Advertisement

ಲಕ್ಷದ್ವೀಪ:45ನೇ ಅಂತಾರಾಷ್ಟ್ರೀಯ ಸಾಂಸ್ಕೃತಿಕ ಸೌರಭ ಮತ್ತು ಸಾಂಸ್ಕೃತಿಕ ವಿನಿಮಯ

02:53 PM Aug 17, 2024 | Team Udayavani |

ಲಕ್ಷದ್ವೀಪ: ಅಂತಾರಾಷ್ಟ್ರೀಯ ಸಾಂಸ್ಕೃತಿಕ ಸೌರಭ ಪರಿಷತ್‌ (ಇಂ) ಹಾಗೂ ಅಗಟ್ಟಿ ಜಾನಪದ ಕಲಾ ಸಂಘಟನೆಗಳ ಸಹಯೋಗದೊಂದಿಗೆ 45ನೇ ಅಂತಾರಾಷ್ಟ್ರೀಯ ಸಾಂಸ್ಕೃತಿಕ ಸೌರಭ ಮತ್ತು ಸಾಂಸ್ಕೃತಿಕ ವಿನಿಮಯ ಕಾರ್ಯಕ್ರಮವನ್ನು ಲಕ್ಷದ್ವೀಪದ ಅಗಟ್ಟಿಯ ಸಿಲ್ವರ್‌ ಜುಬಿಲಿ ಮ್ಯೂಸಿಯಂ ಸಭಾಂಗಣದಲ್ಲಿ ಆ.10ರಂದು ಆಯೋಜಿಸಲಾಗಿತ್ತು.

Advertisement

ನಾವು ವಿಶ್ವಾಸ ಸೌಹಾರ್ದ ಪ್ರಿಯರು ಲಾಂಛನದ ಫ‌ಲಕವನ್ನು ಅನಾವರಣಗೊಳಿಸುವ ಮೂಲಕ ನಿವೃತ್ತ ಸೇನಾಧಿಕಾರಿ ಕೆ.ಕೆ. ಮಹಮದ್‌ ರೆಹಮಾನ್‌ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ದೇಶಪ್ರೇಮ ನಮ್ಮ ಮೂಲ ಮಂತ್ರವಾಗಬೇಕು. ನಾನು ಓರ್ವ ಸೈನಿಕನಾಗಿ 1972ರ ಭಾರತ ಪಾಕ್‌ ಯುದ್ಧದಲ್ಲಿ ಹೋರಾಡಿದ ಶೌರ್ಯದ ಆ ಕ್ಷಣಗಳು ನನ್ನನ್ನು ಇಂದಿಗೂ ರೋಮಾಂಚನಗೊಳಿಸುತ್ತವೆ ಎಂದರು.

ವಿಶೇಷ ಆಮಂತ್ರಿತರಾಗಿ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಜರ್ಮನಿಯ ಕನ್ಸಲ್ಟಿಂಗ್‌ ಆರ್ಕಿಟೆಕ್ಸ್‌ ರೋಸಾಲ್ಡ್‌ ಮೋಸ್ಲೆ ಮಾತನಾಡಿ, ರಾಜಕೀಯದ ಭಿನ್ನ ನಿಲುವಿನಿಂದಾಗಿ ನಿರ್ಮಾಣಗೊಂಡಿದ್ದ ಬರ್ಲಿನ್‌ ಗೋಡೆ ಸ್ನೇಹ, ಪ್ರೀತಿ ಬಾಂಧವ್ಯದ ಮುಂದೆ ಹೆಚ್ಚು ಕಾಲ ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಸೌಹಾರ್ದತೆ ಅದನ್ನು ಅತ್ಯಲ್ಪ ಕಾಲದಲ್ಲಿ ತೆರವುಗೊಳಿಸುವಂತೆ ಮಾಡಿತು ಎಂದರು.

ವಿಶ್ವದ ತುಂಬಾ ಶಾಂತಿ ಸಂದೇಶ ಬಿತ್ತುವುದು ಈ ಸಮಾರಂಭದ ಮೂಲ ಉದ್ದೇಶವಾಗಿದೆ. ಆದಿ ಕವಿ ಪಂಪ ಸಾರಿದ ಮಾನವ ಕುಲಂ ತಾನೊಂದೇ ವಲಂ ಸಾರ್ವಕಾಲಿಕ ಸತ್ಯವಾಗಿಸುವತ್ತಾ ನಾವು ಸಾಗೋಣ. ಸಕಲ ಜೀವಾತ್ಮಗಳಿಗೆ ಲೇಸನ್ನೇ ಬಯಸುವುದು ಬಸವಣ್ಣನವರ ಉದಾತ್ತ ಸಮಾಜದ ಪರಿಕಲ್ಪನೆ. ಯುದ್ಧ ವಿಮುಕ್ತ ಜಗತ್ತನ್ನು ಕಾಣುವ ಹಂಬಲ ಪ್ರತಿಯೊಬ್ಬರ ಹೃದಯದಿಂದ ಮೂಡಿಬರಲಿ ಎಂದು ಮಹಾಲಿಂಗಪುರದ ಕೆ. ಎಲ್‌. ಇ. ಕನ್ನಡ ವಿಭಾಗ ಮುಖ್ಯಸ್ಥ ಪ್ರೊ| ಅಶೋಕ್‌ ನರೋಡೆ ಅಭಿಪ್ರಾಯಪಟ್ಟರು.

Advertisement

ಮುಖ್ಯ ಅತಿಥಿ ಮೈಸೂರಿನ ಕ್ರೆಡಿಟ್‌ ಐ. ಮ್ಯಾನೇಜಿಂಗ್‌ ಟ್ರಸ್ಟಿ ಡಾ| ಎಂ. ಪಿ. ವರ್ಷ ಅವರು ಮಾತನಾಡಿ, ಲಕ್ಷದೀಪ ಜಗತ್ತಿನ ಸುಂದರ ತಾಣಗಳಲ್ಲಿ ಒಂದು. ಇದರ ಪ್ರಾಕೃತಿಕ ಸೌಂದರ್ಯ ಜಗತ್ತಿನಾದ್ಯಂತ ಇರುವ ಪ್ರವಾಸಿಗರನ್ನು ಸೆಳೆಯುವಲ್ಲಿ ಯಶಸ್ವಿಯಾಗಲಿದೆ. ಇನ್ನು ಕೆಲವೇ ವರ್ಷಗಳಲ್ಲಿ ಭೂಲೋಕದ ನಂದನವಾಗಲಿದೆ ಎಂದರು.

ಐಸಿಎಫ್‌ಸಿಐ ಅಧ್ಯಕ್ಷ ಕೆ. ಪಿ. ಮಂಜುನಾಥ್‌ ಸಾಗರ್‌ ಮಾತನಾಡಿ, ಸಾಂಸ್ಕೃತಿಕ ವಿನಿಮಯದಂತಹ ಕಾರ್ಯಕ್ರಮಗಳು ದೇಶ, ಭಾಷೆ ಮತ್ತು ಸಮುದಾಯಗಳ ನಡುವೆ ಸಾಮರಸ್ಯ ಮೂಡಿಸುವಲ್ಲಿ ಯಶಸ್ಸು ನೀಡುತ್ತವೆ. ಆದ್ದರಿಂದಲೇ ನಾವು ವಿಶ್ವದಾದ್ಯಂತ ವಿವಿಧ ದೇಶಗಳಲ್ಲಿ 45 ಅಂತಾರಾಷ್ಟ್ರೀಯ ಸಾಂಸ್ಕೃತಿಕ ಸೌರಭಗಳನ್ನು ಅತ್ಯಂತ ಯಶಸ್ವಿಯಾಗಿ ನಡೆಸಿಕೊಂಡು ಬಂದಿದ್ದೇವೆ ಎಂದರು.

ಇಂಡಿಯಾ ಮಾಸ್ಟರ್‌ ಆ್ಯಥ್ಲೆಟಿಕ್‌ ಫೆಡರೇಶನ್‌ನ ಅಧ್ಯಕ್ಷ ಡಾ| ಕೆ. ಬಿ. ನಾಗೂರ್‌, ಕನ್ನಡ ಚಲನಚಿತ್ರ ನಿರ್ಮಾಪಕ ಶಂಕ್ರೇಗೌಡ ಮೈಸೂರು, ಮೈಸೂರಿನ ನಿವೃತ್ತ ಜಿಲ್ಲಾಧಿಕಾರಿ ಡಾ| ಡಿ. ಎಸ್‌. ವಿಶ್ವನಾಥ್‌ ಐಎಎಸ್‌ ಮತ್ತು ಕರ್ನಾಟಕ ಜಾನಪದ ಕಲಾವಿದರು ಒಕ್ಕೂಟದ ಅಧ್ಯಕ್ಷ ಕೆ. ನಾಗರಾಜ್‌ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ವಿವಿಧ ಕ್ಷೇತ್ರಗಳ ಸಾಧಕರಾದ ಡಾ| ಆಂಜನೇಯ ರಾಯಚೂರು, ಗೋನಾಸ್ವಾಮಿ ಬೆಂಗಳೂರು, ಚಿತ್ರಾ ಮೈಸೂರು, ಡಾ| ಬಿ.ಎನ್‌. ಹೊರಪೇಟಿ ಮತ್ತು ಪ್ರಿಯದರ್ಶಿನಿ ಮುಂಡರಗಿಮಠ ಇವರಿಗೆ ಗೌರವ ಪ್ರಶಸ್ತಿ ನೀಡಲಾಯಿತು.

ಅಂತಾರಾಷ್ಟ್ರೀಯ ಗಾಯಕ ಗೋನಾ ಸ್ವಾಮಿ ಮತ್ತು ಪುಷ್ಪ ಆರಾಧ್ಯ, ಅಗಟ್ಟಿ ಗಾಯಕರಾದ ರಜಾಕ್‌ ಮತ್ತು ಶಹರ್ಬಾನು ಅವರಿಂದ ರಸ ಮಂಜರಿ ಕಾರ್ಯಕ್ರಮ, ಶಿವಮೊಗ್ಗ ಜಿಲ್ಲೆ ಗೌತಮಪುರದ ಜಾನಪದ ಕಲಾವಿದರಾದ ಬೆಳ್ಳಿಯಪ್ಪ ಬಂಗಾರಪ್ಪ ಮತ್ತು ಶೋಭಿ ಕುಮಾರ್‌ ಅವರಿಂದ ಡೊಳ್ಳುಕುಣಿತ, ಖ್ಯಾತ ಹಾಸ್ಯ ಮತ್ತು ಮಿಮಿಕ್ರಿ ಕಲಾವಿದ ಮಾದೇವ ಸತ್ತಿಗೈರಿ ಅವರಿಂದ ನಗೆ ಹೊನಲು, ಖ್ಯಾತ ಛಾಯಾಚಿತ್ರ ಗ್ರಾಹಕ ಸತೀಶ್‌ ಮುರಾಲ್‌ ಅರಿಂದ ಛಾಯಾಚಿತ್ರ, ಅನ್ಸಿಯ ಆಯೆಷಾ ತಂಡದಿಂದ ನೃತ್ಯ, ಸಭಾ ಮತ್ತು ತಂಡದಿಂದ ಮಕ್ಕಳ ನೃತ್ಯ, ಅಗಟ್ಟಿ ಜನಪದ ಕಲಾವಿದರಿಂದ ಪರಚು ಕಳಿ ಮತ್ತು ಉಳಕ್ಕ ಮಟ್ಟು ಜಾನಪದ ನೃತ್ಯಗಳು ವೀಕ್ಷಕರ ಮನಸೂರೆಗೊಂಡವು.

Advertisement

Udayavani is now on Telegram. Click here to join our channel and stay updated with the latest news.

Next