ಕೊಲಂಬೊ: ಶ್ರೀಲಂಕಾದಲ್ಲಿ ಉಂಟಾದ ತೀವ್ರ ಆರ್ಥಿಕ ಬಿಕ್ಕಟ್ಟಿಗೆ ಪರಿಹಾರ ಕಂಡುಹಿಡಿಯಲು; ನೂತನ ಪ್ರಧಾನಿ ರಾನಿಲ್ ವಿಕ್ರಮಸಿಂಘೆ ಸರ್ಕಾರಿ ಒಡೆತನದ ವಿಮಾನಯಾನ ಕಂಪನಿಯನ್ನೇ ಮಾರಲು ನಿರ್ಧರಿಸಿದ್ದಾರೆ!
ಮಾತ್ರವಲ್ಲ ಸರ್ಕಾರಿ ಉದ್ಯೋಗಿಗಳಿಗೆ ಸಂಬಳ ನೀಡಲು, ನೋಟುಗಳನ್ನು ಮುದ್ರಿಸಲು ಚಿಂತಿಸಿದ್ದಾರೆ. ವಸ್ತುಸ್ಥಿತಿಯಲ್ಲಿ ಕೃತಕವಾಗಿ ಹಣ ಮುದ್ರಿಸುವುದರಿಂದ ದೇಶದ ಕರೆನ್ಸಿ ಮೌಲ್ಯ ಇನ್ನಷ್ಟು ಕುಸಿಯುತ್ತದೆ. ಇದು ಗೊತ್ತಿದ್ದರೂ ಈ ನಿಟ್ಟಿನಲ್ಲಿ ರಾನಿಲ್ ಸರ್ಕಾರ ಮುಂದಡಿಯಿಟ್ಟಿದೆ.
ಈ ಬಗ್ಗೆ ಮಾತನಾಡಿದ ರಾನಿಲ್ ವಿಕ್ರಮಸಿಂಘೆ, ಶ್ರೀಲಂಕನ್ ಏರ್‌ಲೈನ್ಸ್ 2021 ಮಾರ್ಚ್ ಅಂತ್ಯದ ಹೊತ್ತಿಗೆ 4,500 ಶ್ರೀಲಂಕಾ ರೂಪಾಯಿ ನಷ್ಟ ಅನುಭವಿಸಿದೆ.
ಮುಂದಿನ ಎರಡು ತಿಂಗಳು ದೇಶದ ಭವಿಷ್ಯ ಭೀಕರವಾಗಿದೆ. ದೇಶ ಕೇವಲ ಒಂದು ದಿನಕ್ಕಾಗುವಷ್ಟು ಗ್ಯಾಸೋಲಿನ್ ಸಂಗ್ರಹ ಹೊಂದಿದೆ. ದೇಶದ ಮೂರು ಹಡಗುಗಳ ಮೂಲಕ ಕಚ್ಚಾತೈಲ ತರಿಸಿಕೊಳ್ಳಲು, ಮುಕ್ತ ಮಾರುಕಟ್ಟೆಯಲ್ಲಿ ಡಾಲರ್ ಖರೀದಿಸಬೇಕಾದ ಸ್ಥಿತಿ ಎದುರಾಗಿದೆ ಎಂದಿದ್ದಾರೆ. ಹಾಗೆಯೇ ಅಧ್ಯಕ್ಷ ಗೋಟಬಯ ರಾಜಪಕ್ಸ ಅವರ ಅಭಿವೃದ್ಧಿ ಬಜೆಟ್‌ಗೆ ಪರ್ಯಾಯವಾಗಿ ಪರಿಹಾರ ಬಜೆಟ್ ಮಂಡಿಸಲು ಮುಂದಾಗಿದ್ದಾರೆ. ಇದರಿಂದ ದೇಶದ ಹಣದುಬ್ಬರ ಕುಸಿತ ತಡೆಯುವ ನಿರೀಕ್ಷೆಯಿದೆ.
ಅಶೋಕ ವನ, ಸೀತಾ ದೇವಸ್ಥಾನಕ್ಕೂ ಹಣಕಾಸಿನ ಮುಗ್ಗಟ್ಟು ರಾಮಾಯಣದಲ್ಲಿ ಅತ್ಯಂತ ಮಹತ್ವದ ಸ್ಥಾನವಿರುವುದು ಅಶೋಕ ವನಕ್ಕೆ, ಈಗ ಅದನ್ನು ಅಶೋಕ ವಾಟಿಕ ಎಂದು ಕರೆಯುತ್ತಾರೆ. ಇಲ್ಲಿ ಸೀತೆಯ ದೇವಸ್ಥಾನವೂ ಇದೆ. ಈ ಸ್ಥಳವಿರುವುದು ಶ್ರೀಲಂಕಾದ ನುವರ ಎಲಿಯದಲ್ಲಿ. ಈಗ ಇಲ್ಲಿಗೆ ಭಾರತೀಯ ಪ್ರವಾಸಿಗರು ತೆರಳುತ್ತಿಲ್ಲ. ಅದರಿಂದ ದೇವಸ್ಥಾನ ನಡೆಸುವುದೇ ಆಡಳಿತ ಮಂಡಳಿಗೆ ದುಸ್ತರವಾಗಿದೆ. ಅದನ್ನು ಅಲ್ಲಿನ ಸಂಸದ ವಿ.ರಾಧಾಕೃಷ್ಣನ್ ಶ್ರೀಲಂಕಾ ಸರ್ಕಾರದ ಗಮನಕ್ಕೆ ತಂದಿದ್ದಾರೆ.