Advertisement

‘ಯಾರೇ ಬರಲಿ ನಮ್ಮೂರು ಚೆನ್ನಾಗಿರಲಿ!’

01:05 PM May 05, 2018 | |

ಮಂಗಳೂರು: ‘ನಿಕ್ಲೆಗ್‌ ಮಾತ ಮಲ್ತ್‌ ಕೊರ್ಪ. ಎಂಕ್ಲ್ ಲೆಗ್‌ ಓಟು ಒಂಜಿ ಪಾಡೊಡು (ನಿಮಗೆ ಎಲ್ಲ ಮಾಡಿ ಕೊಡುತ್ತೇವೆ. ಓಟು ಮಾತ್ರ ಹಾಕಿ). ಐದು ವರ್ಷಗಳ ಹಿಂದೆ ಮತ ಯಾಚಿಸಲು ಮನೆ ಬಾಗಿಲಿಗೆ ಬಂದಾಗ ಇದನ್ನು ಹೇಳಿದ್ದರು. ಈಗ ಮತ್ತೆ ಪ್ರಚಾರಕ್ಕೆ ಮನೆಗೆ ಬರುತ್ತಿದ್ದಾರೆ, ಅವರಲ್ಲಿ ಈ ಬಗ್ಗೆ ಪ್ರಶ್ನಿಸಿದರೆ ‘ಆ ವಿಷಯನ್‌ ಇತ್ತೆ ಪಂಡ್‌ಂಡ ಆವಂದ್‌'(ಆ ಮಾತನ್ನು ಆಗ ಹೇಳದೆ ಈಗ ಹೇಳಿದರೆ ಹೇಗೆ?) ಎನ್ನುತ್ತಾರೆ!

Advertisement

‘ಉದಯವಾಣಿ’ ತಂಡವು ಮಂಗಳೂರು ಕ್ಷೇತ್ರದಲ್ಲಿ ಸುತ್ತಾಟ ನಡೆಸುತ್ತಿ ದ್ದಾಗ ಕೋಟೆಕಾರ್‌ ಬೀರಿಯಲ್ಲಿ ಹೂವು ಮಾರುವ ಮಹಿಳೆ ಪ್ರಸಿಲ್ಲಾ ಅವರು ತಮ್ಮ ಪಕ್ಕದಾಕೆಯೊಂದಿಗೆ ನಡೆಸುತ್ತಿದ್ದ ಚುನಾವಣೆ ಮಾತುಕತೆ ಕಿವಿಗೆ ಬಿತ್ತು. ಎಲೆಕ್ಷನ್‌ ಬಗ್ಗೆ ಇಷ್ಟೊಂದು ಗಂಭೀರ ಚರ್ಚೆ ನಡೆಸುತ್ತಿದ್ದಾರಲ್ಲ ಅಂದುಕೊಂಡು ಅವರನ್ನು ಮಾತಿಗೆಳೆದೆವು.

‘ನಾವು ನೀರಿನ ಬಿಲ್‌ ಸಕಾಲದಲ್ಲಿ ಕಟ್ಟುತ್ತೇವೆ. ತೆರಿಗೆ ತಪ್ಪದೆ ಪಾವತಿಸುತ್ತೇವೆ. ಇಂದು ಬೆಳಗ್ಗೆ ನಳ್ಳಿ ನೀರು ಬಂದಿಲ್ಲ; ಇದರಿಂದಾಗಿ ನನ್ನ ಗಂಡನಿಗೆ ಸಮಯಕ್ಕೆ ಸರಿಯಾಗಿ ಕೆಲಸಕ್ಕೆ ಹೋಗಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಯಿತು’ ಎಂದರು ಪ್ರಸಿಲ್ಲಾ.

ಅಲ್ಲಿಂದ ಮುಂದೆ ಹೊರಟಾಗ, ಬೀರಿ ಜಂಕ್ಷನ್‌ನ ಹೊಟೇಲ್‌ ಒಂದರ ಎದುರು ಕುಳಿತು ಸ್ನೇಹಿತರ ಜತೆ ಕುಶಲೋಪರಿಯಲ್ಲಿ ತೊಡಗಿದ್ದ ಕೊಂಡಾಣದ ಮನೋಹರ್‌ ಕೈಯ, ‘ಏನ್ರೀ ಈಗ ಜಾತಿ ರಾಜಕೀಯ ಜಾಸ್ತಿಯಾಗುತ್ತಿದೆ. ಮೇಲ್ನೋಟಕ್ಕೆ ಎಲ್ಲರೂ ಚೆನ್ನಾಗಿರುತ್ತಾರೆ. ಆದರೆ ಚುನಾ ವಣೆ ಬಂದಾಗ ಒಳಗಿಂದೊಳಗೆ ಜಾತಿ ರಾಜಕೀಯ ಜೋರಾಗುತ್ತದೆ. ಇದು ದೂರವಾಗಬೇಕು’ ಎಂದು ಜಾತಿ ರಾಜಕಾರಣದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.

ಸುತ್ತಾಡುತ್ತ ಬೀಚ್‌ ಪ್ರವಾಸೋದ್ಯ ಮದಲ್ಲಿ ಗಮನ ಸೆಳೆಯುತ್ತಿರುವ ಉಳ್ಳಾಲ ತಲುಪಿದೆವು. ಅಲ್ಲಿ ರಮೇಶ್‌ ಅವರನ್ನು ಮಾತನಾಡಿಸಿದಾಗ, ‘ನಮಗೆ ಯಾವುದೇ ರಾಜಕೀಯ ಇಲ್ಲ. ಮನಸ್ಸಿದ್ದವರಿಗೆ ಓಟು ಹಾಕುತ್ತೇವೆ’ ಎಂದರು.

Advertisement

ಈ ರೀತಿ ಉರಿ ಬಿಸಿಲಿನ ನಡುವೆ ಸುತ್ತಾಡುತ್ತಿರಬೇಕಾದರೆ, ಉಳ್ಳಾಲ ಪೇಟೆ ಯಲ್ಲಿ ಕಟ್ಟೆಯಲ್ಲಿ ಕುಳಿತು ಒಂದಷ್ಟು
ಮಂದಿ ಚುನಾವಣೆ ಬಗ್ಗೆಯೇ ಹರಟೆ ಹೊಡೆಯುತ್ತಿದ್ದರು. ‘ಚುನಾವಣೆಯಲ್ಲಿ ಯಾರು ಗೆಲ್ತಾರೋ, ಯಾರು ಸೋಲ್ತಾರೋ ಗೊತ್ತಿಲ್ಲ. ಈಗಿನ ಕಾಲದಲ್ಲಿ ನಮ್ಮನ್ನು ನಾವೇ ನೋಡಿಕೊಳ್ಳಬೇಕು. ಹಸಿವಾ ದಾಗ ನಮ್ಮ ಹೊಟ್ಟೆಗೆ ನಾವೇ ಆಹಾರ ಹುಡುಕಬೇಕು. ಯಾರೇ ಬರಲಿ, ನಮ್ಮ ಊರು ಚೆನ್ನಾಗಿರಬೇಕು. ಅಷ್ಟೇ ನಾವು ಹೇಳುವುದು’ ಎಂದು ಹಿರಿಯರಾದ ಅನ್ವರ್‌ ಹೇಳಿದ ಮಾತು ಗಮನಸೆಳೆಯಿತು.

‘ಯಾರೇ ಬಂದರೂ ನಮ್ಮ ಕೆಲಸ ಆಗುವುದು ಅಷ್ಟಕಷ್ಟೇ. ಆದರೆ ನಾನು ಓಟು ಹಾಕುತ್ತೇನೆ, ಅದನ್ನು ಎಂದೂ ತಪ್ಪಿಸುವುದಿಲ್ಲ. ಓಟು ಹಾಕದಿದ್ದರೆ ನಾವು ಮನುಷ್ಯರೇ ಅಲ್ಲ’ ಎಂದು ಉಳ್ಳಾಲ ಪೇಟೆಯಲ್ಲಿ ಮತ್ತೊಂದು ಕಟ್ಟೆಯಲ್ಲಿ ಕುಳಿತು ಗೆಳೆಯರ ಜತೆ ಮಾತನಾಡುತ್ತಿದ್ದ ಧನಪಾಲ್‌ ಹೇಳಿದರು.

ಸರಕಾರ ಬದಲಾಗಬೇಕು!
ಕ್ಷೇತ್ರದ ಎಲ್ಲಿಯೂ ಅಬ್ಬರದ ಪ್ರಚಾರ ಕಂಡು ಬರುತ್ತಿಲ್ಲ. ಆದರೆ ಕೋಟೆಕಾರ್‌ ಮತ್ತು ಉಳ್ಳಾಲ ಪೇಟೆಯಲ್ಲಿ ಕೆಲವು ರಾಜಕೀಯ ಪಕ್ಷಗಳ ಕಾರ್ಯಕರ್ತರು ಅಂಗಡಿ ಮಳಿಗೆಗಳಿಗೆ ಭೇಟಿ ನೀಡಿ ಮತ ಯಾಚಿಸುತ್ತಿರುವುದು ಕಂಡುಬಂತು.

ಈ ತನ್ಮಧ್ಯೆ ಉಳ್ಳಾಲದಲ್ಲಿ ವ್ಯಕ್ತಿಯೊಬ್ಬರು ಅಂಗಡಿಯೊಂದಕ್ಕೆ ಬಂದು ‘ನಿಮ್ಮ ಓಟು ಯಾರಿಗೆ’ ಎಂದು ಕೇಳಿದಾಗ, ‘ಪ್ರತಿ 5 ವರ್ಷಗಳಿಗೊಮ್ಮೆ ಸರಕಾರ ಬದಲಾಗಬೇಕು. ಕೇರಳದಲ್ಲಿ, ತಮಿಳುನಾಡಿನಲ್ಲಿ ನೋಡಿ. ಇಲ್ಲಿಯೂ ಹಾಗೆಯೇ ಆಗಬೇಕು’ ಎಂದು ಅವರು ಉತ್ತರಿಸಿದರು.

ಮತದಾನ ಬಹಿಷ್ಕಾರ
ಉಳ್ಳಾಲ ಮುಕ್ಕಚ್ಚೇರಿಯ ಬಿರ್ಲಾ ಕಂಪೌಂಡ್‌ನ‌ ಸುಮಾರು 70 ಮನೆಗಳ ಮಂದಿ ಮತದಾನ ಬಹಿಷ್ಕರಿಸಲು ನಿರ್ಧರಿಸಿದ್ದಾರೆ.  ಈ ಸಂಬಂಧ ಬಿರ್ಲಾ ಕಾಂಪೌಂಡ್‌ ಮುಖ್ಯ ದ್ವಾರದ ಬಳಿ ಬ್ಯಾನರ್‌ ಅಳವಡಿಸಿರುವುದು ಕಂಡುಬಂತು. ಬಿರ್ಲಾ ಕಂಪೌಂಡ್‌ನ‌ ಸುಮಾರು ಒಂದು ಕಿ.ಮೀ. ರಸ್ತೆ ಕಾಂಕ್ರೀಟೀಕರಣ ಮಾಡಲು ಬಾಕಿಯಿದ್ದು, ಈ ಬಗ್ಗೆ ಪುರಸಭೆ ನಿರ್ಲಕ್ಷ್ಯ ವಹಿಸಿರುವುದು ಇಲ್ಲಿನ ಜನರು ಮತದಾನ ಬಹಿಷ್ಕಾರಕ್ಕೆ ಕಾರಣ ಎಂದು ಬ್ಯಾನರ್‌ ಮೇಲೆ ಬರೆಯಲಾಗಿದೆ.

35 ವರ್ಷಗಳ ಹಿಂದೆ ಬಿರ್ಲಾ ಕಂಪೆನಿಯವರು ಈ ರಸ್ತೆಗೆ ಜಲ್ಲಿ ಹಾಕಿದ್ದು, ಈಗಲೂ ಅದೇ ಸ್ಥಿತಿಯಲ್ಲಿದೆ. ಇವತ್ತಿಗೂ ಡಾಮರು ಕಂಡಿಲ್ಲ. ನಮ್ಮ ಸಮಸ್ಯೆಗೆ ಪರಿಹಾರ ಸಿಗದ ಕಾರಣ ಮತದಾನ ಬಹಿಷ್ಕಾರಕ್ಕೆ ತೀರ್ಮಾನಿಸಿದ್ದೇವೆ.
– ಮಲಿಕ್‌, ಬಿರ್ಲಾ
ಕಾಂಪೌಂಡ್‌ ನಿವಾಸಿ

ಹಿಲರಿ ಕ್ರಾಸ್ತಾ 

Advertisement

Udayavani is now on Telegram. Click here to join our channel and stay updated with the latest news.

Next