ನವದೆಹಲಿ:ಚಂದ್ರಯಾನ-3ರ ವಿಕ್ರಮ್ ಲ್ಯಾಂಡರ್ ನೌಕೆ ಪ್ರೊಪಲ್ಷನ್ ಮಾಡ್ಯೂಲ್ ನಿಂದ ಯಶಸ್ವಿಯಾಗಿ ಬೇರ್ಪಟ್ಟ ಬೆನ್ನಲ್ಲೇ ವಿಕ್ರಮ್ ಲ್ಯಾಂಡರ್ ಶುಕ್ರವಾರ (ಆಗಸ್ಟ್ 18) ಚಂದ್ರನ ಮೇಲ್ಮೈ ಚಿತ್ರ ಹಾಗೂ ವಿಡಿಯೋವನ್ನು ರವಾನಿಸಿದ್ದು, ಇಸ್ರೋ X(ಟ್ವೀಟ್) ಮೂಲಕ ಹಂಚಿಕೊಂಡಿದೆ.
ಇದನ್ನೂ ಓದಿ:KSRTC: 10 ವರ್ಷ ಕಳೆದರೂ ಇತ್ಯರ್ಥಗೊಳ್ಳದ ಮಣ್ಣೂರು ವಿದ್ಯಾರ್ಥಿಗಳ ಬಸ್ ಸಮಸ್ಯೆ
ಪ್ರೊಪಲ್ಷನ್ ಮಾಡ್ಯೂಲ್ ಚಂದ್ರನ ಕಕ್ಷೆಯಲ್ಲಿ ಸುತ್ತುತ್ತಿದ್ದು, ವಿಕ್ರಮ್ ಲ್ಯಾಂಡರ್ ನ ಕ್ಯಾಮೆರಾ 1ರ ಮೂಲಕ ಸೆರೆಹಿಡಿದ ಚಿತ್ರವನ್ನು ಇಸ್ರೋ xನಲ್ಲಿ ಹಂಚಿಕೊಂಡಿದೆ. ವಿಕ್ರಮ್ ಲ್ಯಾಂಡರ್ ಕಳುಹಿಸಿರುವ ಚಿತ್ರದಲ್ಲಿ ಚಂದ್ರನ ಮೇಲ್ಮೈನಲ್ಲಿ ವಿವಿಧ ಕುಳಿಗಳಿವೆ, ಅವುಗಳಲ್ಲಿ ಒಂದು ಜಿಯೋರ್ಡಾನೊ ಬ್ರುನೋ ಕುಳಿ ಇದ್ದು, ಇದು ಚಂದ್ರನ ಮೇಲ್ಮೈನಲ್ಲಿರುವ ದೊಡ್ಡ ಕುಳಿಗಳಲ್ಲಿ ಒಂದಾಗಿದೆ.
ವಿಕ್ರಮ್ ಲ್ಯಾಂಡರ್ ನ ಕ್ಯಾಮೆರಾ 1 ಅಂದಾಜು 43 ಕಿಲೋ ಮೀಟರ್ ವ್ಯಾಸವನ್ನು ಹೊಂದಿರುವ ಹರ್ಖೇಬಿ ಜೆ ಕುಳಿಯ ಚಿತ್ರವನ್ನೂ ಸೆರೆಹಿಡಿದಿದೆ. ಲ್ಯಾಂಡರ್ ಮಾಡ್ಯೂಲ್ ನಿಂದ ಬೇರ್ಪಟ್ಟ ಬಳಿಕ ಮೊದಲ ಚಿತ್ರಗಳನ್ನು ಸೆರೆಹಿಡಿದಿರುವುದಾಗಿ ಇಸ್ರೋ ತಿಳಿಸಿದೆ.
ವಿಕ್ರಮ್ ಲ್ಯಾಂಡರ್ ಜತೆ ಭೌತಿಕ ಸಂಪರ್ಕ ಕಡಿದುಕೊಂಡಿರುವ ಪ್ರೊಪಲ್ಷನ್ ಮಾಡ್ಯೂಲ್ ಕೆಲವು ವರ್ಷಗಳ ಕಾಲ ಚಂದ್ರನ ಕಕ್ಷೆಯಲ್ಲಿ ಸುತ್ತುವ ಮೂಲಕ ಹಲವು ಅಧ್ಯಯನಗಳನ್ನು ನಡೆಸಲಿದ್ದು, ಇಸ್ರೋಗೆ ಮಾಹಿತಿಯನ್ನು ರವಾನಿಸಲಿದೆ.