Advertisement
ದೈಹಿಕ ಶಿಕ್ಷಣಕ್ಕೆ ಸಂಬಂಧಿಸಿದಂತೆ ಶಿಕ್ಷಕರ ಮೂಲ ಸೌಲಭ್ಯ ಕೊರತೆ ನೀಗಿಸುವ ವಿಷಯದಲ್ಲಿ ಸರಕಾರದ ನಿರ್ಲಕ್ಷ್ಯ ಮುಂದುವರಿದಿದ್ದು, ತಾಲೂಕಿನಲ್ಲಿ ವಿದ್ಯಾ ರ್ಥಿಗಳಿಗೆ ದೈಹಿಕ ಶಿಕ್ಷಣ ಕಾಟಾಚಾರಕ್ಕೆ ಎಂಬಂತಿದೆ ಎನ್ನುವುದಕ್ಕೆ ಖಾಲಿ ಇರುವ ಹುದ್ದೆಗಳ ಅಂಕಿ ಅಂಶವೇ ಸಾಕ್ಷಿ.
Related Articles
Advertisement
ಡಾ| ಎಲ್.ಆರ್. ವೈದ್ಯನಾಥ ವರದಿ ಪ್ರಕಾರ 6ರಿಂದ 10ನೇ ತರಗತಿವರೆಗೆ ದೈಹಿಕ ಶಿಕ್ಷಣವನ್ನು ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಕಡ್ಡಾಯವಾಗಿ ಬೋಧಿಸಬೇಕು ಮತ್ತು ಪ್ರತಿಯೊಂದು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ದೈಹಿಕ ಶಿಕ್ಷಕರು ಇರಲೇಬೇಕೆಂಬ ನಿಯಮ ಇದೆ. 6ರಿಂದ 10ನೇ ತರಗತಿವರೆಗೆ ದೈಹಿಕ ಶಿಕ್ಷಣ ಪಠ್ಯಕ್ರಮ ಇದೆ. ಆದರೆ ಪ್ರಸ್ತುತ ದೈಹಿಕ ಶಿಕ್ಷಕರ ಕೊರತೆಯೇ ಹೆಚ್ಚಿದೆ. ಇದರಿಂದ ದೈಹಿಕ ಶಿಕ್ಷಣಕ್ಕೆ ಸಂಬಂಧಿಸಿದಂತೆ ಬಹುತೇಕ ಶಾಲೆಗಳಲ್ಲಿ ಪಾಠ ಬೋಧನೆಯನ್ನು ಇತರ ಸಹ ಶಿಕ್ಷಕರು ನಡೆಸುವಂತೆ ಸೂಚಿಸಲಾಗಿದೆ. ಇದರಿಂದ ಮಕ್ಕಳಿಗೆ ಪರಿಣಾಮಕಾರಿಯಾಗಿ ದೈಹಿಕ ಶಿಕ್ಷಣ ಬೋಧನೆಯಾಗುತ್ತಿಲ್ಲ ಎನ್ನುವುದು ಪೋಷಕರ ದೂರು.
ನೇಮಕ ಮರೀಚಿಕೆ
ಕಳೆದ ಹಲವು ವರ್ಷಗಳಿಂದ ದೈಹಿಕ ಶಿಕ್ಷಣ ಶಿಕ್ಷಕರ ಹೊಸ ನೇಮಕಾತಿ ಆಗಿಲ್ಲ. ಶಾಲೆಗಳು ಹಾಗೂ ಮಕ್ಕಳ ಸಂಖ್ಯೆಯ ಅನುಪಾತದಲ್ಲಿ ಹುದ್ದೆ ಮಂಜೂರು ಮಾಡಲಾಗುತ್ತಿದೆ. ಆದರೆ ಹೊಸ ಹುದ್ದೆಗಳ ಮಂಜೂರಾತಿಗೆ ಅನುಸರಿಸುವ ಮಾನದಂಡ ಹಳೆಯದು. ಕೆಲವು ವರ್ಷಗಳಿಂದ ಮಕ್ಕಳ ಸಂಖ್ಯೆ ಕಡಿಮೆ ಎಂಬ ನೆಪವೊಡ್ಡಿ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಹುದ್ದೆಯನ್ನು ಜನರಲ್ ಶಿಕ್ಷಕ ಹುದ್ದೆಯಾಗಿ ಪರಿವರ್ತಿಸಲಾಗುತ್ತಿದೆ. ಇದರಿಂದ ಹೆಚ್ಚಿನ ಶಾಲೆಗಳಲ್ಲಿ ದೈಹಿಕ ಶಿಕ್ಷಣ ಶಿಕ್ಷಕ ಹುದ್ದೆಗಳೇ ಇಲ್ಲವಾಗುತ್ತಿದೆ.
ಎರಡು ವರ್ಷದ ಬಳಿಕ ಚಟುವಟಿಕೆ
ಕೋವಿಡ್ ಕಾರಣದಿಂದ ಎರಡು ವರ್ಷಗಳ ಕಾಲ ಶಾಲೆಗಳಲ್ಲಿ ದೈಹಿಕ ಶಿಕ್ಷಣಕ್ಕೆ ಸಂಬಂಧಿಸಿ ತರಬೇತಿ ನಡೆದಿಲ್ಲ. ಇದರಿಂದ ಕ್ರೀಡಾ ಕ್ಷೇತ್ರದ ಹೊಸ ಪ್ರತಿಭೆಗಳಿಗೆ ಹಿನ್ನೆಡೆ ಉಂಟಾಗಿದೆ. ಪ್ರಸ್ತುತ ಈ ವರ್ಷ ದೈಹಿಕ ಶಿಕ್ಷಣಕ್ಕೆ ಸಂಬಂಧಿಸಿ ತರಗತಿಗಳು ಪುನರಾರಂಭಗೊಂಡಿದ್ದು ಎರಡು ವರ್ಷದ ಬಳಿಕ ವಿದ್ಯಾರ್ಥಿಗಳು ಮೈದಾನಕ್ಕೆ ಇಳಿಯುತ್ತಿದ್ದಾರೆ. ಹಾಗಾಗಿ ಅಭ್ಯಾಸ ಕ್ರಮ ಆರಂಭದಿಂದಲೇ ಆಗಬೇಕು. ಆದರೆ ಬಹುತೇಕ ಶಾಲೆಗಳಲ್ಲಿ ದೈಹಿಕ ಶಿಕ್ಷಣಕ್ಕೆ ಸಂಬಂಧಿಸಿದಂತೆ ಮೂಲ ಸೌಲಭ್ಯಗಳ ಕೊರತೆಯೂ ಎದ್ದು ಕಾಣುತ್ತಿದೆ. ಕ್ರೀಡಾ ಸಾಮಗ್ರಿಗಳು ಮತ್ತು ಬೋಧನ ಉಪಕರಣಗಳ ಕೊರತೆ ಉಂಟಾಗಿದೆ. ವಲಯ, ತಾಲೂಕು ಮಟ್ಟದ ಕ್ರೀಡಾಕೂಟಗಳಿಗೆ ದಿನ ನಿಗದಿ ಪಡಿಸಲಾಗಿದ್ದು ಕೆಲವು ಸ್ಪರ್ಧೆಗಳು ನಡೆದಿವೆ. ಕಳೆದೆರೆಡು ವರ್ಷದ ಹಿಂದಕ್ಕೆ ಹೋಲಿಸಿದರೆ ಕ್ರೀಡಾಪಟುಗಳ ಸಾಮರ್ಥ್ಯ ಕುಸಿದಿರುವುದನ್ನು ತರಬೇತುದಾರರು ದೃಢಪಡಿಸಿದ್ದಾರೆ. ಮೈದಾನ ಆಧಾರಿತ (ಹೊರಾಂಗಣ) ಅಭ್ಯಾಸ ಕ್ರಮ ಮಾತ್ರ ಇಲ್ಲಿ ಇದ್ದು ಒಳಾಂಗಣ ಸ್ಟೇಡಿಯಂ ಕೊರತೆಯ ಕಾರಣದಿಂದ ಮಳೆಗಾಲದಲ್ಲಿ ಅಭ್ಯಾಸವು ಸಾಗುತ್ತಿಲ್ಲ. ಹೀಗಾಗಿ ದೈಹಿಕ ಶಿಕ್ಷಣ ಕ್ಷೇತ್ರ ಹಲವು ಸಮಸ್ಯೆಗಳಿಂದ ಬಳಲುತ್ತಿದೆ.
ಲಭ್ಯ ಶಿಕ್ಷಕರ ತರಬೇತಿ: 2 ವರ್ಷಗಳ ಬಳಿಕ ಶಾಲೆಗಳಲ್ಲಿ ದೈಹಿಕ ಶಿಕ್ಷಣ ತರಗತಿಗಳು ಮತ್ತೆ ಪ್ರಾರಂಭಗೊಂಡಿದೆ. ವಲಯ, ತಾ| ಮಟ್ಟದ ಕ್ರೀಡಾಕೂಟಕ್ಕೆ ದಿನ ನಿಗದಿ ಯಾಗಿದೆ. ಈಗಾಗಲೇ ಈಜು ಸ್ಪರ್ಧೆ ಮುಗಿದಿದೆ. ದೈಹಿಕ ಶಿಕ್ಷಣ ಶಿಕ್ಷಕರ ಹುದ್ದೆ ಖಾಲಿ ಇರುವುದು ನಿಜ. ಅದಾಗ್ಯೂ ಲಭ್ಯ ಶಿಕ್ಷಕರ ಮೂಲಕ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡ ಲಾಗುತ್ತಿದೆ. –ಸುಂದರ ಗೌಡ, ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ, ಪುತ್ತೂರು
ಅವಿಭಜಿತ ಪುತ್ತೂರು ತಾಲೂಕಿನ ಅಂಕಿ-ಅಂಶ
ಸರಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಸಂಖ್ಯೆ -204
ಪ್ರೌಢಶಾಲೆಗಳ ಸಂಖ್ಯೆ – 23
ಪ್ರೌಢಶಾಲೆಯಲ್ಲಿ ದೈಹಿಕ ಶಿಕ್ಷಣ ಶಿಕ್ಷಕರಿಲ್ಲ-01
ಪ್ರಾಥಮಿಕ ಶಾಲೆಗಳ ಸಂಖ್ಯೆ- 181
ಪ್ರಾಥಮಿಕ ಶಾಲೆಯಲ್ಲಿ ದೈಹಿಕ ಶಿಕ್ಷಣ ಶಿಕ್ಷಕರಿಲ್ಲ -146