ಮಂಗಳೂರಿನ ಉರ್ವ ಮಾರ್ಕೆಟ್ ರಸ್ತೆಯಿಂದ ಚಿಲಿಂಬಿ ಕಡೆಗೆ ತಿರುಗುವ (ಲೇಡಿಹಿಲ್ ವೃತ್ತ) ರಸ್ತೆಯನ್ನು ಅಗಲಗೊಳಿಸಿ ಕಾಂಕ್ರೀಟ್ ಹಾಕುವ ಕಾಮಗಾರಿ ಕಳೆದೆರಡು ತಿಂಗಳ ಹಿಂದೆ ಆರಂಭಗೊಂಡಿದ್ದು, ಆರಂಭದಲ್ಲಿ ಕುಂಟುತ್ತಾ ಸಾಗಿತ್ತು. ಆದರೆ ಕಳೆದ ಎರಡು ವಾರಗಳಿಂದ ಕಾಮಗಾರಿ ಸಂಪೂರ್ಣ ಸ್ಥಗಿತಗೊಂಡಿದೆ.
ಲೇಡಿಹಿಲ್ ಶಾಲೆಯ ಆಡಳಿತ ಮಂಡಳಿಯು ರಸ್ತೆ ಅಗಲಗೊಳಿಸಲು ಈ ಹಿಂದೆಯೇ ಜಾಗ ನೀಡಿದ್ದರೂ, ಸಂಬಂಧಪಟ್ಟವರ ಇಚ್ಛಾಶಕ್ತಿಯ ಕೊರತೆಯಿಂದ ರಸ್ತೆ ಅಗಲಗೊಳಿಸುವ ಕಾಮಗಾರಿ ಬಹಳ ವಿಳಂಬವಾಗಿ ಆರಂಭಗೊಂಡು, ಈಗ ಸ್ಥಗಿತಗೊಂಡಿದೆ. ಇದರಿಂದ ಸಾರ್ವಜನಿಕರು, ಶಾಲಾ ವಿದ್ಯಾರ್ಥಿಗಳು ಸಾಕಷ್ಟು ತೊಂದರೆ ಅನುಭವಿಸುವಂತಾಗಿದೆ.
ಜನನಿಬಿಡ ಪ್ರದೇಶವಾದ ಲೇಡಿಹಿಲ್ ವೃತ್ತದ ಪರಿಸರದಲ್ಲಿ ಮೂರು ಶಾಲೆಗಳಿದ್ದು, ಬೃಹತ್ ಹೊಂಡದ ಸ್ವರೂಪ ಹೊಂದಿರುವ ಈ ಕಾಮಗಾರಿಯ ಪ್ರದೇಶ ಶಾಲಾ ಮಕ್ಕಳ ಸಂಚಾರಕ್ಕೆ ಅತ್ಯಂತ ಅಪಾಯಕಾರಿಯಾಗಿ ಪರಿಣಮಿಸುತ್ತಿದೆ. ಪಾದಚಾರಿಗಳಂತೂ ರಸ್ತೆ ಮಧ್ಯೆಯೇ ನಡೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಈ ಸಮಸ್ಯೆಯ ಬಗ್ಗೆ ಕೂಡಲೇ ಗಮನಹರಿಸಿ, ಸ್ಥಗಿತಗೊಂಡ ಕಾಂಕ್ರೀಟೀಕರಣ ಕಾಮಗಾರಿಯನ್ನು ಆರಂಭಿಸಿ, ಶೀಘ್ರವಾಗಿ ರಸ್ತೆಯನ್ನು ಸಾರ್ವಜನಿಕರಿಗೆ ಮುಕ್ತಗೊಳಿಸಬೇಕಾಗಿದೆ.
ಸತೀಶ್ ಶೆಟ್ಟಿ,
ಕೊಡಿಯಾಲ್‌ಬೈಲ್