Advertisement

ಸೋರುತಿಹುದು ಶಾಲೆ ಛಾವಣಿ

11:57 AM Jul 16, 2018 | Team Udayavani |

ಕೊಂಡ್ಲಹಳ್ಳಿ: ಬಿ.ಜಿ. ಕೆರೆ ಗ್ರಾಮ ಪಂಚಾಯತ್‌ ವ್ಯಾಪ್ತಿಯ ಮುತ್ತಿಗಾರಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಹಾಗೂ ಶಿಕ್ಷಕರ ಸ್ಥಿತಿ ಮಳೆಗಾಲದಲ್ಲಿ ಹೇಳತೀರದಾಗಿದೆ. ಏಕೆಂದರೆ ಮಳೆ ಬಂದರೆ ಶಾಲೆಯ ಕೊಠಡಿಗಳ ಛಾವಣಿ ಸೋರುತ್ತಿದೆ.

Advertisement

1948 ರಲ್ಲಿ ನಿರ್ಮಾಣಗೊಂಡ ಈ ಶಾಲೆಯಲ್ಲಿ ಒಟ್ಟು 6 ಕೊಠಡಿಗಳಿವೆ. ಅದರಲ್ಲಿ ಎರಡು ಕೊಠಡಿಗಳನ್ನು 2011-12ನೇ ಸಾಲಿನಲ್ಲಿ ಪುನರ್‌ ನಿರ್ಮಾಣ ಮಾಡಲಾಗಿದ್ದು, ಆರ್‌ಸಿಸಿ ಹಾಕಲಾಗಿದೆ. ಉಳಿದ ನಾಲ್ಕರಲ್ಲಿ 7 ಮತ್ತು 4 ನೇ ತರಗತಿಗಳ ಕೊಠಡಿಗಳ ಮೇಲ್ಛಾವಣಿಗಳಿಗೆ ಸಿಮೆಂಟ್‌ ಶೀಟ್‌ ಅಳವಡಿಸಲಾಗಿದ್ದು, ಅವು ದುಸ್ಥಿತಿಯಲ್ಲಿವೆ.
 
ನಿರ್ಮಾಣಗೊಂಡು ದಶಕಗಳೇ ಕಳೆದಿರುವ ಈ ಕೊಠಡಿಗಳಲ್ಲಿ ಸ್ವಲ್ಪ ಮಳೆ ಬಂದರೂ ಕೊಠಡಿಯ ತುಂಬಾ ಮಳೆ ನೀರು ತುಂಬಿಕೊಳ್ಳುತ್ತದೆ. ಇದರಿಂದ ಮಳೆಗಾಲ ಬಂದರೆ ಶಿಕ್ಷಕರಿಗೆ, ವಿದ್ಯಾರ್ಥಿಗಳಿಗೆ ಸಂಕಷ್ಟ ಶುರುವಾಯಿತೆಂದೇ ಅರ್ಥ.

ಇನ್ನು ಮುಖ್ಯ ಶಿಕ್ಷಕರ ಕೊಠಡಿಯ ಕಥೆಯೇ ಬೇರೆ. ಇದು 1948ರಲ್ಲಿ ನಿರ್ಮಾಣವಾದ ಕಟ್ಟಡವಾಗಿದ್ದು, ಮಂಗಳೂರು ಕೆಂಪು ಹೆಂಚು ಹೊದೆಸಲಾಗಿದೆ. ಹೆಂಚು ಅಳವಡಿಸಿ ಬಹಳ ವರ್ಷಗಳಾಗಿದ್ದರಿಂದ ಅವು ಪುಡಿ ಪುಡಿಯಾಗಿವೆ. ಕೆಲವು ವರ್ಷಗಳ ಹಿಂದೆ ಹೆಂಚಿನ ಮೇಲ್ಛಾವಣಿ ಮೇಲೆ ಸಿಮೆಂಟ್‌ ಹಾಕಿ ದುರಸ್ತಿ ಮಾಡಲಾಗಿದೆ. 

ಇದರ ಮುಟ್ಟುಗಳು ಹಾಳಾಗಿದ್ದು ಮಳೆ ಬಂದಾಗ ನೀರು ಒಳ ನುಗ್ಗುತ್ತದೆ. ಕಳೆದ ಜೂನ್‌ ತಿಂಗಳಲ್ಲಿ ಸುರಿದ ಮಳೆಗೆ ಎರಡು ಕೊಠಡಿಗಳನ್ನು ಬಿಟ್ಟು ಉಳಿದ ಎಲ್ಲಾ ಕೊಠಡಿಗಳು ಜಲಾವೃತವಾಗಿದ್ದವು. ಇದರಿಂದ ಆಡಳಿತ ಕಚೇರಿಯ ಪರಿಕರಗಳು ಹಾಗೂ ಕಾಗದಪತ್ರಗಳನ್ನು ಸಂಪರಕ್ಷಣೆ ಮಾಡಲು ಕಷ್ಟವಾಗುತ್ತದೆ. ಆದ್ದರಿಂದ ಮುತ್ತಿಗಾರಹಳ್ಳಿ ಶಾಲಾ ಕೊಠಡಿ ದುರಸ್ತಿ ಅಥವಾ ಹೊಸ ಕಟ್ಟಡ ನಿರ್ಮಾಣಕ್ಕೆ ಶಿಕ್ಷಣ ಇಲಾಖೆ ಅಧಿಕಾರಿಗಳು ಮುಂದಾಗಬೇಕಿದೆ.

ಭಾರೀ ಮಳೆಯಾದರೆ ಶಿಥಿಲಗೊಂಡಿರುವ ಕಟ್ಟಡಗಳು ಯಾವಾಗ ಬೇಕಾದರೂ ಕುಸಿಯಬಹುದು. ಶಾಲೆಯ ಸ್ಥಿತಿಗತಿ ಬಗ್ಗೆ ಸಂಬಂಧಿಸಿದ ಇಲಾಖೆ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. 
 ಎಚ್‌.ಜಿ. ನಾಗರಾಜ್‌, ಮುತ್ತಿಗಾರಹಳ್ಳಿ ಶಾಲೆ ಮುಖ್ಯ ಶಿಕ್ಷಕ.

Advertisement

ಇನ್ನಾದರೂ ಜನಪ್ರತಿನಿಧಿಗಳು, ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಶಾಲಾ ಕೊಠಡಿಗಳ ದುರಸ್ತಿ ಮಾಡಿಸಬೇಕು. ಹೊಸ ಕೊಠಡಿಗಳನ್ನು ಮಂಜೂರು ಮಾಡಬೇಕು.
 ಟಿ.ಪಿ. ತಿಪ್ಪೇರುದ್ರಪ್ಪ, ಎಸ್‌ಡಿಎಂಸಿ ಅಧ್ಯಕ್ಷ.

„ಕೊಂಡ್ಲಹಳ್ಳಿ ರಾಮಚಂದ್ರಪ್ಪ

Advertisement

Udayavani is now on Telegram. Click here to join our channel and stay updated with the latest news.

Next