Advertisement

ಗ್ರಾಪಂ ಕೇಂದ್ರ ಸ್ಥಾನದಲ್ಲೇ ನೀರಿಗೆ ಅಭಾವ

01:57 PM Apr 16, 2023 | Team Udayavani |

ಕನಕಪುರ: ಮುಳ್ಳಹಳ್ಳಿ ಗ್ರಾಮದಲ್ಲಿ ನೀರಿನ ಸಮಸ್ಯೆ ತಲೆದೂರಿದ್ದು, ಸಮಸ್ಯೆ ಬಗ್ಗೆ ಮನವಿ ಮಾಡಿದರೂ, ಸ್ಪಂದಿಸದ ಅಧಿಕಾರಿಗಳ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Advertisement

ತಾಲೂಕಿನ ಉಯ್ಯಂಬಳ್ಳಿ ಹೋಬಳಿಯ ಗ್ರಾಪಂ ಕೇಂದ್ರ ಸ್ಥಾನ ಮುಳ್ಳಹಳ್ಳಿ ಗ್ರಾಮದಲ್ಲಿ ಕಳೆದೆರಡು ತಿಂಗಳಿಂದ ನೀರಿನ ಅಭಾವ ಸೃಷ್ಟಿಯಾಗಿದ್ದು, ಗ್ರಾಪಂ ಅಧಿಕಾರಿಗಳು ಚುನಾಯಿತ ಜನಪ್ರತಿನಿಧಿಗಳ ಗಮನಕ್ಕೆ ತಂದರೂ, ಯಾವುದೇ ಪ್ರಯೋಜನವಾಗಿಲ್ಲ. ಇಂದು ನಾಳೆ ಎಂದು ಕಾಲಹರಣ ಮಾಡುತ್ತಿರುವ ಅಧಿಕಾರಿಗಳ ಬೇಜವಾಬ್ದಾರಿತನದಿಂದ ಗ್ರಾಮದ ಜನರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಮುಳ್ಳಹಳ್ಳಿ ಗ್ರಾಮದ ರೈತ ಸಂಘದ ಮಂಜುನಾಥ್‌ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರೈತರಿಗೆ ನೀರಿನ ಸಮಸ್ಯೆ: ಕಳೆದ ಎರಡು ತಿಂಗಳಿಂದಲೇ ನಮ್ಮ ಬೀದಿಗೆ ನೀರು ಪೂರೈಕೆ ಮಾಡುತ್ತಿದ್ದ ಕೊಳವೆ ಬಾವಿಯಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿತ್ತು. ಆಗಲೇ ಅಧಿಕಾರಿಗಳ ಗಮನಕ್ಕೂ ತರಲಾಗಿತ್ತು. ಆದರೆ, ಪ್ರಯೋಜನವಾಗಿಲ್ಲ. ನಮ್ಮ ಗ್ರಾಮದಲ್ಲಿ ನೀರಿನ ಅಭಾವದಿಂದ ಹೈನುಗಾರಿಕೆ, ಕೃಷಿ ನಂಬಿಕೊಂಡಿರುವ ರೈತರಿಗೆ ನೀರಿನ ಸಮಸ್ಯೆ ಹೆಚ್ಚಾಗಿದೆ. ಆದರೆ, ಗ್ರಾಪಂ ಅಧಿಕಾರಿಗಳು ಮಾತ್ರ ಕುಂಟು ನೆಪಗಳನ್ನು ಮಾಡಿಕೊಂಡು ಗ್ರಾಮದಲ್ಲಿ ತಲೆದೂರಿರುವ ನೀರಿನ ಸಮಸ್ಯೆ ಬಗೆಹರಿಸಲು ಮೀನಮೇಷ ಎಣಿಸುತ್ತಿದ್ದಾರೆ ಎಂದು ಆರೋಪಿಸಿದರು.

ಚುನಾವಣಾ ನೆಪ ಹೇಳಿ ಜಾರಿಕೊಳ್ಳುತ್ತಿದ್ದಾರೆ: ಬೇಸಿಗೆ ಆರಂಭವಾಗಿದ್ದು, ಕೊಳವೆಬಾವಿಯಲ್ಲಿ ನೀರಿನಮಟ್ಟ ಮತ್ತಷ್ಟು ಕುಸಿದು ನೀರಿನ ಅಭಾವ ಮತ್ತಷ್ಟು ಹೆಚ್ಚಾಗಿದೆ. ಸಮಸ್ಯೆ ಬಗೆಹರಿಸಬೇಕಾದ ಗ್ರಾಪಂ ಕಾರ್ಯದರ್ಶಿಗಳು ಮತ್ತು ಅಭಿವೃದ್ಧಿ ಅಧಿಕಾರಿಗಳು ನಾವು ಚುನಾವಣಾ ಕರ್ತವ್ಯದಲ್ಲಿ ಇದ್ದೇವೆ. ಈಗ ಏನು ಮಾಡಲು ಸಾಧ್ಯವಿಲ್ಲ ಎಂದು ಜಾರಿಕೊಳ್ಳುತ್ತಿದ್ದಾರೆ. ಎರಡು ತಿಂಗಳ ಹಿಂದೆಯೇ ಗಮನಕ್ಕೆ ತಂದರು ಸಮಸ್ಯೆ ಬಗೆಹರಿಸದೆ, ಈಗ ಚುನಾವಣೆ ನೆಪ ಮಾಡಿಕೊಂಡು ಗ್ರಾಪಂ ಅಧಿಕಾರಿಗಳ ಜೊತೆಗೆ ಅಧ್ಯಕ್ಷರು, ಸ್ಥಳೀಯ ಸದಸ್ಯರು ತಮಗೂ ಇದಕ್ಕೂ ಸಂಬಂಧವೇ ಇಲ್ಲವೆಂಬಂತೆ ವರ್ತಿಸುತ್ತದ್ದಾರೆ ಎಂದು ದೂರಿದರು.

ಜನರ ಸಮಸ್ಯೆಗೆ ಸ್ಪಂದಿಸಲ್ಲ: ಮುಳ್ಳಹಳ್ಳಿ ಗ್ರಾಪಂ ಅಧಿಕಾರಿಗಳು ಜನಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸುವುದಿಲ್ಲ. ಲಂಚ ಕೊಡದೆ ಯಾವುದೇ ಕೆಲಸ ಕಾರ್ಯ ಮಾಡಿ ಕೊಡುವುದಿಲ್ಲ. ಇ-ಖಾತೆ ಮಾಡಿಕೊಡಲು ಹತ್ತು ಸಾವಿರ ರೂಪಾಯಿ ಲಂಚ ಕೊಡಬೇಕು. ಅದನ್ನು ಪ್ರಶ್ನೆ ಮಾಡಿದರೆ ರೈತರ ಕೆಲಸ ಕಾರ್ಯ ಮಾಡಿಕೊಡದೆ ವಿಳಂಬ ಧೋರಣೆ ಮಾಡುತ್ತಾರೆ ಎಂದು ಆರೋಪಿಸಿದರು.

Advertisement

ಸಮಸ್ಯೆ ಬಗೆಹರಿಸದಿದ್ದರೆ ಪ್ರತಿಭಟನೆ ಎಚ್ಚರಿಕೆ: ಗ್ರಾಪಂ ಆಡಳಿತ ಯಂತ್ರವನ್ನು ಸರಿ ದಾರಿಗೆ ತರಬೇಕಾದ ಅಧ್ಯಕ್ಷರಿಗೆ ಸಣ್ಣಪುಟ್ಟ ಕೆಲಸ ಕಾರ್ಯಗಳಿಗೂ ಲಂಚ ಕೊಡಬೇಕು. ಮುಳ್ಳಹಳ್ಳಿ ಗ್ರಾಪಂ ಜನರ ಸುಲಿಗೆ ಕೇಂದ್ರವಾಗಿ ಮಾರ್ಪಡುತ್ತಿದೆ. ಮೇಲಧಿಕಾರಿಗಳು ಸ್ಥಳಕ್ಕೆ ಬಂದು ಸಮಸ್ಯೆ ಬಗೆಹರಿಸಿ ಜಿಡ್ಡು ಹಿಡಿದಿರುವ ಗ್ರಾಪಂ ಆಡಳಿತ ಯಂತ್ರವನ್ನು ಸರಿಪಡಿಸಬೇಕು. ಇಲ್ಲದಿದ್ದರೆ, ಗ್ರಾಮದ ಜನರು ಗ್ರಾಪಂ ಎದುರು ಖಾಲಿ ಕೊಡ ಪ್ರದರ್ಶಿಸಿ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಮುಳ್ಳಹಳ್ಳಿ ಗ್ರಾಮದ ರೈತ ಸಂಘದ ಮಂಜುನಾಥ್‌ ಎಚ್ಚರಿಕೆ ನೀಡಿದರು.

ಮುಳ್ಳಹಳ್ಳಿ ಗ್ರಾಮದಲ್ಲಿ ನೀರಿನ ಸಮಸ್ಯೆ ಇರುವುದು ನನ್ನ ಗಮನಕ್ಕೆ ಬಂದಿಲ್ಲ. ಗ್ರಾಪಂ ಅಧಿಕಾರಿಗಳು ಚುನಾವಣಾ ಕರ್ತವ್ಯದಲ್ಲಿದ್ದಾರೆ. ಕೂಡಲೇ ಸಮಸ್ಯೆ ಬಗೆಹರಿಸಲು ಕ್ರಮ ಕೈಗೊಳ್ಳುತ್ತೇವೆ. ● ಭೈರಪ್ಪ, ತಾಪಂ ಇಒ, ಕನಕಪುರ

Advertisement

Udayavani is now on Telegram. Click here to join our channel and stay updated with the latest news.

Next