ಇಸ್ಲಾಮಾಬಾದ್ : 2008 ರ 26/11 ಮುಂಬೈ ಭಯೋತ್ಪಾದಕ ದಾಳಿಗೆ ಲಷ್ಕರ್-ಎ-ತೊಯ್ಬಾ ದಾಳಿಕೋರ ಉಗ್ರರಿಗೆ ತರಬೇತಿ ನೀಡಿದ ಮತ್ತು ಕನಿಷ್ಠ ಎರಡು ಸಂದರ್ಭಗಳಲ್ಲಿ ಸಂಘಟನೆಯ ಮುಖ್ಯಸ್ಥನಾಗಿ ಕಾರ್ಯನಿರ್ವಹಿಸಿದ್ದ ಹಫೀಜ್ ಅಬ್ದುಲ್ ಸಲಾಮ್ ಭುಟ್ಟಾವಿ ಪಂಜಾಬ್ ಪ್ರಾಂತ್ಯದ ಜೈಲಿನಲ್ಲಿ ಸಾವನ್ನಪ್ಪಿದ್ದಾನೆ.
ವಿಶ್ವಸಂಸ್ಥೆಯಿಂದ ಗೊತ್ತುಪಡಿಸಿದ ಭಯೋತ್ಪಾದಕ ಭುಟ್ಟಾವಿಗೆ ಹಣಕಾಸು ನೆರವು ಒದಗಿಸಿದ್ದಕ್ಕಾಗಿ ಶಿಕ್ಷೆಯಾಗಿತ್ತು ಎಂದು ಆತನ ಸಹಾಯಕ ಬುಧವಾರ ಹೇಳಿದ್ದಾರೆ.
ಪಂಜಾಬ್‌ನ ಮುರಿಡ್ಕೆಯಲ್ಲಿ ಎಲ್‌ಇಟಿ ಪ್ರಧಾನ ಕಚೇರಿಯನ್ನು ಸ್ಥಾಪಿಸಿದ ಭುಟ್ಟಾವಿ, ಕಾನೂನುಬಾಹಿರ ಜಮಾತ್-ಉದ್-ದವಾ (ಜೆಯುಡಿ) ಮುಖ್ಯಸ್ಥ ಮತ್ತು ಮುಂಬೈ ದಾಳಿಯ ಮಾಸ್ಟರ್‌ಮೈಂಡ್ ಹಫೀಜ್ ಸಯೀದ್‌ಗೆ ಉಪನಾಯಕನಾಗಿದ್ದ. ಜೆಯುಡಿ ಎಲ್‌ಇಟಿಯ ಮುಂಚೂಣಿ ಸಂಘಟನೆಯಾಗಿದೆ.
“77 ವರ್ಷದ ಭುಟ್ಟಾವಿ ಭಯೋತ್ಪಾದನೆ ಹಣಕಾಸು ಪ್ರಕರಣದಲ್ಲಿ ಅಕ್ಟೋಬರ್ 2019 ರಿಂದ ಲಾಹೋರ್‌ನಿಂದ ಸುಮಾರು 60 ಕಿಮೀ ದೂರದಲ್ಲಿರುವ ಜಿಲ್ಲಾ ಜೈಲು ಶೇಖುಪುರದಲ್ಲಿ ಬಂಧಿಯಾಗಿದ್ದ. ಮೇ 29 ರಂದು ಎದೆಯಲ್ಲಿ ತೀವ್ರವಾದ ನೋವನ್ನು ಅನುಭವಿಸಿದ್ದು ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು, ಅಲ್ಲಿ ಹೃದಯ ಸ್ತಂಭನದಿಂದಾಗಿ ಮೃತಪಟ್ಟರು ಎಂದು ಘೋಷಿಸಲಾಯಿತು”ಎಂದು ಜೆಯುಡಿ ಅಧಿಕಾರಿಯೊಬ್ಬರು ಪಿಟಿಐಗೆ ತಿಳಿಸಿದ್ದಾರೆ.
ಮುರಿಡ್ಕೆಯಲ್ಲಿರುವ LeT/JuD ಪ್ರಧಾನ ಕಛೇರಿಯಲ್ಲಿ ಅಂತ್ಯಕ್ರಿಯೆ ನಡೆದಿದ್ದು ಹೆಚ್ಚಿನ ಸಂಖ್ಯೆಯ ನಿಷೇಧಿತ ಸಂಘಟನೆಯ ಬೆಂಬಲಿಗರು ಹೆಚ್ಚಿನ ಭದ್ರತೆಯ ನಡುವೆ ಭಾಗವಹಿಸಿದರು.
2019 ರಿಂದ ಭಯೋತ್ಪಾದಕ ಹಣಕಾಸು ಪ್ರಕರಣಗಳಲ್ಲಿ ಬಹು ಶಿಕ್ಷೆ ಅನುಭವಿಸುತ್ತಿರುವ ಕೋಟ್ ಲಖ್ಪತ್ ಜೈಲಿನಲ್ಲಿರುವ ಜೆಯುಡಿ ಮುಖ್ಯಸ್ಥ ಹಫೀಜ್ ಸಯೀದ್, ಭುಟ್ಟವಿಯ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ತನಗೆ ಅವಕಾಶ ನೀಡುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದರೂ ಅನುಮತಿ ನೀಡಲಾಗಿಲ್ಲ ಎಂದು ಪಂಜಾಬ್ ಸರ್ಕಾರದ ಮೂಲವೊಂದು ಪಿಟಿಐಗೆ ತಿಳಿಸಿದೆ.