Advertisement

ಜಿಲ್ಲೆಯ ಎರಡನೇ ಮಹಿಳಾ ಪದವಿ ಕಾಲೇಜಿಗೆ ಸ್ವಂತ ಕಟ್ಟಡದ ಕೊರತೆ !

08:20 AM Aug 17, 2017 | Harsha Rao |

ಪುತ್ತೂರು : ಜಿಲ್ಲೆಯ ಎರಡನೇ ಮಹಿಳಾ ಕಾಲೇಜು ಎಂಬ ಹೆಗ್ಗಳಿಕೆ ಹೊಂದಿರುವ ಇಲ್ಲಿಯ ಮಹಿಳಾ ಪ್ರಥಮ ದರ್ಜೆ ಕಾಲೇಜಿಗೆ ಸ್ವಂತ ಕಟ್ಟಡ ಇಲ್ಲದಿರುವುದೇ ದೊಡ್ಡ ಸಮಸ್ಯೆ-ಸವಾಲು..!

Advertisement

2014-15 ನೇ ಸಾಲಿನಲ್ಲಿ ಮಂಜೂರಾದ ಈ ಕಾಲೇಜು ಸದ್ಯಕ್ಕೆ ನಗರದ ಹಳೆ ಜೈಲಿನ ನಾಲ್ಕು ಕೊಠಡಿ ಹಾಗೂ ಅಲ್ಲಿಂದ 200 ಮೀ. ದೂರದ ಪುರಸಭೆಯ ಹಳೆ ಕಟ್ಟಡದ ಎರಡು ಕೊಠಡಿಯಲ್ಲಿ ಕಾರ್ಯ ನಿರ್ವಹಿಸುತ್ತಿದೆ.
ಬಿ.ಎ., ಬಿ.ಕಾಂ ವಿಭಾಗ ಇಲ್ಲಿದ್ದು, ಒಟ್ಟು 10 ಕೊಠಡಿ ಗಳಲ್ಲಿ ತರಗತಿ ನಡೆಯುತ್ತಿವೆ. ಒಂದರಲ್ಲಿ ಆರು ತರಗತಿ ಹಾಗೂ ಇನ್ನೊಂದರಲ್ಲಿ 4 ತರಗತಿಗಳಿವೆ. ಬರೋಬ್ಬರಿ 620 ವಿದ್ಯಾರ್ಥಿನಿಯರನ್ನು ಹೊಂದಿದ ಕಾಲೇಜಿನಲ್ಲಿ ಸುಸಜ್ಜಿತ ಕೊಠಡಿಗಳ ಕೊರತೆ ಇದೆ. ಉಪನ್ಯಾಸಕರು, ವಿದ್ಯಾರ್ಥಿ ಗಳು ದಿನಂಪ್ರತಿ ಒಂದು ಕಡೆಯಿಂದ ಮತ್ತೂಂದು ಕಡೆಗೆ ಅಲೆದಾಡುವ ಪರಿಸ್ಥಿತಿ ಸದ್ಯದ್ದು. ಇದರಿಂದ ತರಗತಿ ನಡೆಯಲೂ ಕಷ್ಟವಾಗುತ್ತಿದೆ. ಉಳಿದಂತೆ ಬಹಳ ದೊಡ್ಡ ಸಮಸ್ಯೆ ಇಲ್ಲ. 

ಹೊಸ ಕಟ್ಟಡಕ್ಕೆ ಸ್ಥಳ ಮೀಸಲು
ನಗರದಿಂದ 3 ಕಿ.ಮೀ. ದೂರದ ಬೊಳುವಾರು – ಉಪ್ಪಿನಂಗಡಿ ರಸ್ತೆಯ ಆನೆಮಜಲಿನಲ್ಲಿ 4.70 ಎಕ್ರೆ ಜಮೀನು ಕಾದಿರಿಸಲಾಗಿದೆ. ಕಾಲೇಜು ಶಿಕ್ಷಣ ಆಯುಕ್ತರ ಹೆಸರಿನಲ್ಲಿ ಪಹಣಿಪತ್ರವೂ ಆಗಿದೆ. ನೂತನ ಕಟ್ಟಡಕ್ಕೆ 8 ಕೋಟಿ ರೂ. ಪ್ರಸ್ತಾವನೆ ಸಲ್ಲಿಸಲಾಗಿದೆ. ಬಿಎಸ್‌ಸಿ ಕೋರ್ಸ್‌ ಗಮನದಲ್ಲಿ ಇಟ್ಟುಕೊಂಡು 25 ಕೊಠಡಿ, ಪ್ರಿನ್ಸಿಪಾಲ್‌ ಕೊಠಡಿ, ಉಪನ್ಯಾಸಕರ ಕೊಠಡಿ, ರೆಸ್ಟ್‌ ರೂಂ, ಗ್ರಂಥಾಲಯ, ಶೌಚಾಲಯ, ಆಟದ ಮೈದಾನ ಮೊದಲಾದ ಮೂಲ ಬೇಡಿಕೆ ಸೇರಿಸಲಾಗಿದೆ.

ಹಳೆ ಜೈಲಿನಲ್ಲಿ ಕಾಲೇಜು..!
ಬ್ರಿಟಿಷ್‌ ಕಾಲದ ಕಟ್ಟಡ ಆರಂಭದಲ್ಲಿ ಹಳೆ ಜೈಲು, ಅನಂತರ ಹಳೆ ತಾಲೂಕು ಕಚೇರಿ ಆಗಿ ಬದಲಾಗಿತ್ತು. ಈಗ ಇರುವ ಮಹಿಳಾ ಕಾಲೇಜಿಗೆ ಸ್ಥಳಾವಕಾಶ ಕೊರತೆ ಕಾಡಿತ್ತು. ಕಳೆದ ಶೈಕ್ಷಣಿಕ ವರ್ಷದ ಆರಂಭದಲ್ಲೇ ಪುತ್ತೂರು ಪುರಸಭೆಯ ಹಳೆಯ ಕಟ್ಟಡದ ಕೆಲವೊಂದು ಕೋಣೆಗಳನ್ನು ಬಳಸಲಾಯಿತು.

ಪುರಸಭಾ ಕಟ್ಟಡ ತೆರವು..!
ಪುರಸಭೆಯ ಹಳೆ ಕಟ್ಟಡ ತೆರವಾಗುವ ಮುನ್ಸೂಚನೆ ಸಿಕ್ಕಿದ್ದು, ಅಲ್ಲಿಂದ ತರಗತಿಯನ್ನು ಶಿಫ್ಟ್ ಮಾಡಬೇಕಿದೆ. ಅದಕ್ಕಾಗಿ 4 ಲಕ್ಷ.ರೂ.ವೆಚ್ಚದಲ್ಲಿ ಜೈಲು ಕಟ್ಟಡದ ಆವರಣದಲ್ಲಿ 4 ತಾತ್ಕಾಲಿಕ ಕೊಠಡಿ ನಿರ್ಮಿಸುವ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಇದಾಗುವವರೆಗೆ ತಾತ್ಕಾಲಿಕ ಶೆಡ್‌ ಅನಿವಾರ್ಯ. 

Advertisement

ರೆಕಾರ್ಡ್‌ ರೂಂ..!
ಜೈಲು ಕಟ್ಟಡದಲ್ಲಿದ್ದ ತಾಲೂಕು ಕಚೇರಿ ಮಿನಿ ವಿಧಾನಸೌಧಕ್ಕೆ ಸ್ಥಳಾಂತರ ಗೊಂಡಿತ್ತಾದರೂ ಸ್ಥಳ ಅಭಾವದಿಂದ ವಾಪಸಾಯಿತು. ಕಂದಾಯ ದಾಖಲೆಗಳ ರೆಕಾರ್ಡ್‌ ರೂಂ ಅಲ್ಲೇ ಇದೆ.

ಉಪನ್ಯಾಸಕರ ಕೊರತೆ ಕಡಿಮೆ
ಮಂಜೂರಾತಿ ಹುದ್ದೆ 12 ರಲ್ಲಿ 9 ಉಪನ್ಯಾಸಕರು ಕರ್ತವ್ಯದಲ್ಲಿದ್ದಾರೆ. 28 ಅತಿಥಿ ಉಪನ್ಯಾಸಕರ ಪೈಕಿ ಹೊಸ ನಿಯಮದಿಂದ 22 ಮಂದಿ ಹಾಜರಾಗಿದ್ದಾರೆ. ಇಲ್ಲಿನ ವಿದ್ಯಾರ್ಥಿ ಬಲಕ್ಕೆ ಅನುಗುಣವಾಗಿ 12 ಹೆಚ್ಚುವರಿ ಉಪನ್ಯಾಸಕರು ಅಗತ್ಯವಿದೆ. ಮಂಜೂರಾದ ಪೈಕಿ ಇತಿಹಾಸ, ಇಂಗ್ಲೀಷ್‌ ಮತ್ತು ವಾಣಿಜ್ಯ ಉಪನ್ಯಾಸಕರ ಹುದ್ದೆ ಖಾಲಿ ಇವೆ. ಬಿ.ಎ ವಿಭಾಗದ ಮೊದಲೆರಡು ವರ್ಷದಲ್ಲಿ 1ಸೆಕ್ಷನ್‌ ಇದ್ದು, ಅಂತಿಮ ಬಿ.ಎಯಲ್ಲಿ 2 ಸೆಕ್ಷನ್‌ ಇದೆ. ಬಿ.ಕಾಂನಲ್ಲಿ ಎಲ್ಲ ತರಗತಿಗಳಿಗೂ 2 ಸೆಕ್ಷನ್‌ ಇದೆ. ಬಿ.ಎ ವಿಭಾಗದಲ್ಲಿ 220, ಬಿ.ಕಾಂ ವಿಭಾಗದಲ್ಲಿ 400 ಮಂದಿ ಇದ್ದಾರೆ. 

- ಕಿರಣ್‌ ಪ್ರಸಾದ್‌ ಕುಂಡಡ್ಕ

Advertisement

Udayavani is now on Telegram. Click here to join our channel and stay updated with the latest news.

Next