Advertisement

ಸರ್ಕಾರದ ಅನುದಾನ ಸದ್ಬಳಕೆಯಾಗಲಿ

04:18 PM Apr 27, 2022 | Team Udayavani |

ಹೊನ್ನಾಳಿ: ಹೊನ್ನಾಳಿ ಮತ್ತು ನ್ಯಾಮತಿ ಅವಳಿ ತಾಲೂಕುಗಳ ಎಲ್ಲಾ ಇಲಾಖೆಗಳ ಅಧಿಕಾರಿಗಳು ತಮ್ಮ ಇಲಾಖೆಗೆ ಸಂಬಂಧಿಸಿದ ಕಾಮಗಾರಿಗಳನ್ನು ಗುಣಮಟ್ಟದಿಂದ ಮಾಡಿದರೆ ಮಾತ್ರ ಸರ್ಕಾರದಿಂದ ಬಂದಂತಹ ಸಾವಿರಾರು ಕೋಟಿ ಅನುದಾನ ಸಾರ್ಥಕವಾಗುತ್ತದೆ ಎಂದು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ಹೇಳಿದರು.

Advertisement

ಪಟ್ಟಣದ ತಾಪಂ ಸಾಮರ್ಥ್ಯಸೌಧದಲ್ಲಿ ಮಂಗಳವಾರ ನಡೆದ ತ್ತೈಮಾಸಿಕ ಕೆಡಿಪಿ ಹಾಗೂ ತಾಪಂ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ವಿವಿಧ ಇಲಾಖೆಗಳ ಅಧಿಕಾರಿಗಳು ತಮ್ಮ ಇಲಾಖೆಗೆ ಸಂಬಂಧಪಟ್ಟ ಸಾಧನೆ ಮತ್ತು ಅನುಷ್ಠಾನದ ಸಮಗ್ರ ಮಾಹಿತಿಯನ್ನು ಸಭೆಗೆ ವಿವರಿಸಬೇಕು. ವಿವರಣೆ ಸಂಪೂರ್ಣ ದಾಖಲೆಯೊಂದಿಗೆ ಇರಬೇಕು ಎಂದು ಸೂಚಿಸಿದರು.

ಅಧಿಕಾರಿಗಳು ತಮ್ಮ ಇಲಾಖೆಗೆ ಸಂಬಂಧಪಟ್ಟ ಅನುದಾನ ಹಾಗೂ ಕ್ರಿಯಾ ಯೋಜನೆಯನ್ನು ವಿವರಿಸುವಂತೆ ಶಾಸಕರು ತಿಳಿಸಿದರು. ಅಧಿಕಾರಿಗಳು ಸಮರ್ಪಕ ವಿವರಣೆ ಕೊಡಲು ತಡವರಿಸಿದಾಗ ಶಾಸಕರೇ ವಿವಿಧ ಇಲಾಖೆಗಳಿಗೆ ಹಾಗೂ ಗ್ರಾಮಗಳಿಗೆ ಬಂದಂತಹ ಅನುದಾನದ ಬಗ್ಗೆ ವಿವರಿಸಿದರು.

ನ್ಯಾಮತಿ ತಾಲೂಕಿನ ಜೀನಹಳ್ಳಿ ಗ್ರಾಮ ಸೇರಿದಂತೆ ಇತರ ಗ್ರಾಮಗಳಲ್ಲಿ ಹಾದು ಹೋಗಿರುವ ರಸ್ತೆಗಳಲ್ಲಿ ನೀರಾವರಿ ಇಲಾಖೆಯವರು ಕುಡಿಯುವ ನೀರು ಸರಬರಾಜು ಮಾಡುವ ಪ್ರಕ್ರಿಯೆಯಲ್ಲಿ ರಸ್ತೆಗಳನ್ನು ದುರಸ್ತಿ ಮಾಡದೆ ಹಾಗೆಯೇ ಬಿಟ್ಟಿದ್ದೀರಿ, ಇದರಿಂದ ಗ್ರಾಮೀಣ ಭಾಗದ ರಸ್ತೆಗಳು ಹಾಳಾಗುತ್ತವೆ ಎಂದು ಗ್ರಾಮೀಣ ಕುಡಿಯುವ ನೀರು ಸರಬರಾಜು ಯೋಜನೆಯ ಎಂಜಿನಿಯರ್‌ ಅವರನ್ನು ತರಾಟೆಗೆ ತೆಗೆದುಕೊಂಡರು.

ಗೋವಿನಕೋವಿ, ಹನುಮಸಾಗರ ವ್ಯಾಪ್ತಿಯ 94 ಕೆರೆಗಳಿಗೆ ತುಂಗಭದ್ರಾ ನದಿಯಿಂದ ನೀರು ತುಂಬಿಸುವ ಹಾಗೂ ಬೆನಕನಹಳ್ಳಿ ಏತ ನೀರಾವರಿ ಯೋಜನೆಯಿಂದ 24 ಕೆರೆಗಳನ್ನು ತುಂಬಿಸುವ ಯೋಜನೆಯ 519 ಕೋಟಿ ರೂ. ವೆಚ್ಚದ ಕಾಮಗಾರಿ ಭರದಿಂದ ಸಾಗಿದೆ. ಕುಂದೂರು ಕೆರೆ ಏರಿ ಅಗಲೀಕರಣಕ್ಕೆ 6 ಕೋಟಿ ರೂ., ಅರಕೆರೆ, ನರಸಗೊಂಡನಹಳ್ಳಿ ಬಳಿಯ ಚತುಷ್ಪಥಕ್ಕೆ 4.5 ಕೋಟಿ ರೂ. ಅನುದಾನ ಬಿಡುಗಡೆಯಾಗಿ ಕಾಮಗಾರಿ ಪ್ರಗತಿಯಲ್ಲಿದೆ. ಅರಬಗಟ್ಟೆ ಗ್ರಾಮದಲ್ಲಿ 2 ಮತ್ತು ಸಿಂಗಟಗೆರೆ ಗ್ರಾಮದ ಬಳಿ 1 ವಸತಿ ಶಾಲೆ ಸೇರಿದಂತೆ ಒಟ್ಟು 3 ವಸತಿ ಶಾಲೆಗಳ ಕಟ್ಟಡಗಳು ಪೂರ್ಣಗೊಂಡಿವೆ. ಬೇಲಿಮಲ್ಲೂರು ಗ್ರಾಮದ ಬಳಿ ಹಾಗೂ ಎಚ್‌. ಕಡದಕಟ್ಟೆ ಬಳಿಯ ಹೆಲಿಪ್ಯಾಡ್‌ ಬಳಿ ಇರುವ ವಿದ್ಯಾರ್ಥಿನಿಲಯಗಳ ಕಟ್ಟಡಗಳು ಶೀಘ್ರದಲ್ಲಿ ಉದ್ಘಾಟನೆಯಾಗಲಿವೆ ಎಂದು ತಿಳಿಸಿದರು.

Advertisement

30.40 ಕೋಟಿ ರೂ. ವೆಚ್ಚದಲ್ಲಿ ಒಟ್ಟು 132 ಕೊಠಡಿಗಳನ್ನು ನಿರ್ಮಿಸಲಾಗಿದೆ. ನ್ಯಾಮತಿ ಪಟ್ಟಣದ ಕೆಪಿಎಸ್‌ಗೆ ಅವಶ್ಯವಾಗಿರುವ ಕಟ್ಟಡದ ಕಾಮಗಾರಿ ಪ್ರಾರಂಭವಾಗಿದೆ. ಹೊನ್ನಾಳಿ ಮತ್ತು ನ್ಯಾಮತಿ ಪದವಿ ಕಾಲೇಜುಗಳಿಗೆ ಅವಶ್ಯವಿರುವ ಕೊಠಡಿ ನಿರ್ಮಾಣಕ್ಕೆ ಅನುದಾನ ಬಿಡುಗಡೆಯಾಗಿದೆ. ಹೊನ್ನಾಳಿ ಪಟ್ಟಣದ ಪದವಿ ಕಾಲೇಜಿಗೆ 5.95 ಕೋಟಿ ರೂ. ಹಾಗೂ ನ್ಯಾಮತಿ ಪಟ್ಟಣದ ಪದವಿ ಕಾಲೇಜಿಗೆ 4.25 ಕೋಟಿ ರೂ. ಅನುದಾನ ಬಿಡುಗಡೆಯಾಗಿ ಕಾಮಗಾರಿ ಪ್ರಾರಂಭವಾಗಿದೆ. ನ್ಯಾಮತಿ ತಾಲೂಕಿನ ಪದವಿ ಕಾಲೇಜಿಗೆ 3 ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ ಎಂದರು.

ಹೊನ್ನಾಳಿ ತಾಲೂಕಿನ ಕ್ಯಾಸಿನಕೆರೆ, ಚಿಕ್ಕಗೋಣಿಗೆರೆ ಹಾಗೂ ನ್ಯಾಮತಿ ತಾಲೂಕಿನ ಗಂಗನಕೋಟೆ ಗ್ರಾಮದ ಬಳಿ 66 ಕೆವಿ ಪವರ್‌ ಸ್ಟೇಷನ್‌ ಸ್ಥಾಪನೆ ಮಾಡಲಾಗಿದೆ. ಬೆಸ್ಕಾಂನಲ್ಲಿ ಬೆಳಕು ಯೋಜನೆಯಡಿ 270 ಮನೆಗಳಿಗೆ ವಿದ್ಯುತ್‌ ಸಂಪರ್ಕ ಕಲ್ಪಿಸಲಾಗಿದೆ. ಮುಂದಿನ ದಿನಗಳಲ್ಲಿ 1500 ಮನೆಗಳಿಗೆ ವಿದ್ಯುತ್‌ ಸಂಪರ್ಕ ಕಲ್ಪಿಸಿ ಬೆಳಕು ನೀಡುವ ಗುರಿ ಹೊಂದಲಾಗಿದೆ. ನೇರಲಗುಂಡಿ, ಗಡ್ಡೇಹಳ್ಳಿ ಸೇರಿದಂತೆ 8 ಹಳ್ಳಿಗಳ ಕೆರೆ ಹೂಳೆತ್ತುವ ಕಾಮಗಾರಿಗೆ 4 ಕೋಟಿ ರೂ. ಬಿಡುಗಡೆಯಾಗಿದೆ. ಕೆಲವು ಹಳ್ಳಿಗಳ ಕೆರೆ ಹೂಳೆತ್ತುವ ಕೆಲಸ ಮುಗಿದಿದ್ದು, ಹಲವು ಹಳ್ಳಿಗಳ ಕೆರೆ ಹೂಳೆತ್ತುವ ಕಾರ್ಯ ಪ್ರಗತಿಯಲ್ಲಿದೆ ಎಂದರು.

ಉಪವಿಭಾಗಾಧಿಕಾರಿ ತಿಮ್ಮಣ್ಣ ಹುಲ್ಲುಮನಿ, ಹೊನ್ನಾಳಿ ತಹಶೀಲ್ದಾರ್‌ ರಶ್ಮಿ, ನ್ಯಾಮತಿ ತಹಶೀಲ್ದಾರ್‌ ರೇಣುಕಾ, ಜಂಟಿ ಕೃಷಿ ನಿರ್ದೇಶಕ ಶ್ರೀನಿವಾಸ್‌ ಚಿಂತಾಳ್‌, ನ್ಯಾಮತಿ ತಾಪಂ ಆಡಳಿತಾಧಿಕಾರಿ ಅನ್ನಪೂರ್ಣಮ್ಮ, ತಾಪಂ ಇಒ ರಾಮ ಭೋವಿ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next