Advertisement

ಹೊರನಾಡ ಕನ್ನಡಿಗರ ಭಾಷಾ ಬಿಕ್ಕಟ್ಟು-ಸಾಮರಸ್ಯ: ವಿಚಾರಗೋಷ್ಠಿ

03:47 PM Feb 13, 2018 | |

ಮುಂಬುಯಿ: ಭಾಷಾ ಭಿನ್ನತೆ, ಬಿಕ್ಕಟ್ಟಿನ ಸತ್ಯವನ್ನು ಮುಚ್ಚಿಟ್ಟಿರುವುದು ಖೇದಕರ ವಿಷಯವಾಗಿದೆ. ನಮ್ಮ ಭಾಷೆಯ ಅಸ್ತಿತ್ವ, ಅಸ್ಮಿತೆಗಳನ್ನು ಉಳಿಸಿಕೊಳ್ಳಬೇಕು. ಇಂದು  ನೆಲದ ಭಾಷೆ ಮರೆಯಾಗುತ್ತಿದೆ. ಪ್ರಾಂತ್ಯವಾರು ಭಾಷೆಗಳನ್ನು ವಿಫಲಗೊಳಿಸುತ್ತಿರುವುದು ಅತಂಕಕಾರಿ ವಿಚಾರ. ರಾಜ್ಯದಲ್ಲಿ ಇಚ್ಛಾ ಶಕ್ತಿಯ ಕೊರತೆ ದಿನದಿಂದ ದಿನಕ್ಕೆ  ಉಲ್ಭಾಣಗೊಳ್ಳುತ್ತಿದೆ. ಸಾಂಸ್ಕೃತಿಕ ಗಡಿಗಳನ್ನು ಭದ್ರವಾಗಿ ರೂಪಿಸುವುದರಿಂದ ಮಾತೃಭಾಷೆಯ ಉನ್ನತಿ ಸಾಧ್ಯ. ಪ್ರಸ್ತುತ ದಿನಗಳಲ್ಲಿ ಭಾಷೆ ಎನ್ನುವುದು ರಾಜಕಾರಣಕ್ಕೆ ಬಳಕೆಯಾದ ಕಾರಣ ಭಾಷಾ ಸಾಮರಸ್ಯಕ್ಕೆ ಧಕ್ಕೆವುಂಟಾಗಿದೆ. ಈ ಕಾರಣದಿಂದ ದುರಂತಗಳನ್ನು ಹೆಚ್ಚಿಸುವುದೇ ಹೊರತು ಸಮಸ್ಯೆಗಳನ್ನು ಬಗೆಹರಿಸಲು ಸಾಧ್ಯವಿಲ್ಲ, ಶಿಕ್ಷಣವನ್ನು ವ್ಯಾಪಾರೀಕರಣ ಮಾಡಿದ ಕಾರಣ ನೆಲದ ಭಾಷೆ ನೆಲಕಚ್ಚಿ ಹೋಗಿವೆ. ಕನ್ನಡಿಗರಿಗೆ ಕನ್ನಡಿಗರೇ ಶತ್ರುಗಳು ಹೊರತು ಅನ್ಯ ಭಾಷಿಗರಲ್ಲ. ನಾವೂ ಇನ್ನೂ ಎಚ್ಚೆತ್ತುಕೊಳ್ಳದಿದ್ದರೆ ಕನ್ನಡವು ಸತ್ತು ಹೋಗುವ ಅತಂಕ ಕಾಡುತ್ತಿದೆ. ಕನ್ನಡವನ್ನು ಆದ್ಯತೆಯ ಭಾಷೆಯನ್ನಾಗಿಸಿ ಇಂಗ್ಲೀಷ್‌ನ್ನು ಆಯ್ಕೆಯ ಭಾಷೆಯಾಗಿ ಬಳಸಿದಾಗ ಕನ್ನಡವು ಜೀವಂತವಾದ ಭಾಷೆಯಾಗಬಲ್ಲದು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಬೆಂಗಳೂರು ಅಧ್ಯಕ್ಷ ಪ್ರೊ| ಎಸ್‌. ಜಿ. ಸಿದ್ಧರಾಮಯ್ಯ ತಿಳಿಸಿದರು.

Advertisement

ಕನ್ನಡ ಸಾಹಿತ್ಯ ಪರಿಷತ್ತು ಬೆಂಗಳೂರು ಮತ್ತು ಮುಂಬಯಿ ಹಾಗೂ ಉಪನಗರಗಳಲ್ಲಿನ ವಿವಿಧ ಕನ್ನಡ ಸಂಸ್ಥೆಗಳ ಒಗ್ಗೂಡುವಿಕೆಯಲ್ಲಿ ಅಂಧೇರಿ ಪಶ್ಚಿಮದ ಮೊಗವೀರ ಭವನದಲ್ಲಿ ಫೆ. 11 ರಂದು ಎರಡನೇ ದಿನ ನಡೆದ ಹೊರನಾಡ ಕನ್ನಡಿಗರ ದ್ವಿತೀಯ ರಾಷ್ಟ್ರೀಯ ಸಮಾವೇಶದಲ್ಲಿ  ಸಮ್ಮೇಳನಧ್ಯಕ್ಷ ಡಾ| ಮನು ಬಳಿಗಾರ್‌ ಉಪಸ್ಥಿತಿಯಲ್ಲಿ ನಡೆಸಲ್ಪಟ್ಟ “ಹೊರನಾಡ ಕನ್ನಡಿಗರ ಭಾಷಾ ಬಿಕ್ಕಟ್ಟು-ಸಾಮರಸ್ಯ’ ವಿಚಾರಿತ ಸಮಾವೇಶದ ತೃತೀಯ ವಿಚಾರ ಗೋಷ್ಠಿಯ ಅಧ್ಯಕ್ಷತೆ ವಹಿಸಿ ಪ್ರೊ| ಎಸ್‌. ಜಿ. ಸಿದ್ಧರಾಮಯ್ಯ ಅವರು ಮಾತನಾಡಿದರು.

ಪ್ರಬಂಧ ಮಂಡನೆ 
ಕನ್ನಡ-ಮರಾಠಿ ವಿಷಯವಾಗಿ ಡಾ| ರಾಮಕೃಷ್ಣ ಮರಾಠೆ, ಕನ್ನಡ-ತೆಲುಗು ವಿಷಯದಲ್ಲಿ ಡಾ| ಶೇಷಶಾಸ್ತ್ರೀ ಅನಂತಪುರ ಮತ್ತು ಕನ್ನಡ-ತಮಿಳು ವಿಚಾರವಾಗಿ ಡಾ| ವಿ. ಗೋಪಾಲಗೃಷ್ಣ ಚೆನ್ನೈ ಅವರು ಪ್ರಬಂಧ ಮಂಡಿಸಿದರು. 

ಡಾ| ಕೆ. ಶಾರದಾ  ಆಂಧ್ರಪ್ರದೇಶ, ಶಿವರಾಮ್‌ ಕಾಸರಗೋಡು, ಮಲ್ಲಿಕಾರ್ಜುನ ಬಾದಮಿ ಪ್ರತಿಕ್ರಿಯಿಸಿದರು.  ಕನ್ನಡ ಕಲಾ ಕೇಂದ್ರ ಮುಂಬಯಿ ಅಧ್ಯಕ್ಷ ಬೈಲೂರು ಬಾಲಚಂದ್ರ ರಾವ್‌  ಸ್ವಾಗತಿಸಿದರು. ಪ್ರೊ| ಟಿ. ಎಸ್‌. ಸತ್ಯನಾಥ ಆಶಯ ನುಡಿಗಳನ್ನಾಡಿದರು. ಡಾ| ಜ್ಯೋತಿ ದೇವಾಡಿಗ ಗೋಷ್ಠಿಯನ್ನು  ನಿರ್ವಹಿಸಿದರು. ವಾಪಿ ಕನ್ನಡ ಸಂಘ ವಾಪಿ-ಗುಜರಾತ್‌ ಇದರ ಅಧ್ಯಕ್ಷ ಶಂಕರ ನಾರಾಯಣ ಕಾರಂತ ವಂದಿಸಿದರು.

ಮಧ್ಯಾಹ್ನ ಹಿರಿಯ ಸಾಹಿತಿ ಮತ್ತು ಕೇಂದ್ರೀಯ ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಡಾ| ಎಚ್‌. ಎಂ. ಮಹೇಶ್ವರಯ್ಯ ಅಧ್ಯಕ್ಷತೆಯಲ್ಲಿ “ರಾಷ್ಟ್ರೀಯ ಶಿಕ್ಷಣ ನೀತಿ’ ವಿಚಾರವಾಗಿ ನಾಲ್ಕನೇ ವಿಚಾರ ಗೋಷ್ಠಿ ನಡೆಸಲ್ಪಟ್ಟಿದ್ದು, “ಅನುಷ್ಠಾನದ ಸವಾಲುಗಳು’ ವಿಚಾರವಾಗಿ ಡಾ| ಶಿವರಾಂ ಪಡಿಕ್ಕಲ್‌, “ಪ್ರಾದೇಶಿಕ ಸಂಸ್ಕೃತಿ ಒಳಗೊಳ್ಳುವಿಕೆ’ ವಿಷಯದಲ್ಲಿ ಡಾ| ಕೆ. ವೈ.  ನಾರಾಯಣ ಸ್ವಾಮಿ ಮತ್ತು “ಉದ್ಯೋಗಾವಕಾಶ’ ವಿಷಯದಲ್ಲಿ ಹೇಮಲತಾ ಮವಿ ಪ್ರಬಂಧ ಮಂಡಿಸಿದರು. ಕೈಗಾರಿಕಾಕನ್ನಡ ಸಂಘಗಳ ಒಕ್ಕೂಟದ ಅಧ್ಯಕ್ಷ ತಿಮ್ಮಯ್ಯ ಹಾಗೂ ಡಾ| ಅಪ್ಪಗೆರೆ ಸೋಮಶೇಖರ ಪ್ರತಿಕ್ರಿಯೆ ನೀಡಿದರು.

Advertisement

ಬಿಎಸ್‌ಕೆಬಿಎ ಉಪಾಧ್ಯಕ್ಷ ವಾಮನ ಹೊಳ್ಳ ಸ್ವಾಗತಿಸಿದರು. ಹಿರಿಯ ಭಾಷಾತಜ್ಞ ಡಾ| ಕೆ. ಆರ್‌. ದುರ್ಗಾದಾಸ್‌ ಆಶಯ ನುಡಿಗಳನ್ನಾಡಿದರು. ಓಂದಾಸ್‌ ಕಣ್ಣಂಗಾರ್‌ ಗೋಷ್ಠಿಯನ್ನು ನಿರ್ವಹಿಸಿದರು. ಮೊಗವೀರ ಮಾಸಿಕದ ಸಂಪಾದಕ ಅಶೋಕ್‌ ಎಸ್‌. ಸುವರ್ಣ ವಂದಿಸಿದರು. 

125 ಕೋಟಿ ಬಹು ಸಂಸ್ಕೃತಿ, ಬಹು ಭಾಷಿಕರು ನೆಲೆಯಾಗಿರುವ ಈ ದೇಶದ ಬಗ್ಗೆ ಚಿಂತಿಸಬೇಕಾಗಿದೆ. ಒಂದು ದೇಶದ ಭಾಷೆಯ ಅಭಿವೃದ್ಧಿ ಆ ದೇಶದ ಅಭಿವೃದ್ಧಿಯನ್ನು ಸೂಚಿಸುತ್ತದೆ. ಭಾಷೆಯ ಬಗ್ಗೆ ಫಲಾಪೇಕ್ಷೆಯಿಲ್ಲದೆ, ಯಾವುದೇ ರೀತಿಯ ದುರುದ್ದೇಶವಿಲ್ಲದೆ  ಚರ್ಚಿಸಬೇಕು ಮತ್ತು ಅದರ ಅಭಿವೃದ್ಧಿಗೆ ಪೂರಕವಾಗುವಂತಹ ಕಾರ್ಯಕ್ರಮಗಳನ್ನು ಆಯೋಜಿಸಬೇಕು.  ಶಿಕ್ಷಣ ಮಂತ್ರಿಗಳು,  ಶಿಕ್ಷಣಕ್ಕೆ ಸಂಬಧಿಸಿದವರು ಶಿಕ್ಷಣ ನೀತಿಯ ಕುರಿತು ತೀವ್ರವಾಗಿ ಚರ್ಚಿಸಬೇಕು.
-ಡಾ| ಎಚ್‌. ಎಂ. ಮಹೇಶ್ವರಯ್ಯ, ಕುಲಪತಿಗಳು, ಕೇಂದ್ರೀಯ ಕನ್ನಡ ವಿಶ್ವವಿದ್ಯಾಲಯ

ಸಮಾವೇಶದ ವಿಶೇಷಗಳು 
ಸಮಾವೇಶದಲ್ಲಿ ರವಿವಾರ ಮಧ್ಯಾಹ್ನ ಹೊಟ್ಟೆ ತುಂಬಾ ಉಂಡ ಸಾಹಿತ್ಯಾಭಿಮಾನಿ ಗಳೆನಿಸಿಕೊಂಡವರು  ಸಭಾಗೃಹದಲ್ಲಿ ಗಡದ್ದಾಗಿ ನಿದ್ದೆಗೆ ಜಾರಿದರು. ಇದನ್ನು ಕಂಡವರು ಇದು ಬರೀ ಸರಕಾರಕ್ಕೆ ತೋರ್ಪಡಿಸುವ ಸಮಾವೇಶವಾಗಿದೆಯೇ  ಹೊರತು ಕನ್ನಡದ ಬೆಳವಣಿಗೆ ಪೂರಕವಾದ ಸಮಾವೇಶವಲ್ಲ ಎಂದು ಗುಣುಗುತ್ತಿದ್ದರು. ವಿಚಾರ ಗೋಷ್ಠಿಗಳನ್ನು ಮಂಡಿಸಿದವರಲ್ಲಿ ಹೆಚ್ಚಿನವರು ವಾಕ್ಯವೊಂದಕ್ಕೆ ಕನಿಷ್ಠ ನಾಲ್ಕೈದು  ಇಂಗ್ಲೀಷ್‌ ಶಬ್ದ ಬಳಕೆ ಮಾಡಿರುವುದು ನಗರದ ಅಪ್ಪಟ ಕನ್ನಡಿಗರನ್ನು ಮುಜುಗರಕ್ಕೊಳಪಡಿಸಿದ್ದು ದುರಂತ ಎಂದೆಣಿಸಿತು. ಸಮಾವೇಶದಲ್ಲಿ ಪಾಲ್ಗೊಳ್ಳಲು  ವಿವಿಧೆಡೆಗಳಿಂದ ಪ್ರತಿನಿಧಿಗಳಾಗಿ ಬಂದವರು ಬಸ್ಸನ್ನೇರಿ ಮುಂಬಯಿ ದರ್ಶನಕ್ಕೆ ಹೋದದ್ದು ಸಮಾವೇಶದ ಹಿರಿಮೆಯನ್ನು ಸಾರುತ್ತಿತ್ತು. ವೇದಿಕೆಯಲ್ಲಿ ಸಮಯದ ವ್ಯವಧಾನವಿಲ್ಲದ ಮೈಕಾಸುರನನ್ನು ಒಳಸಿಕೊಂಡ ಮಾತುಗಾರರು ಒಂದೆಡೆಯಾದರೆ, ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ  ಎಳೆಯ ಬಾಲ ಕಲಾವಿದರು ವೇಷ ಭೂಷಣವನ್ನು ಧರಿಸಿ ಗಂಟೆ ಕಟ್ಟಲೆ ತಮ್ಮ ಯಾದಿಗಾಗಿ ಕಾಯುತ್ತಿದ್ದ ದೃಶ್ಯ ಇನ್ನೊಂದೆಡೆ ಗೋಚರಿಸುತ್ತಿತ್ತು.

ಚಿತ್ರ-ವರದಿ: ರೋನ್ಸ್‌ ಬಂಟ್ವಾಳ್‌

Advertisement

Udayavani is now on Telegram. Click here to join our channel and stay updated with the latest news.

Next