Advertisement

ಬಹುರೂಪಿ ಜಾನಪದ ಪ್ರಕ್ರಿಯೆ: ಸಾಮಗ್ರಿಯಿಂದ ಸಂಬಂಧದೆಡೆಗೆ

06:00 AM Dec 16, 2018 | |

ಪ್ರೊ. ಲೌರಿ ಹಾಂಕೊ ಸಂಪರ್ಕದ ಫೆಬ್ರವರಿ 1989ರ ಜಾನಪದ ತರಬೇತಿ ಶಿಬಿರದ ಬಳಿಕ 1989ರಿಂದ ತೊಡಗಿ 1999ವರೆಗೆ ನಾನು ಎಂಟು ಬಾರಿ ಫಿನ್ಲಂಡ್‌ಗೆ ಹೋದೆ; ಅಲ್ಲಿ ಜನಪದ ಮಹಾಕಾವ್ಯಗಳನ್ನು ಕುರಿತ ಅಂತಾರಾಷ್ಟ್ರೀಯ ವಿಚಾರಸಂಕಿರಣ ಮತ್ತು ಕಮ್ಮಟಗಳಲ್ಲಿ ಭಾಗವಹಿಸಿದೆ. ಫಿನ್ಲಂಡ್‌ನ‌ ತುರ್ಕು ವಿವಿಯಲ್ಲಿ ಹಾಂಕೊ ದಂಪತಿಗಳ ಜೊತೆಗೆ ನಾನು ಮತ್ತು ಚಿನ್ನಪ್ಪಗೌಡರು 1991ರಿಂದ 1996ರವರೆಗೆ ಪ್ರತೀವರ್ಷ ಸುಮಾರು ಎರಡು ತಿಂಗಳುಗಳ ಕಾಲ ವಾಸ್ತವ್ಯ ಇದ್ದು, ಗೋಪಾಲ ನಾಯ್ಕರ ಸಿರಿ ಕಾವ್ಯದ ಲಿಪ್ಯಂತರ ಮತ್ತು ಇಂಗ್ಲಿಷ್‌ ಅನುವಾದದ ಕೆಲಸವನ್ನು ನಿರ್ವಹಿಸಿದೆವು. ಧ್ವನಿಮುದ್ರಿತ ಕ್ಯಾಸೆಟ್‌ಗಳನ್ನು ಪ್ಲೇ ಮಾಡಿ ಆಲಿಸಿ ಬರೆದುಕೊಳ್ಳಲು ಅನುಕೂಲವಾಗುವ ಹೊಸಮಾದರಿಯ ಒಂದು ಕ್ಯಾಸೆಟ್‌ಪ್ಲೇಯರ್‌ನ್ನು ಹಾಂಕೊ ಒದಗಿಸಿದರು. ಅದರಲ್ಲಿ ಹೊಲಿಗೆ ಯಂತ್ರದ ಹಾಗೆ ಕಾಲಿನಲ್ಲಿಯೇ ಬಟನ್‌ಗಳನ್ನು ಒತ್ತಿ ಹಿಂದಕ್ಕೆ ಮುಂದಕ್ಕೆ ಮಾಡುವ ಮತ್ತು ನಿಲ್ಲಿಸುವ ಅನುಕೂಲ ಇತ್ತು. ಅದು ನನಗೆ ಇಷ್ಟವಾಯಿತು. ನಾನು ಅದರಲ್ಲಿಯೇ ಹೆಡ್‌ಫೋನ್‌ ಬಳಸಿ ಪಾಡªನವನ್ನು ಆಲಿಸಿ ಚಿನ್ನಪ್ಪಗೌಡರಿಗೆ ಹೇಳುತ್ತಿದ್ದೆ. ಅವರು ಅದನ್ನು ಕಾಗದದಲ್ಲಿ ಬರೆದುಕೊಳ್ಳುತ್ತಿದ್ದರು. 

Advertisement

ಲೌರಿ ಹಾಂಕೊ ಅವರ ನಿರ್ದೇಶನದಲ್ಲಿ 1991 ಜುಲೈ 29ರಿಂದ ಆಗಸ್ಟ್ 14ರವರೆಗೆ ಫಿನ್ಲಂಡ್‌ನ‌ ತುರ್ಕುವಿನಲ್ಲಿ ನಡೆದ ಮೊತ್ತಮೊದಲನೆಯ ಫೋಕ್‌ಲೋರ್‌ ಫೆಲೋಸ್‌ ಸಮ್ಮರ್‌ ಸ್ಕೂಲ್ ಜಾನಪದ ಅಧ್ಯಯನದ ಅಂತಾರಾಷ್ಟ್ರೀಯ ತರಬೇತಿ ಶಿಬಿರವಾಗಿ ಮಹತ್ವದ್ದಾಗಿತ್ತು. ಇದರಲ್ಲಿ ನಾನು ಅಧ್ಯಾಪಕನಾಗಿ ಭಾಗವಹಿಸಿದ್ದು ನನ್ನ ಶೈಕ್ಷಣಿಕ ಬದುಕಿನ ದೊಡ್ಡ ಅವಕಾಶ. 17 ದಿನಗಳ ಕಾಲ ನಡೆದ ಈ ಬೇಸಗೆ ಶಿಬಿರದಲ್ಲಿ 24 ದೇಶಗಳಿಂದ 30 ಶಿಬಿರಾರ್ಥಿಗಳು, 7 ದೇಶಗಳಿಂದ 14 ಅಧ್ಯಾಪಕರು, 12 ಸಂಪನ್ಮೂಲ ವ್ಯಕ್ತಿಗಳು ಭಾಗವಹಿಸಿದರು. ಭಾರತದ ಶಿಬಿರಾರ್ಥಿಗಳಲ್ಲಿ ಕರ್ನಾಟಕದಿಂದ ಚಿನ್ನಪ್ಪ ಗೌಡ ಮತ್ತು ತೀ. ನಂ. ಶಂಕರನಾರಾಯಣ ಹಾಗೂ ದೆಹಲಿಯಿಂದ ಅಭಯ ಮೌರ್ಯ ಇದ್ದರು. ಶಿಬಿರದಲ್ಲಿ ನಾನು ಕೊಟ್ಟ ಎರಡು ಉಪನ್ಯಾಸಗಳು: pplied Folklore: Strategies and Problems of developing countries ಮತ್ತು Feminist Perspective in Folklore Studies: Indian context.  ಜಗತ್ತಿನ ಶ್ರೇಷ್ಠ ಜಾನಪದ ವಿದ್ವಾಂಸರ ಉಪನ್ಯಾಸಗಳನ್ನು ಕೇಳುವ ಅವಕಾಶ ದೊರೆಯಿತು: ಲೌರಿ ಹಾಂಕೊ, ಅನ್ನಾ ಲೀನಾ ಶಿಕಾಲ, ಐಲಿ ನೆನೋಲ (ಫಿನ್ಲಂಡ್‌), ಬಾಬ್ರೋ ಕ್ಲೈನ್‌ (ಸ್ವೀಡನ್‌), ಬೆಂತೆ ಅಲ್ವೆರ್‌ (ನಾರ್ವೆ), ಬೆಂಗಗ್ಟ್ ಹಾಲ್ಬೆಕ್‌ (ಡೆನ್ಮಾರ್ಕ್‌), ಹರ್ಮನ್‌ ಬೌಸಿಂಗರ್‌ (ಜರ್ಮನಿ), ರೋಜರ್‌ ಅಬ್ರಹಾಂ ಮತ್ತು ಹೆನ್ರಿ ಗ್ಲಾಸ್ಸಿ (ಅಮೇರಿಕ). ಈ ಬೇಸಗೆ ಶಿಬಿರದಲ್ಲಿ ಉಪನ್ಯಾಸಗಳು, ಪ್ರಾಯೋಗಿಕ ತರಬೇತಿಯ ಜೊತೆಗೆ ಕ್ಷೇತ್ರಕಾರ್ಯದ ಭಾಗವೂ ಇತ್ತು. ಇದಕ್ಕಾಗಿ ಶಿಬಿರಾರ್ಥಿ ಮತ್ತು ಅಧ್ಯಾಪಕರನ್ನು ಮೂರು ತಂಡಗಳನ್ನಾಗಿ ವಿಂಗಡಿಸಿ, ನಿರ್ದಿಷ್ಟ ಸ್ಥಳಗಳಲ್ಲಿ ಉದ್ದೇಶಿತ ಕ್ಷೇತ್ರಕಾರ್ಯದ ಜವಾಬ್ದಾರಿ ಹಂಚಿದರು. ನಮ್ಮ ತಂಡದಲ್ಲಿ ಅಧ್ಯಾಪಕರಾಗಿ ನಾನು ಮತ್ತು ಸ್ವೀಡನ್‌ನ ಬಾಬ್ರೋರ್‌ ಕ್ಲೇಯ್ನ ಇದ್ದೆವು ಮತ್ತು ಐಸ್‌ಲೇಂಡ್‌, ಪೋಲೆಂಡ್‌, ನಾರ್ವೆ, ಐರ್ಲೆಂಡ್‌, ರೊಮೇನಿಯದ ಶಿಬಿರಾರ್ಥಿಗಳು ಇದ್ದರು. ನಮ್ಮ ತಂಡದ ಕ್ಷೇತ್ರಕಾರ್ಯದ ಸ್ಥಳ ಮತ್ತು ಗುರಿ- ಒಂದು ದ್ವೀಪಕ್ಕೆ ದೋಣಿಯಲ್ಲಿ ಹೋಗಿ, ಅಲ್ಲಿ ಮೀನುಗಾರರು ಮೀನುಗಳನ್ನು ಹೊಗೆಯಲ್ಲಿ ಬೇಯಿಸುವ (ಸ್ಮೋಕಿಂಗ್‌ ಫಿಶ್‌) ಪ್ರಕ್ರಿಯೆಯನ್ನು ದಾಖಲಿಸುವುದು, ಅವರ ಜೊತೆಗೆ ಸಂದರ್ಶನ ನಡೆಸುವುದು. ಕ್ಷೇತ್ರಕಾರ್ಯಕ್ಕೆ ಹೊರಡುವ ಮೊದಲು ಬಾಬ್ರೋì ಕ್ಲೇಯ್ನ ನಮ್ಮ ತಂಡದ ಎಲ್ಲರಿಗೂ ಕೆಲಸಗಳನ್ನು ಹಂಚಿದರು. ನನಗೆ ಒಪ್ಪಿಸಿದ ಉದ್ಯೋಗವೆಂದರೆ ಸೂಪರ್‌ ವಿಎಚ್‌ಎಸ್‌ ವಿಡಿಯೋ ಕೆಮರಾವನ್ನು ಎತ್ತಿಕೊಂಡು ಉದ್ದೇಶಿತ ಚಟುವಟಿಕೆಗಳನ್ನು ರೆಕಾರ್ಡ್‌ಮಾಡುವುದು. ಇದನ್ನು ಕೇಳಿದೊಡನೆ ನನಗೆ ಅಸಮಾಧಾನ ಆಯಿತು: “ನಾನು ಆಹ್ವಾನಿತನಾದದ್ದು ಶಿಬಿರಕ್ಕೆ ಅಧ್ಯಾಪಕ ಆಗಿ. ಮಂಗಳೂರು ವಿವಿಯಲ್ಲಿ ನಾನು ಪ್ರೊಫೆಸರ್‌. ನನ್ನಲ್ಲಿ ವಿಡಿಯೋಕೆಮರಾ ಹೊರಿಸುವುದು, ಒಮ್ಮೆಯೂ ವಿಡಿಯೋ ಕೆಮರಾ ಬಳಸದ ನನ್ನಲ್ಲಿ ರೆಕಾರ್ಡ್‌ ಮಾಡಲು ಹೇಳುವುದು’. ಆದರೂ ತಾಳ್ಮೆ ತಂದುಕೊಂಡು ಬಿರುಸು ಧ್ವನಿಯಲ್ಲಿ ಹೇಳಿದೆ: “ನನಗೆ ವಿಡಿಯೋ ಕೆಮರಾ ಬಳಸಿ ಗೊತ್ತಿಲ್ಲ. ಇಷ್ಟಕ್ಕೆ ಅವರು ಬಿಟ್ಟುಬಿಡುತ್ತಾರೆ ಎಂದು ಅಂದುಕೊಂಡಿದ್ದೆ. ಆದರೆ, ಹಾಗೆ ಆಗಲಿಲ್ಲ. ಐಸ್‌ಲೇಂಡ್‌ನ‌ ಒಲಿನಾ “ನಾನು ಕಲಿಸಿಕೊಡುತ್ತೇನೆ’ ಎಂದು ಹೇಳಿ ಮಣಭಾರದ ವಿಡಿಯೋ ಕೆಮರಾವನ್ನು ನನ್ನ ಹೆಗಲ ಮೇಲೆ ಇಟ್ಟು, ಕೆಮರಾವನ್ನು ಆನ್‌ ಮಾಡುವುದನ್ನು ತೋರಿಸಿ, ಲೆನ್ಸ್ನ್ನು ಬಳಸುವುದನ್ನು ಪ್ರಾಯೋಗಿಕವಾಗಿ ಮಾಡಿ ತೋರಿಸಿದಳು. ಯಾವುದೇ ದೃಶ್ಯದ ಮೇಲೆ ಹೆಚ್ಚು ಕೇಂದ್ರೀಕರಿಸಬೇಕಾದರೆ, ಲೆನ್ಸ್ನ್ನು ಝೂಮ… ಮಾಡುವುದನ್ನು ಹೇಳಿ, ನನ್ನಿಂದ ಮತ್ತೆ ಮತ್ತೆ ಮಾಡಿಸಿದಳು. ಹೀಗೆ ಹದಿನೈದು ನಿಮಿಷಗಳ ಕಾಲ ಅವಳ ಸೆರೆಯಲ್ಲಿ ಉಳಿದ ಶಿಬಿರಾರ್ಥಿಗಳ ಎದುರು ನಾನು ವಿದ್ಯಾರ್ಥಿಯಾದೆ. ಹೊಸವಿದ್ಯೆಯೊಂದನ್ನು ಕಲಿತ ಹುಮ್ಮಸ್ಸಿನಲ್ಲಿ ಸಿಟ್ಟು-ದುಃಖ ಮಾಯವಾಯಿತು. ಸರೋವರದಲ್ಲಿ ಸಾಗುವಾಗ ದೋಣಿಯಲ್ಲಿ ನಿಂತುಕೊಂಡು ನನಗೆ ಖುಷಿ ಬಂದ ಹಾಗೆ ರೆಕಾರ್ಡ್‌ಮಾಡಲು ಸುರುಮಾಡಿದೆ. ದ್ವೀಪಕ್ಕೆ ಬಂದ ಬಳಿಕ ಮೀನುಗಳನ್ನು ಸ್ಮೋಕ್‌ ಮಾಡುವಾಗ, ಹೊಸತಾಗಿ ಕಲಿತ ಉತ್ಸಾಹದಲ್ಲಿ ಕೆಮರಾವನ್ನು ಸುಮ್ಮನೆ ಝೂಮ… ಆನ್‌ ಆಫ್ ಮಾಡುತ್ತಿದ್ದೆ. ಸಾಹಿತ್ಯವಿಮರ್ಶೆಯ ಓದಿನ ಹಿನ್ನೆಲೆಯಲ್ಲಿ ನಿರ್ಲಕ್ಷಿತ ಸಂಗತಿಗಳನ್ನು ರೆಕಾರ್ಡ್‌ ಮಾಡಿಕೊಂಡೆ. ಮರಳಿನಲ್ಲಿ ಆಟ ಆಡುತ್ತಿದ್ದ ಮಕ್ಕಳು, ಹೆಂಗುಸರ ಪ್ರತಿಕ್ರಿಯೆಯ ದೈಹಿಕ ಸಂಜ್ಞೆಗಳು, ಹೊಗೆಯಲ್ಲಿ ಮೀನುಗಳ ಒದ್ದಾಟ, ಹೊಗೆ ಸುರುಳಿ ಸುರುಳಿಯಾಗಿ ಬಲೆಯ ಹಾಗೆ ಕಾಣಿಸುವ ನೋಟ- ಹೀಗೆ ನನಗೆ ಇಷ್ಟಬಂದ ಹಾಗೆ ಕೆಮರವನ್ನು ತಿರುಗಿಸುತ್ತ ಹೋದೆ. ನಾನು ಅಲ್ಲಿ ನಿರಂಕುಶಮತಿಯಾಗಿದ್ದೆ. ನಮ್ಮ ದಾಖಲಾತಿಯ ಸಾಮಗ್ರಿಗಳನ್ನು ಒಲಿನಾ ಕಂಪ್ಯೂಟರ್‌ನಲ್ಲಿ ಎಡಿಟ್‌ ಮಾಡಿ, ಡಾಕ್ಯುಮೆಂಟರಿಯನ್ನು ತಯಾರಿಸಿದಳು. ಶಿಬಿರದ ಕೊನೆಯ ದಿನ ಮೂರು ತಂಡಗಳ ಕ್ಷೇತ್ರಕಾರ್ಯಗಳ ಡಾಕ್ಯುಮೆಂಟರಿಗಳ ಪ್ರದರ್ಶನ ಇತ್ತು. ನಮ್ಮ ತಂಡದ ಡಾಕ್ಯುಮೆಂಟರಿ ಅತ್ಯುತ್ತಮ ಎಂಬ ಶಿಫಾರಸು ಸಿಕ್ಕಿತು, “ಯಾರು ಅದರ ಕೆಮರಾಮೆನ್‌?’ ಎಂದು ಕೇಳಿದರು. ನಾನು ಎದ್ದುನಿಂತೆ. ನನಗೆ ಚಪ್ಪಾಳೆಯ ಅಭಿನಂದನೆ ಸಿಕ್ಕಿತು. “ಜಾನಪದ ವಿದ್ವಾಂಸರು ಸಿದ್ಧಾಂತ ಮತ್ತು ಕ್ಷೇತ್ರಕಾರ್ಯಗಳಲ್ಲಿ ಆಲ…ರೌಂಡರ್‌ ಆಗಿರಬೇಕು’ ಎನ್ನುವ ದೊಡ್ಡ ಪಾಠವನ್ನು ನಾನು ಕಲಿತದ್ದು ಫಿನ್ಲಂಡ್‌ನ‌ ಆ ಬೇಸಗೆ ಶಿಬಿರದಲ್ಲಿ. 

ಲೌರಿ ಹಾಂಕೊ ಅವರು ಸಿರಿ ಕಾವ್ಯದ ಪಠಿಕರಣದ ಬಗ್ಗೆ ತಮ್ಮ Textualising the Siri Epic’ (Helsinki 1998) ಗ್ರಂಥದಲ್ಲಿ ವಿವರವಾಗಿ ಚರ್ಚಿಸಿದ್ದಾರೆ. ಗೋಪಾಲ ನಾಯ್ಕರಂತಹ ಒಬ್ಬ ಕಲಾವಿದರನ್ನು ಕೇವಲ ಮಾಹಿತಿದಾರರಾಗಿ ನೋಡದೆ ಅವರನ್ನು “ಸಂಶೋಧನೆಯ ಸಹಭಾಗಿ’ ಎಂದು ಪರಿಗಣಿಸಿ, ತಮ್ಮ ಬರಹಗಳಲ್ಲಿ ಗೋಪಾಲ ನಾಯ್ಕರ ಅಭಿಪ್ರಾಯಗಳನ್ನು ಪ್ರಮುಖವಾಗಿ ಉಲ್ಲೇಖೀಸಿದ್ದಾರೆ. ಫಿನ್ಲಂಡ್‌ನ‌ಲ್ಲಿ ನಡೆದ ಎಲ್ಲ ಅಂತಾರಾಷ್ಟ್ರೀಯ ಸೆಮಿನಾರ್‌ಗಳಲ್ಲಿ ಹಾಂಕೊ ಅವರು ಜನಪದ ಮಹಾಕಾವ್ಯದ ನಿರ್ಮಾಣದ ಬಗ್ಗೆ ಗೋಪಾಲ ನಾಯ್ಕರ ಮಾತುಗಳನ್ನೇ ಉಲ್ಲೇಖೀಸಿರುವುದರಿಂದ ಭಾರತದ ಕಲಾವಿದರೊಬ್ಬರಿಗೆ ಜಾಗತಿಕ ಚಿಂತಕರ ಜೊತೆಗೆ ಸ್ಥಾನ ಲಭ್ಯವಾಗಿದೆ. ಈ ನಿಲುವು “ಜಾನಪದ ಕಲಾವಿದರ ಬಗ್ಗೆ ಮಾತ್ರ ಗೌರವ ಇಟ್ಟುಕೊಳ್ಳದೆ ಅವರ ವಿಚಾರಧಾರೆಗಳಿಗೂ ಬೌದ್ಧಿಕ ವಲಯದಲ್ಲಿ ಸ್ಥಾನ ಕೊಡಬೇಕು’ ಎನ್ನುವ ಹೊಸ ಲೋಕದೃಷ್ಟಿಯನ್ನು ಹುಟ್ಟುಹಾಕಿತು.

ಉಡುಪಿಯ ಆರ್‌ಆರ್‌ಸಿಯ ಆಶ್ರಯದಲ್ಲಿ ಫೋರ್ಡ್‌ ಫೌಂಡೇಶನ್‌ ನೆರವಿನಿಂದ 1988-89ರಲ್ಲಿ ನಡೆಸಿದ ನಾಲ್ಕು ಅಂತಾರಾಷ್ಟ್ರೀಯ ಜಾನಪದ ಕಮ್ಮಟಗಳು ಕರ್ನಾಟಕ ಮತ್ತು ಆಂಧ್ರಗಳಲ್ಲಿ ಹೊಸಪೀಳಿಗೆಯ ಜಾನಪದ ಸಂಶೋಧಕರ ತಂಡ ನಿರ್ಮಾಣವಾಗಲು ಕಾರಣವಾದುವು. ಅವುಗಳಲ್ಲಿ ಮೊದಲನೆಯ ಕಮ್ಮಟ ಉಡುಪಿಯಲ್ಲಿ 1988 ಎಪ್ರಿಲ್‌ 18ರಿಂದ ಮೇ 13ರವರೆಗೆ ನಡೆಯಿತು. ಇದರಲ್ಲಿ ಅಮೆರಿಕದ ಮಾನವಶಾಸ್ತ್ರಜ್ಞ ಪೀಟರ್‌ ಜೆ. ಕ್ಲಾಸ್‌, ಜಾನಪದ ಸಂಶೋಧಕ ಫ್ರಾಂಕ್‌ ಕೊರೊಮ… ಮತ್ತು ನಾನು ಅಧ್ಯಾಪಕರಾಗಿ ಭಾಗವಹಿಸಿದೆವು. ಇದರಲ್ಲಿ 19 ಮಂದಿ ಯುವ ಸಂಶೋಧಕರು ಶಿಬಿರಾರ್ಥಿಗಳಾಗಿ ತರಬೇತಿ ಪಡೆದರು. ಅವರಲ್ಲಿ ಹೆಚ್ಚಿನವರು ಮುಂದೆ ಕರ್ನಾಟಕದ ಮುಖ್ಯ ಜಾನಪದ ವಿದ್ವಾಂಸರಾಗಿ ರೂಪುಗೊಂಡರು. ಈ ಸರಣಿಯ ಎರಡನೆಯ ಕಮ್ಮಟ ಮೈಸೂರಿನಲ್ಲಿ ನಡೆದಾಗ ಅದರಲ್ಲಿ ಅಧ್ಯಾಪಕರಾಗಿ ಎ. ಕೆ. ರಾಮಾನುಜನ್‌ ಮತ್ತು ಅಮೆರಿಕದ ಜಾನಪದ ವಿದ್ವಾಂಸ ಅಲನ್‌ ಡಂಡಸ್‌ ಪಾಠಮಾಡಿದರು. ಅವರ ಪಾಠ ಕೇಳುವುದಕ್ಕಾಗಿಯೇ ನಾನು ಮೈಸೂರಿಗೆ ಹೋಗಿ ಅವರ ತರಗತಿಗಳಲ್ಲಿ ಕುಳಿತುಕೊಂಡೆ. ಆ ಕಾಲಕ್ಕೆ ಅಲನ್‌ ಡಂಡಸ್‌ ಅವರ ಸಂರಚನಾತ್ಮಕ, ಮನೋವಿಶ್ಲೇಷಕ ಜಾನಪದ ಸಿದ್ಧಾಂತಗಳಿಂದ ಪ್ರಭಾವಿತನಾಗಿದ್ದ ನಾನು ಅವರನ್ನು ಮಂಗಳೂರು ವಿವಿಗೆ ಆಹ್ವಾನಿಸಿದೆ.  ಡಂಡಸ್‌ ಅವರು ಮಂಗಳೂರು ವಿವಿ ಕನ್ನಡ ವಿಭಾಗದ ಆಶ್ರಯದಲ್ಲಿ 1988 ಆಗಸ್ಟ್ Folklore in the Modern World ಎಂಬ ವಿಷಯದ ಉಪನ್ಯಾಸ ಕೊಟ್ಟರು. 

ಪ್ರೊ. ಜೀ. ಶಂ. ಪರಮಶಿವಯ್ಯ ಅವರು ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿಯ ಅಧ್ಯಕ್ಷರಾಗಿದ್ದಾಗ 1992-95ರ ಅವಧಿಯಲ್ಲಿ ನಾನು ಅಕಾಡೆಮಿಯ ಸದಸ್ಯನಾಗಿದ್ದೆ. ಮೈಸೂರು ವಿವಿಯಲ್ಲಿ ಜಾನಪದ ಪ್ರೊಫೆಸರ್‌ ಆಗಿದ್ದ ಜೀಶಂಪ ಅವರು ಅಧ್ಯಯನ, ಸಂಶೋಧನೆ ಮತ್ತು ಕಲಾವಿದರ ಸಂಪರ್ಕದ ದೃಷ್ಟಿಯಿಂದ ನಾನು ಕಂಡ ಅಪೂರ್ವ ವಿದ್ವಾಂಸ. ಅವರ ಅಧ್ಯಕ್ಷತೆಯ ಕಾಲದಲ್ಲಿ ಸದಸ್ಯನಾಗಿ ನನಗೆ ಸಮಗ್ರ ಕರ್ನಾಟಕದ ಜಾನಪದ ಕಲಾವಿದರ ಮತ್ತು ಕಲೆಗಳ ಪರಿಚಯವಾಯಿತು. ಅವರ ನಿರ್ದೇಶನದಲ್ಲಿ ತುಮಕೂರು ಜಿಲ್ಲೆಯ ಕೊನೆಹಳ್ಳಿಯಲ್ಲಿ ನಡೆದ ಮೂಡಲಪಾಯ ಯಕ್ಷಗಾನದ ಭಾಗವತರ ಹಾಡುವಿಕೆಯ ದಾಖಲೀಕರಣದ ಕಮ್ಮಟದಲ್ಲಿ ಒಂದು ವಾರದ ನನ್ನ ಗ್ರಾಮವಾಸ್ತವ್ಯ ಅವಿಸ್ಮರಣೀಯ. 

Advertisement

ದಕ್ಷಿಣಭಾರತ ಭಾಷೆಗಳ ಜಾನಪದ ಸಂಸ್ಥೆ  (FOSSILS) ಯಲ್ಲಿ ನಾನು ಆರಂಭದಿಂದಲೂ ಸದಸ್ಯ ಆಗಿದ್ದೆ. 1995-2005 ಅವಧಿಯಲ್ಲಿ ಆ ಸಂಸ್ಥೆಯ ಉಪಾಧ್ಯಕ್ಷ ಆಗಿದ್ದೆ. ಕರ್ನಾಟಕ, ಆಂಧ್ರಪ್ರದೇಶ, ತಮಿಳುನಾಡು, ಕೇರಳ ರಾಜ್ಯಗಳ ಜಾನಪದ ಸಂಶೋಧಕರು ಸದಸ್ಯರಾಗಿರುವ ಈ ಸಂಸ್ಥೆಯು ಕಳೆದ 25 ವರ್ಷಗಳಿಂದ ಪ್ರತಿವರ್ಷ ಒಂದೊಂದು ರಾಜ್ಯದಲ್ಲಿ ಮೂರು ದಿನಗಳ ವಾರ್ಷಿಕ ಸಮ್ಮೇಳನಗಳನ್ನು ನಡೆಸುತ್ತಿದೆ. 1994ರಿಂದ ತೊಡಗಿ ನಾನು ಹೆಚ್ಚಿನ ವಾರ್ಷಿಕ ಸಮ್ಮೇಳನಗಳಲ್ಲಿ ಭಾಗವಹಿಸಿದ್ದೇನೆ. ಇದರಿಂದಾಗಿ ದ್ರಾವಿಡ ಜಾನಪದದ ಬಗ್ಗೆ ತಿಳಿದುಕೊಳ್ಳಲು ಮತ್ತು ತೌಲನಿಕವಾಗಿ ಅಧ್ಯಯನಮಾಡಲು ಅನುಕೂಲವಾಯಿತು. ಈ ಸಂಸ್ಥೆಯ ಆಧಾರಸ್ತಂಭಗಳಾಗಿರುವ ಆಂಧ್ರಪ್ರದೇಶದ ಪ್ರೊ. ಭಕ್ತವತ್ಸಲ ರೆಡ್ಡಿ ಮತ್ತು ಕೇರಳದ ಪ್ರೊ. ರಾಘವನ್‌ ಪಯ್ಯನಾಡ್‌ ಅವರ ಬದ್ಧತೆ ಮತ್ತು ಸ್ನೇಹ ನನಗೆ ಬಹಳ ಮಹತ್ವದ್ದಾಗಿ ಕಂಡಿದೆ.  

ಮೈಸೂರಿನ ಭಾರತೀಯ ಭಾಷಾ ಸಂಸ್ಥೆ (CIIL)ಯಲ್ಲಿ ಡಾ. ಜವಾಹರಲಾಲ್ ಹಂಡೂ ಅವರು ಜಾನಪದ ವಿಭಾಗವನ್ನು ಆರಂಭಿಸಿ ಭಾರತದ ಬೇರೆ ಬೇರೆ ವಿಶ್ವವಿದ್ಯಾಲಯಗಳು ಮತ್ತು ಸಂಸ್ಥೆಗಳ ಸಹಯೋಗದಲ್ಲಿ ಜಾನಪದ ವಿಷಯಗಳಿಗೆ ಸಂಬಂಧಿಸಿದಂತೆ ರಾಷ್ಟ್ರೀಯ ವಿಚಾರಸಂಕಿರಣಗಳ ಮೂಲಕ ದೇಶದ ಜಾನಪದ ವಿದ್ವಾಂಸರನ್ನು ಒಂದೆಡೆ ಸೇರಿಸುವ ಮತ್ತು ವಿಚಾರವಿನಿಮಯ ಮಾಡುವ ಕೆಲಸವನ್ನು ಮಾಡಿದರು. ನಾನು ಮಂಗಳೂರು ವಿವಿ ಕನ್ನಡ ವಿಭಾಗದ ಮುಖ್ಯಸ್ಥ ಆಗಿದ್ದ ಅವಧಿಯಲ್ಲಿ ಮಂಗಳೂರು ವಿವಿಯಲ್ಲಿ ಜನಪದ ಮಹಾಕಾವ್ಯಗಳು ಸೆಮಿನಾರನ್ನು ಏರ್ಪಡಿಸಿದೆ. 1990 ದಶಂಬರ 10-11ರಂದು ನಡೆಸಿದ ಆ ಸಂಕಿರಣವನ್ನು ಪ್ರೊ. ಲೌರಿ ಹಾಂಕೊ ಉದ್ಘಾಟಿಸಿ ಆಶಯಭಾಷಣ ಮಾಡಿದರು. ಹಾಗೆಯೇ ದೇಶದ ಬೇರೆ ಬೇರೆ ಸ್ಥಳಗಳಲ್ಲಿ- ದೆಹಲಿ, ಕಲ್ಕತ್ತ, ಮದ್ರಾಸ್‌, ಹೈದರಾಬಾದ್‌, ಶಿಲೊಂಗ್‌, ಗೌಹಾತಿ, ಮೈಸೂರುಗಳಲ್ಲಿ ನಡೆದ ಸೆಮಿನಾರ್‌ಗಳಲ್ಲಿ ಭಾಗವಹಿಸಿ ಪ್ರಬಂಧ ಮಂಡಿಸಿದೆ. ಇದರಿಂದಾಗಿ ಬಹುತ್ವದ ಭಾರತದ ಬಹುರೂಪಿ ಜಾನಪದವನ್ನು ಅರಿತುಕೊಳ್ಳಲು ಸಾಧ್ಯವಾಯಿತು. 

ನಾನು ಕನ್ನಡ ವಿಶ್ವವಿದ್ಯಾಲಯದ ಕುಲಪತಿಯಾಗಿ ಸೆಪ್ಟೆಂಬರ್  2004ರಲ್ಲಿ ಹಂಪಿಗೆ ಹೋದ ಬಳಿಕ, ವಿವಿಯ ಕುಲಾಧಿಪತಿಗಳೂ ಆಗಿದ್ದ ಕರ್ನಾಟಕದ ರಾಜ್ಯಪಾಲ ಟಿ. ಎನ್‌. ಚತುರ್ವೇದಿ ಅವರನ್ನು ಭೇಟಿಮಾಡಿದೆ. ಅವರು ನನಗೆ ಕೊಟ್ಟ ಒಂದು ಮಾರ್ಗದರ್ಶಕ ಸಲಹೆ: “ಕನ್ನಡ ವಿವಿ ಕೇವಲ ಕನ್ನಡದಲ್ಲೇ ಗ್ರಂಥಗಳನ್ನು ಪ್ರಕಟಮಾಡಿದರೆ ಸಾಲದು. ಕನ್ನಡ ಸಾಹಿತ್ಯದ ಶ್ರೇಷ್ಠತೆಯನ್ನು ಹೊರಜಗತ್ತಿಗೆ ಪರಿಚಯಿಸಲು ಕನ್ನಡ ಸಾಹಿತ್ಯದ ಇಂಗ್ಲಿಷ್‌ ಅನುವಾದಗಳನ್ನು ಮಾಡಿಸಿ ಪ್ರಕಟಿಸಬೇಕು’. ರಾಜ್ಯಪಾಲರ ಈ ಸಲಹೆಯಂತೆ ನಾನು ಕನ್ನಡ ವಿವಿಯಲ್ಲಿ ಭಾಷಾಂತರ ಕೇಂದ್ರವೊಂದನ್ನು ಆರಂಭಿಸಿದೆ. ಡಾ. ವಿ. ಬಿ. ತಾರಕೇಶ್ವರ ಅವರಿಗೆ ಅದರ ಜವಾಬ್ದಾರಿಯನ್ನು ವಹಿಸಿದೆ; ಭಾಷಾಂತರದ ಎರಡು ಯೋಜನೆಗಳನ್ನು ರೂಪಿಸಿದೆ. ಒಂದು, ಕನ್ನಡದ ಜನಪದ ಮಹಾಕಾವ್ಯಗಳ ಆಯ್ದಭಾಗಗಳ ಇಂಗ್ಲಿಷ್‌ ಅನುವಾದ. ಇನ್ನೊಂದು, ಆಯ್ದ ಶಿವಶರಣರ ವಚನಗಳ ಇಂಗ್ಲಿಷ್‌ ಅನುವಾದ. ಪ್ರೊ. ಸಿ. ಎನ್‌. ರಾಮಚಂದ್ರನ್‌ರು ಪದ್ಮಾ ರಾಮಚಂದ್ರಶರ್ಮರ ಜೊತೆಗೆ ಸೇರಿಕೊಂಡು ಮಲೆಯ ಮಾದೇಶ್ವರ, ಮಂಟೇಸ್ವಾಮಿ, ಜುಂಜಪ್ಪ, ಮೈಲಾರಲಿಂಗ, ಕೃಷ್ಣಗೊಲ್ಲರ ಕಾವ್ಯ, ಗಾದ್ರಿಪಾಲನಾಯಕ, ಹಲಗಲಿಯ ಬೇಡರು- ಈ ಕಾವ್ಯಗಳ ಆಯ್ದ ಭಾಗಗಳನ್ನು ಇಂಗ್ಲಿಷ್‌ಗೆ ಅನುವಾದ ಮಾಡಿದರು: ಇಂಗ್ಲಿಷ್‌  ಅನುವಾದ ಕೃತಿ Strings and Cymbals. ವಚನಗಳ ಇಂಗ್ಲಿಷ್‌ ಅನುವಾದವನ್ನು ಓ. ಎಲ್ ನಾಗಭೂಷಣಸ್ವಾಮಿಯವರು ಲಕ್ಷ್ಮೀ ಚಂದ್ರಶೇಖರ್‌ ಮತ್ತು ವಿಜಯಾ ಗುತ್ತಲ… ಅವರ ಜೊತೆಗೆ ಸೇರಿಕೊಂಡು ಮಾಡಿದರು. ಈ ಕೃತಿ: The Sign. ಕನ್ನಡ ವಿವಿಯ ಈ ಎರಡು ಪ್ರಕಟಣೆಗಳನ್ನು ರಾಜ್ಯಪಾಲರಾದ ಟಿ. ಎನ್‌. ಚತುರ್ವೇದಿಯವರು ಬೆಂಗಳೂರಿನ ರಾಜಭವನದಲ್ಲಿ 2007ರ ಮೇ 28ರಂದು ಬಿಡುಗಡೆ ಮಾಡಿ ಮೆಚ್ಚುಗೆಯ ಮಾತುಗಳನ್ನು ಆಡಿದರು.  ಯು.ಆರ್‌. ಅನಂತಮೂರ್ತಿ ಅವರು ಅತಿಥಿಯಾಗಿ ಭಾಗವಹಿಸಿದ್ದರು. ಕೃತಿಗಳ ಸಂಪಾದಕರಾದ ಸಿ. ಎನ್‌. ರಾಮಚಂದ್ರನ್‌ ಮತ್ತು ಓ. ಎಲ…. ನಾಗಭೂಷಣಸ್ವಾಮಿ ಅವರು ಕೃತಿಗಳ ಬಗ್ಗೆ ಮಾತಾಡಿದರು. ಕುಲಪತಿಯಾಗಿ ನನಗೆ ಧನ್ಯತೆ ತಂದ ಕಾರ್ಯಕ್ರಮಗಳಲ್ಲಿ ಇದು ಮಹತ್ವದ್ದು. 

ಸಾಹಿತ್ಯದ ಅಧ್ಯಾಪಕನಾಗಿ ನಾನು ಜಗತ್ತಿನ ಮತ್ತು ಭಾರತದ ಮುಖ್ಯ ಚಿಂತಕರ ಚಿಂತನೆಗಳನ್ನು ಓದಿದ್ದೇನೆ. ನನ್ನ ಬದುಕಿನ ತಾತ್ತಿ$Ìಕತೆ ಮತ್ತು ವೈಚಾರಿಕತೆ ಎನ್ನುವುದು ಅದು ಮುಖ್ಯವಾಗಿ ನಾನು ಅನುಭವಿಸಿದ ಮತ್ತು ಅಧ್ಯಯನ ಮಾಡಿದ ಬಹುರೂಪಿ ಜಾನಪದದಿಂದ ಪ್ರೇರಿತವಾದದ್ದು. “ಜಾನಪದ ಪ್ರಕ್ರಿಯೆ’ ಎನ್ನುವುದು ಆರಂಭದಲ್ಲಿ ಸಾಮಗ್ರಿಕೇಂದ್ರಿತವಾಗಿದ್ದದ್ದು ಮುಂದೆ ಅವುಗಳಿಂದ ದೊರೆಯುವ ಸಂದೇಶಗಳಿಗೆ ಮಹಣ್ತೀ ದೊರೆತು, ಈಗ ಅದು ಸಮುದಾಯಗಳ ಒಳಗೆ ಮತ್ತು ಸಮುದಾಯಗಳ ಹೊರಗೆ ಸಂಬಂಧಗಳನ್ನು ಏರ್ಪಡಿಸುವ ಸಾಂಸ್ಕೃತಿಕ ನೆಲೆಯಾಗಿದೆ. ಜಾನಪದದ ಬಹುರೂಪಿ ನಿರ್ಮಾಣಗಳು ವ್ಯಕ್ತಿ, ಲಿಂಗ, ಸಮುದಾಯ, ಬುಡಕಟ್ಟು, ಪ್ರದೇಶಗಳ ಅನನ್ಯತೆಗಳನ್ನು ಸಾಂಸ್ಕೃತಿಕವಾಗಿ ಇಟ್ಟುಕೊಂಡು ಅವುಗಳ ನಡುವೆ ನಿರಂತರ ಸಂವಹನವನ್ನು ಏರ್ಪಡಿಸಿ ಹೊಸ ಸಂಬಂಧಗಳನ್ನು ನಿರ್ಮಾಣ ಮಾಡುವ ಶಕ್ತಿಯನ್ನು ಹೊಂದಿದೆ. “ಜಾನಪದ’ವು 21ನೇ ಶತಮಾನಕ್ಕೆ ಸಲ್ಲುವ ಜ್ಞಾನಶಿಸ್ತೂ ಹೌದು, ವೈಚಾರಿಕ ಪ್ರಣಾಳಿಕೆಯೂ ಹೌದು.

ಬಿ. ಎ. ವಿವೇಕ ರೈ

Advertisement

Udayavani is now on Telegram. Click here to join our channel and stay updated with the latest news.

Next