Advertisement

ನಾವು ಬಳಲಿದ್ದೇವೆ, ವೈರಸ್‌ ಅಲ್ಲ…: ಸಾರ್ವಜನಿಕರಿಗೆ ಅರೋಗ್ಯ ಸಚಿವಾಲಯದ ಎಚ್ಚರಿಕೆಯ ಹೇಳಿಕೆ

12:07 AM May 01, 2021 | Team Udayavani |

ಹೊಸದಿಲ್ಲಿ: “ದೇಶದ ಜನರು ಒಂದು ವಿಚಾರವನ್ನು ಸರಿಯಾಗಿ ಅರ್ಥಮಾಡಿಕೊಳ್ಳಬೇಕು. ಅದೇನೆಂದರೆ – ನಾವು ಬಳಲಿದ್ದೇವೆ… ವೈರಸ್‌ ಅಲ್ಲ…’
ಕೇಂದ್ರ ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಲವ ಅಗರ್ವಾಲ್‌ ನೀಡಿರುವ ಎಚ್ಚರಿಕೆಭರಿತ ಹೇಳಿಕೆಯಿದು.

Advertisement

ನಾವು ಕಳೆದೊಂದು ವರ್ಷದಿಂದಲೂ ಕೊರೊನಾವನ್ನು ನೋಡುತ್ತಿದ್ದೇವೆ. ಕೆಲವರು ಈ ವಿಚಾರದಲ್ಲಿ ಭಂಡ ಧೈರ್ಯ ಪ್ರದರ್ಶಿಸುತ್ತಿದ್ದಾರೆ. ಕೊರೊನಾ ಎನ್ನುವುದೇ ಒಂದು ದೊಡ್ಡ ಹಗರಣ, ನನಗೆ ಮಾಸ್ಕ್ ಬೇಕಿಲ್ಲ, ಕೊರೊನಾ ಹೊರತಾದ ಬದುಕು ಕೂಡ ಇದೆ… ಎಂದೆಲ್ಲ ಹೇಳಿಕೊಳ್ಳುವವರು ನಮ್ಮ ಸುತ್ತಮುತ್ತಲೂ ಇದ್ದಾರೆ. ಆದರೆ ಒಂದಂತೂ ಎಲ್ಲರೂ ಅರ್ಥ ಮಾಡಿಕೊಳ್ಳಬೇಕು. ನಮಗೆಲ್ಲರಿಗೂ ಈ ಕೊರೊನಾದಿಂದ ಸಾಕು ಸಾಕಾಗಿದೆ. ಆದರೆ ವೈರಸ್‌ ಮಾತ್ರ ಇನ್ನೂ ಬಳಲಿಲ್ಲ. ಅದು ಸಕ್ರಿಯವಾಗಿದ್ದುಕೊಂಡು, ಹಲವು ರೂಪಗಳನ್ನು ತಾಳುತ್ತಿದೆ ಎಂದು ವಿವರಿಸಿದ್ದಾರೆ ಅಗರ್ವಾಲ್‌.

ಕರ್ನಾಟಕ ಸೇರಿದಂತೆ 10 ರಾಜ್ಯಗಳಲ್ಲಿ ಕಳೆದ 4 ವಾರಗಳಿಂದ ಸಾವಿನ ಸಂಖ್ಯೆ ಭಾರೀ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ. ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳು ಕಳೆದ ಬಾರಿಯಂತೆಯೇ ಮತ್ತೂಮ್ಮೆ ಕೋವಿಡ್‌ ಶಂಕಿತರ ವಾರ್ಡ್‌ಗಳನ್ನು ನಿರ್ಮಿಸಬೇಕಾಗುತ್ತದೆ ಎಂದೂ ಹೇಳಿದ್ದಾರೆ.

ಆಡಿಯೋ, ವೀಡಿಯೋ ಸೌಲಭ್ಯ: ಸೋಂಕಿತರು ಮತ್ತು ಅವರ ಕುಟುಂಬ ಸದಸ್ಯರ ನಡುವೆ ಮಾತುಕತೆಗೆ ಆಸ್ಪತ್ರೆಗಳು ಆಡಿಯೋ ಅಥವಾ ವೀಡಿಯೋ ಕರೆಯ ಸೌಲಭ್ಯವನ್ನು ಒದಗಿಸಬೇಕು. ಆಗ ಸೋಂಕಿತರು ಹಾಗೂ ಕುಟುಂಬಸ್ಥರಲ್ಲಿರುವ ಭಯದ ವಾತಾವರಣ ಸ್ವಲ್ಪ ಮಟ್ಟಿಗೆ ದೂರವಾಗುತ್ತದೆ.

ಆಕ್ಸಿಜನ್‌ ವೇಸ್ಟ್‌ ಮಾಡದಿರಿ: ವೈದ್ಯಕೀಯ ಆಮ್ಲಜನಕವನ್ನು ಅತ್ಯಂತ ಜಾಗರೂಕತೆಯಿಂದ ಬಳಸಿ. ಅದೊಂದು ಅತ್ಯವಶ್ಯಕ ಆರೋಗ್ಯ ಸರಕಾಗಿದ್ದು, ಅದು ಯಾವುದೇ ಕಾರಣಕ್ಕೂ ವ್ಯರ್ಥವಾಗದಂತೆ ನೋಡಿಕೊಳ್ಳಿ ಎಂದು ರಾಜ್ಯಗಳಿಗೆ ಕೇಂದ್ರ ಸರಕಾರ ಸೂಚಿಸಿದೆ. ಜತೆಗೆ ದೇಶದಲ್ಲಿ ದ್ರವೀಕೃತ ಆಕ್ಸಿಜನ್‌ ಸಂಗ್ರಹ ಸಾಕಷ್ಟಿದೆ. ಅದನ್ನು ದಿನದ 24 ಗಂಟೆಯೂ ಸರಬರಾಜು ಮಾಡಲು ಯತ್ನಿಸುತ್ತಿದ್ದೇವೆ. ನೈಟ್ರೋ ಜನ್‌ ಅನಿಲ ಸರಬರಾಜು ಮಾಡುವ ಶೇ.50ರಷ್ಟು ಟ್ಯಾಂಕರ್‌ಗಳನ್ನು ಆಕ್ಸಿಜನ್‌ ಹೊತ್ತೂಯ್ಯುವ ವಾಹನಗಳಾಗಿ ಪರಿವರ್ತಿಸುವಂತೆ ರಾಜ್ಯಗಳಿಗೆ ಸೂಚಿಸಿದ್ದೇವೆ ಎಂದು ಗೃಹ ಇಲಾಖೆ ಹೆಚ್ಚುವರಿ ಕಾರ್ಯದರ್ಶಿ ಪೀಯೂಶ್‌ ಗೋಯಲ್‌ ತಿಳಿಸಿದ್ದಾರೆ.

Advertisement

ಸೋಂಕು, ಸಾವಿನಲ್ಲಿ ದಾಖಲೆ: ಗುರುವಾರದಿಂದ ಶುಕ್ರವಾರದವರೆಗೆ ದೇಶಾದ್ಯಂತ 3.86 ಲಕ್ಷ ಮಂದಿಗೆ ಸೋಂಕು ದೃಢಪಟ್ಟಿದ್ದು, 3,498 ಮಂದಿ ಸಾವಿಗೀಡಾಗಿದ್ದಾರೆ. ಸಕ್ರಿಯ ಪ್ರಕರಣಗಳ ಸಂಖ್ಯೆ 31 ಲಕ್ಷದ ಗಡಿ ದಾಟಿದೆ. ಸಾವಿನ ಸಂಖ್ಯೆ 2,08,330ಕ್ಕೇರಿಕೆಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next