ನಂಜನಗೂಡು: ಸಹಕಾರ ಸಂಘಗಳು ಸರ್ಕಾರದಿಂದ ಸಿಗುವ ಸವಲತ್ತುಗಳನ್ನು ಸದುಪಯೋಗ ಪಡೆದುಕೊಂಡು ಮುಂದೆ ಬರಬೇಕೆಂದು ಶಾಸಕ ಕಳಲೆ ಎನ್ ಕೇಶವಮೂರ್ತಿ ಕರೆ ನೀಡಿದರು.
ನಗರದ ಶ್ರೀ ಭಾರತಿ ತೀರ್ಥ ಸಭಾಂಗಣದಲ್ಲಿ ನಡೆದ ತಾಲೂಕು ಪದವೀಧರರ ಸಹಕಾರ ಸಂಘ ಉದ್ಘಾಟಿಸಿ ಮಾತನಾಡಿದರು. ಸಹಕಾರ ಸಂಘಗಳಿಗೆ ಡಿಸಿಸಿ ಬ್ಯಾಂಕ್ ಸಂಪೂರ್ಣ ನೆರವು ನೀಡಲಿದ್ದು ಇನ್ನೂ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿರುವ ಸಂಘಗಳಿಗೆ ನಿವೇಶನ ಹಾಗೂ ಅನುದಾನ ನೀಡುವುದಾಗಿ ಭರವಸೆ ನೀಡಿದ್ದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಮೈಸೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸಹಾಯಕ ಪ್ರಾಧ್ಯಾಪಕರಾದ ಡಾ.ಪಿ.ಚಂದ್ರಶೇಖರ್, ಇದುವರೆಗೆ ಇಡೀ ದೇಶದಲ್ಲಿ ದಿನಕ್ಕೊಂದು ಜಾತಿ ಸಂಘಟನೆಗಳು ಹುಟ್ಟುತ್ತಿವೆ. ಆದರೆ, ಒಂದು ಹಳ್ಳಿಯನ್ನು ಬದಲಾವಣೆ ಮಾಡುವ ಶಕ್ತಿ ಸಹಕಾರ ಸಂಘಗಳಿಗೆ ಇದೆ ಎಂದು ಹೇಳಿದರು.
ಶೃಂಗೇರಿ ಶಂಕರಮಠ ಧರ್ಮಾಧಿಕಾರಿಗಳಾದ ಶ್ರೀಕಂಠ ಜೋಯಿಸ್, ಸಮಾಜದಲ್ಲಿ ಸಹಕಾರ ಸಂಘದಿಂದ ಪಾದಾರ್ಪಣೆ ಮಾಡುವ ಮೂಲಕ ವಿವಿಧ ಸ್ಥಾನಗಳಲ್ಲಿ ಸೇವೆ ಸಲ್ಲಿಸುತ್ತಿರುವುದಾಗಿ ಹೇಳಿದರು. ತಾಲೂಕು ಪದವೀಧರರ ಸಹಕಾರ ಸಂಘದ ಅಧ್ಯಕ್ಷ ಜಿ.ಎಸ್.ಶೇಖರಪ್ಪ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಉಪಾಧ್ಯಕ್ಷ ಶಿವಪ್ರಸಾದ್,ಅನುರಾಗ ಮಕ್ಕಳ ಮನೆ ಸಂಸ್ಥೆ ಅಧ್ಯಕ್ಷ ಬಿ.ಜಿ.ಸೋಮಶೇಖರ್‌ಮೂರ್ತಿ, ಶಾಂತಮ್ಮ, ಎಸ್.ನಾಗರಾಜ್ ಮತ್ತಿತರರಿದ್ದರು.