ರಾಜ್ಯದಲ್ಲಿನ್ನೂ ಮಳೆಗಾಲ ಮುಗಿದಿಲ್ಲ. ಮುಂಗಾರು ಮಾರುತಗಳು ರಾಜ್ಯದಿಂದ ಹಿಂದೆ ಸರಿಯಲು ಆರಂಭಿಸಿವೆಯಾದರೂ ಇನ್ನೂ ಪೂರ್ಣ ಪ್ರಮಾಣದಲ್ಲಿ ವಾಪಸಾಗಿಲ್ಲ. ಅಲ್ಲದೆ ಈಶಾನ್ಯ ಮಾರುತಗಳು ಇನ್ನಷ್ಟೇ ರಾಜ್ಯವನ್ನು ಪ್ರವೇಶಿಸಬೇಕಿವೆ. ಪರಿಸ್ಥಿತಿ ಹೀಗಿದ್ದರೂ ಮುಂಗಾರು ಅವಧಿಯಲ್ಲಿ ವರುಣ ಕೈಕೊಟ್ಟಿದ್ದರ ಪರಿಣಾಮ ರಾಜ್ಯದ ಜಲಾಶಯಗಳು ತುಂಬಿಲ್ಲ. ತತ್ಪರಿಣಾಮವಾಗಿ ರಾಜ್ಯದ ಹಲವೆಡೆ ಬರ ಪರಿಸ್ಥಿತಿ ಸೃಷ್ಟಿಯಾಗಿದ್ದು ರೈತಾಪಿ ವರ್ಗ ಕಂಗಾಲಾಗಿದೆ. ಇದೇ ವೇಳೆ ಮಳೆಯ ತೀವ್ರ ಕೊರತೆಯಿಂದಾಗಿ ಜಲವಿದ್ಯುತ್ ಉತ್ಪಾದನೆ ಪ್ರಮಾಣ ತೀವ್ರ ಕುಸಿತ ಕಂಡಿದೆ. ಇತರ ವಿದ್ಯುತ್ ಮೂಲಗಳಿಂದಲೂ ನಿರೀಕ್ಷಿತ ಪ್ರಮಾಣದಲ್ಲಿ ವಿದ್ಯುತ್ ಉತ್ಪಾದನೆಯಾಗದಿರುವುದರಿಂದ ಮುಂದಿನ ದಿನಗಳಲ್ಲಿ ರಾಜ್ಯ ತೀವ್ರ ತೆರನಾದ ವಿದ್ಯುತ್ ಅಭಾವವನ್ನು ಎದುರಿಸುವ ಭೀತಿಯಲ್ಲಿ ಸಿಲುಕಿದೆ.
ಅಕ್ಟೋಬರ್ ಆರಂಭದಿಂದಲೂ ವಿದ್ಯುತ್ ಬೇಡಿಕೆ ಅಧಿಕವಾಗಿದೆ. ಮತ್ತೂಂದೆಡೆಯಿಂದ ರೈತರು ಕೂಡ ತಮ್ಮ ಬೆಳೆಗಳಿಗೆ ನೀರು ಹಾಯಿಸಲು ವಿದ್ಯುತ್ ಪಂಪ್‌ಗ್ಳನ್ನು ಅವಲಂಬಿಸಿರುವುದರಿಂದ ಸಹಜವಾಗಿಯೇ ವಿದ್ಯುತ್ ಬೇಡಿಕೆ ಹೆಚ್ಚುತ್ತಲೇ ಸಾಗಿದೆ. ಇದರಿಂದಾಗಿ ರಾಜ್ಯದ ವಿದ್ಯುತ್ ಕಂಪೆನಿಗಳಿಗೆ ಗ್ರಾಹಕರ ಬೇಡಿಕೆಯನ್ನು ಪೂರೈಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಮಳೆಗಾಲ ಮುಕ್ತಾಯದ ಹಂತದಲ್ಲಿರುವಾಗಲೇ ವಿದ್ಯುತ್ ಕಂಪೆನಿಗಳೀಗ ಲೋಡ್ ಶೆಡ್ಡಿಂಗ್‌ನ ಮೊರೆ ಹೋಗಲಾರಂಭಿಸಿವೆ. ಇದರಿಂದ ರಾಜ್ಯದ ಜನತೆ ಕ್ರುದ್ಧರಾಗಿದ್ದು ಗೃಹ ಬಳಕೆದಾರರಿಗೆ 200 ಯೂನಿಟ್ ಉಚಿತ ವಿದ್ಯುತ್ ಪೂರೈಸುವ ಭರವಸೆ ನೀಡಿ ಅಧಿಕಾರಕ್ಕೇರಿರುವ ಕಾಂಗ್ರೆಸ್ ಸರಕಾರ ಬೇಸಗೆಗೂ ಮುನ್ನವೇ ವಿದ್ಯುತ್ ಕಡಿತ ಮಾಡುತ್ತಿರುವುದರ ವಿರುದ್ಧ ತಮ್ಮ ಆಕ್ರೋಶವನ್ನು ಹೊರ ಹಾಕಲಾರಂಭಿಸಿದ್ದಾರೆ. ಮಳೆ ಕೈಕೊಟ್ಟಿದ್ದರಿಂದಾಗಿ ರೈತರಿಗೆ ತಮ್ಮ ಬೆಳೆಯನ್ನು ಉಳಿಸಿಕೊಳ್ಳಲು ತಮ್ಮ ಹೊಲಗಳಿಗೆ ನೀರು ಹಾಯಿಸಲೇ ಬೇಕಾದ ಅನಿವಾರ್ಯತೆ ಇದೆ. ಲೋಡ್‌ಶೆಡ್ಡಿಂಗ್‌ನ ಪರಿಣಾಮ ಇದಕ್ಕೂ ಸಂಕಷ್ಟ ಎದುರಾಗಿದ್ದು ಬೆಳೆಗಳು ಕರಟಿಹೋಗುವ ಸ್ಥಿತಿ ನಿರ್ಮಾಣವಾಗಿದೆ. ಒಂದೆಡೆಯಿಂದ ವರುಣನ ಅವಕೃಪೆ, ಮತ್ತೂಂದೆಡೆಯಿಂದ ವಿದ್ಯುತ್ ಪೂರೈಕೆಯಲ್ಲಿನ ವ್ಯತ್ಯಯ ರೈತರನ್ನು ತೀವ್ರ ಸಂಕಷ್ಟಕ್ಕೀಡು ಮಾಡಿದೆ.
ರಾಜ್ಯದಲ್ಲಿ ಬರ ಪರಿಸ್ಥಿತಿ ತಲೆದೋರುವ ಬಗೆಗೆ ಸ್ಪಷ್ಟ ಮುನ್ಸೂಚನೆ ಆಗಸ್ಟ್ ತಿಂಗಳಲ್ಲೇ ಸರಕಾರಕ್ಕೆ ಲಭಿಸಿತ್ತು. ಹೀಗಾಗಿ ತಿಂಗಳುಗಳ ಹಿಂದೆಯೇ ಎಚ್ಚೆತ್ತುಕೊಳ್ಳಬೇಕಿದ್ದ ಸರಕಾರ ಈಗ ವಿಪಕ್ಷಗಳು ಮತ್ತು ರೈತರು ರಾಜ್ಯದ ಹಲವೆಡೆ ಪ್ರತಿಭಟನೆ ನಡೆಸಿದ ಬಳಿಕ ವಿದ್ಯುತ್ ಉತ್ಪಾದನೆ ಹೆಚ್ಚಳ, ಆದ್ಯತೆ ಮತ್ತು ಆದ್ಯತೆಯೇತರ ಗ್ರಾಹಕರ ಪಟ್ಟಿಯನ್ನು ಸಿದ್ಧಪಡಿಸಿ, ಸೀಮಿತ ಪ್ರಮಾಣದಲ್ಲಿ ವಿದ್ಯುತ್ ಪೂರೈಕೆ, ಇತರ ರಾಜ್ಯಗಳಿಂದ ಖರೀದಿ ಮತ್ತು ಹೆಚ್ಚಿನ ಪ್ರಮಾಣದಲ್ಲಿ ವಿದ್ಯುತ್ ಪೂರೈಸುವಂತೆ ಕೇಂದ್ರಕ್ಕೆ ಮೊರೆಯಂತಹ ಕ್ರಮಗಳಿಗೆ ಮುಂದಾಗಿದೆ.
ಸರಕಾರದ ಈ ಎಲ್ಲ ಪ್ರಯತ್ನಗಳಿಗೆ ನಿರೀಕ್ಷಿತ ಫಲ ಲಭಿಸದೇ ಹೋದಲ್ಲಿ ಪರಿಸ್ಥಿತಿ ಇನ್ನಷ್ಟು ಉಲ್ಬಣಿಸುವ ಸ್ಥಿತಿ ಇದೆ. ಇದೇ ಪರಿಸ್ಥಿತಿ ಮುಂದುವರಿದಲ್ಲಿ ಮುಂದಿನ ದಿನಗಳಲ್ಲಿ ಕೈಗಾರಿಕೆಗಳ ಮೇಲೂ ಪರಿಣಾಮ ಬೀರಲಿದ್ದು ರಾಜ್ಯದ ಆರ್ಥಿಕತೆಯ ಮೇಲೆ ಪ್ರತಿಕೂಲ ಪರಿಣಾಮ ಬೀರಲಿದೆ. ಹೀಗಾಗಿ ರಾಜ್ಯದಲ್ಲಿ ತಲೆದೋರಿರುವ ವಿದ್ಯುತ್ ಅಭಾವವನ್ನು ನೀಗಿಸಿ, ವ್ಯವಸ್ಥಿತವಾಗಿ ವಿದ್ಯುತ್ ಪೂರೈಸಲು ಸರಕಾರ ತನ್ನ ಪ್ರಾಮಾಣಿಕ ಪ್ರಯತ್ನ ಮಾಡಬೇಕಿದೆ.