Advertisement

ಡಿಸಿ ಬಳಿ ನ್ಯಾಯಕ್ಕಾಗಿ ಅಂಗಲಾಚಿದ ಮಹಿಳೆ

11:43 AM Jun 19, 2020 | Suhan S |

ಬೆಳಗಾವಿ: ತಹಶೀಲ್ದಾರ ಕಚೇರಿಯಲ್ಲಿ ಅನುಕಂಪ ಆಧಾರದ ಮೇಲೆ ಕೆಲಸಕ್ಕೆ ಸೇರಿಸಿಕೊಂಡು ನಂತರ ಕಿತ್ತು ಹಾಕಿರುವುದಕ್ಕೆ ನೊಂದಮಹಿಳೆ ಗುರುವಾರ ಜಿಲ್ಲಾಧಿಕಾರಿ ಕಚೇರಿಗೆ ಬಂದು ಕಣ್ಣೀರು ಸುರಿಸುತ್ತ ಜಿಲ್ಲಾಧಿಕಾರಿ ಡಾ. ಎಸ್‌.ಬಿ. ಬೊಮ್ಮನಹಳ್ಳಿ ಅವರ ಕಾಲಿಗೆ ಬಿದ್ದ ಪ್ರಸಂಗ ನಡೆಯಿತು. ಅಂಗವಿಕಲೆ ಆಗಿರುವ ಸಲೀಮಾ ರಾಮದುರ್ಗ ಎಂಬ ಮಹಿಳೆಯನ್ನು ಕೆಲಸದಿಂದ

Advertisement

ಕಿತ್ತು ಹಾಕಿ ಐದು ತಿಂಗಳ ಸಂಬಳ ಕೇವಲ 10 ಸಾವಿರ ರೂ. ನೀಡಿದ್ದಾರೆ. ಹೀಗಾಗಿ ಜಿಲ್ಲಾಧಿಕಾರಿ ಬಳಿ ನ್ಯಾಯಕ್ಕಾಗಿ ಮೊರೆ ಹೋಗಿದ್ದು, ಕಚೇರಿ ಆವರಣದಲ್ಲಿ ಕಣ್ಣೀರು ಸುರಿಸುತ್ತ ನಿಂತಿದ್ದಳು. ನ್ಯಾಯ ನೀಡುವಂತೆ ಜಿಲ್ಲಾಧಿಕಾರಿ ಕಾಲು ಬಳಿ ಕುಳಿತು ನನ್ನನ್ನು ಮತ್ತೆ ಕೆಲಸಕ್ಕೆ ಸೇರಿಸಿಕೊಳ್ಳುವಂತೆ ಅಂಗಲಾಚಿದಳು. ಎಚ್‌.ಡಿ. ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಆಗಿದ್ದಾಗ ನಡೆಸಿದ ಜನತಾ ದರ್ಶನದಲ್ಲಿ ಮಹಿಳೆ ಸಲೀಮಾ ಮನವಿ ಮಾಡಿಕೊಂಡಿದ್ದಳು. ಆಗ ತಹಶೀಲ್ದಾರ ಕಚೇರಿಯಲ್ಲಿ ಕೆಲಸ ನೀಡಲಾಗಿತ್ತು. ಐದು ತಿಂಗಳಲ್ಲೇ ಕೆಲಸದಿಂದ ಕಿತ್ತು ಹಾಕಲಾಗಿದೆ. ಅನೇಕ ಸಲ ಬೆಳಗಾವಿಗೆ ಬಂದು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರೂ ಮಹಿಳೆಗೆ ನ್ಯಾಯ ಮಾತ್ರ ಸಿಕ್ಕಿಲ್ಲ.

ಮಹಿಳೆಯ ಮನವಿಗೆ ಸ್ಪಂದಿಸಿದ ಜಿಲ್ಲಾಧಿಕಾರಿ ಡಾ. ಎಸ್‌ .ಬಿ. ಬೊಮ್ಮನಹಳ್ಳಿ ಅವರು ಗುತ್ತಿಗೆ ಆಧಾರದ ಮೇಲೆ ಕೆಲಸ ಕೊಡಿಸಲಾಗುವುದು ಎಂದು ಭರವಸೆ ನೀಡಿದರು. ಆದರೆ ಇದಕ್ಕೆ ಒಪ್ಪದ ಮಹಿಳೆ ಮತ್ತೆ ಕಣ್ಣೀರು ಹಾಕುತ್ತ ಕೈಲಿದ್ದ ಮನವಿಗಳನ್ನೆಲ್ಲ ಬೀಸಾಕಿ ಆಕ್ರೋಶ ವ್ಯಕ್ತಪಡಿಸಿದಳು. ನಂತರ ಈ ತರಹ ವರ್ತನೆ ಮಾಡಿದರೆ ಹೇಗೆ ಎಂದು ಜಿಲ್ಲಾಧಿಕಾರಿ ಬೊಮ್ಮನಹಳ್ಳಿ ಅಲ್ಲಿಂದ ತೆರಳಿದರು.

Advertisement

Udayavani is now on Telegram. Click here to join our channel and stay updated with the latest news.

Next