಕ್ರಮಗಳ ಕುರಿತು ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಲು ಶಿಕ್ಷಣ ಇಲಾಖೆ ಅಧಿಕಾರಿಗಳು ಕ್ರಮ ವಹಿಸಬೇಕು.
-ಗುರುದತ್‌ ಹೆಗಡೆ, ಜಿಪಂ ಸಿಇಒ

Advertisement

Udayavani is now on Telegram. Click here to join our channel and stay updated with the latest news.

Next