Advertisement

ವಿಮಾನವೇರಿದ್ದ ಲಂಕಾ ಕ್ರಿಕೆಟಿಗರು ವಾಪಸ್‌ ಮನೆಗೆ !

10:10 AM Dec 06, 2017 | Team Udayavani |

ಕೊಲಂಬೊ: ಶ್ರೀಲಂಕಾ ಏಕದಿನ ಕ್ರಿಕೆಟ್‌ ತಂಡದ ಭಾರತ ಪ್ರವಾಸ ವಿಚಿತ್ರ ಹಾಗೂ ಅಸಮರ್ಪಕ ಕಾರಣಕ್ಕಾಗಿ ವಿಳಂಬಗೊಂಡಿದೆ. ವಿಮಾನವೇರಿದ್ಧ ಕ್ರಿಕೆಟಿಗರಿಗೆ ಕೆಳಗಿಳಿಯುವಂತೆ ಹೇಳಿ ಅಲ್ಲಿಂದಲೇ ವಾಪಸ್‌ ಮನೆಗೆ ತೆರಳುವಂತೆ ಸೂಚಿಸಿದ ಘಟನೆ ನಡೆದಿದೆ. ಶ್ರೀಲಂಕಾ ಕ್ರೀಡಾ ಸಚಿವರ “ಸೂಕ್ತ ಅಂಗೀಕಾರ’ ಲಭಿಸದಿರುವುದೇ ಇದಕ್ಕೆ ಕಾರಣ ಎಂದು ತಿಳಿದು ಬಂದಿದೆ. ಕ್ರಿಕೆಟಿಗರ ಯಾವುದೇ ಪ್ರವಾಸಕ್ಕೂ ಕ್ರೀಡಾ ಸಚಿವಾಲಯದ ಒಪ್ಪಿಗೆ ಲಭಿಸಬೇಕಿರುವುದು ಶ್ರೀಲಂಕಾದ “ಕ್ರಮವಿಧಿ’ ಆಗಿದೆ. ಆದರೆ ಇದು ಅತಿರೇಕಕ್ಕೆ ಹೋಗಿರುವುದು ಇದೇ ಮೊದಲು!

Advertisement

ವಿಮಾನದಲ್ಲಿ ಕುಳಿತವರೂ ಕೆಳಕ್ಕಿಳಿದರು: ಭಾರತಕ್ಕೆ ಆಗಮಿಸಲು ಶ್ರೀಲಂಕಾ ಕ್ರಿಕೆಟಿಗರು ಸೋಮವಾರ ರಾತ್ರಿ 9 ಗಂಟೆಯ ಹೊತ್ತಿಗೆ ಕೊಲಂಬೊ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದರು. ಎಡಗೈ ಸ್ಪಿನ್ನರ್‌ ಸಚಿತ ಪತಿರಣ ಆಗಲೇ ವಿಮಾನವೇರಿ ಕುಳಿತ್ತಿದ್ದರು. ಉಳಿದವರು ವಿಮಾನ ಏರಲು ಸಜ್ಜಾಗಿದ್ದರು. ಅಷ್ಟರಲ್ಲಿ ಲಂಕಾ ಕ್ರಿಕೆಟಿಗರಿಗೆ ವಿಮಾನ ಏರದಂತೆ ಸೂಚಿಸಿ ವಾಪಸ್‌ ಮನೆಗೆ ಹೋಗುವಂತೆ  ಆದೇಶಿಸಲಾಯಿತು.

ಶ್ರೀಲಂಕಾ ಕ್ರೀಡಾ ಸಚಿವರ ಸೂಕ್ತ ಅಂಗೀಕಾರ ಲಭಿಸದಿರುವುದೇ ಇದಕ್ಕೆ ಕಾರಣ ಎಂದು ಲಂಕಾ ಕ್ರಿಕೆಟ್‌ ಮಂಡಳಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ. ಮಂಗಳವಾರ ಸಂಜೆಯೊಳಗಾಗಿ ಸಮಸ್ಯೆ ಪರಿಹಾರವಾಗಲಿದ್ದು, ಬುಧವಾರ ಬೆಳಗ್ಗೆ ಕ್ರಿಕೆಟಿಗರು ಭಾರತದಲ್ಲಿ ಇರಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಈಗ ಭಾರತದಲ್ಲಿ ಟೆಸ್ಟ್‌ ಸರಣಿ ಆಡುತ್ತಿರುವ ಶ್ರೀಲಂಕಾ ಕ್ರಿಕೆಟಿಗರು ಅಂಗಳದ ಹಾಗೂ ಅಂಗಳದಾಚೆಗಿನ ಕೆಲವು ಅನಪೇಕ್ಷಿತ ವಿದ್ಯಮಾನಗಳಿಂದ ಸುದ್ದಿಯಾಗಿರುವ ಬೆನ್ನಲ್ಲೇ ಈ “ಪ್ರಯಾಣ ಪ್ರಕರಣ’ ಸಂಭವಿಸಿರುವುದು ವಿಪರ್ಯಾಸ.

Advertisement

Udayavani is now on Telegram. Click here to join our channel and stay updated with the latest news.

Next