ಈ ಪುಟ್ಟ ಊರಿನ ಸೌಂದರ್ಯ ಇಟಲಿಯ ತೊಸ್ಕನ ಪ್ರಾಂತದ ಸೊಬಗಿಗೆ ಸೇರಿದ್ದು. ಬೇಸಗೆಯ ಒಂದು ರವಿವಾರ, ಮಟಮಟ ಮಧ್ಯಾಹ್ನ, ಬೇಸಗೆಯ ಸುಡುಬಿಸಿಲು ಯಾವುದನ್ನೂ ಲೆಕ್ಕಿಸದೆ ಭೂಲೋಕದ ಸ್ವರ್ಗದ ಕಡೆ ಸ್ನೇಹಿತೆಯರೊಂದಿಗೆ ಹೊರಟೆ. ಅಲ್ಲಿಗೆ ತಲುಪಲು ಸುಲಭ ಸಾಧ್ಯವಾಗಿರಲಿಲ್ಲ, ಆವಾಗಲೇ ಎಂದುಕೊಂಡೆ ಸ್ವರ್ಗಕ್ಕೆ ದಾರಿ ಸುಲಭವಲ್ಲ ಎಂದು. ಆದರೂ ಪ್ರಯಾಣ ಸುಗಮವಾಗಿತ್ತು. ಕಾರು ವೇಗವಾಗಿ ಓಡುತ್ತಿದ್ದಂತೆ ಸುತ್ತುವರಿದ ಬೆಟ್ಟಗಳು ಪ್ರಕೃತಿ ಸೊಬಗು ಕಣ್ಣಿಗೆ ಹಬ್ಬವಾಗಿತ್ತು.
ಕಾರು ಗುಡ್ಡ ಹತ್ತಲು ಆರಂಭಿಸಿತು, ಒಂದು ತಾಸು ಕಳೆದ ಅನಂತರ ಅಲ್ಲಿ ತಲುಪಿದೆವು. ನನ್ನ ಕಲ್ಪನೆ ಒಂದು ಭವನಕ್ಕೆ ಹೋಗಿ ತಂಪಾಗಿ ನೀರು ಕುಡಿದು ಆರಾಮವಾಗಿರುತ್ತೇವೆ ಎಂದು. ಆದರೆ …..ಏರಿಳಿತದ ರಸ್ತೆಯಲ್ಲಿ, ಸುಡುವ ಬಿಸಿಲಿನ ನಡುವೆ ನಡೆದೇ ಆ ಜಾಗಕ್ಕೆ ಹೋಗಬೇಕಿತ್ತು. ಕಾರಿನಿಂದ ಇಳಿದ ತತ್‌ಕ್ಷಣ ಒಂದು ಕಡೆಯಿಂದ ಲ್ಯಾವೆಂಡರ್ ಹೂಗಳ ಸುವಾಸನೆ ಆನಂದಿಸುತ್ತಿದ್ದಂತೆ ನಾಲ್ಕು ನಾಯಿಗಳು ಬೊಗಳುತ್ತ ಸುತ್ತುವರಿದವು. ಹೆದರಿಕೆಯಿಂದ ಅರಿವಿಲ್ಲದಂತೆ ಕಿರಿಚಿದಾಗ ನಾಯಿಗಳು ತಮ್ಮ ದಾರಿ ಹಿಡಿದವು.
ನಮ್ಮ ನಡಿಗೆ ಮುಂದುವರಿಯಿತು. ರವಿಯ ಬಿಸಿಲು ತಡೆಯಲಾರದೆ ಓಂ ಸಾಯಿರಾಂ ಅಂದಾಗ ಒಂದು ಜೀಪ್ ಮುಂದೆ ನಿಂತಿತು. ಅವರು ಅಂದಿನ ಕಾರ್ಯಕ್ರಮಕ್ಕೆ ಹೋಗುತ್ತಿದ್ದರು, ನಿಲ್ಲಿಸಿ ಹತ್ತಿಸಿಕೊಂಡರು. ಜೀಪ್ ಹತ್ತಿ ಇಳಿದು ಕೊನೆಗೆ ಅಲ್ಲಿ ತಲುಪಿದೆವು. ಇಳಿದ ತತ್‌ಕ್ಷಣ ಎಂತಹ ರಮಣೀಯ ದೃಶ್ಯ. ಕಣ್ಣು ಹಾಯಿಸಿವಷ್ಟು ಲ್ಯಾವೆಂಡರ್ ತೋಟಗಳು, ಮೂಗಿಗೆ ಹೂಗಳ ಸುವಾಸನೆ, ಕಿವಿಗಳಿಗೆ ನೂರಾರು ದುಂಬಿಗಳ ಸಂಗೀತ ! ನಡುವೆ ಬೆಂಚುಗಳು, ಒಂದು ವೇದಿಕೆ ಸಾರಿದವು ಸಂಗೀತ ನಡೆಯುತ್ತದೆ ಇಲ್ಲಿ ಎಂದು!.
ಅಲ್ಲಿ ಕುಳಿತು ಒಂದು ತಾಸಿನ ಅನಂತರ ಗಾಯಕರ ಪ್ರತ್ಯಕ್ಷ ವಾದ್ಯಗಳ ಸಮೇತ, ಸ್ತ್ರೀಯರು ಭಾರತೀಯ ಉಡುಪನ್ನು ಧರಿಸಿ ಹಣೆಯಲ್ಲಿ ಕುಂಕುಮ, ಗಂಡಸರು ಪೈಜಾಮ ಜುಬ್ಬ ಧರಿಸಿ ವಿಭೂತಿ ಚುಕ್ಕೆ, ನಾನು ನನ್ನನ್ನೇ ಮರೆತೇ ಭಾರತ ಸಿಕ್ಕಿತ್ತಿಲ್ಲಿ ಎಂದು!. ಹೌದು ಅವರೆಲ್ಲ ಯೋಗಾನಂದ ಭಕ್ತರು ನನ್ನ ಸ್ನೇಹಿತರು, ನನ್ನ ನೋಡಿ ಸಂತಸ ಪಟ್ಟರು!.
ಕಾಲ ಮುಂದೂಡಿದಂತೆ ಸೂರ್ಯಾಸ್ತದ ಸಮಯ. ರವಿ ತನ್ನ ದಿನಚರಿ ಮುಗಿಸಿ ಸುಂದರ ಬಣ್ಣಗಳಿಂದ ಗಗನವ ಚಿತ್ರಿಸಿ ಹೊರಟಂತೆ ಬಿಸಿಲ ಬೇಗೆ ಮಾಯಾ ಬೆಟ್ಟಗಳಿಂದ ತಂಪಾದ ಗಾಳಿ, ದುಂಬಿಗಳು ಯಾರಿಗೂ ತೊಂದರೆ ಮಾಡದೆ ಗುನುಗುತ್ತ ಹೂಗಳ ಹೀರುತ್ತಿತ್ತು.
ಕ್ಷಣದಲ್ಲೇ ಗಾಯಕರು ಭಜನೆಗಳ ಹಾಡಲು ಕುಳಿತರಲ್ಲಿ, ವಾದ್ಯಗಳು ಶ್ರುತಿ ಸೇರಿದವು. ಆ ಸಣ್ಣ ಬೆಟ್ಟಗಳು ನನ್ನ ಪಾಲಿಗೆ ಹಿಮಾಲಯ ಆಗಿ ಕೈಲಾಸ ಕಂಡಂತೆ ಆಯಿತು. ಹಿಮ ಇರಲಿಲ್ಲ ! ಅಲ್ಲಿ ಭಜನೆಗಳು, ಓಂಕಾರ ಮೇಲೇರುತ್ತಿದ್ದಂತೆ ಶಿವೋಹಂ, ನಿರ್ವಾಣ ಶಟಕ ಶಿವ ಕಣ್ಮುಂದೆ ಇದ್ದಂತೆ ಭಾವನೆ. ಗಾಯಕರ ಭಕ್ತಿ ಹಾಗೆ ಇತ್ತು, ಗಾಯತ್ರಿ ಹಾಡಿದಾಗ ದಿಗಂತದ ಸೂರ್ಯ ಇಣುಕಿ ನೋಡಿದ, ಶೀತಲ ಕಿರಣಗಳೊಂದಿಗೆ ಅಬ್ಬಾ ಸ್ವರ್ಗ ಮೂರೇ ಗೇಣು ಅಂತ ಅನ್ನಿಸಿತು. ಎಂತಹ ದೈವಾನುಗ್ರಹ!
ಓಂ ನಮಃ ಶಿವಾಯ ಎಂದು ಮನೆ ಸೇರಿದಾಗ ಶರೀರ ಸುಸ್ತಾಗಿತ್ತು, ಆದರೆ ಮನಸ್ಸು ಸಂತಸದ ಕೊಡ ಆಗಿ ತುಂಬು ತುಳಕಿತು! ನೆನೆದವರ ಮನದಲ್ಲಿ ಭಗವಂತ ಪ್ರತ್ಯಕ್ಷ ಅನ್ನುವುದಕ್ಕೆ ಈ ಅನುಭವವೇ ಸಾಕ್ಷಿ.
*ಜಯಮೂರ್ತಿ, ಇಟಲಿ