Advertisement

ದಿನಗೂಲಿ ಕಾರ್ಮಿಕರ ಮೇಲೆ ಪ್ರಹಾರ

11:57 PM Mar 22, 2020 | Lakshmi GovindaRaj |

ಬೆಂಗಳೂರು: ಒಂದು ಕಡೆ ಮುಖಗವಸು ಮತ್ತು ಕೈತೊಳೆಯಲು ಸ್ಯಾನಿಟೈಸರ್‌ ಇದೆ. ಮತ್ತೂಂದೆಡೆ ತುತ್ತಿನ ಊಟಕ್ಕೆ ಬೇಕಾದ ದಿನಗೂಲಿ ಇದೆ. ಇವೆರಡರಲ್ಲಿ ನಿಮ್ಮ ಆಯ್ಕೆ ಯಾವುದು ಎಂದು ಕಟ್ಟಡ ಕಾರ್ಮಿಕ ಮುನ್ನಾ ಅವರನ್ನು ಕೇಳಿದಾಗ, ಬಂದ ಉತ್ತರ- ದಿನಗೂಲಿ.

Advertisement

ಇದು ಕೇವಲ ಮುನ್ನಾನ ಆಯ್ಕೆ ಅಲ್ಲ; ಬಹುತೇಕ ಸಂಘಟಿತ ಮತ್ತು ಅಸಂಘಟಿತ ಕಾರ್ಮಿಕರ ಆಯ್ಕೆಯೂ ಆಗಿದೆ. ಜಗತ್ತು ಈಗ ಆರೋಗ್ಯ ರಕ್ಷಣೆಗೆ ಅಗತ್ಯ ಇರುವ ಮಾಸ್ಕ್ ಮತ್ತು ಸ್ಯಾನಿಟೈಸರ್‌ ಹಿಂದೆಬಿದ್ದಿದೆ. ಆದರೆ, ಕಾರ್ಮಿಕರ ವರ್ಗದ ಮೈಯೆಲ್ಲಾ ಮಣ್ಣಲ್ಲಿ ಕೊಳೆಯಾಗಿದ್ದರೂ ಅದರ ಅರಿವೂ ಇಲ್ಲ.

ಬದಲಿಗೆ ವಾರಗಟ್ಟಲೆ ಊರುಗಳಿಗೇ ಬೀಗ ಹಾಕಲಾಗುತ್ತಿದ್ದು, ಹೊಟ್ಟೆಪಾಡು ಏನು ಎಂಬ ಚಿಂತೆ ಕಾಡುತ್ತಿದೆ. ಸರ್ಕಾರವು ವೇತನ ಸಹಿತ ರಜೆ ನೀಡುವಂತೆ ಹೇಳುತ್ತಿದೆ; ವಾಸ್ತವ ಸ್ಥಿತಿ ದುಡಿದ ಪಗಾರವೂ ಸಿಗುತ್ತಿಲ್ಲ. ಕೋವಿಡ್-19 ವೈರಸ್‌ ತಂದಿಟ್ಟ ಫ‌ಜೀತಿಯ ವಾಸ್ತವ ಇದು.

ಕೈಯಲ್ಲಿ ಕೆಲಸ ಇಲ್ಲ, ಜೇಬಲ್ಲಿ ದುಡ್ಡಿಲ್ಲ, ಕಳೆದೊಂದು ವಾರದಿಂದ ಬಾಯಿಗೆ ಮಾಸ್ಕ್ ಹಾಕಿಕೊಂಡು ಓಡಾಡುತ್ತಿದ್ದೇವೆ. ಮುಂದೆ ಇನ್ನೇನು ಹಾಕಿಕೊಳ್ಳಬೇಕಾಗುತ್ತೋ ತಿಳಿಯುತ್ತಿಲ್ಲ. ಆರೋಗ್ಯ ಮುಖ್ಯ ಇರಬಹುದು. ಆದರೆ, ಬದುಕಲು ಬೇಕಾದ ಸೌಕರ್ಯವೂ ಅಷ್ಟೇ ಮುಖ್ಯ ಎನ್ನುತ್ತಾರೆ ಕಟ್ಟಡ ಕಾರ್ಮಿಕ ಮುನ್ನಾ.

ಅಸಂಘಟಿತ ಕಾರ್ಮಿಕರಿಗೆ ಉದ್ಯೋ ಮತ್ತು ವೇತನದ ಭದ್ರತೆಯಿಲ್ಲ. ಆದರೆ, ಕೋವಿಡ್-19ದಿಂದ ಕೆಲಸದ ಅಭದ್ರತೆಯೂ ಇಲ್ಲದಂತಾಗಿದೆ ಎಂದು ಕೃಷಿ ಕೂಲಿ ಕಾರ್ಮಿಕ ದೂರದ ಕಲಬುರಗಿ ಜಿಲ್ಲೆಯ ಜಂಬಣ್ಣ ಅಲವತ್ತುಕೊಂಡರೆ, “ರಜೆ ಕೊಟ್ಟಿದ್ದಾರೆ, ಆದರೆ ಸಂಬಳ ಇಲ್ಲ.

Advertisement

ಬದುಕಲು ಆರೋಗ್ಯ ನೋಡಬೇಕಾ? ಅಥವಾ ಬದುಕು ನೋಡಬೇಕಾ? ಎಂದು ತೋಚುತ್ತಿಲ್ಲ ಎಂದು ಗಾರ್ಮೆಂಟ್ಸ್‌ ಉದ್ಯೋಗಿ ಕೆಂಪೇಗೌಡ ತಿಳಿಸುತ್ತಾರೆ. ಆರೋಗ್ಯ ಮುಖ್ಯ ಅನ್ನುವುದರಲ್ಲಿ ಎರಡು ಮಾತಿಲ್ಲ. ತಿಂಗಳ ಸಂಬಳವನ್ನೇ ನಂಬಿ ಬದುಕುವ ಅಸಂಘಟಿತ ಕಾರ್ಮಿಕರ ವಿಚಾರದಲ್ಲಿ ವ್ಯವಸ್ಥೆ ಇಷ್ಟೊಂದು ಕಲ್ಲು ಹೃದಯ ಹೊಂದಿರಬಾರದು. ಮೇಲ್ನೋಟಕ್ಕೆ ಎಲ್ಲಾ ಉದ್ಯೋಗದಾತರು ರಜೆ ಕೊಡುತ್ತಿದ್ದಾರೆ.

ಆದರೆ, ವೇತನ ಕೊಡಲು ಒಪ್ಪುತ್ತಿಲ್ಲ. ಕೆಲವರು ಸದ್ಯಕ್ಕೆ ರಜೆ ತೆಗೆದುಕೊಳ್ಳಿ ವೇತನದ ಬಗ್ಗೆ ಯೋಚಿಸೋಣ ಎನ್ನುತ್ತಿದ್ದಾರೆ. ಮತ್ತೆ ಕೆಲವರು ಕೆಲಸಕ್ಕೆ ಗೈರಾದ ಅಷ್ಟೂ ದಿನದ ಸಂಬಳ ಕಟ್‌ ಮಾಡುವುದಾಗಿ ತಿಳಿಸಿದ್ದಾರೆ ಎಂದು ಕಾರ್ಮಿಕ ಮುಖಂಡ ಸತ್ಯಾನಂದ ಮಾಹಿತಿ ನೀಡಿದರು.

ಏನೆಲ್ಲಾ ಸಮಸ್ಯೆಗಳು: ಸಂಘಟಿತ ವಲಯದ ಕೆಲವು ಸಂಸ್ಥೆಗಳು ಬಿಟ್ಟರೆ ಅಸಂಘಟಿತ ವಲಯದ ಬಹುತೇಕ ಕಾರ್ಮಿಕರಿಗೆ ವೇತನರಹಿತ ರಜೆ ನೀಡಲಾಗುತ್ತಿದೆ. ಸಂಬಳ ಇಲ್ಲದಿದ್ದರೆ ಬೆಂಗಳೂರಿ ನಂತಹ ನಗರದಲ್ಲಿ ಬದುಕು ಸಾಗಿಸುವುದು ದುಸ್ತರ.

ಇಂತಹ ಪರಿಸ್ಥಿತಿ ಎಷ್ಟು ದಿನ, ಎಷ್ಟು ತಿಂಗಳು ಇರುತ್ತದೆ ಗೊತ್ತಿಲ್ಲ. ಈ ನಡುವೆ, ಮಾರ್ಚ್‌ ಎರಡನೇ ವಾರದಿಂದ ಈ ಸಮಸ್ಯೆ ಆರಂಭವಾಗಿದೆ. ಹಾಗಾಗಿ, ಮಾರ್ಚ್‌ ತಿಂಗಳ ವೇತನ ಸಿಗುತ್ತೋ ಇಲ್ಲವೋ ಎಂಬ ಆತಂಕ ಕಾಡುತ್ತಿದೆ ಎಂದು ಗಾರ್ಮೆಂಟ್‌ ಉದ್ಯೋಗಿ ರತ್ನಮ್ಮ ಹೇಳುತ್ತಾರೆ.

ಕೋವಿಡ್-19 ವೈರಸ್‌ ಭೀತಿ ಹಿನ್ನೆಲೆಯಲ್ಲಿ ಕಾರ್ಮಿಕ ವಲಯಕ್ಕೆ ಎದುರಾಗಿರುವ ಸಂಕಷ್ಟಗಳನ್ನು ನಿವಾರಿಸಲು ಸರ್ಕಾರ ಮುಂದೆ ಬರಬೇಕು. ಗುತ್ತಿಗೆ ಕಾರ್ಮಿಕರು ಸೇರಿದಂತೆ ಸಾರ್ವಜನಿಕ ಹಾಗೂ ಖಾಸಗಿ ಉದ್ದಿಮೆಗಳಲ್ಲಿ ದುಡಿಯುತ್ತಿರುವ ಕಾರ್ಮಿಕರಿಗೆ ವೇತನ ಸಹಿತ ರಜೆ ನೀಡಬೇಕು. ಕಾರ್ಮಿಕರ ನೆರವಿಗೆ ವಿಶೇಷ ಪ್ಯಾಕೇಜ್‌ ಘೋಷಿಸಬೇಕು.
ಎಸ್‌, ವರಲಕ್ಷ್ಮಿ, ಸಿಐಟಿಯು ಅಧ್ಯಕ್ಷೆ

* ರಫೀಕ್‌ ಅಹ್ಮದ್‌

Advertisement

Udayavani is now on Telegram. Click here to join our channel and stay updated with the latest news.

Next