Advertisement

ಮೂರಲ್ಲಿ ಒಂದು ಚಿರತೆ ಬೋನಿಗೆ ಬಿತ್ತು! ಬಿಸಲೆ ಅರಣ್ಯದಲ್ಲಿ ಜೀವ ಭಯ ಹುಟ್ಟಿಸಿದ್ದ ಚಿರತೆ

05:46 PM Jan 25, 2021 | Team Udayavani |

ಸಕಲೇಶಪುರ: ತಾಲೂಕಿನ ಹೆತ್ತೂರು ಹೋಬಳಿಯ ಬಿಸಲೆ ಸಮೀಪದ ಹೊನಾಟ್ಲು ಗ್ರಾಮದಲ್ಲಿ ಐದು ವರ್ಷದ ಗಂಡು ಚಿರತೆ
ಅರಣ್ಯ ಇಲಾಖೆ ಇಟ್ಟಿದ್ದ ಬೋನಿಗೆ ಬಿದ್ದಿದೆ. ಇದರಿಂದ ಜೀವ ಭಯದಲ್ಲಿ ಕಾಲ ಕಳೆಯುತ್ತಿದ್ದ ಗ್ರಾಮಸ್ಥರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.

Advertisement

ಈ ಭಾಗದಲ್ಲಿ ಹಲವು ತಿಂಗಳುಗಳಿಂದ ಚಿರತೆ ರೈತರಿಗೆ ಕಾಟ ಕೊಡುತ್ತಿತ್ತು. ಈ ಕಾಡು ಪ್ರಾಣಿಯನ್ನು ಹಿಡಿಯುವಂತೆ ಹುದಿನೂರು, ಆನೆಗುಂಡಿ, ಮಾವನೂರು ಮಂಕನಹಳ್ಳಿ ಸುತ್ತಮುತ್ತ ರೈತರು ಅರಣ್ಯ ಇಲಾಖೆ ವಿರುದ್ಧ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.

ಹೊರ ಜಿಲ್ಲೆಗಳಲ್ಲಿ ಸೆರೆ ಹಿಡಿದ ಚಿರತೆಗಳನ್ನು ಬಿಸಲೆ ಅರಣ್ಯಕ್ಕೆ ಬಿಡಲಾಗುತ್ತಿದೆ. ಈ ಚಿರತೆ ಜನ ಜಾನುವಾರುಗಳಿಗೆ ಜೀವಭಯ
ಉಂಟು ಮಾಡಿತ್ತು. ಕೂಲಿ ಕಾರ್ಮಿಕರು ಜಮೀನಿಗೆ ಹೋಗಲು ಭಯಪಡುತ್ತಿದ್ದರು. ಕೂಡಲೇ ಸ್ಥಳಾಂತರಿಸಬೇಕೆಂದು ಬಿಸಲೆ ಅರಣ್ಯ ಭವನದ ಮುಂದೆ 15 ದಿನಗಳ ಹಿಂದೆ ಗ್ರಾಮಸ್ಥರು ಪ್ರತಿಭಟನೆ ಹಮ್ಮಿಕೊಂಡಿದ್ದರು.

ಅರಣ್ಯ ಇಲಾಖೆ ಅಧಿಕಾರಿಗಳು ಚಿರತೆಯನ್ನು ಜೀವಂತವಾಗಿ ಸೆರೆ ಹಿಡಿಯಲಾಗುವುದು ಎಂದು ಭರವಸೆ ನೀಡಿದರು. ಇಲಾಖೆ 4
ಸ್ಥಳಗಳನ್ನು ಗುರುತಿಸಿ 10 ದಿನದ ಹಿಂದೆ ಬೋನು ಇರಿಸಿತ್ತು. ಶನಿವಾರ ತಡರಾತ್ರಿ ಚಿರತೆ ಬೋನಿಗೆ ಬಿದ್ದಿದೆ.

ಇದನ್ನೂ ಓದಿ:ಬಾರದ 108, ಹೊಂಡಕ್ಕೆ ಬಿದ್ದ ಮಕ್ಕಳಿಬ್ಬರು ಸಾವು ; ಆಸ್ಪತ್ರೆಯಲ್ಲಿ ಯುವಕರಿಂದ ದಾಂಧಲೆ

Advertisement

ಬಿಸಲೆ ಅರಣ್ಯ ಪಟ್ಲಾ, ಮಂಕನಹಳ್ಳಿ, ಕುಮಾರಧಾರ ಸೇರಿದಂತೆ ಹಲವೂ ಬೆಟ್ಟಕ್ಕೆ ಹೊಂದಿಕೊಂಡಂತೆ ಇದೆ. ಅಲ್ಲದೇ, ಸುತ್ತಮುತ್ತ ಬೆಟ್ಟಗುಡ್ಡ, ಕುರುಚಲು ಗಿಡ, ನೀಲಗಿರಿ ತೋಪು ಒಳಗೊಂಡಿದೆ. ಇತ್ತೀಚಿನ ದಿನಗಳಲ್ಲಿ ಈ ಭಾಗದಲ್ಲಿ ಚಿರತೆ ಹಾವಳಿ ಹೆಚ್ಚಾಗಿತ್ತು. ರಾತ್ರಿ ವೇಳೆ ಗ್ರಾಮಗಳಿಗೆ ನುಗ್ಗಿ ನಾಯಿ, ಕರು, ಹಸು, ಕುರಿಗಳನ್ನು ತಿನ್ನುತ್ತಿದ್ದರಿಂದ ಜನ ಆತಂಕಗೊಂಡಿದ್ದರು. ಈಗ ಚಿರತೆ ಸೆರೆ ಸಿಕ್ಕಿರುವುದು ಜನರಲ್ಲಿ ಸಮಾಧಾನ ತರಿಸಿದೆ. ಇನ್ನೂ ಉಳಿದಿರುವ ಚಿರತೆಗಳನ್ನು ಕೂಡಲೇ ಸೆರೆ ಹಿಡಿಯಬೇಕೆಂದು ಸ್ಥಳೀಯರು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಮನವಿ ಮಾಡಿಕೊಂಡಿದ್ದಾರೆ. ಸೆರೆ ಸಿಕ್ಕಿರುವ ಚಿರತೆಯನ್ನು ಮುತ್ತೂಡಿ ಅರಣ್ಯಕ್ಕೆ ಬಿಡಲಾಗುವುದು ಎಂದು ಅರಣ್ಯಧಿಕಾರಿಗಳು ತಿಳಿಸಿದರು. ಕಾರ್ಯಾಚರಣೆಯಲ್ಲಿ ವಲಯ ಅರಣ್ಯಾಧಿಕಾರಿ ಮೋಹನ್‌, ಉಪವಲಯ ಅರಣ್ಯಾಧಿಕಾರಿ ನರಸಿಂಹ ಮೂರ್ತಿ, ವಿಜಯಕುಮಾರ್‌, ಸೋಮಶೇಖರ್‌ ಹಾಗೂ ಸಿಬ್ಬಂದಿ ಭಾಗವಹಿಸಿದ್ದರು.

ಉಳಿದ ಎರಡು ಚಿರತೆ ಸೆರೆ ಹಿಡಿಯೋದೆಂದು?
ಸಕಲೇಶಪುರ: ತಾಲೂಕಿನ ಪಶ್ಚಿಮಘಟ್ಟ ವ್ಯಾಪ್ತಿಯ ಬಿಸಿಲೆ ಆನೆಗುಂಡಿ ಮಾವನೂರು ಮಂಕನಹಳ್ಳಿ ಸುತ್ತಮುತ್ತ ರೈತರಿಗೆ ಹಾಗೂ ಜಾನುವಾರುಗಳಿಗೆ ಜೀವಭಯ ಉಂಟು ಮಾಡಿದ್ದ ಮೂರು ಚಿರತೆಯಲ್ಲಿ ಒಂದನ್ನು ಅರಣ್ಯ ಇಲಾಖೆ ಜೀವಂತವಾಗಿ ಸೆರೆಹಿಡಿದಿದೆ. ಆದರೆ, ಇನ್ನೆರಡು ಯಾವಾಗ ಹಿಡಿಯಲಾಗುತ್ತದೆ ಎಂಬ ಪ್ರಶ್ನೆಯನ್ನು ಮಲೆನಾಡು ಭಾಗದ ಜನ ಅರಣ್ಯ ಇಲಾಖೆ ಕೇಳುತ್ತಿದ್ದಾರೆ. 15 ದಿನಗಳ ಹಿಂದೆ ಬಿಸಿಲೆ ಸುತ್ತಮುತ್ತಲ ನೂರಾರು ಗ್ರಾಮಸ್ಥರು ಚಿರತೆ ಸೆರೆ ಹಿಡಿದು ಕೂಡಲೇ ಸ್ಥಳಾಂತರಿಸಬೇಕೆಂದು ಅರಣ್ಯ ಭವನದ ಮುಂದೆ ಪ್ರತಿಭಟನೆ ಹಮ್ಮಿಕೊಂಡಿದ್ದರು. ಬಿಸ್ಲೆ ಸುತ್ತಮುತ್ತ ಚಿರತೆ ಹಾವಳಿ ಬಗ್ಗೆ ಉದಯವಾಣಿಯಲ್ಲಿ ವರದಿ ಮಾಡಲಾಗಿತ್ತು. ಈ ಬಗ್ಗೆ ಎಚ್ಚೆತ್ತ ಅರಣ್ಯ ಇಲಾಖೆ ಚಿರತೆಯನ್ನು ಹಿಡಿಯಲು ವಿಶೇಷ ತಂಡ ರಚಿಸಿ, ಚಿರತೆ ಚಲಿಸುವ ಸ್ಥಳವನ್ನು ಗುರುತಿಸಿ, ಬಿಸ್ಲೆ ದಟ್ಟ ಅರಣ್ಯದ 4 ಸ್ಥಳದಲ್ಲಿ ವಿಶೇಷ ಬೋನ್‌ ಇಟ್ಟಿತ್ತು. ಇದೀಗ ಒಂದು ಬೋನಿನಲ್ಲಿ ಶನಿವಾರ ಮಧ್ಯರಾತ್ರಿ ಚಿರತೆ ಸೆರೆಯಾಗಿದ್ದು, ಇನ್ನೂ ಎರಡು ಚಿರತೆಗಳು ಬಿಸ್ಲೆ ಅರಣ್ಯದಲ್ಲಿ ಇದ್ದು, ಅವುಗಳನ್ನು ಸೆರೆ ಹಿಡಿಯಬೇಕೆಂದು ಸ್ಥಳೀಯರು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಮನವಿ ಮಾಡಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next