ಕೊಪ್ಪಳ: ತುಂಗಭದ್ರೆ ಜಿಲ್ಲೆಯಲ್ಲೇ ಇದ್ದರೂ ಹಲವು ಹಳ್ಳಿಗಳಿಗೆ ಈಗಲೂ ಕುಡಿಯುವ ನೀರಿನ ಅಭಾವ ಇದೆ. ನೀರಿಗಾಗಿ ಹೊಲ, ಗದ್ದೆ ಅಲೆದಾಟ ಇನ್ನೂ ತಪ್ಪಿಲ್ಲ. ಇದಕ್ಕೆ ಉದಾಹರಣೆ ಎಂಬಂತೆ ಕುಷ್ಟಗಿ ತಾಲೂಕಿನ ಮಿಯ್ಯಾಪುರ ಗ್ರಾಮದಲ್ಲಿ ಕಳೆದ 2 ವರ್ಷದಿಂದ ನೀರಿಗೆ ಪರದಾಟ ನಡೆದಿದೆ. ಮಳೆಗಾಲದಲ್ಲೂ ಇಲ್ಲಿನ ಜನತೆ ನೀರಿನ ಜಪ ಮಾಡುವಂತಾಗಿದೆ.
ಕುಷ್ಟಗಿ ತಾಲೂಕು ಮೊದಲೇ ನೀರಾವರಿ ವಂಚಿತ ಪ್ರದೇಶ. ಇಲ್ಲಿ ಕುಡಿಯುವ ನೀರಿಗೂ ದೊಡ್ಡ ಅಭಾವ ಇದೆ. ಇದು ಜನಪ್ರತಿನಿಧಿ ಗಳಿಗೂ ಗೊತ್ತಿರುವ ವಿಚಾರ. ಆದರೆ ಜಿಲ್ಲಾಡಳಿತ, ನೀರಿನ ಸಮಸ್ಯೆಯನ್ನು ನಿವಾರಿಸಲು ಪರ್ಯಾಯ ವ್ಯವಸ್ಥೆ ಮಾಡದೇ ಇರುವುದು ಬೇಸರದ ಸಂಗತಿ. ತಿರುಗಿ ನೋಡದ ಅಧಿಕಾರಿಗಳು: 4 ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಇರುವ ಮಿಯ್ನಾಪೂರ ಗ್ರಾಮದಲ್ಲಿ ಕಳೆದೆರಡು ವರ್ಷದಿಂದ ನೀರಿಗೆ ಅಭಾವ ಎದುರಾಗಿದೆ. ಕುಡಿಯುವ ನೀರು ಸಿಕ್ಕರೆ ಇಲ್ಲಿನ ಜನತೆಗೆ ಅಮೃತ ಸಿಕ್ಕಂತೆ. ಗ್ರಾಮದಲ್ಲಿ ಮೂವರು ಗ್ರಾಪಂ ಸದಸ್ಯರು ಇದ್ದರೂ ಸಹಿತ ಕಳೆದ 2 ವರ್ಷದಿಂದ ನೀರಿನ ಬವಣೆ ತಪ್ಪಿಲ್ಲ. ಅವರು ತಕ್ಕ ಮಟ್ಟಿಗೆ ಪರ್ಯಾಯ ವ್ಯವಸ್ಥೆಗೆ ಪ್ರಯತ್ನಿಸಿದ್ದಾರಾದರೂ ನೀರಿನ ಸಮಸ್ಯೆಯನ್ನು ಶಾಶ್ವತವಾಗಿ ಹೋಗಲಾಡಿಸಲು ಆಗಿಲ್ಲ. ಅಧಿಕಾರಿಗಳ್ಯಾರೂ ಇತ್ತ ತಿರುಗಿಯೂ ನೋಡಿಲ್ಲ. ಇಲ್ಲಿನ ಜನತೆ ನೀರಿಗಾಗಿ ಸುತ್ತಲಿನ ಹೊಲ, ಗದ್ದೆಗಳಿಗೆ ಇಂದಿಗೂ ಅಲೆದಾಟ ನಡೆಸುತ್ತಿದ್ದಾರೆ. ಹೊಲಗಳಿಗೆ ತೆರಳಿದರೆ ನಮ್ಮ ಜಮೀನಿನ ಬೆಳೆ ಹಾಳಾಗುತ್ತದೆ. ಇಲ್ಲಿ ಸುತ್ತಾಡಬೇಡಿ ಎಂದೆನ್ನುತ್ತಿದ್ದಾರೆ.
ಇದರಿಂದ ಗ್ರಾಮಸ್ಥರಿಗೆ ನೀರಿನದ್ದೇ ಚಿಂತೆಯಾಗಿದೆ. ಮನೆಯಲ್ಲಿ ಒಬ್ಬರು ಕಾಯಂ ಠಿಕಾಣಿ: ಮನೆಯಲ್ಲಿ ದಿನನಿತ್ಯದ ಬಳಕೆ ಸೇರಿ ಕುಡಿಯುವ ನೀರಿಗಾಗಿ ಒಬ್ಬರು ನಿತ್ಯದ ಕೆಲಸ ಬಿಟ್ಟು ಮನೆಯಲ್ಲೇ ಇರಬೇಕು. ಕೂಲಿ ಕೆಲಸಕ್ಕೂ ಹೋಗುವಂತಿಲ್ಲ. ಮನೆಯಲ್ಲಿ ಅಜ್ಜ, ಅಜ್ಜಿಯಂದಿರೂ ನೀರು ತರುವಂಥ ಪರಿಸ್ಥಿತಿ ಇಲ್ಲಿದೆ. ಈಗ ಶಾಲೆಗಳು ರಜೆಯಿದ್ದು ಮಕ್ಕಳು ನಿತ್ಯ ಖಾಲಿ ಕೊಡ ಹಿಡಿದು ನಳದ ಮುಂದೆ ನೀರಿಗಾಗಿ ನಿಲ್ಲುವಂತಾಗಿದೆ. ಮನೆಯ ಹಿರಿಯರು ಕೆಲಸಕ್ಕೆ ಹೋಗಬೇಕು. ಇಲ್ಲದಿದ್ದರೆ ಉಪ ಜೀವನ ನಡೆಯಲ್ಲ. ನೀರಿಗಾಗಿ ಕೆಲಸ ಬಿಡುವಂತಹ ಪರಿಸ್ಥಿತಿಯಿದೆ ಎಂದೆನ್ನುತ್ತಾರೆ ಇಲ್ಲಿನ ಜನ.
ಇನ್ನು ಗ್ರಾಮದ ಸಮೀಪದಲ್ಲಿ ಹಲವರು ಬೋರವೆಲ್ ಕೊರೆಯಿಸಿದ್ದಾರೆ. ಅವುಗಳಲ್ಲೂ ನೀರು ಬಂದಿಲ್ಲ. ಸದ್ಯ ಒಂದೇ ಒಂದು ಬೋರವೆಲ್ ಇದ್ದು, ಒಂದಿಂಚು ನೀರು ಮಾತ್ರ ಬರುತ್ತಿದೆ. ಅದೇ ನೀರಿನಲ್ಲಿ ಇಡೀ ದಿನವೇ ಜನರು ಸರದಿ ಸಾಲಿನಲ್ಲಿ ಖಾಲಿ ಕೊಡಗಳನ್ನಿಡಿದು ನಿಲ್ಲಬೇಕು. ಇಡೀ ಊರಿನ ಜನ ಒಂದಿಂಚಿನ ನೀರಿನಲ್ಲಿ ಜೀವನ ಮಾಡುವಂತಾಗಿದೆ. ಗ್ರಾಮ ಪಂಚಾಯಿತಿಯೂ ಕೆಲ ಕಡೆ ಬೋರವೆಲ್ ಕೊರೆಯಿಸಿದರೂ ನೀರು ಬಂದಿಲ್ಲ. ಸರ್ಕಾರ, ಶಾಸಕರು, ಜಿಲ್ಲಾಡಳಿತ, ಜಿಪಂ ಕೋಟ್ಯಾಂತರ ರೂ. ಕುಡಿಯುವ ನೀರಿಗೆ ಹಣ ವ್ಯಯಿಸುತ್ತಿವೆ. ಆದರೆ ಇಂತಹ ಹಳ್ಳಿಗಳಲ್ಲಿ ಮಾತ್ರ ನೀರಿನ ಬವಣೆ ನಿವಾರಣೆಯಾಗಿಲ್ಲ. ಅಧಿಕಾರಿ ವರ್ಗ ಇನ್ನಾದರೂ ಕಣ್ತೆರೆದು ನೋಡಿ ಜನರಿಗೆ ನೀರು ಕೊಡುವ ಕೆಲಸ ಮಾಡಬೇಕಿದೆ.
ನಮ್ಮ ಗ್ರಾಮದಲ್ಲಿ ಕಳೆದೆರಡು ವರ್ಷದಿಂದ ಕುಡಿಯುವ ನೀರಿನ ಸಮಸ್ಯೆಯಿದೆ. ಮಳೆಗಾಲ, ಚಳಿಗಾಲದಲ್ಲೂ ನಮಗೆ ನೀರಿನಬವಣೆ ತಪ್ಪಿಲ್ಲ. ನೀರಿಗಾಗಿಯೇ ಪ್ರತಿದಿನ ಒಬ್ಬರು ಕಾಯಂ ಮನೆಯಲ್ಲೇ ಇರಬೇಕು. ಇಲ್ಲದಿದ್ದರೆ ನಮಗೆ ನೀರು ಸಿಗಲ್ಲ. ನೀರಿಗಾಗಿ ಹೊಲ, ಗದ್ದೆಗಳಿಗೆ ಅಲೆದಾಡುವಂತಾಗಿದೆ. ಸಂಬಂಧಿಸಿದ ಅಧಿಕಾರಿಗಳು ಕೂಡಲೇ ನಮ್ಮೂರಿನ ನೀರಿನ ಸಮಸ್ಯೆಯನ್ನು ಬಗೆಹರಿಸಲಿ.
– ಬಸವರಾಜ ಆರ್/ರತ್ನವ್ವ , ಮಿಯ್ನಾಪೂರ ಗ್ರಾಮಸ್ಥರು
-ದತ್ತು ಕಮ್ಮಾರ