ಸಿರುಗುಪ್ಪ: ತಾಲೂಕಿನ ಶಕ್ತಿಕೇಂದ್ರವಾಗಿರುವ ಹತ್ತಾರು ಸರ್ಕಾರಿ ಕಚೇರಿಗಳನ್ನು ಹೊಂದಿರುವ ಮತ್ತು ಪ್ರತಿನಿತ್ಯ ನೂರಾರು ಅಧಿಕಾರಿಗಳು ಹಾಗೂ ಸಾವಿರಾರು ಸಾರ್ವಜನಿಕರು ತಮ್ಮ ಕೆಲಸ ಕಾರ್ಯಗಳಿಗಾಗಿ ಬಂದು ಹೋಗುವ ಮಿನಿ ವಿಧಾನಸೌಧ ಸೂಕ್ತ ನಿರ್ವಹಣೆ ಇಲ್ಲದೆ ಅವ್ಯವಸ್ಥೆ ಆಗರವಾಗಿದ್ದು ಮಳೆ ಬಂದರೆ ಸಾಕು ಕೆಲವು ಕೋಣೆಗಳಲ್ಲಿ ಮಳೆ ನೀರು ತೊಟ್ಟಿಕ್ಕುವುದು ಮಾಮೂಲಾಗಿದೆ.
2010 ಜೂನ್ 26ರಂದು ಉದ್ಘಾಟನೆಯಾದ ಮೇಲ್ಮಹಡಿ ಹೊಂದಿದ ಮಿನಿ ಮಿಧಾನಸೌಧ ದೊಡ್ಡದಾದ ಮಳೆಬಂದರೆ ಸಾಕು ಸೋರುತ್ತದೆ. ಹತ್ತಾರು ತಹಶೀಲ್ದಾರ್‌ರು ಬಂದು ಅದೇ ಸೋರುವ ಮಿನಿ ವಿಧಾನ ಸೌಧದಲ್ಲಿ ಅಧಿಕಾರ ನಡೆಸಿ ವರ್ಗವಾದರು. ಆದರೆ ಯಾವ ತಹಶೀಲ್ದಾರ್ ರು ಕೂಡ ಮಿನಿ ವಿಧಾನಸೌಧದ ದುರಸ್ತಿಗೆ ಮತ್ತು ಸುಣ್ಣ ಬಣ್ಣ ಬಳಿಸುವ ಮನಸ್ಸು ಮಾಡಲಿಲ್ಲ. ಮಳೆ ಬಂದರೆ ಸಾಕು ಇಲ್ಲಿರುವ ಬಹುತೇಕ ಕೊಠಡಿಗಳು ಸೋರುತ್ತವೆ. ಇಲ್ಲಿನ ಅಧಿಕಾರಿಗಳು ಮತ್ತು ಸಿಬ್ಬಂದಿ ಮಳೆ ಬಂದರೆ ಸಾಕು ನೀರು ಸೋರುವ ಸ್ಥಳದಲ್ಲಿ ಬಕೆಟ್ ಇಡುವ ಕಾರ್ಯ ಮಾಡುತ್ತಾರೆ. ಮಳೆನೀರು ತೊಟ್ಟಿಕ್ಕುವ ಜಾಗದಿಂದ ನೀರು ಬೀಳದ ಜಾಗದಲ್ಲಿ ಕುಳಿತು ಕೆಲಸ ಮಾಡುವುದು ಮಾಮೂಲಾಗಿದೆ.
2004ರಲ್ಲಿ ಶಾಸಕರಾಗಿದ್ದ ಎಂ.ಎಸ್. ಸೋಮಲಿಂಗಪ್ಪ ಮಿನಿ ವಿಧಾನಸೌಧದ ನಿರ್ಮಾಣ ಕಾರ್ಯಕ್ಕೆ ಭೂಮಿಪೂಜೆ ನೆರವೇರಿಸಿದ್ದರು. 2009ರಲ್ಲಿ ನಿರ್ಮಾಣ ಕಾರ್ಯ ಪೂರ್ಣಗೊಂಡಿದ್ದು, 2010ರಲ್ಲಿ ಕಂದಾಯ ಸಚಿವರಾಗಿದ್ದ ಜಿ.ಕರುಣಾಕರ ರೆಡ್ಡಿ ಮಿನಿ ವಿಧಾನಸೌಧ ಉದ್ಘಾಟಿಸಿದ್ದರು. ಮಿನಿ ವಿಧಾನಸೌಧದಲ್ಲಿ ಹೊಸತರಲ್ಲಿ ಸ್ವಲ್ಪದಿನ ಚೆನ್ನಾಗಿಯೇ ಇತ್ತು. ಆದರೆ ನಿರ್ಮಿಸಿದ ಮೂರು ವರ್ಷದಲ್ಲೇ ಮಳೆಗಾಲದಲ್ಲಿ ಸೋರುವುದು ಗೋಚರಕ್ಕೆ ಬಂತು. ಕಟ್ಟಡದ ಮೇಲ್ಭಾಗವನ್ನು ಅವೈಜ್ಞಾನಿಕವಾಗಿ ನಿರ್ಮಿಸಿರುವುದು ತಿಳಿಯಿತು.
ಕಳೆದ 12 ವರ್ಷಗಳಿಂದ ಒಮ್ಮೆಯೂ ಸುಣ್ಣಬಣ್ಣ ಕಾಣದ ಈ ಕಟ್ಟಡ ಬಿಸಿಲಿನಿಂದ ಒಣಗಿ ಕೆಲವೆಡೆಗಳಲ್ಲಿ ಮಳೆನೀರು ಜಿನುಗುವುದು ಸಾಮಾನ್ಯವಾಗಿದೆ. ಮಿನಿ ವಿಧಾನಸೌಧದ ಕಟ್ಟಡದ ಗೋಡೆಗಳಲ್ಲಿ ಎಲ್ಲೆಂದರಲ್ಲಿ ಬಿರುಕು ಕಾಣಿಸಿಕೊಂಡಿದ್ದು, ಬಿರುಕಿನಲ್ಲಿ ಮಳೆನೀರು ಜಿನುಗುತ್ತಿರುವುದರಿಂದ ಗೋಡೆಗಳು ಮಳೆನೀರಿನಿಂದ ತೋಯ್ದು ಶಿಥಿಲಗೊಂಡಿವೆ. ಕಟ್ಟಡದ ಒಂದು ಭಾಗದ ಬುನಾದಿಯಲ್ಲಿ ಬಿರುಕು ಕಾಣಿಸಿಕೊಂಡಿದೆ. ಮೇಲ್ಛಾವಣಿ ಮೇಲೆ ಅಲ್ಲಲ್ಲಿ ಬಿರುಕು ಕಾಣಿಸಿಕೊಂಡಿದ್ದು, ಬಿರುಕಿನಲ್ಲಿ ಹುಲ್ಲು ಬೆಳೆದಿದೆ. ಕಟ್ಟಡದ ಮೇಲ್ಭಾಗದಲ್ಲಿ ನೀರು ಹರಿಯಲು ಅಳವಡಿದ್ದ ದೋಣಿಗಳು ಹಾಳಾಗಿದ್ದು, ನೀರು ಹರಿಯಲು ವ್ಯವಸ್ಥೆ ಇಲ್ಲದೆ ಮಳೆನೀರು ಮೇಲ್ಛಾವಣಿಯಲ್ಲಿ ಅಲ್ಲಲ್ಲಿ ನಿಲ್ಲುವುದು ಸಾಮಾನ್ಯವಾಗಿದೆ. ಕೆಲ ಕೊಠಡಿಗಳ ಕಿಟಕಿಗಳ ಗಾಜುಗಳು ಒಡೆದುಹೋಗಿ ಮಳೆನೀರು ಕೊಠಡಿಯೊಳಗೆ ಬಂದು ನಿಲ್ಲುತ್ತವೆ. ಒಟ್ಟಾರೆ ಮಿನಿ ವಿದಾನಸೌಧದ ಕಟ್ಟಡವು ದುರಸ್ತಿಯಿಂದ ಕೂಡಿದ್ದು, ಯಾವಾಗ ಯಾರಮೇಲೆ ಬೀಳುತ್ತದೆಯೋ ಎನ್ನುವ ಆತಂಕದಲ್ಲಿಯೇ ಇಲ್ಲಿನ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಸಾರ್ವಜನಿಕರು ಭಯದಲ್ಲಿಯೇ ತಮ್ಮ ಕೆಲಸ ಕಾರ್ಯಗಳನ್ನು ಮುಗಿಸಿಕೊಂಡು ಹೋಗುತ್ತಿದ್ದಾರೆ.
ಮಿನಿ ವಿಧಾನಸೌಧದ ಗೋಡೆಗಳು ಬಿರುಕುಬಿಟ್ಟಿದ್ದು, ಮಳೆಬಂದಾಗ ಯಾರಮೇಲೆ ಬೀಳುತ್ತದೋ ದೇವರೇ ಬಲ್ಲ, ಭಯದಲ್ಲಿಯೇ ನಾವು ನಮ್ಮ ಕೆಲಸ ಕಾರ್ಯಗಳನ್ನು ಮಾಡಿಕೊಂಡು ಹೋಗುತ್ತಿದ್ದೇವೆ. ಆದರೆ ಇಲ್ಲಿಯೇ ಕುಳಿತು ಕೆಲಸ ಮಾಡುವ ನೌಕರರನ್ನು ಆ ದೇವರೆ ಕಾಪಾಡಬೇಕು. ಇನ್ನಾದರೂ ತಾಲೂಕು ಆಡಳಿತ ಮತ್ತು ಶಾಸಕರು ಈ ಬಗ್ಗೆ ಗಮನ ಹರಿಸಿ ದುರಸ್ತಿ ಮಾಡುವ ಕಾರ್ಯವನ್ನು ಮಾಡಬೇಕಾಗಿದೆ ಎಂದು ವಿವಿಧ ಕೆಲಸ ಕಾರ್ಯಗಳಿಗಾಗಿ ಅನೇಕ ಗ್ರಾಮಗಳಿಂದ ಬರುವ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಮಿನಿ ವಿಧಾನಸೌಧದ ಗುಣಮಟ್ಟದ ಬಗ್ಗೆ ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಂದ ಪರಿಶೀಲನೆ ನಡೆಸಿ ವರದಿ ನೀಡುವಂತೆ ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಪತ್ರ ಬರೆಯಲಾಗುವುದು.
-ಎನ್.ಆರ್. ಮಂಜುನಾಥಸ್ವಾಮಿ, ತಹಶೀಲ್ದಾರ್
-ಆರ್. ಬಸವರೆಡ್ಡಿ ಕರೂರು