Advertisement

Covid scam: ಯಡಿಯೂರಪ್ಪ, ಶ್ರೀರಾಮುಲು ವಿರುದ್ಧ ಕಾನೂನು ಕ್ರಮ ಜರುಗಿಸಲು ಸಮಿತಿ ಶಿಫಾರಸು

07:48 PM Nov 09, 2024 | Team Udayavani |

ಬೆಂಗಳೂರು: ‘ಕೋವಿಡ್ -19 ವೇಳೆಯಲ್ಲಿ ಉಪಕರಣಗಳು ಮತ್ತು ಔಷಧಿಗಳ ಖರೀದಿಯಲ್ಲಿ ನಡೆದ ಅವ್ಯವಹಾರಗಳ ಬಗ್ಗೆ ತನಿಖೆ ನಡೆಸಿದ ನ್ಯಾಯಮೂರ್ತಿ ಮೈಕೆಲ್ ಡಿ ಕುನ್ಹಾ ತನಿಖಾ ಆಯೋಗವು ಆಗಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತು ಮಾಜಿ ಸಚಿವ ಬಿ. ಶ್ರೀರಾಮುಲು ವಿರುದ್ಧ ಕಾನೂನು ಕ್ರಮ ಜರುಗಿಸಲು ಶಿಫಾರಸು ಮಾಡಿದೆ’ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಶನಿವಾರ(ನ9) ಹೇಳಿಕೆ ನೀಡಿದ್ದಾರೆ.

Advertisement

”ಬಿಜೆಪಿ ಅಧಿಕಾರದಲ್ಲಿದ್ದಾಗ ಕೋವಿಡ್ ಸಮಯದಲ್ಲಿ ಉಪಕರಣಗಳು ಮತ್ತು ಔಷಧಿಗಳ ಖರೀದಿಯಲ್ಲಿ ಲೂಟಿ ನಡೆದಿರುವುದು ಸ್ಪಷ್ಟವಾಗಿದೆ. ಅಂದಿನ ಸರಕಾರವು ಮೃತ ದೇಹಗಳ ಮೇಲೆ ಹಣ ಸಂಪಾದಿಸಿತು, ಪರಿಸ್ಥಿತಿಯನ್ನು ದುರುಪಯೋಗಪಡಿಸಿಕೊಂಡಿತು ಎಂಬ ಕಾಂಗ್ರೆಸ್ ನ ಆರೋಪವನ್ನು ವರದಿಯು ಸಾಬೀತುಪಡಿಸುತ್ತದೆ” ಎಂದು ದಿನೇಶ್ ಗುಂಡೂರಾವ್ ಹೇಳಿದರು.

“ಲೋಪದೋಷಗಳಿದ್ದವು. ಕೋವಿಡ್ ಸಮಯದಲ್ಲಿ ಯಾರೂ ಅವರನ್ನು ಪ್ರಶ್ನಿಸಲು ಸಾಧ್ಯವಾಗಲಿಲ್ಲ. ಆ ಸಂದರ್ಭವನ್ನು ಉಪಯೋಗಿಸಿಕೊಂಡು ಅಂದಿನ ಸರಕಾರ ಲೂಟಿ ಮಾಡಿ ಅವರಿಗೆ ಅನುಕೂಲವಾಗುವ ನಿರ್ಧಾರಗಳನ್ನು ನಿಯಮ ಉಲ್ಲಂಘಿಸಿ ತೆಗೆದುಕೊಂಡಿತು. ಆಗ ವಿರೋಧ ಪಕ್ಷವಾಗಿ ನಾವು ಈ ವಿಷಯವನ್ನು ಮುನ್ನೆಲೆಗೆ ತರಲು ಪ್ರಯತ್ನಿಸಿದ್ದೇವೆ. ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ನಂತರ ನಾವು ತನಿಖೆ ನಡೆಸಿ ವರದಿ ಸಲ್ಲಿಸಲು ಮಾಜಿ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖಾ ಆಯೋಗವನ್ನು ರಚಿಸಿದ್ದೇವೆ” ಎಂದು ಸುದ್ದಿಗಾರರಿಗೆ ತಿಳಿಸಿದರು.

ಶ್ರೀರಾಮುಲು ಕಿಡಿ

ಕಾನೂನು ಕ್ರಮ ಜರುಗಿಸಲು ಶಿಫಾರಸು ಮಾಡಿರುವ ಕುರಿತು ಪ್ರತಿಕ್ರಿಯಿಸಿದ ಶ್ರೀರಾಮುಲು ‘ಒಂದೂವರೆ ವರ್ಷಗಳ ಕಾಲ ತುಟಿ ಬಿಚ್ಚದ ಸರಕಾರ ಈಗ ತನ್ನ ಹಲವು ಹಗರಣಗಳನ್ನು ಮುಚ್ಚಿ ಹಾಕಲು ಯಡಿಯೂರಪ್ಪ ಮತ್ತು ನನ್ನ ಮೇಲೆ ಪ್ರಾಸಿಕ್ಯೂಷನ್‌ಗೆ ಶಿಫಾರಸು ಮಾಡಲು ಹೊರಟಿದ್ದು, ಗೊಡ್ಡು ಬೆದರಿಕೆಗೆ ಜಗ್ಗುವುದಿಲ್ಲ, ಬಗ್ಗುವುದೂ ಇಲ್ಲ. ವಾಲ್ಮೀಕಿ ಹಗರಣದ ಕುರಿತು ಜನರ ಬಳಿ ಹೇಳುತ್ತಿದ್ದು ಅದನ್ನು ಮುಚ್ಚಿಹಾಕುವ ಷಡ್ಯಂತ್ರ ಮಾಡಿ ಕೋವಿಡ್ ವಿಚಾರ ತೆಗೆದು ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ. ನನ್ನ ವಿರುದ್ಧ ಒಂದೇ, ಒಂದು ಆರೋಪ ಸಾಬೀತು ಮಾಡಲಿ ಎಂದು ಸವಾಲು ಹಾಕಿದರು.

Advertisement

ಪ್ರಾದೇಶಿಕ ಪಕ್ಷಗಳು ದ್ವೇಷದ ರಾಜಕಾರಣ ಮಾಡಬಹುದು ಆದರೆ ರಾಷ್ಟ್ರೀಯ ಪಕ್ಷಗಳು ಈ ರೀತಿ ಮೊದಲ ಬಾರಿ ಮಾಡುತ್ತಿವೆ. ನಾವು ಕಾನೂನು ಹೋರಾಟ ಮಾಡುತ್ತೇವೆ ಎಂದು ಶ್ರೀರಾಮುಲು ಪ್ರತಿಕ್ರಿಯೆ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next