Advertisement

Paris olympics: ಬ್ಯಾಡ್ಮಿಂಟನ್‌ ಸೆಮಿಫೈನಲ್‌; ಲಕ್ಷ್ಯ ಮುಂದೆ ಕಠಿನ ಸವಾಲು

10:27 PM Aug 03, 2024 | Team Udayavani |

ಪ್ಯಾರಿಸ್‌: ಪ್ಯಾರಿಸ್‌ ಒಲಿಂಪಿಕ್ಸ್‌ ಬ್ಯಾಡ್ಮಿಂಟನ್‌ನಲ್ಲಿ ಭಾರತದ ಕೊನೆಯ ಭರವಸೆಯಾಗಿ ಉಳಿದಿರುವ ಲಕ್ಷ್ಯ ಸೇನ್‌ ರವಿವಾರ ಸೆಮಿಫೈನಲ್‌ ಸೆಣಸಾಟಕ್ಕೆ ಇಳಿಯಲಿದ್ದಾರೆ. ಎದುರಾಳಿ, ಡೆನ್ಮಾರ್ಕ್‌ನ ವಿಕ್ಟರ್‌ ಅಕ್ಸೆಲ್ಸೆನ್‌. ಈ ಮಗುವಿನ ಮುಖದ ದೈತ್ಯ ಶಟ್ಲರ್‌ ಟೋಕಿಯೊ ಒಲಿಂಪಿಕ್ಸ್‌ ಚಾಂಪಿಯನ್‌. ಹೀಗಾಗಿ ಲಕ್ಷ್ಯ ಮುಂದಿರುವ ಸವಾಲು ಸುಲಭದ್ದಲ್ಲ ಎಂದೇ ಭಾವಿಸಲಾಗಿದೆ.

Advertisement

ಇದೇ ಮೊದಲ ಸಲ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸುತ್ತಿರುವ ಲಕ್ಷ್ಯ ಸೇನ್‌ ಶುಕ್ರವಾರ ರಾತ್ರಿ ಚೈನೀಸ್‌ ತೈಪೆಯ ಚೌ ತೀನ್‌ ಚೆನ್‌ ಅವರೆದುರು ಮೊದಲ ಗೇಮ್‌ ಕಳೆದುಕೊಂಡೂ ಗೆದ್ದ ರೀತಿ ಅಮೋಘವಾಗಿತ್ತು. ಇದರೊಂದಿಗೆ ಒಲಿಂಪಿಕ್ಸ್‌ನಲ್ಲಿ ಪುರುಷರ ಸಿಂಗಲ್ಸ್‌ ವಿಭಾಗದಿಂದ ಸೆಮಿಫೈನಲ್‌ ಪ್ರವೇಶಿಸಿದ ಭಾರತದ ಪ್ರಪ್ರಥಮ ಶಟ್ಲರ್‌ ಎಂಬ ಹಿರಿಮೆಗೆ ಪಾತ್ರರಾಗಿದ್ದರು.

ಎಂಟರಲ್ಲಿ ಒಂದೇ ಜಯ:

ಆದರೆ ಅಕ್ಸೆಲ್ಸೆನ್‌ ಸವಾಲು ಖಂಡಿತ ಸುಲಭದ್ದಲ್ಲ. 2020ರಿಂದ ಇವರಿಬ್ಬರ ಸ್ಪರ್ಧೆ ಮೊದಲ್ಗೊಂಡಿತ್ತು. ಅಲ್ಲಿಂದೀಚೆ ಲಕ್ಷ್ಯ ಸೇನ್‌ ವಿರುದ್ಧ ಆಡಿದ 8 ಪಂದ್ಯಗಳಲ್ಲಿ ಅಕ್ಸೆಲ್ಸೆನ್‌ ಏಳನ್ನು ಜಯಿಸಿದ್ದಾರೆ. ಲಕ್ಷ್ಯ ಅವರ ಏಕೈಕ ಗೆಲುವು 2022ರ ಜರ್ಮನ್‌ ಓಪನ್‌ ಪಂದ್ಯಾವಳಿಯಲ್ಲಿ ದಾಖಲಾಗಿತ್ತು. ಈ ಅಂಕಿಅಂಶಗಳನ್ನೆಲ್ಲ ಗಮನಿಸಿ ದರೆ, ಒಲಿಂಪಿಕ್ಸ್‌ ಸಮರದಲ್ಲಿ ಲಕ್ಷ್ಯ ಸೇನ್‌ ಗೆದ್ದರೆ ಅದೊಂದು ಮಹಾನ್‌ ಸಾಧನೆಯಾಗಿ ದಾಖಲಾಗಲಿದೆ. ಸೋತರೆ ಕಂಚಿಗಾಗಿ ಪ್ಲೇ ಆಫ್ ಸ್ಪರ್ಧೆಗೆ ಇಳಿಯಬೇಕಾಗುತ್ತದೆ.

ಅಮೋಘ ದಾಖಲೆ:

Advertisement

ಜಾಗತಿಕ ಮಟ್ಟದ ಸ್ಪರ್ಧೆಗಳಲ್ಲಿ 30 ವರ್ಷದ ಅಕ್ಸೆಲ್ಸೆನ್‌ ದಾಖಲೆ ಗಮನಾರ್ಹ ಮಟ್ಟದಲ್ಲಿದೆ. ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಚಿನ್ನ, ರಿಯೋದಲ್ಲಿ ಕಂಚು, 2 ವಿಶ್ವ ಚಾಂಪಿಯನ್‌ಶಿಪ್‌ ಗೌರವ (2017, 2022), ಥಾಮಸ್‌ ಕಪ್‌ ಗೆಲುವು (2016)… ಹೀಗೆ ಸಾಗುತ್ತದೆ ಗೆಲುವಿನ ಓಟ. 2021ರ ಡಿಸೆಂಬರ್‌ನಿಂದ 2024ರ ಜೂನ್‌ ತನಕ ವಿಶ್ವ ರ್‍ಯಾಂಕಿಂಗ್‌ನಲ್ಲಿ ನಂ.1 ಸ್ಥಾನವನ್ನೂ ಅಲಂಕರಿಸಿದ್ದಾರೆ. ಶುಕ್ರವಾರ ರಾತ್ರಿ ಕ್ವಾರ್ಟರ್‌ ಫೈನಲ್‌ನಲ್ಲಿ ಸಿಂಗಾಪುರದ ಲೋಹ್‌ ಕೀನ್‌ ವ್ಯೂ ಅವರನ್ನು ಸುಲಭದಲ್ಲಿ ಸೋಲಿಸಿ ಬಂದಿದ್ದಾರೆ.

ದೈತ್ಯ ಬೇಟೆ:

22 ವರ್ಷದ ಲಕ್ಷ್ಯ ಸೇನ್‌ 2021ರ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಕಂಚಿನ ಪದಕ ಗೆದ್ದಿದ್ದಾರೆ. ಪ್ಯಾರಿಸ್‌ ಸ್ಪರ್ಧೆಯ ಗ್ರೂಪ್‌ ಸ್ಪರ್ಧೆಯಲ್ಲಿ ವಿಶ್ವದ ನಂ. 4 ಆಟಗಾರ, ಜೊನಾಥನ್‌ ಕ್ರಿಸ್ಟಿ ಅವರನ್ನು ಮಣಿಸಿದ್ದಾರೆ. ಕ್ವಾರ್ಟರ್‌ ಫೈನಲ್‌ನಲ್ಲಿ ಪರಾಭವಗೊಂಡ ಚೌ ತೀನ್‌ ಚೆನ್‌ 11ನೇ ರ್‍ಯಾಂಕಿಂಗ್‌ ಆಟಗಾರ. ಇಬ್ಬರೂ ಸೇನ್‌ಗಿಂತ ಉನ್ನತ ರ್‍ಯಾಂಕಿಂಗ್‌ ಆಟಗಾರರು. ಹೀಗಾಗಿ ಇವನ್ನು ದೈತ್ಯ ಬೇಟೆ ಎನ್ನಲಡ್ಡಿಯಿಲ್ಲ.

ಕುತ್ತಿಗೆಯಲ್ಲಿ “ಸ್ಕೈ ಈಸ್‌ ದ ಲಿಮಿಟ್‌’ ಟ್ಯಾಟೂ ಹಾಕಿಕೊಂಡಿರುವ ಲಕ್ಷ್ಯ ಸೇನ್‌, “ನಿಜವಾದ ಪರೀಕ್ಷೆ ಆರಂಭವಾಗಿದೆ’ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next