Advertisement

ರಂಭಾಪುರಿ ಶ್ರೀ ಅದ್ಧೂರಿ ಅಡ್ಡ ಪಲ್ಲಕ್ಕಿ ಮಹೋತ್ಸವ

04:07 PM Oct 20, 2018 | |

ಲಕ್ಷ್ಮೇಶ್ವರ: ಶ್ರೀ ರಂಭಾಪುರಿ ಪೀಠದ ಸಂಸ್ಥಾಪನಾಚಾರ್ಯರ ಪರಂಪರೆಯಂತೆ ಲಕ್ಷ್ಮೇಶ್ವರದಲ್ಲಿ ನಡೆದ ದಸರಾ ಧರ್ಮಸಮ್ಮೇಳನದಲ್ಲಿ ವಿಜಯದಶಮಿ ದಿನ ಬಾಳೆಹೊನ್ನೂರಿನ ಶ್ರೀರಂಭಾಪುರಿ ವೀರಸೋಮೇಶ್ವರ ಜಗದ್ಗುರುಗಳ ಅಡ್ಡಪಲ್ಲಕ್ಕಿ ಮಹೋತ್ಸವ ಅತ್ಯಂತ ಸಡಗರ, ಸಂಭ್ರಮ, ಶ್ರದ್ಧೆ, ಭಯ ಭಕ್ತಿಯಿಂದ ಸಾವಿರಾರು ಸಂಖ್ಯೆಯ ಭಕ್ತ ಸಮೂಹದ ನಡುವೆ ವೈಭವೋಪೇತವಾಗಿ ಜರುಗಿತು.

Advertisement

ಪಟ್ಟಣದ ಅದಿದೈವ ಶ್ರೀಸೋಮೇಶ್ವರ ದೇವಸ್ಥಾನದಲ್ಲಿ ಬಾಳೆಹೊನ್ನೂರು ಜಗದ್ಗುರುಗಳು ವೃಷಿಭಾರೂಢ ಶ್ರೀಸೋಮನಾಥನಿಗೆ ವಿಶೇಷ ಪೂಜೆ ಸಲ್ಲಿಸಿದರು. ವಿಜಯದಶಮಿ ದಿನ ರಾತ್ರಿ ಕಾರಣಿಕ ನುಡಿಯುವ ನಾಗಪ್ಪ ಬಿಂಗಿ ಅವರಿಗೆ (ಆಯುಧ) ಉಕ್ಕಿನ ಖಡ್ಗ ಹಸ್ತಾಂತರಿಸಿದರು. ಬಳಿಕ ಜಗದ್ಗುರುಗಳು ಬೆಳ್ಳಿ-ಚಿನ್ನ ಲೇಪಿತ, ಪುಷ್ಪಾಂಲಕೃತ ಅಡ್ಡಪಲ್ಲಕ್ಕಿಯಲ್ಲಿ ಚಿನ್ನದ ಕಿರೀಟ, ರಾಜಪೋಷಾಕು ಧರಿಸಿ ವಿರಾಜಮಾನರಾಗುತ್ತಿದ್ದಂತೆಯೆ ನೆರೆದಿದ್ದ ಸಂಖ್ಯೆಯ ಭಕ್ತಗಣದಿಂದ ‘ಮಾನವ ಧರ್ಮಕ್ಕೆ  ಜಯವಾಗಲಿ ಧರ್ಮದಿಂದಲೇ ವಿಶ್ವಕ್ಕೆ ಶಾಂತಿ’ ವಂದೇ ರೇಣುಕಂ ಎಂಬ ವಿಶ್ವ ಮಾನವ ಸಂದೇಶದ ಘೋಷಣೆ ಮುಗಿಲು ಮುಟ್ಟಿತ್ತು. ನಾ ಮುಂದು ತಾ ಮುಂದು ಎಂಬಂತೆ ಅಡ್ಡಪಲ್ಲಕ್ಕಿ ಸೇವೆ ಮಾಡಲು ಮುಂದಾದರು. ವಾದ್ಯಮೇಳ, ಝೇಂಕಾರದೊಂದಿಗೆ ಹೊರಟ ಅಡ್ಡಪಲ್ಲಕ್ಕಿ ಕೆಳಗೆ ಶಿರಬಾಗಿ ಹೋಗುವ ಭಕ್ತರಿಗೆ ಶಾಂತಿ, ನೆಮ್ಮದಿ, ಸಂಪತ್ತು, ಸಮೃದ್ಧಿ, ಆಯುರಾರೋಗ್ಯ ನೀಡಲಿ ಎಂದು ಶ್ರೀಗಳು ಹೇಳಿದರು.

ಅಡ್ಡಪಲ್ಲಕ್ಕಿ ಮಹೋತ್ಸವ ಪೂರ್ಣಕುಂಭ, ಭಜನೆ, ನಂದಿಕೋಲು, ವೀರಗಾಸೆ, ಕುದರಿಕಾರ ಕುಣಿತ, ಜಗ್ಗಲಿಗೆ, ಮಹಿಳಾ ಡೊಳ್ಳು ಹೀಗೆ ಸಕಲ ವಾದ್ಯವೈಭವಗಳೊಂದಿಗೆ ಸಾಗರೋಪಾದಿಯ ಭಕ್ತಸಮೂಹದೊಂದಿಗೆ ಸಾಗಿತು. ಅಡ್ಡಪಲ್ಲಕ್ಕಿ ಸಾಗುವ ಮಾರ್ಗದುದ್ದಕ್ಕೂ ತಳೀರು, ತೋರಣ, ಪಂಚಾಚಾರ್ಯ ಧ್ವಜಗಳು, ರಂಗೋಲಿ ಬಿಡಿಸಿ ಅಲಂಕರಿಸಿ ಘೋಷಣೆ ಕೂಗುತ್ತಾ ಭಕ್ತಿಯಿಂದ ಸ್ವಾಗತಿಸಿ ಭಕ್ತಿ ಸಮರ್ಪಣೆಗೈದರು.

45 ವರ್ಷಗಳ ನಂತರ ಜಗದ್ಗುರುಗಳ ಅಡ್ಡ ಪಲ್ಲಕ್ಕಿ ಮಹೋತ್ಸವ ಕಾಣುವ ಭಾಗ್ಯ ಇಲ್ಲಿನ ಜನರದ್ದಾಯಿತು. ಅಡ್ಡಪಲ್ಲಕ್ಕಿ ಮಹೋತ್ಸವಕ್ಕೆ ನಾಡಿನಾದ್ಯಂತ ಭಕ್ತಸಾಗರವೇ ಹರಿದು ಬಂದು ಶ್ರೀಸೋಮೇಶ್ವರನ ಜಾತ್ರೆ ನಡೆಯುವ ಈ ರಥಬೀದಿಯಲ್ಲಿ ಸೇರಿದ್ದ ಭಕ್ತರ ಸಮಾಗಮ ಜಾತ್ರೆಯ ವಾತಾವರಣ ಸೃಷ್ಟಿಸಿತ್ತು. ನಾಡಿನಾದ್ಯಂತ ಭಕ್ತ ಸಮೂಹವೇ ಹರಿದು ಬಂದಿತ್ತು. ಶಾಸಕರು, ಮಾಜಿ ಶಾಸಕರು, ಜನಪ್ರತಿನಿಧಿಗಳು, ಸಮ್ಮೇಳನದ ವಿವಿಧ ಸಮಿತಿಯ ಸದಸ್ಯರು,ಯುವಕರು, ಸಂಘಟನೆಯವರು ಅಡ್ಡಪಲ್ಲಕ್ಕಿ ಉತ್ಸವ ವಿಜೃಂಭಣೆಯಿಂದ ಶ್ರಮಿಸಿದರು.ಸಂಜೆ 5ಕ್ಕೆ ದೇವಸ್ಥಾನದಿಂದ ಪ್ರಾರಂಭಗೊಂಡ ಅಡ್ಡಪಲ್ಲಕ್ಕಿ ಮಹೋತ್ಸವ ಆದಯ್ಯ ವೃತ್ತ, ಸೋಮೇಶ್ವರ ಪಾದಗಟ್ಟಿ, ಬಜಾರ ರಸ್ತೆ, ಪೇಟೆ ಹನಂತ ದೇವಸ್ಥಾನ, ವಿದ್ಯಾರಣ್ಯ ವೃತ್ತ, ಬಸ್ತಿಬಣ, ಪಂಪ ವೃತ್ತದ ಮುಖಾಂತರ ಸಾಗಿ ಮಾನವ ಧರ್ಮ ಮಂಟಪ ತಲುಪಿತು. ಬಳಿಕ ದಸರಾ ಮಹೋತ್ಸವ ಸಮಿತಿಯವರಿಂದ ಶಮಿ ಕಾಣಿಕ ಸಮರ್ಪಣೆ ಜರುಗುವ ಮೂಲಕ 27ನೇ ದಸರಾ ಧರ್ಮ ಸಮ್ಮೇಳನ ಸಂಪನ್ನಗೊಂಡಿತು.

Advertisement

Udayavani is now on Telegram. Click here to join our channel and stay updated with the latest news.

Next