ಹೊಳೆಹೊನ್ನೂರು: ರಾಜ್ಯ ಸರ್ಕಾರದಿಂದ ಯಾವುದೇ ಹಣ ಬಿಡುಗಡೆಯಾಗದೇ ಇರುವ ಹಿನ್ನಲೆಯಲ್ಲಿ ರಸ್ತೆಗಳು ಹಾಳಾಗಿರುವುದರಿಂದ ಗ್ರಾಮಸ್ಥರೇ ರಸ್ತೆ ಗುಂಡಿಗಳನ್ನು ಮುಚ್ಚುವ ಪರಿಸ್ಥಿತಿ ನಿರ್ಮಾಣವಾಗಿದೆ.
ಇಲ್ಲಿನ ಸಮೀಪದ ಇಟ್ಟಿಗೆಹಳ್ಳಿ ಗ್ರಾಮಕ್ಕೆ ಓಡಾಡುವ ರಸ್ತೆ ಹಾಳಾಗಿರುವುದರಿಂದ ಆನವೇರಿಯ ಗ್ರಾಮ ಪಂಚಾಯಿತಿ ಸದಸ್ಯ ತಿಪ್ಪೇಶರವರು ತಾವೇ ಮುಂದೆ ನಿಂತು ಪಂಚಾಯಿತಿಯ ಸಿಬ್ಬಂದಿಯೊಂದಿಗೆ ರಸ್ತೆಗಳಿಗೆ ಮಣ್ಣು ಸುರಿದು ಗುಂಡಿ ಮುಚ್ಚುತ್ತಿದ್ದಾರೆ.
ಎಡೆಬಿಡದೆ ಸುರಿದ ಮಳೆಯಿಂದಾಗಿ ಆನವೇರಿಯಿಂದ ಇಟ್ಟಿಗೆಹಳ್ಳಿ ಸಂರ್ಪಕ ಕಲ್ಪಿಸುವ ಡಾಂಬರ್ ರಸ್ತೆ ಹಲವಡೆ ಸಂಪೂರ್ಣವಾಗಿ ಕಿತ್ತು ಹೋಗಿತ್ತು. ಮಳೆಯ ನೀರು ಗುಂಡಿಗಳಲ್ಲಿ ನಿಂತು ರಸ್ತೆಯಲ್ಲಿ ದೊಡ್ಡ ಗಾತ್ರದ ಗುಂಡಿಗಳಾಗಿದವು. ಗುಂಡಿಯಮ ರಸ್ತೆಯಲ್ಲಿ ದ್ವಿಚಕ್ರ ವಾಹನ ಸವಾರರು ಓಡಾಡುವುದು ಸಹ ಕಷ್ಟವಾಗುತ್ತಿತ್ತು.
ಇಟ್ಟಿಗೆಹಳ್ಳಿಯ ನೀರುಗಂಟಿ ಪರುಶುರಾಮ್ ಹಾಗೂ ಆನವೇರಿ ಗ್ರಾಮ ಪಂಚಾಯಿತಿ ಕರವಸೂಲಿಗಾರ ರಘು ಹಾಗೂ ಇಟ್ಟಿಗೆಹಳ್ಳಿ ಯುವಕ ಸುನೀಲ್ ಆನವೇರಿ ಗ್ರಾಮ ಪಂಚಾಯಿತಿ ಸದಸ್ಯ ತಿಪ್ಪೇಶ್ ನೆರವಿಗೆ ಬಂದಿದ್ದಾರೆ. ನಾಲ್ಕು ಜನ ಸೇರಿ ರಸ್ತೆಯ ಗುಂಡಿಗಳಿಗೆ ಮಣ್ಣು ಸುರಿದು ಓಡಾಟಕ್ಕೆ ಅನುವು ಮಾಡಿಕೊಟ್ಟಿದ್ದಾರೆ. ಗ್ರಾಮ ಪಂಚಾಯಿತಿ ಸದಸ್ಯರ ಕೆಲಸಕ್ಕೆ ಸಾವಿರಾರು ಜನ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ನೂರು ವರ್ಷ ಬದುಕುತ್ತೇನೆ ಎಂಬುದು ಗಮ್ಯವೇ?…ಎಲ್ಲದರ ಗಮ್ಯ ಒಂದೇ…ಆದರೂ ಒಂದೇ ಅಲ್ಲ !