ಪ್ರತಿಯೊಬ್ಬರ ಜೀವನದಲ್ಲಿ ನೋವೆನ್ನುವುದು ಸಾಮಾನ್ಯ. ಅದಿಲ್ಲದಿದ್ದರೆ ಜೀವನದಲ್ಲಿ ಸೊಗಸೆಲ್ಲಿರುತ್ತಿತ್ತು? ಎಲ್ಲವೂ ನಾವು ಅಂದುಕೊಂಡಂತೆ ಇದೆ, ಯಾವುದಕ್ಕೂ ಕೊರತೆ ಇಲ್ಲ ಅಂತಾದರೆ ಅದಕ್ಕೆ ಏನು ಅರ್ಥ? ಅಂತಹ ಬದುಕು ಪರಿಪೂರ್ಣ ಆಗಲು ಹೇಗೆ ಸಾಧ್ಯ? ಅಷ್ಟಕ್ಕೂ ಅಂತಹ ಜೀವನವನ್ನು ನಾವು ಬಯಸಿದರೆ ಜೀವನದಲ್ಲಿ ಸಾಧಿಸುವುದಾದರೂ ಏನು? ಎಂತಹದ್ದೇ ನೋವು ಬರಲಿ ಅದನ್ನು ಯಾವುದೇ ಸಂದರ್ಭದಲ್ಲಿ ಆಗಲಿ ಎದುರಿಸಿ ನಲಿವನ್ನು ಕಾಣುವುದೇ ನಿಜವಾದ ಜೀವನ.
ಮನುಷ್ಯ ಅಂದಮೇಲೆ ಆತನ ಹುಟ್ಟಿನೊಂದಿಗೆ ನೋವು ಕೂಡ ಅಂಟಿಕೊಂಡು ಬರುತ್ತದೆ. ಅಸಲಿಗೆ ನೋವು ನಲಿವು ಎರಡೂ ಕೂಡ ನಮ್ಮ ಮನಸ್ಸಿಗೆ ಸಂಬಂಧಿಸಿದ್ದು. ಅದನ್ನು ನಾವೇ ಅನುಭವಿಸಬೇಕು. ನಾವು ಯಾವುದನ್ನು ನೋವೆಂದು ಭಾವಿಸಿಕೊಂಡು ಕುಗ್ಗುತ್ತೇವೋ ಅದು ನಿಜವಾಗಿಯೂ ನೋವಿನ ಸಂಗತಿ ಆಗಿರುವುದಿಲ್ಲ. ಅದನ್ನು ಬಗೆಹರಿಸಿಕೊಳ್ಳುವ ಧೈರ್ಯ, ಶಕ್ತಿ ನಮ್ಮಲ್ಲಿದ್ದರೆ ಆ ನೋವು ಖಂಡಿತವಾಗಿ ನೋವೆಂದು ಅನಿಸುವುದಿಲ್ಲ.
ನಮ್ಮಲ್ಲಿ ಹಲವರು ಸಣ್ಣ ಸಣ್ಣ ಸಮಸ್ಯೆಗಳನ್ನು ದೊಡ್ಡದಾಗಿ ಭಾವಿಸಿಕೊಂಡು ಅದನ್ನು ಎದುರಿಸುವ ಸಾಮರ್ಥ್ಯವಿಲ್ಲದೆ ಮಾನಸಿಕವಾಗಿ ಕುಗ್ಗುತ್ತಾರೆ. ಅದರ ಬದಲು ಆ ಸಮಸ್ಯೆಯನ್ನು ಸವಾಲಾಗಿ ಸ್ವೀಕರಿಸಿ ನಿಂತರೆ ಆ ಸಮಸ್ಯೆ ಸಾಸಿವೆ ಕಾಳಿನಷ್ಟು ಸಣ್ಣದಾಗಿ ಕಾಣುತ್ತದೆ. ಅಷ್ಟಕ್ಕೂ ನಮ್ಮ ನೋವಿಗೆ ಕಾರಣಕರ್ತರು ನಾವೇ ಆಗಿರುತ್ತೇವೆ. ಬದುಕಿನುದ್ದಕ್ಕೂ ನೋವುಗಳನ್ನು ಎದುರಿಸುವ ಮನುಷ್ಯ ಆತ್ಮಹತ್ಯೆ ಮೊರೆ ಹೋಗುವುದು ನಾವು ಹಲವು ಕಡೆಗಳಲ್ಲಿ ಕಾಣುತ್ತೇವೆ.
ಅಂತಹ ಕೆಟ್ಟ ನಿರ್ಧಾರ ತೆಗೆದುಕೊಳ್ಳದೆ ಆ ಸಮಸ್ಯೆಯನ್ನು ಯಾವ ರೀತಿ ಬಗೆಹರಿಸಬಹುದು ಎಂಬುದನ್ನು ಮನಸ್ಸಿನಲ್ಲಿಟ್ಟುಕೊಂಡು ಮುನ್ನಡೆದರೆ ಒಂದಲ್ಲ ಒಂದು ರೀತಿಯಲ್ಲಿ ಪರಿಹಾರ ಮಾರ್ಗವನ್ನು ಕಂಡುಕೊಳ್ಳಬಹುದು.
ಹಾಗೆಯೇ ಬೇರೆಯವರ ತಪ್ಪಿನಿಂದ ನಮಗಾಗುವ ನೋವಿಗೂ ನಾವು ಹೊಣೆಯಲ್ಲ. ಅದನ್ನು ಅವರವರ ಆತ್ಮಸಾಕ್ಷಿಗೆ ಬಿಟ್ಟು ನಾವು ನಿರ್ಮಳವಾಗಿರಬೇಕು. ಇನ್ನು ಅದರಲ್ಲಿ ನಮ್ಮದೇ ತಪ್ಪಿದ್ದರೆ ನೋವು ಸಹಜ, ಆದರೆ ಅಂತಹ ನೋವು ನಮ್ಮ ಆತ್ಮಾವಲೋಕನಕ್ಕೆ ಅಡಿಪಾಯವಾಗಬೇಕು. ಎಲ್ಲಕ್ಕಿಂತ ಮಿಗಿಲಾಗಿ ಬೇರೆಯವರ ನಲಿವಿನಲ್ಲಿ ನಮ್ಮ ನೋವನ್ನು ಮರೆಯುವುದಿದೆಯಲ್ಲ ಅದಕ್ಕಿಂತ ಸಂತೋಷ ಬೇರೊಂದಿಲ್ಲ.
ಪುಟ್ಟ ಮಗುವೊಂದು ಎಷ್ಟೋ ಬಾರಿ ನಮ್ಮ ಮುಖಕ್ಕೆ ಪರಚಿ ಬಿಡುತ್ತದೆ. ನಾವು ನೋವಿನಿಂದ ಉದ್ಘಾರ ತೆಗೆದರೆ ಅನಂತರ ಕಿಲಕಿಲನೆ ನಕ್ಕು ಬಿಡುತ್ತದೆ. ಎಂದಿಗೂ ನಮಗೆ ಆ ಮಗುವಿನ ಮೇಲೆ ಕೋಪ ಬರುವುದೇ ಇಲ್ಲ. ಬದಲಾಗಿ ಪರಚಿದ ಗಾಯವನ್ನು ಮುಟ್ಟಿಕೊಂಡಾಗ ಎಂತಹದ್ದೋ ಪುಳಕ.
ಜೀವನವೂ ಹಾಗೆ ನಮಗಾದ ನೋವಿನಿಂದ ಒಂದು ಜೀವಕ್ಕೆ ಸಾಂತ್ವನ ಸಿಗುತ್ತೆ, ಒಂದು ಪುಟ್ಟ ತ್ಯಾಗದಿಂದ ಇನ್ನೊಬ್ಬರ ಇಡೀ ಜೀವನವನ್ನು ಹಸನಾಗಿಸುತ್ತದೆ ಎನ್ನುವುದಾದರೆ ಅಂತಹ ನೋವುಗಳನ್ನು ಎದುರಿಸಲು ಯಾಕೆ ಹಿಂಜರಿಯಬೇಕು? ಇನ್ನೊಬ್ಬರ ಸಂತಸವೇ ನಮ್ಮ ಸಾಧನೆಯಾಗಬಾರದೇಕೆ? ಪ್ರತೀ ನೋವಿಗೂ ಔಷಧ ನಮ್ಮಲ್ಲೇ ಇರುತ್ತದೆ. ಹುಡುಕುವ ಮಾರ್ಗ ನಾವು ಕಂಡುಕೊಳ್ಳಬೇಕಷ್ಟೇ.
-ಪೂಜಾ
ಎಸ್.ಡಿ.ಎಂ. ಕಾಲೇಜು ಉಜಿರೆ