Advertisement
ಉತ್ತರ ಪ್ರದೇಶದ ಕಾಂಗ್ರೆಸ್ ನಾಯಕ ರಾಜ್‌ಬಬ್ಬರ್, ಅಮೆರಿಕದ ಡಾಲರ್ ಎದುರು ರೂಪಾಯಿ ಮೌಲ್ಯವು ಪ್ರಧಾನಿ ಮೋದಿಯ ತಾಯಿಯವರ ವಯಸ್ಸಿನಷ್ಟು ಕುಸಿದಿದೆ ಎಂದು ಟೀಕಿಸಿದ್ದಾರೆ. ಇದೇ ವೇಳೆ ಕೇಂದ್ರದ ಮಾಜಿ ಸಚಿವ ಡಾ.ಸಿ.ಪಿ.ಜೋಶಿ, ಬ್ರಾಹ್ಮಣರಲ್ಲದ ನರೇಂದ್ರ ಮೋದಿಯವರಿಗೆ ಹಿಂದುತ್ವದ ಬಗ್ಗೆ ಮಾತನಾಡಲು ಅರ್ಹತೆಯೇ ಇಲ್ಲ ಎಂದು ಹೇಳಿದ್ದಾರೆ. ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರು ತರಾಟೆಗೆ ತೆಗೆದು ಕೊಂಡ ಬಳಿಕ ಜೋಶಿ ಕ್ಷಮೆ ಕೇಳಿದ್ದಾರೆ.
Related Articles
Advertisement
ಆದರೆ ಬಿಜೆಪಿ ಈ ಕ್ಷಮಾಪಣೆಯಿಂದ ತೃಪ್ತಿಗೊಂಡಿಲ್ಲ. ಖುದ್ದು ರಾಹುಲ್ ಅವರೇ ವಿಷಾದ ವ್ಯಕ್ತಪಡಿಸಬೇಕು ಎಂದು ಒತ್ತಾಯಿಸಿದೆ. ಜೋಶಿಯವರು ಭಾರತೀಯ ಸಂಸ್ಕೃತಿ, ಹಿಂದೂ ಧರ್ಮವನ್ನು ಅವಹೇಳನ ಮಾಡಿದ್ದಾರೆ. ಇದರಿಂದ, ಕಾಂಗ್ರೆಸ್ ನಾಯಕರಿಗೆ ಭಾರತದ ಸಂಸ್ಕೃತಿ, ಹಿಂದೂ ಧರ್ಮದ ಇತಿಹಾಸ ಗೊತ್ತಿಲ್ಲ ಎನ್ನುವುದು ಸಾಬೀತಾಗುತ್ತದೆ ಎಂದು ಪಕ್ಷದ ವಕ್ತಾರ ಸುಧಾಂಶು ತ್ರಿವೇದಿ ಟೀಕಿಸಿದ್ದಾರೆ.
ಚೌಕೀದಾರರಿಗೆ ಪ್ರಧಾನಿ ಅವಮಾನ: ರಾಹುಲ್ಕಾಂಗ್ರೆಸ್ ನಾಯಕರಿಬ್ಬರ ಹೇಳಿಕೆ ವಿವಾದ ನಡುವೆಯೇ ಪಕ್ಷದ ಅಧ್ಯಕ್ಷ ರಾಹುಲ್ ಗಾಂಧಿ ಮಧ್ಯಪ್ರದೇಶದ ವಿಧಿಶಾ ಮತ್ತು ಮಂಡಿದೀಪ್‌ನಲ್ಲಿ ಮಾತನಾಡಿ “ಪ್ರಧಾನಿ ಮೋದಿ ಕಾವಲುಗಾರರಿಗೆ (ಚೌಕಿದಾರ) ಅವಮಾನ ಮಾಡಿದ್ದಾರೆ. ಎಲ್ಲಿಯೇ ಹೋಗಲಿ ಈಗ ಚೌಕಿದಾರ ಎಂಬ ಶಬ್ದ ಕೇಳಿದ ಕೂಡಲೇ ಜನರು ಚೋರ್ ಹೈ (ಕಳ್ಳ) ಎನ್ನುವಂತಾಗಿದೆ. ಹೀಗಾಗಿ ನಾನು ದೇಶದಲ್ಲಿರುವ ಕಾವಲುಗಾರರ ಜತೆ ಕ್ಷಮೆ ಕೋರುತ್ತೇನೆ. ನೀವೆಲ್ಲರೂ ಕಳ್ಳರಲ್ಲ. ಒಳ್ಳೆಯವರೇ. ಆದರೆ ದೇಶದ ಪ್ರಧಾನಿ ತಾನು ಚೌಕಿದಾರ ಎನ್ನುವ ಮೂಲಕ ನಿಮಗೆಲ್ಲ ಅಪಕೀರ್ತಿ ತಂದಿದ್ದಾರೆ’ ಎಂದು ಹೇಳಿದ್ದಾರೆ. ರಫೇಲ್ ಡೀಲ್ ಬಗ್ಗೆ ಪ್ರಸ್ತಾಪಿಸಿದ ಅವರು, ಸರ್ಜಿಕಲ್ ದಾಳಿಗೆ ಬೆಂಗಳೂರಿನ ಎಚ್‌ಎಎಲ್ ತಯಾರಿಸಿದ ಯುದ್ಧ ವಿಮಾನ ಬಳಸಿರುವಾಗ, ರಫೇಲ್ ಒಪ್ಪಂದದ ವೇಳೆ ಗುತ್ತಿಗೆಯನ್ನು ಅನಿಲ್ ಅಂಬಾನಿ ಸಂಸ್ಥೆಗೆ ಕೊಟ್ಟಿದ್ದೇಕೆ ಎಂದು ಪ್ರಶ್ನಿಸಿದ್ದಾರೆ. ಮೋದಿಗೆ ಹಿಂದೂ-ಮುಸ್ಲಿಂ ರೋಗ
ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿಗೆ ಹಿಂದೂ-ಮುಸ್ಲಿಮರನ್ನು ಒಡೆಯುವ ರೋಗವಿದೆ. ತೆಲಂಗಾಣದಲ್ಲಿ ಎಸ್‌ಟಿಗೆ ಶೇ.4 ರಿಂದ ಶೇ.12ರ ವರೆಗೆ, ಮುಸ್ಲಿಮರಿಗೆ ಶೇ.6 ರಿಂದ ಶೇ.10 ಪ್ರಮಾಣದಲ್ಲಿ ಮೀಸಲು ನೀಡುವ ಪ್ರಸ್ತಾಪವನ್ನು ಕೇಂದ್ರ ಸರ್ಕಾರ ತಡೆಹಿಡಿದಿದೆ ಎಂದು ತೆಲಂಗಾಣದ ಹಂಗಾಮಿ ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್ ಆರೋಪಿಸಿದ್ದಾರೆ. ಪ್ರಧಾನಿ ಮೋದಿ ಮತ್ತು ಬಿಜೆಪಿ ಪ್ರತಿಯೊಂದರಲ್ಲಿಯೂ ಕೋಮು ಭಾವನೆ ಕಂಡು ಹಿಡಿಯುತ್ತಾರೆ. ಅದಕ್ಕಿಂತ ಹೊರತಾಗಿ ಅವರು ಬೇರೆ ಏನನ್ನೂ ಕಾಣುವುದಿಲ್ಲ ಎಂದು ನರಸ್‌ಪೇಟೆಯಲ್ಲಿ ಆಯೋಜಿಸಲಾಗಿದ್ದ ರ್ಯಾಲಿಯಲ್ಲಿ ಮಾತನಾಡುವಾಗ ರಾವ್ ಹೇಳಿದ್ದಾರೆ. ಮಬಹುದಾಬಾದ್‌ನಲ್ಲಿ ನಡೆದ ಮತ್ತೂಂದು ರ್ಯಾಲಿಯಲ್ಲಿ ಮಾತನಾಡಿದ ಕೆಸಿಆರ್ ಕೇಂದ್ರ ಸರ್ಕಾರಕ್ಕೆ ಧಾರ್ಮಿಕ ಹುಚ್ಚು ಹಿಡಿದಿದೆ ಎಂದು ಟೀಕಿಸಿದ್ದಾರೆ. ಮೋದಿ ನೇತೃತ್ವದ ಸರ್ಕಾರಕ್ಕೆ ಕೋಮು ಹುಚ್ಚು ಇದೆ ಎಂದು ದೂರಿದರು. ಅದಕ್ಕೆ ರಾಜ್ಯದ ಪ್ರಸ್ತಾಪ ತಡೆಹಿಡಿದದ್ದೇ ಸಾಕ್ಷಿ ಎಂದು ಟೀಕಿಸಿದರು. ಟಿಆರ್‌ಎಸ್ ಆಡಳಿತ ಕೊನೆಗೊಳ್ಳಲಿ
ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಶುಕ್ರವಾರ ತೆಲಂಗಾಣದ ಮೆಡcಲ್‌ನಲ್ಲಿ ಪ್ರಚಾರ ಭಾಷಣ ಮಾಡಿದ್ದಾರೆ. ಚಂದ್ರಶೇಖರ ರಾವ್ ನೇತೃತ್ವದ ಸರ್ಕಾರ ಕೇವಲ ಅವರ ಮತ್ತು ಆಪ್ತರ ಹಿತಕ್ಕಾಗಿ ಕೆಲಸ ಮಾಡಿದೆ ಎಂದು ಆರೋಪಿಸಿದ್ದಾರೆ. ದಲಿತರು, ಅಲ್ಪಸಂಖ್ಯಾತರು, ಬುಡಕಟ್ಟು ಜನಾಂಗದವರು, ಮಹಿಳೆಯರು ಮತ್ತು ವಿದ್ಯಾರ್ಥಿಗಳ ಹಿತಕ್ಕಾಗಿ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ದೂರಿದರು. ತೆಲಂಗಾಣದಲ್ಲಿ ಟಿಆರ್‌ಎಸ್ ಆಡಳಿತ ಕೊನೆಗೊಳ್ಳಬೇಕು ಎಂದು ಸಾರಿದ್ದಾರೆ ಸೋನಿಯಾ. 2014ರ ಜೂನ್‌ನಲ್ಲಿ ಪ್ರತ್ಯೇಕ ತೆಲಂಗಾಣ ರಚನೆಯಾದ ಬಳಿಕ ಇದೇ ಮೊದಲ ಬಾರಿಗೆ ಸೋನಿಯಾ ಗಾಂಧಿ ಅಲ್ಲಿಗೆ ಭೇಟಿ ನೀಡಿದ್ದಾರೆ. ಕಾಂಗ್ರೆಸ್‌ಗೆ ಕಂಪ್ಯೂಟರ್ ಬಾಬಾ ಬೆಂಬಲ
ಮಧ್ಯಪ್ರದೇಶದಲ್ಲಿ ನ.28ರಂದು ನಡೆಯುವ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಬೆಂಬಲ ನೀಡುವುದಾಗಿ ಕಂಪ್ಯೂಟರ್ ಬಾಬಾ ನೇತೃತ್ವದ ಕೆಲವು ಸಂತರು ನಿರ್ಧಾರ ಪ್ರಕಟಿಸಿದ್ದಾರೆ. ಜಬಲ್ಪುರದಲ್ಲಿ ಆಯೋಜಿಸಲಾಗಿದ್ದ “ನರ್ಮದೆ ಸಂಸದ್’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಚೌಹಾಣ್ ಆಡಳಿತದಲ್ಲಿ ಗೋಶಾಲೆಗಳ ನಿರ್ಮಾಣದಲ್ಲಿ ಗಣನೀಯ ಪ್ರಗತಿ ಕಂಡಿಲ್ಲ. ಎಸ್‌ಸಿ, ಎಸ್‌ಟಿ ಕಾಯ್ದೆ ಬಳಸಿ ಸಮಾಜದಲ್ಲಿ ಬಿರುಕು ಸೃಷ್ಟಿಸಲು ಯತ್ನಿಸಿದ್ದಾರೆ. ಹೀಗಾಗಿ ಕಾಂಗ್ರೆಸ್‌ಗೆ ಐದು ವರ್ಷಗಳ ಸರ್ಕಾರ ರಚಿಸಲು ಬೆಂಬಲ ನೀಡಬೇಕು. 15 ವರ್ಷಗಳಿಂದ ಬಿಜೆಪಿಗೆ ಬೆಂಬಲ ನೀಡುತ್ತಾ ಬಂದಿದ್ದೇವೆ. ಈ ಬಾರಿ ಕಾಂಗ್ರೆಸ್ ಬೆಂಬಲಿಸುತ್ತೇವೆ ಎಂದು ಹೇಳಿದ್ದಾರೆ. ಕಂಪ್ಯೂಟರ್ ಬಾಬಾ ನೇತೃತ್ವದ ಈ ಸಭೆಗೆ ಭಾರಿ ಮಹತ್ವ ಇದೆ.