Advertisement

ಉದಯವಾಣಿ ಜನಪರ: ರಾಜಕೀಯ ಬಿಡಿ, ಜನರತ್ತ ನೋಡಿ… 

12:30 AM Feb 11, 2019 | |

ರಾಜ್ಯ ಹಲವು ಜ್ವಲಂತ ಸಮಸ್ಯೆಗಳನ್ನು ಎದುರಿಸುತ್ತಿದೆ. ಆದರೆ ನಮ್ಮ ಜನಪ್ರತಿನಿಧಿಗಳು “ಅಧಿಕಾರ’ ಉಳಿಸಲು, ಗಳಿಸಲು ನಡೆಸುತ್ತಿರುವ ಹೋರಾಟದ ನಡುವೆ ಜನರು ಅನಾಥರಾಗಿಬಿಟ್ಟಿದ್ದಾರೆ. ಸೋಮವಾರದಿಂದ ಮುಂದುವರಿಯುವ ಬಜೆಟ್‌ ಅಧಿವೇಶನದಲ್ಲಾದರೂ ರಾಜಕೀಯ ಬಿಟ್ಟು ಜನರ ಸಮಸ್ಯೆಗಳತ್ತ ಚರ್ಚೆಯಾಗಲಿ ಎನ್ನುವ ಆಶಯ ಇಡೀ ರಾಜ್ಯದ ಜನರದ್ದು. 

Advertisement

ಬರ ಗಂಭೀರ
ರಾಜ್ಯದ 156 ತಾಲೂಕುಗಳಲ್ಲಿ ಬರ ಪರಿಸ್ಥಿತಿ ನಿರ್ಮಾಣವಾಗಿದೆ. ರಾಜ್ಯ ಸರಕಾರ ಬರ ಪರಿಹಾರ ಕಾಮಗಾರಿ ಕೈಗೊಳ್ಳಲು ಸಂಪುಟ ಉಪ ಸಮಿತಿ ರಚಿಸಿ ನಾಲ್ಕು ತಂಡಗಳಾಗಿ ರಾಜ್ಯ ಪ್ರವಾಸ ಮಾಡಿ ಮಾಹಿತಿ ಪಡೆದುಕೊಂಡಿದೆ. ಆದರೆ ಈವರೆಗೂ ಪರಿಹಾರ ಕಾಮಗಾರಿ ಆರಂಭವಾಗಿಲ್ಲ. ಈ ಕುರಿತು ತುರ್ತಾಗಿ ಗಮನ ಹರಿಸಿ ವ್ಯಾಪಕ ಚರ್ಚೆ ನಡೆಯಬೇಕಿದೆ.

ಮಂಗನ ಕಾಯಿಲೆ
ರಾಜ್ಯದ ಮಲೆನಾಡು ಮತ್ತು ಕರಾವಳಿ ಭಾಗದಲ್ಲಿ ಜನರ ಜೀವಕ್ಕೆ ಕುತ್ತು ತರುತ್ತಿರುವ ಮಂಗನ ಕಾಯಿಲೆಯಿಂದ ಆ ಭಾಗದ ಸಾಮಾನ್ಯ ಜನರು ಕೈಯಲ್ಲಿ ಜೀವ ಹಿಡಿದುಕೊಂಡು ಬದುಕುತ್ತಿದ್ದಾರೆ. ಸಮರೋಪಾದಿಯಲ್ಲಿ ರೋಗ ತಡೆಗಟ್ಟಲು ರಾಜ್ಯ ಸರಕಾರ ವಿಫ‌ಲವಾಗಿದೆ ಎನ್ನುವ ಆರೋಪ ಕೇಳಿ ಬರುತ್ತಿದೆ. ಸರಕಾರ ಇದರತ್ತ ಗಮನ ನೀಡಬೇಕಾಗಿದೆ.

ಸಾಲ ಮನ್ನಾ
ರಾಜ್ಯ ಸಮ್ಮಿಶ್ರ ಸರಕಾರದ ಮಹತ್ವಾಕಾಂಕ್ಷಿ ಯೋಜನೆ ಇದಾಗಿದೆ. ಯೋಜನೆ ಘೋಷಣೆ ಮಾಡಿ 8 ತಿಂಗಳು ಕಳೆದರೂ ರಾಜ್ಯದ ಎಲ್ಲ ರೈತರಿಗೆ ಇನ್ನೂ ತಲುಪಿಸಲು ಸಾಧ್ಯವಾಗಿಲ್ಲ ಎಂಬ ಆರೋಪಗಳಿವೆ. ಇದುವರೆಗೂ 5 ಲಕ್ಷ ರೈತರಿಗೆ ಮನ್ನಾ ಸೌಲಭ್ಯ ದೊರೆತಿದೆ ಎಂಬುದು ಸರಕಾರದ ಲೆಕ್ಕಾಚಾರ. ಸಾಲ ಮನ್ನಾ ಯೋಜನೆ ಎಲ್ಲರಿಗೂ ತಲುಪುವ ಬಗ್ಗೆ ಚರ್ಚೆಯಾಗಲಿ.

ರೈತರ ಆತ್ಮಹತ್ಯೆ
ರಾಜ್ಯ ಸರಕಾರ ರೈತರ ಸಾಲ ಮನ್ನಾ ಘೋಷಣೆ ಮಾಡಿದರೂ ರಾಜ್ಯದಲ್ಲಿ ಅನ್ನದಾತರ ಆತ್ಮಹತ್ಯೆ ನಿಂತಿಲ್ಲ. ಸಾಲ ಮನ್ನಾ ಘೋಷಣೆ ಮಾಡಿದ ಮೇಲೂ 30 ಜನ ಅನ್ನದಾತರು ಅಸು ನೀಗಿರುವುದು ಕಳವಳಕಾರಿ ವಿಷಯ. ಸಾಲ ಮನ್ನಾ ಆತ್ಮಹತ್ಯೆಗೆ ಪರಿಹಾರವಾಗದಿರುವುದರಿಂದ ರೈತರಲ್ಲಿ ಆತ್ಮ ವಿಶ್ವಾಸ ಮೂಡಿಸಲು ಪರಿಹಾರೋಪಾಯ ಕಂಡುಕೊಳ್ಳಬೇಕು.

Advertisement

ಬಜೆಟ್‌ ಅನುಷ್ಠಾನ
ಬಜೆಟ್‌ ಅನುದಾನಗಳ ಬಗ್ಗೆ ಸದಸ್ಯರು ಗಂಭೀರ ಗಮನ ನೀಡಿ, ಚರ್ಚಿಸಬೇಕು. ಸಾಲ ಮನ್ನಾದಿಂದಾಗಿ ಉಳಿದ ಯೋಜನೆಗಳು ನಿರೀಕ್ಷಿತ ಮಟ್ಟದಲ್ಲಿ ಪ್ರಗತಿ ಕಂಡಿಲ್ಲ. ಆಮೆಗತಿಯಲ್ಲಿ ಸಾಗುತ್ತಿರುವ ನೀರಾವರಿ ಯೋಜನೆಗಳು, ಘೋಷಿಸಿರುವ ಯೋಜನೆಗಳು ಆರಂಭವಾಗದೇ ಇರುವುದು, ಆಶ್ರಯ ಮನೆಗಳಿಗೆ ಹಣ ಬಿಡುಗಡೆ ಮಾಡದಿರುವುದರ ಬಗ್ಗೆ ಸಾಕಷ್ಟು ಆಕ್ಷೇಪಗಳಿವೆ. 

Advertisement

Udayavani is now on Telegram. Click here to join our channel and stay updated with the latest news.

Next