ಬಾಗಲಕೋಟೆ: ಮೀಸಲಾತಿ ಪಡೆದುಕೊಳ್ಳಲು ಎಸ್ಸಿ ಅನ್ನಿಸಿಕೊಳ್ಳುವ ಹಂತಕ್ಕೆ ನಾವು ಬಂದು ತಲುಪಿದ್ದೇವೆ. ಇನ್ನೊಂದು ಕೆಲ ವರ್ಷ ಕಳೆದರೆ ನಾವು ಲಿಂಗಾಯತರು ಅನ್ನಲು ಯಾರು ಸಿಗುವುದಿಲ್ಲ. ಇದು ನೋವಿನ ಸಂಗತಿ ಎಂದು ಶಾಸಕ ಡಾ| ವೀರಣ್ಣ ಚರಂತಿಮಠ ಹೇಳಿದರು.
ನಗರದ ಚರಂತಿಮಠ ಶಿವಾನುಭವ ಮಂಟಪದಲ್ಲಿ ರವಿವಾರ ಶಿವಸಿಂಪಿ ಸಮಾಜದ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಶಿವಸಿಂಪಿ ಸಮಾವೇಶ, ಶಿವದಾಸಿಮಯ್ಯ ಜಯಂತ್ಯುತ್ಸವ ಹಾಗೂ ಪ್ರತಿಭಾ ಪುರಸ್ಕಾರ ಮತ್ತು ಸಾಧಕರ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ನಮ್ಮ ದೇಶದ ಇತಿಹಾಸದಲ್ಲಿ ಮೊದಲ ಬಾರಿಗೆ ಆರ್ಥಿಕವಾಗಿ ಹಿಂದುವಳಿದವರಿಗೆ ಶೇ.10 ಮೀಸಲಾತಿ ಕಲ್ಪಿಸಿದ್ದು ಪ್ರಧಾನಿ ಮೋದಿ. ಎಂಜಿನಿಯರ್, ವೈದ್ಯರು, ಸಂಶೋಧಕರು, ವಿಜ್ಞಾನಿಗಳಾಗಿ ನಮ್ಮ ರಾಜ್ಯದವರು ದೇಶಕ್ಕೆ ಕೀರ್ತಿ ತಂದಿದ್ದಾರೆ. ಒಬಿಸಿಗೆ ಸೇರಿಸಲು ಶಿವಸಿಂಪಿ ಸಮಾಜದಿಂದ ಮನವಿ ಮಾಡಿದ್ದು, ಸರ್ಕಾರದ ಗಮನಕ್ಕೆ ತರಲಾಗುತ್ತದೆ ಎಂದರು. ಸಂಸದ ಪಿ.ಸಿ. ಗದ್ದಿಗೌಡರ ಮಾತನಾಡಿ, ಶಿವಶಿಂಪಿ ಸಮಾಜ ಚಿಕ್ಕ ಸಮಾಜವಾದರೂ ಚೊಕ್ಕದಾಗಿದೆ.
ಶಿಕ್ಷಣಕ್ಕೆ ಮೌಲ್ಯವಿದೆ. ಮಕ್ಕಳಿಗೆ ಒಳ್ಳೆಯ ಶಿಕ್ಷಣ ನೀಡುವಲ್ಲಿ ಮುಂದಾಗಬೇಕು. ಯಾರು ಹೆಚ್ಚು ಓದಿಕೊಂಡಿದ್ದಾರೋ ಅವರೇ ಸಮಾಜದಲ್ಲಿ ಮುಂದೆ ಬಂದಿದ್ದಾರೆ. ಆದ್ದರಿಂದ, ಮಕ್ಕಳಿಗೆ ಒಳ್ಳೆಯ ಶಿಕ್ಷಣ ನೀಡುವ ಮೂಲಕ ಮಕ್ಕಳ ಭವಿಷ್ಯ ರೂಪಿಸಬೇಕು. ಶಿವಶಿಂಪಿ ಸಮಾಜ ಒಬಿಸಿ ಸೇರ್ಪಡೆಗೊಳಿಸಬೇಕು ಎನ್ನುವ ಒತ್ತಾವಿದ್ದು, ಸರ್ಕಾರದ ಗಮನಕ್ಕೆ ತರುತ್ತೇವೆ ಎಂದು ತಿಳಿಸಿದರು.
ವಿಧಾನ ಪರಿಷತ್ ಸದಸ್ಯ ಪಿ.ಎಚ್. ಪೂಜಾರ ಮಾತನಾಡಿ, ನಾವೆಲ್ಲರೂ ಒಂದು ನಾವೆಲ್ಲರೂ ಹಿಂದೂ ಎನ್ನುವ ಶಬ್ಧ ಇಡೀ ದೇಶವಾಸಿಗಳ ಭಾವನೆಗಳಲ್ಲಿ ಜಾಗೃತಗೊಳ್ಳಬೇಕಿದೆ. ನಾವೆಲ್ಲರೂ ಬೇರೆ ಬೇರೆ ಸಮಾಜದವರಾದರೂ, ಹಿಂದುಳಿದವರಿದ್ದರೂ ಕೂಡ ಸಂವಿಧಾನ ನೀಡಿರುವ ಅನುಕೂಲತೆ ಪಡೆದುಕೊಂಡು ಮುಂದೆ ಬರುವ ಅನಿವಾರ್ಯತೆ ಇದೆ.ಆ ಅಧಿಕಾರ ಸಂವಿಧಾನ ನಮಗೆ ನೀಡಿದೆ ಎಂದು ಹೇಳಿದರು.
ಚರಂತಿಮಠದ ಶ್ರೀ ಪ್ರಭು ಸ್ವಾಮೀಜಿ, ಶಿವಸಿಂಪಿ ಸಮಾಜದ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಕೋಲ್ಹಾರ, ನಗರಾಭಿವೃದ್ಧಿ ಪ್ರಾ ಧಿಕಾರದ ಅಧ್ಯಕ್ಷ ಬಸಲಿಂಗಪ್ಪ ನಾವಲಗಿ, ಶಂಭುಲಿಂಗ ಕೋಲ್ಹಾರ, ಪಿ.ಬಿ. ನಿರ್ಮಲಾ, ಗುರುಬಸಪ್ಪ ಬೂಸನೂರ, ಬಕ್ಕೇಶಪ್ಪ ಕುಬಸದ, ಪಿ.ಎಸ್. ಬೋದಾನಪೂರ, ಗಿರಿಮಲ್ಲಪ್ಪ ಆಸಂಗಿ, ನಾಗರಾಜ ಅಂಬೆಸಂಗೆ, ಶಿವಶಂಕರ ಚೊಳ್ಳಿ, ದಿನೇಶ ಅಂಬೆಸಂಗೆ, ನಾಗೇಶ ಅಥಣಿ ಉಪಸ್ಥಿತರಿದ್ದರು.ವಿನಯಾ ಹರಿಹರ ಪ್ರಾರ್ಥಿಸಿದರು. ಬಾಗಲಕೋಟೆ ತಾಲೂಕು ಶಿವಶಿಂಪಿ ಸಮಾಜದ ತಾಲೂಕಾಧ್ಯಕ್ಷ ನಾಗರಾಜ ಕುಪ್ಪಸ್ತ, ಮಲ್ಲಿಕಾರ್ಜುನ ಕೋಲ್ಹಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ನಾಗರಾಜ ರುದ್ರಾಕ್ಷಿ,
ಶಶಿಕಲಾ ರುದ್ರಾಕ್ಷಿ, ಜಯಶ್ರೀ ಭದ್ರಶೆಟ್ಟಿ, ತ್ರಿವೇಣಿ ಕೋಲ್ಹಾರ ಹಾಗೂ ಮಧು ಗಂಗಾವತಿ ನಿರೂಪಿಸಿದರು. ನಂದಿನಿ ಮಹಾಲಿಂಗಪುರ ವಂದಿಸಿದರು.