ಹುಳಿಯಾರು: ಪಟ್ಟಣ ಪಂಚಾಯಿತಿ ವ್ಯಾಪ್ತಿಯ 20 ಸಾವಿರ ಜನಸಂಖ್ಯೆಗೆ ಕೇವಲ ಮೂರು ನೀರಿನ ಘಟಕಗಳು ನೀರು ಪೂರೈಸುತ್ತಿವೆ. ಅದರಲ್ಲೂ ಧರ್ಮಸ್ಥಳ ಸಂಸ್ಥೆಯ ನೀರಿನ ಘಟಕ ಸ್ಥಾಪನೆಯಾದ 2 ವರ್ಷದಿಂದ ತೊಂದರೆಯಿಲ್ಲದೆ ನೀರು ಪೂರೈಸುತ್ತಿದೆ.
ನಾಲ್ಕೈದು ವರ್ಷದ ಹಿಂದೆ ಡಾ.ವಾಟರ್ ಸಂಸ್ಥೆಯಿಂದ ಘಟಕ ಸ್ಥಾಪಿಸಲಾಯಿತು. ಅಲ್ಲಿಂದ ಇಲ್ಲಿಯವರೆವಿಗೆ ಶಾಸಕರು, ಸಂಸದರ ನಿಧಿ, ಗ್ರಾಮೀಣ ಕುಡಿಯುವ ನೀರು ಯೋಜನೆ ಸೇರಿ 10 ಘಟಕಗಳು ಸ್ಥಾಪನೆಗೊಂಡಿವೆ. ಆದರೆ ಕೆಲ ಘಟಕಗಳ ನಿರ್ವಹಣೆ ಕೊರತೆಯಿಂದಪಕ್ಕದ ಊರಿನ ಘಟಕಗಳಿಂದ ನೀರು ತರಬೇಕು. ಇಲ್ಲವೇ ಫ್ಲೋರೈಡ್ ಯುಕ್ತ ನೀರು ಕುಡಿಯಬೇಕು.
ಹುಳಿಯಾರಿನ ನಾಡಕಚೇರಿ ಬಳಿಯ ಸರ್ಕಾರದ ನೀರಿನ ಘಟಕ, ಪೊಲೀಸ್ ಠಾಣೆ ಪಕ್ಕದ ಡಾ.ವಾಟರ್ ಘಟಕ ಹಾಗೂ ಪಂಚಾಯಿತಿ ಕಚೇರಿ ಬಳಿಯ ಧರ್ಮಸ್ಥಳ ಸಂಸ್ಥೆಯ ಘಟಕ ಬಿಟ್ಟರೆ ಉಳಿದ ಘಟಕಗಳು ಆಗಾಗ ಕೆಡುತಿರುತ್ತವೆ. ಕೆಟ್ಟು ತಿಂಗಳಾದರೂ ದುರಸ್ತಿ ಮಾಡುವುದಿಲ್ಲ. ಪಂಚಾಯಿತಿ ಅಧಿಕಾರಿಗಳಿಗೆ ದೂರು ನೀಡಿದರೆ ಘಟಕಗಳ ನಿರ್ವಹಣೆ ಹೊಣೆ ಹೊತ್ತವರ ಕಡೆ ಬೆರಳು ಮಾಡುತ್ತಾರೆ.
ತಾಲೂಕು ಕುಡಿಯುವ ನೀರಿನ ಎಂಜಿನಿಯರ್, ಗುತ್ತಿಗೆದಾರರು ಸ್ಪಂದಿಸುವುದಿಲ್ಲ. ಕೆಂಕೆರೆ ರಸ್ತೆಯ ಬಿಎಂಎಸ್ ಪಕ್ಕದ ಘಟಕ ಕೆಟ್ಟು ವರ್ಷ ಕಳೆದಿದೆ. ವೈ.ಎಸ್.ಪಾಳ್ಯ, ಲಿಂಗಪ್ಪನಪಾಳ್ಯ, ಕೋಡಿಪಾಳ್ಯದ ನಿವಾಸಿಗಳು ಶುದ್ಧ ನೀರಿಗೆ ಪರದಾಡಬೇಕು. ಬೈಕ್ ಇರುವವರು ಅಕ್ಕಪಕ್ಕದ ಊರಿನ ಘಟಕಗಳಿಂದ ನೀರು ತಂದರೆ ಬೈಕ್ ಇಲ್ಲದವರು ಕೊಳವೆ ಬಾವಿ ನೀರು ಕುಡಿಯಬೇಕು.
ದುರ್ಗಾಪರಮೇಶ್ವರಿ ದೇವಾಲಯ ಆವರಣದಲ್ಲಿರುವ ಘಟಕ ನೀರು ಸರಬರಾಜು ಮಾಡಿದ್ದಕ್ಕಿಂತ ಕೆಟ್ಟಿದ್ದೇ ಹೆಚ್ಚು. ಪ್ರಸ್ತುತ ಈ ಘಟಕ ಕೆಟ್ಟಿದ್ದರೂ ದುರಸ್ತಿಗೆ ಇನ್ನೂ ಮುಂದಾಗಿಲ್ಲ. ಎಪಿಎಂಸಿ ಆವರಣದಲ್ಲಿನ ಘಟಕ, ವೈ.ಎಸ್.ಪಾಳ್ಯದ ಘಟಕವೂ ಗುತ್ತಿಗೆದಾರರ ನಿರ್ಲಕ್ಷ್ಯದಿಂದ ಆರಂಭವಾಗಿಲ್ಲ.
ಘಟಕ ಕೆಟ್ಟರೆ ಅಥವಾ ತಾಂತ್ರಿಕ ಸಮಸ್ಯೆ ತಲೆದೋರಿದರೆ ರಿಪೇರಿ ಮಾಡಲು ಯಾರಿಗೆ ತಿಳಿಸಬೇಕೆಂದು ತಿಳಿಯುವುದಿಲ್ಲ. ಪಪಂ ಅಧಿಕಾರಿಗಳಿಗೆ ಕೇಳಿದರೆ ನಮ್ಮ ಜವಾಬ್ದಾರಿಯಲ್ಲ ಎನ್ನುತ್ತಾರೆ. ನಿರ್ವಹಣೆ ಮಾಡಬೇಕಿರುವ ಕಂಪನಿಯವರು ಘಟಕದ ಹಣ ತಪ್ಪದೆ ಕೊಂಡೊಯ್ಯುತ್ತಾರೆ. 10 ನೀರಿನ ಘಟಕಗಳಿದ್ದರೂ ಶುದ್ಧ ನೀರಿಗೆ ಪರದಾಡುವುದು ತಪ್ಪಿಲ್ಲ.
-ಜಯಲಕ್ಷ್ಮೀ, ಸಾಮಾಜಿಕ ಕಾರ್ಯಕರ್ತೆ
ನೀರಿನ ಘಟಕ ನಿರ್ವಹಣೆ ಬೇರೆ ಬೇರೆ ಕಂಪನಿ ವಹಿಸಿದೆ. ಆದರೆ ಕೆಟ್ಟರೆ ಜನರು ಪಂಚಾಯಿತಿಗೆ ಬಂದು ಕೇಳುತ್ತಾರೆ. ಸಣ್ಣಪುಟ್ಟ ರಿಪೇರಿ ಮಾಡಿಸಿ ನೀರು ಕೊಟ್ಟಿದ್ದೇವೆ. ಎಲ್ಲಾ ಘಟಕ ಪಂಚಾಯ್ತಿಗೆ ಬಿಟ್ಟುಕೊಟ್ಟರೆ ಸಮರ್ಪಕವಾಗಿ ನಿರ್ವಹಿಸುತ್ತೇವೆ.
-ಮಂಜುನಾಥ್, ಪಪಂ ಮುಖ್ಯಾಧಿಕಾರಿ
* ಎಚ್.ಬಿ.ಕಿರಣ್ ಕುಮಾರ್