ದೇಶಾದ್ಯಂತ ವಿವಿಧ ಸ್ವರೂಪದ ಸೈಬರ್ ಅಪರಾಧಗಳು ತೀವ್ರಗತಿಯಲ್ಲಿ ಹೆಚ್ಚುತ್ತಿರುವುದು ಅತ್ಯಂತ ಕಳವಳಕಾರಿ. ದೇಶವು ಬೃಹತ್ ಆರ್ಥಿಕ ಶಕ್ತಿಯಾಗಿ ಮುನ್ನಡೆಯುವ ಹಾದಿಯಲ್ಲಿ ಯುಪಿಎ, ನೆಟ್ ಬ್ಯಾಂಕಿಂಗ್, ಆನ್‌ಲೈನ್ ವ್ಯಾಪಾರ ವಹಿವಾಟಿನಂತಹ ದಾಪುಗಾಲುಗಳನ್ನು ಇರಿಸುತ್ತಿರುವಂತೆಯೇ ಇಂತಹ ಅಪರಾಧಗಳು ಹೆಚ್ಚಾಗುವ ಮೂಲಕ ಪ್ರಗತಿಯ ಉತ್ಸಾಹಕ್ಕೆ ತಣ್ಣೀರೆರಚುತ್ತಿವೆ ಎಂದರೆ ತಪ್ಪಾಗದು. ಇದನ್ನು ನಿರ್ಮೂಲನಗೊಳಿಸಲು ಪೊಲೀಸರು, ತನಿಖಾ ಸಂಸ್ಥೆಗಳು ಹದ್ದುಗಣ್ಣಿನಿಂದ ಕಾರ್ಯಪ್ರವೃತ್ತರಾಗಬೇಕಾಗಿದೆ. ಜತೆಗೆ ಪ್ರಧಾನಿ ನರೇಂದ್ರ ಮೋದಿಯವರು ರವಿವಾರವಷ್ಟೇ ಮನ್ ಕಿ ಬಾತ್‌ನಲ್ಲಿ ಹೇಳಿಕೊಂಡಂತೆ ನಾಗರಿಕರು ಎಚ್ಚರಿಕೆಯಿಂದ ವ್ಯವಹರಿಸುವುದು ಕೂಡ ಈ ನಿಟ್ಟಿನಲ್ಲಿ ಅತ್ಯಗತ್ಯವಾಗಿದೆ.
ವಿವಿಧ ರೀತಿಯ ಸೈಬರ್ ಅಪರಾಧಗಳಲ್ಲಿ ಈಚೆಗೆ ತೀರಾ ಹೆಚ್ಚುತ್ತಿರುವುದು ಮತ್ತು ಅತ್ಯಂತ ಕಳವಳಕಾರಿಯಾದ ವಿಧಾನ ಡಿಜಿಟಲ್ ಅರೆಸ್ಟ್. ಎಲ್ಲೋ ಇರುವ ದುಷ್ಕರ್ಮಿಗಳು ಆರ್ಥಿಕವಾಗಿ ಸ್ಥಿತಿವಂತರಾದವರನ್ನು ಬಲೆಗೆ ಕೆಡವಿ, ಬೆದರಿಸಿ, ಅವರ ವ್ಯವಹಾರದ ವಿವರಗಳನ್ನು ತಿಳಿದುಕೊಂಡು ಲಕ್ಷಾಂತರ ರೂಪಾಯಿಗಳನ್ನು ದೋಚುವುದು ಸ್ಥೂಲವಾಗಿ ಇದರ ಸ್ವರೂಪ. ಪತ್ರಿಕೆಗಳಲ್ಲಿ ಈ ಬಗ್ಗೆ ವರದಿಗಳನ್ನು ಓದುವಾಗ “ಹೀಗೂ ನಡೆಯಲು ಸಾಧ್ಯವೆ’ ಎಂದು ಅನ್ನಿಸಿದರೆ ಅಚ್ಚರಿಯಿಲ್ಲ. ಆದರೆ ದಿನಂಪ್ರತಿ ಹೊಸ ಹೊಸ ಇಂತಹ ಪ್ರಕರಣಗಳು ನಡೆಯುತ್ತಲೇ ಇವೆ. ಯಾಕೆಂದರೆ ಜನರನ್ನು ಸೈಬರ್ ಕೇಡಿಗಳು ಆ ರೀತಿಯಲ್ಲಿ ಬೆದರಿಸಿರುತ್ತಾರೆ. ಅಷ್ಟಕ್ಕೂ ಹೀಗೆ ವಂಚನೆಗೆ ಈಡಾಗುವವರು ಏನೂ ತಿಳಿಯದವರಲ್ಲ, ಅತ್ಯುನ್ನತ ವಿದ್ಯಾಭ್ಯಾಸ ಇದ್ದು ಪ್ರಸ್ತ ಜಗತ್ತಿನ ಆಗುಹೋಗುಗಳ ಬಗ್ಗೆ ಜ್ಞಾನ ಹೊಂದಿರುವವರೇ. ಆದರೂ ಸೈಬರ್ ದರೋಡೆಕೋರರ ಬಲೆಗೆ ಬಲಿ ಬೀಳುತ್ತಿರುವುದು ವಿಪರ್ಯಾಸ.ಇದನ್ನು ಗಮನಿಸಿಯೇ ಪ್ರಧಾನಿ ನರೇಂದ್ರ ಮೋದಿಯವರು ಸೈಬರ್ ಅಪರಾಧಗಳನ್ನು ತಡೆಯಲು ತನಿಖಾ ಸಂಸ್ಥೆಗಳು, ಪೊಲೀಸರ ಶ್ರಮದ ಜತೆಗೆ ಜನರ ವಿವೇಚನಾಪೂರ್ವಕ ವರ್ತನೆಯೂ ಬಹಳ ಮುಖ್ಯ ಎಂದು ಹೇಳಿರುವುದು.
ಇಂತಹ ಸನ್ನಿವೇಶಗಳು ಎದುರಾದಾಗಲೆಲ್ಲ “ಶಾಂತಚಿತ್ತರಾಗಿ, ಯೋಚಿಸಿ, ಅನಂತರ ಕ್ರಮ ಕೈಗೊಳ್ಳಿ’ ಎಂಬ ಮೂರು ಸೂತ್ರಗಳನ್ನು ಪ್ರಧಾನಿಯವರು ಹೇಳಿದ್ದಾರೆ. ಡಿಜಿಟಲ್ ಅರೆಸ್ಟ್‌ನಂತಹ ಸೈಬರ್ ಅಪರಾಧಗಳ ಸಂದರ್ಭದಲ್ಲಿ ದುಷ್ಕರ್ಮಿಗಳು ಪ್ರಮುಖ ತನಿಖಾಸಂಸ್ಥೆಗಳ ಅಧಿಕಾರಿಗಳು ಎಂದು ಹೇಳಿ ಜನರು ಗುರುತರ ಅಪರಾಧಗಳಲ್ಲಿ ಭಾಗಿಯಾಗಿರುವುದಾಗಿ ನಂಬಿಸುತ್ತಾರೆ. ಇಂತಹ ಸಂದರ್ಭದಲ್ಲಿ ಭೀತಿ, ಆತಂಕ, ಅವಸರಕ್ಕೆ ಬುದ್ಧಿಯನ್ನು ಬಲಿಕೊಡದೆ ಶಾಂತವಾಗಿದ್ದು, ನಿಜಕ್ಕೂ ಹೀಗಾಗಿರಬಹುದೇ ಎಂದು ಯೋಚಿಸುವುದು ಮೋಸದಿಂದ ತಪ್ಪಿಸಿಕೊಳ್ಳು ವುದಕ್ಕಿರುವ ಮೊದಲನೇ ಮೆಟ್ಟಿಲು. ನಿಜಕ್ಕೂ ಅಪರಾಧ ನಡೆದದ್ದೇ ಆದರೂ ಯಾವುದೇ ತನಿಖಾ ಸಂಸ್ಥೆಗಳು ಅಥವಾ ಪೊಲೀಸರು ದೂರವಾಣಿ ಕರೆ, ವಾಟ್ಸ್ ಆ್ಯಪ್ ಕರೆ ಮಾಡಿ ವಿವರಗಳನ್ನು ಕೇಳುವುದಿಲ್ಲ, ನೋಟೀಸ್ ನೀಡುವುದಿಲ್ಲ ಎಂಬುದನ್ನು ನೆನಪಿನಲ್ಲಿ ಇರಿಸಿಕೊಂಡರೆ ಯುದ್ಧವನ್ನು ಅರ್ಧ ಗೆದ್ದಂತೆ. ಇದುವರೆಗಿನ ಪ್ರಕರಣಗಳನ್ನು ಪರಿಶೀಲಿಸಿದರೆ ದುಷ್ಕರ್ಮಿಗಳು ಅನುಸರಿಸುವ ಕಾರ್ಯವಿಧಾನದ ಮೂಲಕ ಸ್ಪಷ್ಟವಾಗುವುದು ಏನೆಂದರೆ ಅವರು ಜನರನ್ನು ಭಯಪಡಿಸಿ ಪರಿಸ್ಥಿತಿಯ ಲಾಭ ಪಡೆಯಲು ಪ್ರಯತ್ನಿಸುತ್ತಾರೆ. ಹೀಗಾಗದಂತೆ ಎಚ್ಚರ ವಹಿಸಿದರೆ, ಬುದ್ಧಿ, ಆಲೋಚನೆಯನ್ನು ನಮ್ಮ ಹತೋಟಿಯಲ್ಲಿ ಇರಿಸಿಕೊಂಡರೆ ಸೈಬರ್ ವಂಚನೆಗಳಿಂದ ಪಾರಾಗಲು ಸಾಧ್ಯ.
ಡಿಜಿಟಲ್ ಅರೆಸ್ಟ್‌ನಂತಹ ದುಷ್ಕೃತ್ಯಗಳನ್ನು ಎಷ್ಟು ಮಾತ್ರಕ್ಕೂ ಸಹಿಸಲು ಸಾಧ್ಯವಿಲ್ಲ. ವಿವಿಧ ತನಿಖಾ ಸಂಸ್ಥೆಗಳು ಮಾತ್ರವಲ್ಲದೆ ಭಾರತೀಯ ರಿಸರ್ವ್ ಬ್ಯಾಂಕ್ ಕೂಡ ಇಂತಹ ಕೃತ್ಯಗಳನ್ನು ಮಟ್ಟ ಹಾಕುವಲ್ಲಿ ಕೈಜೋಡಿಸಿ ಕೆಲಸ ಮಾಡಬೇಕು. ಎಲ್ಲಕ್ಕಿಂತ ಮುಖ್ಯವಾಗಿ ಜನರು ಅವಸರ, ಭಯದ ಕೈಗೆ ಬುದ್ಧಿಯನ್ನು ಕೊಡದೆ ವಿವೇಚನೆಯಿಂದ ವರ್ತಿಸಿ ಇಂತಹ ಕೃತ್ಯಗಳ ತಡೆಗೆ ಮೊದಲನೇ ಹೆಜ್ಜೆ ಇರಿಸಬೇಕು.