ಭಾರತೀಯ ಇತಿಹಾಸ ಪರಂಪರೆಯಲ್ಲಿ ಹಬ್ಬ ಆಚರಣೆಗಳಿಗೆ ಅದರದ್ದೇ ಆದ ರೀತಿ ರಿವಾಜು ಇರುವುದು ಸಾಮಾನ್ಯ. ಇಂತಹ ಆಚರಣೆಗಳ ಸಾಲಿನಲ್ಲಿ ಪಿತೃಪಕ್ಷ ಕೂಡ ಒಂದು. ವರ್ಷಕ್ಕೊಮ್ಮೆ ಬರುವಂತಹ ಮಹಾಲಯ ಅಮಾವಾಸ್ಯೆಗೆ ನಮ್ಮನ್ನು ಬಿಟ್ಟು ಅಗಲಿದಂತಹ ಗುರು – ಹಿರಿಯರಿಗೆ ಮೀದಿ (ಎಡೆ) ಇಡುವುದು, ಹಲವಾರು ಬಗೆಯ ಅಡಿಗೆ ತಿಂಡಿ ತಿನಿಸುಗಳನ್ನು ಮಾಡಿ ಅದನ್ನು ಮನೆಯ ಸೂರಿನ ಮೇಲೆ ಕಾಗೆಗಳಿಗೆ ಇಟ್ಟು ನಮ್ಮನ್ನು ಅಗಲಿದವರನ್ನು ಸ್ಮರಿಸಲೆಂದೆ ಈ ಆಚರಣೆ ಅನೇಕ ವರ್ಷದಿಂದ ಪಿತೃಪಕ್ಷದ ಎಡೆ ಸಂಪ್ರದಾಯ ಎಂದು ರೂಢಿಯಲ್ಲಿ ಇದೆ.
ವಿಶೇಷತೆ ಏನು?
ಪಿತೃಪಕ್ಷದ ಪೂಜೆಗೆ ನಮ್ಮ ಹಿರಿಯರು ಇಷ್ಟ ಪಡುತಿದ್ದ ತಿಂಡಿ ತಿನಿಸುಗಳಿಗೆ ಮೊದಲ ಆದ್ಯತೆ ನೀಡಲಾಗುವುದು. ಮಾಂಸಾಹಾರ, ಸಸ್ಯಾಹಾರ, ಖರಿದ ಆಹಾರ ಮಾತ್ರ ವಲ್ಲದೆ ಎಲೆ ಅಡಿಕೆ, ಮದ್ಯ ಕೂಡ ಇಡುವವರಿದ್ದಾರೆ. ಇದನ್ನು ದೂಪ ದೀಪಗಳ ಪೂಜೆ ಮಾಡಿ ಮನೆ ಹೊರಗಿಟ್ಟು ಬಳಿಕ ಅದನ್ನು ಕಾಗೆಗೆ ಎಡೆ ಇಡಲಾಗುವುದು. ಹೀಗೆ ಎಡೆ ಇಟ್ಟಿದ್ದನ್ನು ಕಾಗೆ ಮುಟ್ಟಿದ್ದ ಬಳಿಕವಷ್ಟೆ ಕುಟುಂಬಸ್ಥರು ಜತೆಯಾಗಿ ಕುಳಿತು ಎಡೆ ಊಟ ಮಾಡುತ್ತಾರೆ. ಇನ್ನು ಕೆಲವೆಡೆ ಸಂಬಂಧಿಕರಿಗೂ ಊಟ ಹಾಕಿಸುತ್ತಾರೆ.
ಇದರಲ್ಲಿ ಪರದಾಟವೆಂದರೆ ಮನೆಯ ಮೇಲಿಟ್ಟ ಎಡೆಯನ್ನು ಕಾಗೆ ತಿನ್ನಲು ಬಂದಿಲ್ಲ ಎಂದರೆ ಅಯ್ಯೋ ನಮ್ಮ ಹಿರಿಯರು ನಮ್ಮ ಮೇಲೆ ಮುನಿಸಿಕೊಂಡಿದ್ದಾರೆ ಎನ್ನುತ್ತಾರೆ.
ಅದೊಂದು ದಿನ ಮಾತ್ರ ಕಾಗೆ ಕಂಡರೆ ಎಲ್ಲರಿಗೂ ಭಾರಿ ಪ್ರೀತಿ. ಮನೆಗೆ ನೆಂಟರು ಬರುವಾಗ ಆಗಾಗ ಹೋಗಿ ಮನೆಯ ಗೇಟ್ ನೋಡುವ ಹಾಗೆ ಕಾಗೆಗೆ ಇಟ್ಟ ಪಿತೃಪಕ್ಷದ ಮೀದಿ (ಎಡೆ)ಯನ್ನು ನೋಡುವುದು ಯಾವುದಾದರೂ ಕಾಗೆ ಬಂದು ತಿನ್ನುತ್ತಿದೆನೋ ಎಂದು. ಬೇರೆ ದಿನ ಮನೆ ಮುಂದೆ ಕಾಗೆ ಬಂದು ಒಮ್ಮೆ ಕಾಕಾ ಎಂದರೆ ಸಾಕು ಅಯ್ಯೋ ಹೋಗು ಹಾಗೆ ಮನೆಯ ಮುಂದೆ ಕೂಗಬಾರದು ಎಂದು ಅಲ್ಲೇ ಇರುವಂತಹ ಸಣ್ಣ ಕಲ್ಲು ಎಸೆದು ಅದನ್ನು ಮನೆಯಿಂದ ಓಡಿಸಿದರೆ ಸಮಾಧಾನ ನೋಡಿ ನಮ್ಮ ಹಿರಿಯರಿಗೆ. ಅದೇ ಪಿತೃಪಕ್ಷದಲ್ಲಿ ಕಾಗೆ ಕಾಣದೆ ಪರದಾಟ, ಹಾಗೆಯೇ ಇಂದಿನ ದಿನಗಳಲ್ಲಿ ಪಕ್ಷಿಗಳ ಸಂಕುಲವೇ ಮರೆಯಾಗುವ ಅಂಚಿನಲ್ಲಿದೆ ಮಾನವನ ಅತೀಯಾದ ಅನ್ವೇಷಣೆ ಅತಿಯಾದ ಟವರ್ ಸಿಗ್ನಲ್‌ಗಳು 2ಜಿ ಗಳಿಂದ 5ಜಿಗೆ ಬಂದು ತಲುಪಿದೆ.
ಹೀಗೆ ಆದರೆ ಕಾಗೆ ಇನ್ನಿತರ ಪಕ್ಷಿಗಳು ಎಲ್ಲಿಂದ ಬರುತ್ತದೆ ಹೇಳಿ, ಮನೆಯ ಮುಂದೆ ಬಂದು ಕಾಕಾ ಎಂದರೇ ಒಂದು ಹಿಡಿ ಅನ್ನ ಅಥವಾ ಪುರಿಮಂಡಕ್ಕಿ ಹಾಕುವುದು ಬಿಟ್ಟು ಬೆದರಿಸಿ, ಓಡಿಸಿದರೆ ಕಾಗೆ ಬರುವುದಿಲ್ಲ, ಮುಂದಿನ ಪೀಳಿಗೆಯಲ್ಲಿ ಪಕ್ಷಿಗಳು ಪೂರ್ಣವಾಗಿ ಮರೆಯಾಗುವ ಸಂದರ್ಭವು ಬರಬಹುದು ಅನಂತರ ಪಿತೃಪಕ್ಷ ಮಾಡಿ ಮನೆಯ ಸೂರಿನ ಮೇಲೆ ಕಾಗೆ ಫೋಟೋ ಇಟ್ಟು ಎಡೆ ಇಡಬೇಕಾಗುತ್ತದೆ. ಶುಭ, ಅಶುಭ ಇವೆಲ್ಲವೂ ಪ್ರಾಣಿ, ಪಕ್ಷಿಗಳಿಗೆ ತಿಳಿದಿಲ್ಲ ಇವೆಲ್ಲವೂ ನಮ್ಮಂತಹ ಅತಿರೇಕದ ಮಾನವರಿಗೆ ತಿದಿರುವುದು ಅಷ್ಟೇ.
- ನಯನ ನಾಯಕ್
ಪೊನ್ನಂಪೇಟೆ